ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ | ಮಳೆ ಕೊರತೆ: ಅನಾನಸ್ ಗಾತ್ರ ಕುಂಠಿತ

Published 9 ಡಿಸೆಂಬರ್ 2023, 6:06 IST
Last Updated 9 ಡಿಸೆಂಬರ್ 2023, 6:06 IST
ಅಕ್ಷರ ಗಾತ್ರ

ಶಿರಸಿ: ಅರೆ ಮಲೆನಾಡು ಪ್ರದೇಶ ಬನವಾಸಿಯಲ್ಲಿ ಬಿಸಿಲ ಝಳ ಹಾಗೂ ನೀರಿನ ಕೊರತೆಯ ಕಾರಣಕ್ಕೆ ಅನಾನಸ್ ಕಾಯಿಗಳ ಗಾತ್ರ ಸಾಕಷ್ಟು ಕುಂಠಿತವಾಗಿದೆ. ಇದರಿಂದ ‘ಬನವಾಸಿ ಪೈನಾಪಲ್’ಗೆ ಹೊರ ರಾಜ್ಯಗಳಲ್ಲಿ ಇದ್ದ ಬೇಡಿಕೆ ತಗ್ಗುವ ಆತಂಕ ಬೆಳೆಗಾರರನ್ನು ಕಾಡುತ್ತಿದೆ.

ತಾಲ್ಲೂಕಿನ ಬನವಾಸಿ ಹೋಬಳಿಯಲ್ಲಿ ಹಲವು ವರ್ಷಗಳಿಂದ ಅನಾನಸ್ ವಾಣಿಜ್ಯ ಬೆಳೆಯಾಗಿ ರೈತರ ಕೈಹಿಡಿದಿದೆ. ಶುಂಠಿ, ಬಾಳೆಯಂಥ ಬೆಳೆಗಳ ದರ ಕುಸಿತವಾದಾಗ ರೈತರು ಅನಾನಸ್ ಬೆಳೆದು ಲಾಭ ಕಂಡಿದ್ದರು. ಆದರೆ ಈ ಬಾರಿ ಮಳೆ ಕೊರತೆ, ಪ್ರಸ್ತುತ ಬಿಸಿಲ ಧಗೆಯ ಕಾರಣಕ್ಕೆ ಅನಾನಸ್ ಕಾಯಿಗಳು ನಿರೀಕ್ಷಿತ ಪ್ರಮಾಣದಲ್ಲಿ ಬೆಳೆದಿಲ್ಲ. ಈವರೆಗೆ 2 ಕೆ.ಜಿ. ತೂಗುವಷ್ಟು ಬೆಳೆದು ಪ್ರಥಮ ದರ್ಜೆಯ ಹಂತಕ್ಕೆ ಬರುತ್ತಿದ್ದ ಕಾಯಿಗಳೆಲ್ಲ ಸುಮಾರು 1 ಕೆ.ಜಿ. ತೂಗುವ ಹಂತದಲ್ಲಿವೆ.

‘ಸಣ್ಣ ಜಮೀನಿನಲ್ಲಿ ಅನಾನಸ್ ಬೆಳೆದರೆ ಕೊಳವೆಬಾವಿ ನೀರು ಹಾಯಿಸಿ ಉಳಿಸಿಕೊಳ್ಳಬಹುದು. ಆದರೆ ಬನವಾಸಿ ಭಾಗದಲ್ಲಿ ಬಹುತೇಕ ಬೆಳೆಗಾರರು 6–10 ಎಕರೆ ವ್ಯಾಪ್ತಿಯಲ್ಲಿ ಈ ಕೃಷಿ ಕೈಗೊಂಡಿದ್ದಾರೆ. ಹೀಗಾಗಿ ಬೆಳೆಯ ಅಗತ್ಯತೆಗೆ ತಕ್ಕಂತೆ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ನೀರು ಪೂರೈಸಲು ಸಮರ್ಪಕ ವಿದ್ಯುತ್ ಇಲ್ಲ. ಕೊಳವೆಬಾವಿ ನೀರು ನಂಬಿ ಈ ಬೆಳೆ ಬೆಳೆಯಲು ಕಷ್ಟ. ಹೀಗಾಗಿ ಕಾಯಿಗಳ ಗಾತ್ರ ತೀರಾ ಸಣ್ಣದಾಗಿದೆ’ ಎನ್ನುತ್ತಾರೆ ಬೆಳೆಗಾರ ವಿನಾಯಕ ನಾಯ್ಕ.

‘ಬನವಾಸಿಯ ಅನಾನಸ್‍ಗೆ ದೆಹಲಿ, ಆಗ್ರಾ, ಮುಂಬಯಿ ಸೇರಿದಂತೆ ಹೊರ ರಾಜ್ಯಗಳ ಮಾರುಕಟ್ಟೆಯಾಗಿದೆ. ಪ್ರಥಮ ದರ್ಜೆ ಕಾಯಿಗಳು ಶೇ.80ಕ್ಕೂ ಹೆಚ್ಚು ದೆಹಲಿಗೆ ರವಾನಿಸಲಾಗುತ್ತದೆ. ಆದರೆ ಈ ಬಾರಿ ಪ್ರಥಮ ದರ್ಜೆ ಕಾಯಿಗಳ ಪ್ರಮಾಣ ತೀರಾ ಕಡಿಮೆಯಾಗಿದ್ದು, ಕೆಲವೆಡೆ ದ್ವಿತೀಯ ದರ್ಜೆ ಕಾಯಿಗಳ ಸಂಖ್ಯೆಯೇ ಹೆಚ್ಚಿದೆ. ಹೀಗಾಗಿ ಕಳೆದ ವರ್ಷದಲ್ಲಿನ ದರವೂ ಲಭಿಸುತ್ತಿಲ್ಲ, ಬೇಡಿಕೆಯೂ ಇಲ್ಲದಂತಾಗಿದೆ’ ಎಂದು ಬೆಳೆಗಾರ ಉಲ್ಲಾಸ ನಾಯ್ಕ ಅಳಲು ತೋಡಿಕೊಂಡರು.

ಕೆ.ಜಿ.ಯೊಂದಕ್ಕೆ ಸರಾಸರಿ ₹15–20 ದರವಿದೆ. ಆದರೆ ಹೊರ ರಾಜ್ಯದ ಮಾರುಕಟ್ಟೆಯಲ್ಲಿ ಪ್ರಥಮ ದರ್ಜೆ ಕಾಯಿಗಳು ಮಾತ್ರ ಮಾರಲಾಗುತ್ತಿದೆ. ಈ ವರ್ಷ ಕಾಯಿಗಳ ಗಾತ್ರ ಕಿರಿದಾಗಿದ್ದು ಹೊರ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಅನುಮಾನ.
–ಸಲೀಂ ಸಾಬ್– ಬನವಾಸಿ ಅನಾನಸ್ ಬೆಳೆಗಾರ
ಪ್ರಸಕ್ತ ವರ್ಷ ಅನಾನಸ್ ಕಾಯಿಗಳ ಗಾತ್ರ ಸಣ್ಣದಾಗಿದೆ ಎಂಬುದು ರೈತರ ಮಾತಾಗಿದ್ದು ಹೊರ ರಾಜ್ಯಗಳಿಗೆ ಕಳುಹಿಸುವ ಬದಲು ಸ್ಥಳೀಯ ಮಾರುಕಟ್ಟೆಗೆ ಆದ್ತೆ ನೀಡಿದರೆ ನಷ್ಟದ ಪ್ರಮಾಣ ತಪ್ಪಿಸಬಹುದು.
ಸತೀಶ ಹೆಗಡೆ– ತೋಟಗಾರಿಕಾ ಇಲಾಖೆ ಸಹಾಯಕ ಹಿರಿಯ ಉಪನಿರ್ದೇಶಕ
ಮಳೆ ಕೊರತೆಯಿಂದ ಭತ್ತ ದೂರ
ಬನವಾಸಿ ಭಾಗದಲ್ಲಿ ಹಲವು ರೈತರು ಮಳೆ ಕೊರತೆಯ ಕಾರಣಕ್ಕೆ ಭತ್ತ ಕೃಷಿಯಿಂದ ವಿಮುಖರಾಗಿ ಅನಾನಸ್ ಬೆಳೆ ಬೆಳೆದಿದ್ದಾರೆ. ಬನವಾಸಿ ಭಾಶಿ ಅಂಡಗಿ ನರೂರು ಗುಡ್ನಾಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸುಮಾರು 350 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಅನಾನಸ್ ಬೆಳೆಯಲಾಗುತ್ತಿದೆ. ಕೆಲವೆಡೆ ಕೊಯ್ಲು ನಡೆದರೆ ಇನ್ನೂ ಕೆಲವೆಡೆ ಬೆಳವಣಿಗೆ ಹಂತದಲ್ಲಿದೆ. ಆದರೆ ಕೊಳವೆ ಬಾವಿಗಳಲ್ಲಿಯೂ ನೀರು ಸರಿಯಾಗಿ ಸಿಗದ ಕಾರಣ ಇಳುವರಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT