ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನು ತರಿಸುತ್ತಿದೆ ಕಣ್ಣೀರು !

ರಸ್ತೆ ಬದಿಯ ಅನಧಿಕೃತ ಮಾರಾಟಕ್ಕಿಲ್ಲ ಕಡಿವಾಣ
Last Updated 17 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಶಿರಸಿ: ಷೇರು ಮಾರ್ಕೆಟ್‌ಗೆ ಪೈಪೋಟಿ ನೀಡುವಂತೆ ದರ ಏರಿಳಿತ ಕಾಣುವ ಇಲ್ಲಿನ ಮೀನು ಮಾರುಕಟ್ಟೆಗಳು ಗ್ರಾಹಕರಿಗೆ ಖುಷಿ ನೀಡುತ್ತಿದ್ದರೂ, ವ್ಯಾಪಾರಸ್ಥರಿಗೆ ಕಣ್ಣೀರು ತರಿಸುತ್ತಿವೆ. ಅನೇಕ ‘ಇಲ್ಲ’ಗಳ ನಡುವೆ ಕೂಡ ವ್ಯಾಪಾರಸ್ಥರು, ಬೇಡಿಕೆಗೆ ತಕ್ಕಂತೆ ಹಲವಾರು ವಿಧದ ಮೀನು ಪೂರೈಕೆ ಮಾಡಿ, ಗ್ರಾಹಕರನ್ನು ತೃಪ್ತಿಪಡಿಸುತ್ತಾರೆ.

70ಸಾವಿರ ಜನಸಂಖ್ಯೆ ಇರುವ ನಗರದಲ್ಲಿ ಎರಡು ಮೀನು ಮಾರುಕಟ್ಟೆಗಳಿವೆ. ಕರ್ನಾಟಕ ನಗರಾಭಿವೃದ್ಧಿ ಮತ್ತು ಕರಾವಳಿ ಪರಿಸರ ನಿರ್ವಹಣಾ ಯೋಜನೆಯಡಿ 2007ರಲ್ಲಿ ನಿರ್ಮಾಣಗೊಂಡಿರುವ ಹಳೇ ಬಸ್‌ ನಿಲ್ದಾಣದ ಹಿಂದಿನ ಮಾರುಕಟ್ಟೆ ಸ್ಥಳೀಯ ಮೀನು ಮಾರಾಟಗಾರರಿಗೆ ಮೀಸಲಿದೆ. 2009ರಲ್ಲಿ ನಗರಸಭೆ ನಿರ್ಮಿಸಿರುವ ನಿಲೇಕಣಿ ಮೀನು ಮಾರುಕಟ್ಟೆಯಲ್ಲಿ ಕುಮಟಾ ಕಡೆಯಿಂದ ಬರುವ ಅಂಬಿಗ ಮಹಿಳೆಯರ ಅಧಿಪತ್ಯ.

ಇವೆರಡೂ ಮಾರುಕಟ್ಟೆಗಳಲ್ಲಿ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿಲ್ಲ. ಹಳೇ ಬಸ್ ನಿಲ್ದಾಣ ಸಮೀಪದ ಮಾರುಕಟ್ಟೆಯಲ್ಲಿ ಕುಡಿಯುವ ನೀರಿಗಾಗಿ ಪೈಪ್‌ಲೈನ್ ಅಳವಡಿಸಿ, ಇದಕ್ಕಾಗಿ ನಗರಸಭೆ ₹ 80ಸಾವಿರಕ್ಕೂ ಹೆಚ್ಚು ಹಣ ಖರ್ಚು ಮಾಡಿದೆ. ಆದರೆ, ಇದರಲ್ಲಿ ಒಂದು ದಿನವೂ ನೀರು ಬಂದಿಲ್ಲ. ಎದುರಿಗಿರುವ ಬೋರ್‌ವೆಲ್‌ನಲ್ಲಿ ಜಂಗು ವಾಸನೆಯ ನೀರು ಬರುತ್ತದೆ. ಹೀಗಾಗಿ, ಕೊಡಕ್ಕೆ ಎರಡು ರೂಪಾಯಿ ಕೊಟ್ಟು ನೀರು ಖರೀದಿಸುತ್ತೇವೆ ಎನ್ನುತ್ತಾರೆ ವ್ಯಾಪಾರಸ್ಥರು.

ಮಾರ್ಕೆಟ್ ಎದುರು ಸರಿಯಾದ ಪಾರ್ಕಿಂಗ್ ವ್ಯವಸ್ಥೆಯಿಲ್ಲ. ಯಾರು ಬೇಕಾದರೂ ವಾಹನ ನಿಲ್ಲಿಸಿ ಹೋಗುತ್ತಾರೆ. ಪ್ಲಾಸ್ಟಿಕ್ ಬಕೆಟ್‌ನಂತಹ ಸಾಮಗ್ರಿಗಳನ್ನು ಇಲ್ಲಿ ರಾಶಿ ಹಾಕಿ ಹೋಗುವುದರಿಂದ, ಬಾಡಿಗೆಕೊಟ್ಟು ವ್ಯಾಪಾರ ಮಾಡುವ ವ್ಯಾಪಾರಸ್ಥರ ಸಾಮಗ್ರಿ ಇಡಲು ಜಾಗ ಇರುವುದಿಲ್ಲ. ಮೀನು ಮಾರುಕಟ್ಟೆಯಿಂದ ನಗರಸಭೆಗೆ ಮಾಸಿಕ ₹ 80ಸಾವಿರದಷ್ಟು ಆದಾಯ ಸಿಗುತ್ತದೆ. ಇದರ ನಿರ್ವಹಣೆಯ ಬಗ್ಗೆ ನಗರಸಭೆ ನಿರ್ಲಕ್ಷ್ಯ ತೋರಬಾರದು ಎಂದು ಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಜೂಜೆ ನರೋನ್ಹಾ ಆಗ್ರಹಿಸಿದರು.

ಶಿರಸಿ–ಕುಮಟಾ ಹೆದ್ದಾರಿಯ ಬದಿಯಲ್ಲಿರುವ ನಿಲೇಕಣಿ ಮೀನು ಮಾರುಕಟ್ಟೆಯ ಎದುರು ಗ್ರಾಹಕರು ವಾಹನ ನಿಲುಗಡೆ ಮಾಡಿ, ಮೀನು ಖರೀದಿಗೆ ಹೋಗುತ್ತಾರೆ. ಇದರಿಂದ ಹೆದ್ದಾರಿಯಲ್ಲಿ ವಾಹನ ದಟ್ಟಣೆಯಾಗುತ್ತದೆ. ಅದರಲ್ಲೂ ಭಾನುವಾರ ತೀವ್ರ ದಟ್ಟಣಿಯಿರುತ್ತದೆ. ರಸ್ತೆಯಲ್ಲಿ ವಾಹನ ದಾಟಿಸುವುದೇ ಕಷ್ಟ ಎಂಬುದು ನಿತ್ಯ ಸಂಚರಿಸುವವರ ಆರೋಪ.

‘ನಾವು ಒಂದು ಕಟ್ಟೆಗೆ ತಿಂಗಳಿಗೆ ₹ 1000 ಬಾಡಿಗೆ ನೀಡುತ್ತೇವೆ. ಆದರೆ, ಒಳಗಿನ ಸ್ವಚ್ಛತೆಯನ್ನು ನಾವೇ ಮಾಡಿಕೊಳ್ಳಬೇಕು. ನೀರು ಹೊರ ಹೋಗಲು ಪೈಪ್‌ ಸಹ ಹಾಕಿಕೊಟ್ಟಿಲ್ಲ. ಕಸ ಹಾಕಲು ತೊಟ್ಟಿ ಇಲ್ಲ. ಇದರಿಂದ ಇಡೀ ವಾತಾವರಣ ಕಲುಷಿತಗೊಂಡು ಗಬ್ಬು ವಾಸನೆ ಬೀರುತ್ತದೆ. ನೀರಿನ ವ್ಯವಸ್ಥೆ ಕೂಡ ಸರಿಯಾಗಿಲ್ಲ. ಇರುವ ಒಂದು ಬಲ್ಬ್ ಕೂಡ ಹಾಳಾಗಿತ್ತು. ಈಗ ನಾವೇ ಅದಕ್ಕೆ ಹೊಸ ಬಲ್ಬ್ ಹಾಕಿದ್ದೇವೆ. ಮೀನು ಖಾಲಿಯಾಗಿದ್ದರೆ ರಾತ್ರಿ 10 ಗಂಟೆಯ ತನಕವೂ ಇರುವರಿಂದ ವಿದ್ಯುತ್ ಬೆಳಕು ಬೇಕೇ ಬೇಕು’ ಎನ್ನುತ್ತಾರೆ ಮಹಿಳಾ ವ್ಯಾಪಾರಿ ಮಹಾಲಕ್ಷ್ಮಿ ಅಂಬಿಗ.

ತ್ಯಾಜ್ಯ ಹೋಗಲು ಸರಿಯಾದ ವ್ಯವಸ್ಥೆಯಿಲ್ಲದೇ, ಮೀನು ಮಾರ್ಕೆಟ್ ಹಿಂಭಾಗದಲ್ಲಿರುವ ಮನೆಗಳಿಗೆ ತೊಂದರೆಯಾಗಿದೆ. ಮನೆಯ ಬಾವಿ ನೀರು ಹಾಳಾಗುತ್ತದೆ. ದಿನವಿಡೀ ದುರ್ನಾತದಲ್ಲೇ ಬದುಕಬೇಕು ಎಂಬ ಲಿಂಗದಕೋಣ ಭಾಗದ ನಾಗರಿಕರ ಸಮಸ್ಯೆಗೆ ಇನ್ನೂ ಪರಿಹಾರ ದೊರೆತಿಲ್ಲ.

‘ನಾಲ್ಕೈದು ವರ್ಷಗಳ ಹಿಂದೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅನುದಾನ ನೀಡಿದ್ದ ಮೀನು ಮಾರುಕಟ್ಟೆ ಸ್ಥಳೀಯರ ವಿರೋಧದಿಂದ ನಿರ್ಮಾಣವಾಗಲಿಲ್ಲ. ಬೆಳೆಯುತ್ತಿರುವ ನಗರಕ್ಕೆ ಎರಡು ಮಾರುಕಟ್ಟೆ ಸಾಲದು. ನಾರಯಣಗುರು ನಗರ, ಯಲ್ಲಾಪುರ ನಾಕೆ, ಆದರ್ಶ ನಗರ ಭಾಗದ ಜನರಿಗೆ ನಿಲೇಕಣಿ ಮೀನು ಮಾರುಕಟ್ಟೆಗೆ ಹೋಗಿ ಬರುವ ವೆಚ್ಚವೇ ಹೆಚ್ಚಾಗುತ್ತದೆ. ₹100ರ ಮೀನು ತರಲು ಆಟೊರಿಕ್ಷಾ ಅಷ್ಟೇ ಹಣ ಕೊಡಬೇಕು. ಮನೆಯಲ್ಲಿ ಗಂಡಸರು ಇಲ್ಲದಿದ್ದರೆ ಹೆಂಗಸರಿಗೆ ಹೋಗುವುದೂ ಸಮಸ್ಯೆ. ತಾಜಾ ಮೀನು ಸಿಗುತ್ತದೆ ಎಂಬ ಕಾರಣಕ್ಕೆ ಹೆಚ್ಚಿನವರು ನಿಲೇಕಣಿಗೆ ಹೋಗುತ್ತಾರೆ. ಇನ್ನೊಂದು ಮೀನು ಮಾರುಕಟ್ಟೆಯಾದರೆ ಅನುಕೂಲ’ ಎಂದು ಪ್ರಶಾಂತ ಜೋಗಳೇಕರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT