ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ನದಿಗಳಿಂದ ಮರಳು ತೆಗೆಯಲು ಅನುಮತಿ?

ಯಂತ್ರ ಬಳಸದೇ ಡಿ.19ರವರೆಗೆ ಗಣಿಗಾರಿಕೆಗೆ ಅವಕಾಶ ಸಾಧ್ಯತೆ
Last Updated 25 ನವೆಂಬರ್ 2022, 16:33 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯಲ್ಲಿ ಸಾಂಪ್ರದಾಯಿಕವಾಗಿ ಮರಳು ಗಣಿಗಾರಿಕೆ ಪುನರಾರಂಭಿಸುವ ಬಗ್ಗೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಚರ್ಚಿಸಲಾಯಿತು. ಶರಾವತಿ, ಅಘನಾಶಿನಿ ಮತ್ತು ಗಂಗಾವಳಿ ನದಿಗಳಲ್ಲಿ ಮರಳು ತೆಗೆಯುವವರ ಪರವಾನಗಿ ಅವಧಿಯು ಡಿ.19ರಂದು ಮುಕ್ತಾಯವಾಗಲಿದೆ. ಅವರಿಗೆ ಅನುಮತಿ ನೀಡುವ ಬಗ್ಗೆ ಪರಾಮರ್ಶೆ ನಡೆಸಲಾಯಿತು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಮಹತ್ವದ ಸಭೆಯಲ್ಲಿ, ದಕ್ಷಿಣ ಕನ್ನಡದಲ್ಲಿ ಯಂತ್ರಗಳನ್ನು ಬಳಸದೇ ಮರಳು ಗಣಿಗಾರಿಕೆ ನಡೆಸಲು ಅನುಮತಿ ನೀಡಿರುವ ಬಗ್ಗೆ ಚರ್ಚಿಸಲಾಯಿತು. ಅದನ್ನು ಅಧ್ಯಯನ ಮಾಡಿ, ಉತ್ತರ ಕನ್ನಡದಲ್ಲೂ ಅನುಮತಿ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಕಾಳಿ ನದಿಯಲ್ಲಿ ಮರಳು ತೆಗೆಯಲು ನೀಡಲಾಗಿದ್ದ ಪರವಾನಗಿ ಅವಧಿಯು ಈಗಾಗಲೇ ಮುಗಿದಿದೆ. ಹಾಗಾಗಿ ನದಿಯಲ್ಲಿರುವ ಮರಳು ದಿಬ್ಬಗಳನ್ನು ಹೊಸ‌ದಾಗಿ ಗುರುತಿಸುವ ಕಾರ್ಯ ಆಗಬೇಕಿದೆ. ಈ ಬಗ್ಗೆ ಎನ್‌.ಐ.ಟಿ.ಕೆ ಸುರತ್ಕಲ್‌ಗೆ ಪತ್ರ ಬರೆಯಬೇಕು. ಅವರ ದಿನಾಂಕವನ್ನು ನಿಗದಿ ಮಾಡಿಕೊಂಡು 10 ದಿನಗಳ ಒಳಗೆ ಜಂಟಿ ಸಮೀಕ್ಷೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸೂಚಿಸಿದರು.

ಬಳಿಕ ಕರ್ನಾಟಕ ರಾಜ್ಯ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರಕ್ಕೆ (ಕೆ.ಎಸ್.ಸಿ.ಝೆಡ್.ಎಂ.ಎ) ಪತ್ರ ಬರೆದು ಅನುಮತಿ ಪಡೆದುಕೊಳ್ಳಬೇಕು. ನಂತರ ಸಾಂಪ್ರದಾಯಿಕವಾಗಿ ಮರಳು ತೆಗೆಯುವವರಿಗೆ ಪರವಾನಗಿ ನೀಡಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಹೊಸಬರಿಗೂ ಅವಕಾಶ?:

ರಾಜ್ಯ ಸರ್ಕಾರವು 2022ರಲ್ಲಿ ಹೊರಡಿಸಿದ ಮಾರ್ಗಸೂಚಿಯ ಪ್ರಕಾರ, ಹೊಸದಾಗಿ ಸಾಂಪ್ರದಾಯಿಕವಾಗಿ ಮರಳು ಗಣಿಗಾರಿಕೆ ಮಾಡುವವರ ಅರ್ಜಿಗಳನ್ನು ಈಗಾಗಲೇ ಸ್ವೀಕರಿಸಲಾಗಿದೆ. ಈ ಬಗ್ಗೆಯೂ ಜಿಲ್ಲಾಧಿಕಾರಿ ನೇತೃತ್ವದ ಏಳು ಸದಸ್ಯರ ಸಮಿತಿಯಲ್ಲಿ ಚರ್ಚಿಸಲಾಗಿದೆ. ಅವರಿಗೂ ಸೀಮಿತ ಸಂಖ್ಯೆಯಲ್ಲಿ ಪರವಾನಗಿ ನೀಡುವ ಸಾಧ್ಯತೆಯಿದೆ.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಗಾ.ಎಂ, ಉಪ ವಿಭಾಗಾಧಿಕಾರಿ ಜಯಲಕ್ಷ್ಮಿ ರಾಯಕೋಡ, ಹಿರಿಯ ಭೂವಿಜ್ಞಾನಿ ಆಶಾ ಎಂ.ಎಸ್, ಡಿವೈಎಸ್‌ಪಿ ಅರವಿಂದ ಕಲಗುಜ್ಜಿ ಇದ್ದರು.

ಸಿ.ಆರ್.ಝೆಡ್ ವಲಯದಲ್ಲಿ ಮರಳು ತೆಗೆಯಲು ಪರವಾನಗಿ ಅವಧಿ ಇದ್ದರೂ ಈ ವರ್ಷ ಮೇ ತಿಂಗಳಲ್ಲಿ ರಾಷ್ಟ್ರೀಯ ಹಸಿರು ಪೀಠದ ಆದೇಶ ಮೇರೆಗೆ ಮರಳು ಗಣಿಗಾರಿಕೆಯನ್ನು ಜಿಲ್ಲೆಯಲ್ಲಿ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು.

ದಕ್ಷಿಣ ಕನ್ನಡದ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದ ಹಿನ್ನೆಲೆಯಲ್ಲಿ ಮರಳು ಗಣಿಗಾರಿಕೆಯನ್ನು ನಿಲ್ಲಿಸುವಂತೆ ಆದೇಶಿಸಲಾಗಿತ್ತು. ಆದರೆ, ಅದು ಕೇವಲ ದಕ್ಷಿಣ ಕನ್ನಡಕ್ಕೆ ಸೀಮಿತವಾದುದು ಎಂದು ನ್ಯಾಯಾಲಯದಿಂದ ಸ್ಪಷ್ಟನೆ ಪಡೆದುಕೊಳ್ಳಾಗಿತ್ತು. ಅದಾದ ಬಳಿಕ ಉತ್ತರ ಕನ್ನಡದಲ್ಲೂ ಮರಳು ತೆಗೆಯಲು ಕ್ರಮ ವಹಿಸುವಂತೆ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳ ಮೇಲೆ ಸಾರ್ವಜನಿಕರು ಒತ್ತಡ ಹೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT