ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಂಚಳ್ಳಿಯ ಡ್ರೈ ಸಪೋಟಾ ‘ಸ್ಮಾರ್ಟ್‌’

ಪ್ರಗತಿಪರ ಕೃಷಿಕ ಧನಂಜಯ ಹೆಗಡೆಯವರ ಗೃಹೋದ್ಯಮ
Published : 31 ಜುಲೈ 2019, 19:30 IST
ಫಾಲೋ ಮಾಡಿ
Comments

ಶಿರಸಿ: ಹಿತ್ತಲಲ್ಲಿ ಬೆಳೆದ ಚಿಕ್ಕು ಹಣ್ಣು ಮಣ್ಣಾಗಿ ಹೋಗುವುದನ್ನು ಕಂಡ ಕೃಷಿಕರೊಬ್ಬರು ಅದಕ್ಕೊಂದು ಸಾರ್ಥಕತೆ ಕೊಡಬೇಕೆಂದು ಯೋಚಿಸಿದಾಗ ಹೊಳೆದಿದ್ದು ಮೌಲ್ಯವರ್ಧನೆ. ಈ ಪ್ರಯೋಗದಿಂದಾಗಿ ಉದುರಿ ಮರದ ಬುಡದ ತರಗೆಲೆಗಳ ನಡುವೆ ಕೊಳೆತು ಹೋಗುತ್ತಿದ್ದ ಚಿಕ್ಕ ಚಿಕ್ಕು ಹಣ್ಣುಗಳು ಈಗ ಆಕರ್ಷಕ ಪ್ಯಾಕ್‌ನಲ್ಲಿ ‘ಸ್ಮಾರ್ಟ್‌’ ಆಗಿ ಕುಳಿತುಕೊಳ್ಳುತ್ತಿವೆ !

ತಾಲ್ಲೂಕಿನ ಉಂಚಳ್ಳಿಯ ಧನಂಜಯ ಹೆಗಡೆ ಅವರು ಕೃಷಿಯಲ್ಲಿ ಹೊಸ ಪ್ರಯೋಗ ಮಾಡುತ್ತ ಕೃಷಿಕರ ದೃಷ್ಟಿಯನ್ನು ಅವರ ತೋಟದೆಡೆಗೆ ಹೊರಳಿಸಿದವರು. ಅವರ ಮನೆ ಹಿತ್ತಲಿನಲ್ಲಿ 60–70 ಚಿಕ್ಕು ಮರಗಳಿವೆ. ಈ ಮರದ ಹಣ್ಣು ಜೇನಿನಷ್ಟು ಸಿಹಿ, ಆದರೆ ಗಾತ್ರದಲ್ಲಿ ಮಾತ್ರ ಚಿಕ್ಕದು. ಹೀಗಾಗಿ ಇವಕ್ಕೆ ಮಾರುಕಟ್ಟೆಯಲ್ಲಿ ಬೇಡಿಕೆ ಬರಲಿಲ್ಲ. ಮರದಲ್ಲಿಯೇ ಕೊಳೆತು ನಷ್ಟವಾಗುವುದನ್ನು ಕಂಡು ಬೇಸರಪಟ್ಟುಕೊಂಡು ಹೆಗಡೆಯವರು ಇದರ ಸದ್ಬಳಕೆಯ ಪ್ರಯೋಗಕ್ಕೆ ಮುಂದಾದರು.

‘ಈ ಚಿಕ್ಕು ಹಣ್ಣುಗಳನ್ನು ಉದ್ದುದ್ದ ತೊಳೆಯಂತೆ ಕತ್ತರಿಸಿ, ಮನೆಯಲ್ಲಿಯೇ ಇದ್ದ ಸೋಲಾರ್ ಡ್ರೈಯರ್‌ನಲ್ಲಿ ಒಣಗಿಸಿದೆ. ಮಾರುಕಟ್ಟೆಯಲ್ಲಿ ಒಣಗಿಸಿದ ಬೇರೆ ಬೇರೆ ಜಾತಿಯ ಹಣ್ಣು ಬರುವುದನ್ನು ಕಂಡಿದ್ದೆ. ಆದರೆ, ಚಿಕ್ಕು ಹಣ್ಣಿನ ಒಣ ಹಣ್ಣು ನೋಡಿರಲಿಲ್ಲ. ಮನೆಯಲ್ಲೇ ಮಾಡಿದ ಪ್ರಯೋಗ ಯಶಸ್ವಿಯಾಯಿತು. ಇದನ್ನು ಶಿರಸಿಯ ಕದಂಬ ಮಾರ್ಕೆಟಿಂಗ್‌ನಲ್ಲಿ ಮಾರಾಟಕ್ಕೆ ತಂದಿಟ್ಟಾಗ ಗ್ರಾಹಕರಿಂದಲೂ ಬೇಡಿಕೆ ಬಂತು’ ಎಂದು ‘ಸ್ಮಾರ್ಟ್‌’ ಡ್ರೈ ಸಪೋಟಾ ಉತ್ಪನ್ನವಾಗಿ ಮೂಡಿಬಂದ ಏಳು ವರ್ಷಗಳ ಹಿಂದಿನ ಅನುಭವವನ್ನು ನೆನಪಿಸಿಕೊಂಡರು.

ವರ್ಷಕ್ಕೆ ಎರಡು ಬಾರಿ ಚಿಕ್ಕು ಮರಗಳು ಹಣ್ಣು ಕೊಡುತ್ತವೆ. ಚಿಕ್ಕು ಯಾವಾಗಲೂ ಒಮ್ಮೆಲೇ ಹಣ್ಣಾಗುತ್ತದೆ. ಬಲಿತ ಮೇಲೆ ಅವುಗಳ ಸಾಗಾಟವೂ ಕಷ್ಟ. ವಾಣಿಜ್ಯ ಉದ್ದೇಶದಿಂದ ಚಿಕ್ಕು ಬೆಳೆಯುವವರು ಡ್ರೈ ಸಪೋಟಾ ಗೃಹ ಉದ್ಯಮ ನಡೆಸಿದರೆ, ಬೆಳೆದ ಬೆಳೆಯನ್ನೆಲ್ಲ ಸದ್ಬಳಕೆ ಮಾಡಿಕೊಳ್ಳಬಹುದು. ಡ್ರೈಯರ್ ತಗಲುವ ವೆಚ್ಚವಷ್ಟೇ ಇದಕ್ಕೆ ಬೇಕಾಗುವ ಬಂಡವಾಳ ಎಂಬುದು ಅವರು ನೀಡುವ ಸಲಹೆ.

‘ಬಲಿತ ಕಾಯಿ ಹಣ್ಣಾದಾಗ ಮಾತ್ರ ಒಣಗಿಸಲು ಸಾಧ್ಯವಾಗುತ್ತದೆ. ಯಾವುದೇ ರಾಸಾಯನಿಕ, ಕೃತಕ ಸಿಹಿ ಬಳಸದೇ, ಶುದ್ಧ ಸಾವಯವ ಚಿಕ್ಕು ಹಣ್ಣನ್ನು ಒಣಗಿಸುತ್ತೇನೆ. ಕೃಷಿ ಕಾರ್ಯದ ನಡುವೆ ಬಿಡುವಿದ್ದಾಗ ಮಾತ್ರ ಈ ಕೆಲಸ. ಪ್ರಥಮ ಆದ್ಯತೆಯೇನಿದ್ದರೂ ಕೃಷಿಗೆ ಮೀಸಲು’ ಎಂದು ಹೇಳಿದರು.

ಇದರ ಜೊತೆಗೆ ಅವರು, ಕದಂಬ ಮಾರ್ಕೆಟಿಂಗ್‌ಗೆ ಮನೆಯಲ್ಲೇ ತಯಾರಿಸಿದ ಪೈನಾಪಲ್, ಮಿಕ್ಸಡ್ ಫ್ರುಟ್ ಜಾಮ್, ಫ್ರುಟ್ ಮತ್ತು ನಟ್ ಜಾಮ್‌ ಅನ್ನು ಪೂರೈಕೆ ಮಾಡುತ್ತಾರೆ. ಇವಕ್ಕೆ ಬಳಕೆಯಾಗುವ ಶೇ 80ರಷ್ಟು ಹಣ್ಣು, ಕಚ್ಚಾವಸ್ತು ಅವರ ತೋಟದಲ್ಲಿ ಬೆಳೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT