ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಧೀಶರ ಪುತ್ರನ ಸೋಗಿನಲ್ಲಿ ಮೋಸ!

ಕಾರವಾರದ ಹಿರಿಯ ವಕೀಲರೊಬ್ಬರಿಗೆ ₹ 10 ಸಾವಿರ ವಂಚನೆ
Last Updated 24 ಆಗಸ್ಟ್ 2020, 13:32 IST
ಅಕ್ಷರ ಗಾತ್ರ

ಕಾರವಾರ: ಸುಪ್ರೀಂಕೋರ್ಟ್‌ ನ್ಯಾಯಾಧೀಶರ ಮಗ ಎಂದು ನಂಬಿಸಿದ ವ್ಯಕ್ತಿಯೊಬ್ಬ, ನಗರದ ಹಿರಿಯ ವಕೀಲರೊಬ್ಬರಿಗೆ ₹ 10 ಸಾವಿರ ವಂಚಿಸಿದ್ದಾನೆ. ಹಣ ಪಡೆದುಕೊಂಡಾತ ಮತ್ತು ಜೊತೆಗಿದ್ದ ಇನ್ನೊಬ್ಬ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾರೆ.

ಹಿರಿಯ ವಕೀಲರು ಲಾಕ್‌ಡೌನ್‌ ಅವಧಿಯ ದಿನಗಳನ್ನು ಕಳೆಯಲೆಂದು ದೆಹಲಿಯಿಂದ ನಗರಕ್ಕೆ ಬಂದಿದ್ದರು. ಆ.19ರಂದು ಸಂಜೆ 7.15ರ ಸುಮಾರಿಗೆ ಅವರ ಮೊಬೈಲ್‌ ಫೋನ್‌ಗೆ ಕರೆ ಮಾಡಿದ ವ್ಯಕ್ತಿಯೊಬ್ಬ, ತನ್ನ ಗುರುತು ಹೇಳಿದ್ದ. ತನ್ನ ಹತ್ತಿರದ ಸಂಬಂಧಿಕರೊಬ್ಬರು ಬೆಂಗಳೂರಿನ ರೈಲು ನಿಲ್ದಾಣದಲ್ಲಿದ್ದಾರೆ. ಅವರ ಪರ್ಸ್ ಕಳವಾಗಿದೆ. ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಲು ಅವರಿಗೆ ಹಣದ ಅಗತ್ಯವಿದೆ. ದಯವಿಟ್ಟು ಸಹಾಯ ಮಾಡಿ ಎಂದು ಕೇಳಿಕೊಂಡಿದ್ದ.

ಹೇಗಾದರೂ ಮಾಡಿ ತನಗೆ ₹ 10 ಸಾವಿರ ತಲುಪಿಸಿದರೆ, ಅವರಿಗೆ ನೀಡುವುದಾಗಿ ತಿಳಿಸಿದ್ದ. ಈ ಸಂಕಷ್ಟದ ‘ಕಥೆ’ಗಳನ್ನು ಕೇಳಿದ ಹಿರಿಯ ವಕೀಲರ ಮನಸ್ಸು ಕರಗಿತು. ಬೆಂಗಳೂರಿನಲ್ಲಿರುವ ತಮ್ಮ ಪರಿಚಯದ ಮತ್ತೊಬ್ಬ ವಕೀಲರಿಗೆ ವಿಚಾರ ತಿಳಿಸಿ ಹಣ ಕೊಟ್ಟು ಬರುವಂತೆ ಕೋರಿದ್ದರು. ಅದರಂತೆ ಅವರೂ ಹಣ ನೀಡಿ ಬಂದಿದ್ದರು.

ತಾನು ಹಣದ ವ್ಯವಸ್ಥೆ ಮಾಡಿದ್ದು, ಸಿಕ್ಕಿದೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಲು ಹಿರಿಯ ವಕೀಲರು ತಮಗೆ ಕರೆ ಮಾಡಿದ ವ್ಯಕ್ತಿಗಳಿಗೆ ಪುನಃ ಕರೆ ಮಾಡಿದರು. ಆದರೆ, ಇಬ್ಬರ ಮೊಬೈಲ್ ಫೋನ್‌ಗಳೂ ಸ್ವಿಚ್ಡ್ ಆಫ್ ಆಗಿತ್ತು. ಇದರಿಂದ ಅನುಮಾನಗೊಂಡ ಅವರು, ನ್ಯಾಯಾಧೀಶರ ನಿಜವಾದ ಪುತ್ರನ ಮೊಬೈಲ್ ಸಂಖ್ಯೆ ಸಂಗ್ರಹಿಸಿ ಕರೆ ಮಾಡಿ ನಡೆದ ಸಂಗತಿಯನ್ನು ವಿವರಿಸಿದರು. ತಾನು ಕರೆ ಮಾಡಿಲ್ಲ. ತಮ್ಮ ಸಂಬಂಧಿಕರಿಗೆ ಇಂಥ ಸಮಸ್ಯೆ ಆಗಿಲ್ಲ ಎಂದು ನ್ಯಾಯಾಧೀಶರ ಮಗನೂ ಸ್ಪಷ್ಪಪಡಿಸಿದರು.

ಹಿರಿಯ ವಕೀಲರು ಈ ಹಿಂದಿನಿಂದಲೂ ಅನೇಕ ಸಾಮಾಜಿಕ ಚಟುವಟಿಕೆಗಳಿಗೆ, ಅಗತ್ಯವಿದ್ದವರಿಗೆ ಧನ ಸಹಾಯ ಮಾಡುತ್ತಿದ್ದಾರೆ. ಆದರೆ, ಅವರ ಗುಣವನ್ನು ಆರೋಪಿಯು ದುರ್ಬಳಕೆ ಮಾಡಿಕೊಂಡಿದ್ದ. ತಮಗೆ ಮೋಸ ಮಾಡಿದ್ದು ಗೊತ್ತಾದ ಬಳಿಕ ಅವರು ಕಾರವಾರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಆರೋಪಿಗಳ ಮೊಬೈಲ್ ಫೋನ್ ಸಂಖ್ಯೆಯನ್ನು ಆಧರಿಸಿ ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದ್ದು, ಹಿರಿಯ ಅಧಿಕಾರಿಗಳ ಅನುಮತಿ ದೊರೆತ ಬಳಿಕ ಬೆಂಗಳೂರಿನ ಪೊಲೀಸ್ ಠಾಣೆಗೆ ವರ್ಗಾವಣೆ ಆಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ನಂಬಿಕೆಗೆ ಮಾಡಿದ ಮೋಸ’

‘ಸಂಕಷ್ಟದಲ್ಲಿರುವವರು ಸಹಾಯ ಬೇಕು ಎಂದು ಕರೆ ಮಾಡಿದಾಗ ಸ್ಪಂದಿಸಲು ಹಿಂದೆ ಮುಂದೆ ನೋಡುವಂಥ ಸನ್ನಿವೇಶಗಳನ್ನು ಇಂಥ ಪ್ರಕರಣಗಳು ಸೃಷ್ಟಿಸುತ್ತವೆ. ನಂಬಿಕೆಗೆ ಅಪಚಾರ ಎಸಗುವ ಕಾರ್ಯವು ಸಮಾಜದ ಹಿತದೃಷ್ಟಿಯಿಂದ ಒಳ್ಳೆಯದಲ್ಲ’ ಎಂದು ವಕೀಲರೊಬ್ಬರು ಪ್ರತಿಕ್ರಿಯಿಸಿದ್ದಾರೆ.

‘ಆರೋಪಿಗಳನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಈ ರೀತಿಯ ವಂಚಕರ ಜಾಲವನ್ನು ಮಟ್ಟಹಾಕಬೇಕು’ ಎಂದು ಆಗ್ರಹಿಸಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT