ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರವಾರ: ನಗರ ಸೌಂದರ್ಯಕ್ಕೆ ‘ಖಾಲಿ ನಿವೇಶನ’ವೇ ಕಳಂಕ

Published 29 ಜನವರಿ 2024, 7:48 IST
Last Updated 29 ಜನವರಿ 2024, 7:48 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯ ಬಹುತೇಕ ನಗರ, ಪಟ್ಟಣಗಳಲ್ಲಿ ಸೌಂದರ್ಯೀಕರಣಕ್ಕೆ ಎಷ್ಟೇ ಪ್ರಯತ್ನ ನಡೆಸಿದರೂ ಖಾಲಿ ನಿವೇಶನಗಳು ಯೋಜನೆ ಸಾಕಾರಕ್ಕೆ ಅಡ್ಡಿಯಾಗುತ್ತಿವೆ!

ಸಾವಿರಾರು ಖಾಲಿ ನಿವೇಶನಗಳು ಸೂಕ್ತ ನಿರ್ವಹಣೆ ಕಾಣದೆ ಅನೈರ್ಮಲ್ಯದ ವಾತಾವರಣ ಮೂಡಲು ಕಾರಣವಾಗಿರುವುದು ಇದಕ್ಕೆ ಪ್ರಮುಖ ಕಾರಣ. ಹೃದಯಭಾಗಗಳಲ್ಲಿಯೇ ವ್ಯಾಜ್ಯ ಅಥವಾ ದಾಯಾದಿ ಕಲಹದ ಕಾರಣಕ್ಕೆ ಖಾಲಿ ಉಳಿದುಕೊಂಡ ಜಾಗದಲ್ಲಿ ಆಳೆತ್ತರದವರೆಗೆ ಗಿಡಗಂಟಿ ಬೆಳೆದು ನಿಂತಿದೆ. ಅಭಿವೃದ್ಧಿ ಹೊಂದಿದ ರಸ್ತೆ, ಉದ್ಯಾನ ಸೇರಿದಂತೆ ವ್ಯವಸ್ಥಿತ ಯೋಜನೆ ಒಳಗೊಂಡ ನಗರದ ಅಂದವನ್ನು ಇದೇ ನಿವೇಶನಗಳು ಹದಗೆಡಿಸುತ್ತಿವೆ.

ಕಾರವಾರ ನಗರದಲ್ಲೇ ಸುಮಾರು 2,800ಕ್ಕಿಂತ ಹೆಚ್ಚು ಖಾಲಿ ನಿವೇಶನಗಳಿರುವುದಾಗಿ ನಗರಸಭೆ ಅಂದಾಜಿಸಿದೆ. ಅವುಗಳ ಪೈಕಿ ಬಹುತೇಕ ನಿವೇಶನಗಳು ಅಕ್ಕಪಕ್ಕದ ಪ್ರದೇಶದ ಜನರ ಪಾಲಿನ ಕಸದ ತೊಟ್ಟಿಯಂತಾಗಿವೆ. ಅಂತಹ ನಿವೇಶನಗಳನ್ನು ಗುರುತಿಸುವ ಕೆಲಸವೂ ನಡೆಯುತ್ತಿವೆ.

‘ನಿರ್ವಹಣೆ ಇಲ್ಲದ ಖಾಲಿ ನಿವೇಶನಗಳಿಗೆ ದಂಡ ವಿಧಿಸಲು ಆಡಳಿತ ಮಂಡಳಿಯಿಂದ ಅನುಮೋದನೆ ಪಡೆಯಬೇಕಾಗುತ್ತದೆ. ಈ ಬಾರಿ ದಂಡ ವಿಧಿಸುವ ಪ್ರಸ್ತಾವಕ್ಕೆ ಅನುಮೋದನೆ ಪಡೆಯಲು ಪ್ರಯತ್ನಿಸಲಾಗುವುದು’ ಎನ್ನುತ್ತಾರೆ ನಗರಸಭೆಯ ಕಂದಾಯ ಅಧಿಕಾರಿ ರವಿ ನಾಯ್ಕ.

ಶಿರಸಿ ನಗರಸಭೆ ವ್ಯಾಪ್ತಿಯಲ್ಲಿ ಅಂದಾಜು 300ಕ್ಕೂ ಹೆಚ್ಚು ಖಾಲಿ ನಿವೇಶನಗಳಿದ್ದು, ಶೇ 40 ಕ್ಕಿಂತ ಹೆಚ್ಚಿನ ನಿವೇಶನಗಳಲ್ಲಿ ತ್ಯಾಜ್ಯ ಶೇಖರಣೆಗೊಳ್ಳುತ್ತಿದೆ.

ಬಳಸಿದ ಪ್ಲಾಸ್ಟಿಕ್, ಗಾಜಿನ ಬಾಟಲಿ, ಮತ್ತಿತರ ತ್ಯಾಜ್ಯವನ್ನು ಖಾಲಿ ನಿವೇಶನದಲ್ಲಿ ಎಸೆಯಲಾಗುತ್ತಿದೆ. ಬಹುತೇಕ ರಾತ್ರಿ ಸಮಯದಲ್ಲೇ ಇಂಥ ಜಾಗದಲ್ಲಿ ಕಸ ಹಾಕುವುದರಿಂದ ನಿಯಂತ್ರಣ ಕಷ್ಟವಾಗಿದೆ.

ದುಂಡಶಿನಗರ, ಅಶೋಕನಗರ, ಮರಾಠಿಕೊಪ್ಪ, ದೇವಿಕೆರೆ ಮತ್ತಿತರ ಕಡೆ ನೂರಾರು ಖಾಲಿ ನಿವೇಶನಗಳಲ್ಲಿ ಬೆಳೆದಿರುವ ಮುಳ್ಳಿನ ಗಿಡಗಳು ಸರಿಸೃಪ, ಹಂದಿಗಳ ವಾಸಕ್ಕೆ ಅನುಕೂಲ ಎಂಬಂತಿವೆ.

‘ಹಲವೆಡೆ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ಆದರೂ ನಿಯಂತ್ರಣ ಆಗುತ್ತಿಲ್ಲ. ಹೀಗಾಗಿ ಖಾಲಿ ನಿವೇಶನಗಳ ಮಾಲೀಕರಿಗೆ ಸ್ವಚ್ಛತೆಗೆ ನೊಟೀಸ್ ನೀಡಲಾಗುತ್ತಿದೆ’ ಎಂದು ನಗರಸಭೆ ಪರಿಸರ ಎಂಜಿನಿಯರ್ ನಾರಾಯಣ ನಾಯಕ ಹೇಳುತ್ತಾರೆ.

ಹಳಿಯಾಳ ಪಟ್ಟಣದಲ್ಲಿ ಸುಮಾರು 1,400ಕ್ಕೂ ಮಿಕ್ಕಿ ಖಾಲಿ ನಿವೇಶನಗಳು ಖಾಸಗಿ ಒಡೆತನದಲ್ಲಿವೆ. ಇವುಗಳಲ್ಲಿ ನಿಯಮಿತವಾಗಿ ಸ್ವಚ್ಛವಾಗಿಡುವುದು ಕೇವಲ ಶೇ1 ರಷ್ಟು ಮಾತ್ರ!

ಬಹುತೇಕ ಖಾಲಿ ನಿವೇಶನಗಳ ಮಾಲೀಕರು ಬೇರೆಬೇರೆ ಊರುಗಳಲ್ಲಿ ನೆಲೆಸಿರುವುದರಿಂದ, ಮಾರಾಟಗೊಂಡರೂ ಪುರಸಭೆಯಲ್ಲಿ ಖಾತಾ ಬದಲಾವಣೆ ಆಗದೇ ಕೆಲವು ನಿವೇಶನಗಳು ಇನ್ನೂ ಖಾಲಿ ಇವೆ. ಪಟ್ಟಣದ ವ್ಯಾಪ್ತಿಯ ಸದಾಶಿವ ನಗರ, ಬಸವ ನಗರ, ಆರ್.ಸೆಟಿ ಹತ್ತಿರ, ಅಲ್ಲೋಳ್ಳಿ ಗ್ರಾಮದ ರಸ್ತೆಗೆ ಹೊಂದಿಕೊಂಡಿರುವ ಲೇಔಟ್‍ಗಳಲ್ಲಿ ಮಾಡಿದ ಖಾಲಿ ನಿವೇಶನಗಳಲ್ಲಿ ಬಹಳಷ್ಟು ಗಿಡಗಂಟಿಗಳು ಬೆಳೆದಿದ್ದು ಕಂಡುಬರುತ್ತಿದೆ.

ಯಲ್ಲಾಪುರ ಪಟ್ಟಣದ ಕಲ್ಮಠ, ಧಾತ್ರಿ ನಗರ ಸೇರಿದಂತೆ ಪಟ್ಟಣದ ವಿವಿಧೆಡೆ ಖಾಲಿ ಇರುವ ನಿವೇಶನಗಳು ಕಸ ಎಸೆಯುವ ಪ್ರದೇಶಗಳಾಗಿವೆ. ನಿವೇಶನವನ್ನು ದೀರ್ಘಕಾಲ ಬಳಕೆ ಮಾಡದ ಕಾರಣ ಅನೇಕ ಕಡೆ ಕಸದ ರಾಶಿಯೇ ತುಂಬಿ ನಿಂತಿದೆ. ಕೆಲ ನಿವೇಶದಲ್ಲಿ ಗಿಡಗಳು ಸಾಕಷ್ಟು ಎತ್ತರಕ್ಕೆ ಬೆಳೆದಿವೆ.

ಪಟ್ಟಣ ಪಂಚಾಯಿತಿ ವತಿಯಿಂದ ಮನೆ ಮನೆ ಕಸ ಸಂಗ್ರಹಣೆ ನಡೆಯುತ್ತಿದೆಯಾದರೂ, ಕಸದ ವಾಹನಕ್ಕೆ ಕಸ ಹಾಕಲು ಸಾಧ್ಯವಾಗದಾಗ ಸುತ್ತಮುತ್ತಲ ಮನೆಯವರು ಕಸವನ್ನು ಖಾಲಿ ನಿವೇಶನದಲ್ಲಿ ಚೆಲ್ಲಿಹೋಗುವುದು ಸಾಮಾನ್ಯವಾಗುತ್ತಿದೆ.

‘ಖಾಲಿ ನಿವೇಶನಗಳನ್ನು ಗುರುತಿಸಿ ಮಾಲಿಕರಿಗೆ ಸ್ವಚ್ಛತೆ ಕಾಯ್ದುಕೊಳ್ಳುವಂತೆ ಸೂಚಿಸಲಾಗುವುದು. ಸೂಚನೆ ಪಾಲಿಸದವರಿಗೆ ದಂಡ ವಿಧಿಸಲಾಗುವುದು’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುನಿಲ್ ಗಾವಡೆ ಹೇಳುತ್ತಾರೆ.

‘ಕುಮಟಾ ಪಟ್ಟಣದ ಕೆಲ ಪ್ರದೇಶಗಳಲ್ಲಿ ಕಸ ಎಸೆದು ಗಲೀಜು ಮಾಡುವ ಜಾಗವನ್ನು ‘ಬ್ಲ್ಯಾಕ್ ಸ್ಪಾಟ್’ ಎಂದು ಗುರುತಿಸಲಾಗಿದ್ದು, ಅಂಥ ಮೂರ್ನಾಲ್ಕು ಸ್ಥಳ ಗುರುತಿಸಲಾಗಿದೆ. ಪುರಸಭೆ ವ್ಯಾಪ್ತಿಯಲ್ಲಿ ಖಾಲಿಯಿರುವ ಬೆರಳೆಣಿಕೆಯಷ್ಟು ಖಾಸಗಿ ಸ್ಥಳಗಳಲ್ಲಿ ಸಾರ್ವಜನಿಕರು ತ್ಯಾಜ್ಯ ಎಸೆದು ಹೋಗುತ್ತಿದ್ದಾರೆ’ ಎಂದು ಪುರಸಭೆ ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ ಹೇಳುತ್ತಾರೆ.

‘ಖಾಲಿ ಜಾಗಗಳಲ್ಲಿ ಕಸ ಎಸೆಯುವವರನ್ನು ಪತ್ತೆ ಹಚ್ಚಲು ಸ್ಥಳದಲ್ಲಿ ಸಿಸಿಟಿವಿ ಅಳವಡಿಸುವ ಬಗ್ಗೆ ಸರ್ವೆ ಕಾರ್ಯ ನಡೆಸುತ್ತೇವೆ. ಕೆಲವೆಡೆ ಖಾಸಗಿ ಸ್ಥಳಗಳಲ್ಲಿ ತ್ಯಾಜ್ಯ ಎಸೆದು ಹೋಗುವವರನ್ನು ಸಾರ್ವಜನಿಕರೇ ಪತ್ತೆ ಹಚ್ಚಿ ಪುರಸಭೆಗೆ ಹಸ್ತಾಂತರಿಸಿದ್ದು, ಅಂಥವರಿಗೆ ದಂಡ ವಿಧಿಸಲಾಗಿದೆ’ ಎಂದು ಹಿರಿಯ ಆರೋಗ್ಯ ನಿರೀಕ್ಷಕಿ ವೀಣಾ ಕಾರವಾರ ಹೇಳಿದರು.

ಹೊನ್ನಾವರ ಪಟ್ಟಣ ವ್ಯಾಪ್ತಿಯಲ್ಲಿ 2016ರ ಸಮೀಕ್ಷೆಯಂತೆ ಪಟ್ಟಣದಲ್ಲಿ ಸುಮಾರು 6,380ಕ್ಕಿಂತ ಹೆಚ್ಚು ನಿವೇಶನಗಳಿವೆ. ನೂರಾರು ಸೈಟ್‌ಗಳು ಹತ್ತಾರು ವರ್ಷಗಳಿಂದ ಖಾಲಿ ಉಳಿದುಕೊಂಡಿದ್ದು ಅಲ್ಲೆಲ್ಲ ಗಿಡ-ಗಂಟಿಗಳು ಬೆಳೆದು ನಿಂತು ತ್ಯಾಜ್ಯ ಎಸೆಯುವ ತಾಣವಾಗಿ ನಾಯಿ-ನರಿ, ಕಾಡು ಹಂದಿಗಳಿಗೆ ಆಶ್ರಯ ನೀಡಿವೆ. ಈ ಪ್ರಾಣಿಗಳನ್ನು ಬೇಟೆಯಾಡಲು ಬರುವ ಚಿರತೆ ಪಟ್ಟಣಿಗರಿಗೆ ದರ್ಶನ ನೀಡಿದ ಘಟನೆಗಳೂ ಇತ್ತೀಚೆಗೆ ನಡೆದಿವೆ.

‘ಪಟ್ಟಣದಲ್ಲಿ ನಿವೇಶನ ಹೊಂದಿರುವವರು ಅದನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಅವರಿಗೆ ಹಲವು ಬಾರಿ ತಿಳಿಸಲಾಗಿದೆ. ಆದರೆ ಸ್ಥಳೀಯ ಕೆಲವರು ಈ ಕುರಿತು ನಿರ್ಲಕ್ಷ್ಯ ತೋರುತ್ತಿದ್ದು ಅಗತ್ಯ ಕ್ರಮ ಜರುಗಿಸಲಾಗುವುದು’ ಎಂಬುದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪ್ರವೀಣಕುಮಾರ ನಾಯಕ ಅವರ ಉತ್ತರ.

ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಶಾಂತೇಶ ಬೆನಕನಕೊಪ್ಪ, ಸಂತೋಷಕುಮಾರ ಹಬ್ಬು, ಎಂ.ಜಿ.ಹೆಗಡೆ, ಎಂ.ಜಿ.ನಾಯ್ಕ, ವಿಶ್ವೇಶ್ವರ ಗಾಂವ್ಕರ.

ಮುಂಡಗೋಡ ಪಟ್ಟಣದ ಹೊಸ ಓಣಿ ಖಾಲಿ ನಿವೇಶನದ ಸುತ್ತಲೂ ತ್ಯಾಜ್ಯ ಸಂಗ್ರಹವಾಗಿರುವುದು
ಮುಂಡಗೋಡ ಪಟ್ಟಣದ ಹೊಸ ಓಣಿ ಖಾಲಿ ನಿವೇಶನದ ಸುತ್ತಲೂ ತ್ಯಾಜ್ಯ ಸಂಗ್ರಹವಾಗಿರುವುದು
ಹೊನ್ನಾವರ ಪಟ್ಟಣದ ಪ್ರಭಾತನಗರದ ಖಾಲಿ ನಿವೇಶನವೊಂದರಲ್ಲಿ ಗಿಡಗಂಟಿಗಳು ಬೆಳೆದಿವೆ
ಹೊನ್ನಾವರ ಪಟ್ಟಣದ ಪ್ರಭಾತನಗರದ ಖಾಲಿ ನಿವೇಶನವೊಂದರಲ್ಲಿ ಗಿಡಗಂಟಿಗಳು ಬೆಳೆದಿವೆ
ಶಿರಸಿ ನಗರದ ದುಂಡಶಿನಗರದ ಬಳಿಯ ಖಾಲಿ ನಿವೇಶನ ತ್ಯಾಜ್ಯ ಸುರಿಯಲು ಬಳಕೆಯಾಗುತ್ತಿದೆ
ಶಿರಸಿ ನಗರದ ದುಂಡಶಿನಗರದ ಬಳಿಯ ಖಾಲಿ ನಿವೇಶನ ತ್ಯಾಜ್ಯ ಸುರಿಯಲು ಬಳಕೆಯಾಗುತ್ತಿದೆ
ಶಿರಸಿಯ ದುಂಡಶಿ ನಗರದಲ್ಲಿರುವುದು ಖಾಲಿ ನಿವೇಶನವೋ ಕಸ ವಿಲೇವಾರಿ ಘಟಕವೋ ಎಂಬ ಸಂಶಯ ಕಾಡುತ್ತಿದೆ. ಇಲ್ಲಿ ಮೂಗುಮುಚ್ಚಿ ಓಡಾಟ ನಡೆಸುವ ಸ್ಥಿತಿ ಇದೆ.
ಚಂದ್ರಶೇಖರ ಹೆಗಡೆ ಶಿರಸಿ ನಗರದ ನಿವಾಸಿ
ಖಾಲಿ ನಿವೇಶನಗಳಲ್ಲಿ ಗಿಡಗಂಟಿ ಬೆಳೆದರೆ ವಿಷಕಾರಿ ಸರಿಸೃಪಗಳ ಸಂತತಿ ಹೆಚ್ಚಲಿದೆ. ಅಲ್ಲದೆ ಕಸ ಎಸೆಯುವ ತಾಣವಾಗುವುದರಿಂದ ರೋಗರುಜಿನ ಹರಡಲು ಕಾರಣವಾಗುತ್ತವೆ.
ವಿನಾಯಕ ಕೊರ್ವೇಕರ ಹಳಿಯಾಳ ಪಟ್ಟಣ ನಿವಾಸಿ
ಕಾರವಾರ ನಗರದ ಹೃದಯಭಾಗದಲ್ಲೇ ಖಾಲಿ ನಿವೇಶನಗಳಲ್ಲಿ ಆಳೆತ್ತರದವರೆಗೆ ಗಿಡಗಂಟಿ ಬೆಳೆದುಕೊಂಡಿದ್ದು ಕಸ ಎಸೆಯುವ ಸ್ಥಳವಾಗಿ ಮಾರ್ಪಟ್ಟಿದೆ. ಇದರಿಂದ ನಗರದ ಸೌಂದರ್ಯಕ್ಕೆ ಕುಂದು ಬರುತ್ತಿದೆ.
ಸಂತೋಷ ನಾಯ್ಕ ಕಾಜುಬಾಗ ನಿವಾಸಿ ಕಾರವಾರ
ನಮೂನೆ–3 ಪರಿಹಾರಕ್ಕೆ ಕಾದಿರಬಹುದು!
ಮುಂಡಗೋಡ ಪಟ್ಟಣ ವ್ಯಾಪ್ತಿಯಲ್ಲಿ ಖಾಲಿ ನಿವೇಶನಗಳ ಸಂಖ್ಯೆ ಸಾಕಷ್ಟಿದೆ. ಅವುಗಳು ಹಂದಿಗಳ ವಾಸಸ್ಥಳವಾಗಿ ಕಸ ಸಂಗ್ರಹಣಾ ತೊಟ್ಟಿಯಾಗಿ ಮಾರ್ಪಟ್ಟಿದೆ. ನಿರ್ವಹಣೆ ಇಲ್ಲದೇ ಇರುವ ನಿವೇಶನಗಳು ಅಕ್ಕಪಕ್ಕದ ನಿವಾಸಿಗಳಿಗೆ ಕಸ ಚೆಲ್ಲುವ ಸ್ಥಳಗಳಾಗಿವೆ. ಹಂದಿಗಳು ಇಂತಹ ಸ್ಥಳಗಳನ್ನೇ ಹುಡುಕಿಕೊಂಡು ಮತ್ತಷ್ಟು ವಾತಾವರಣ ಕಲುಷಿತಗೊಳಿಸುತ್ತಿವೆ. ‘ಖಾಲಿ ನಿವೇಶನಗಳಲ್ಲಿ ತ್ಯಾಜ್ಯ ಎಸೆಯುವುದು ಸಾಮಾನ್ಯ ಎಂಬಂತಾಗಿದೆ. ಹಂದಿಗಳು ಇಲ್ಲಿಯೇ ಬಿಡಾರ ಹೂಡುತ್ತಿವೆ. ಸುತ್ತಲೂ ಮನೆಗಳಿರುತ್ತವೆ. ಅದಕ್ಕೆ ತಾಗಿಯೇ ಇರುವ ಖಾಲಿ ನಿವೇಶನಗಳು ಕಸ ಚೆಲ್ಲಲು ಬಳಕೆಯಾಗುತ್ತಿವೆ. ನಿವೇಶನಗಳ ಮಾಲೀಕರು ಈ ಕಡೆ ತಲೆ ಹಾಕುವುದಿಲ್ಲ. ಮನೆ ಮನೆಗೆ ಕಸ ಸಂಗ್ರಹಿಸಲು ವಾಹನ ಹಾಗೂ ಪೌರಸಿಬ್ಬಂದಿ ನಿತ್ಯವೂ ಬಂದರೂ ಖಾಲಿ ನಿವೇಶನ ಚರಂಡಿಗಳಲ್ಲಿಯೇ ತ್ಯಾಜ್ಯ ಚೆಲ್ಲುವರ ಸಂಖ್ಯೆ ಹೆಚ್ಚಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಪ್ರಕಾಶ ಬಡಿಗೇರ ದೂರಿದರು. ‘ನಮೂನೆ-3ರ ಸಮಸ್ಯೆ ಇನ್ನಷ್ಟು ವರ್ಷ ಬಿಟ್ಟು ಮಾರಿದರೆ ಲಾಭ ಆಗಬಹುದು ಎಂಬ ಆಸೆ ಸೇರಿದಂತೆ ಇನ್ನಿತರ ಕಾರಣಗಳಿಂದ ಖಾಲಿ ನಿವೇಶನಗಳ ಸಂಖ್ಯೆ ಹೆಚ್ಚಿದೆ. ವರ್ಷಕ್ಕೊಮ್ಮೆಯಾದರೂ ನಿವೇಶನಗಳ ಮಾಲೀಕರು ಜಾಗವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು’ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಮಂಜುನಾಥ ಹರಮಲಕರ್‌ ಹೇಳಿದರು.
ಪ್ರತಿ ಗುಂಟೆಗೆ ₹ 1000 ದಂಡ
‘ಎಲ್ಲೆಂದರಲ್ಲಿ ಬಹಳಷ್ಟು ಕಸಕಡ್ಡಿ ಹಾಕುತ್ತಾರೆ. ಖಾಲಿ ನಿವೇಶನಗಳಲ್ಲಿ ನಿರುಪಯುಕ್ತ ಗಿಡಗಂಟಿ ಬೆಳೆಯುವುದು ಹೆಚ್ಚುತ್ತಿದೆ. ಇವುಗಳ ನಿಯಂತ್ರಣಕ್ಕೆ ನಿರ್ವಹಣೆ ಇಲ್ಲದ ನಿವೇಶನಗಳಿಗೆ ಪ್ರತಿ ಗುಂಟೆಗೆ ತಲಾ ₹ 1000 ದಂತೆ ದಂಡವನ್ನು ವಿಧಿಸಲಾಗುತ್ತಿದೆ. ಈಗಾಗಲೆ ₹ 15 ಸಾವಿರ ದಂಡ ಸಂಗ್ರಹಿಸಿದ್ದೇವೆ. ಹಲವಾರು ಖಾಲಿ ನಿವೇಶನ ಮಾಲೀಕರು ಮುಂಬೈ ಗೋವಾ ಬೆಳಗಾವಿ ಕಾರವಾರ ಹುಬ್ಬಳ್ಳಿ ಮತ್ತಿತರ ಭಾಗಗಳಲ್ಲಿ ವಾಸಿಸುವುದರಿಂದ ಸಕಾಲದಲ್ಲಿ ನಿವೇಶನದ ಮಾಲೀಕರಿಂದ ದಂಡ ವಸೂಲಿ ಮಾಡುವುದಾಗಲಿ ನೋಟಿಸ್ ಜಾರಿ ಮಾಡುವುದಾಗಲಿ ಕಷ್ಟವಾಗುತ್ತಿದೆ’ ಎಂದು ಹಳಿಯಾಳ ಪುರಸಭೆಯ ಪರಿಸರ ಎಂಜಿನಿಯರ್ ದರ್ಶಿತಾ ಬಿ.ಎಸ್‌. ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT