ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಕರ್ಣ: ಆಮೆಗತಿಯಲ್ಲಿ ಸರ್ಕಾರಿ ಆಸ್ಪತ್ರೆ ಕಾಮಗಾರಿ

ಕೆಲಸ ಆರಂಭಗೊಂಡು ಅರ್ಧ ವರ್ಷ ಕಳೆದರೂ ಅಡಿಪಾಯ ಹಂತದಿಂದ ಮೇಲೇರಿಲ್ಲ
Published 27 ಆಗಸ್ಟ್ 2023, 6:54 IST
Last Updated 27 ಆಗಸ್ಟ್ 2023, 6:54 IST
ಅಕ್ಷರ ಗಾತ್ರ

ಗೋಕರ್ಣ: ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಿ ಸುಮಾರು ₹25 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಆಸ್ಪತ್ರೆ ಕಟ್ಟಡದ ಕಾಮಗಾರಿ ಇನ್ನೂ ಅಡಿಪಾಯ ಹಂತದಲ್ಲಿಯೇ ಇದೆ. ಕೆಲಸ ಆರಮಭಗೊಂಡು ಆರು ತಿಂಗಳು ಕಳೆದರೂ ಕಾಮಗಾರಿ ವೇಗ ಪಡೆಯದಿರುವುದಕ್ಕೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಹುಬ್ಬಳ್ಳಿಯ ಖಾಸಗಿ ಕಂಪನಿಯೊಂದು ಗುತ್ತಿಗೆ ಪಡೆದಿದ್ದು ಕಳೆದ ಮಾರ್ಚ್ ತಿಂಗಳಿನಿಂದಲೇ ಕೆಲಸ ಪ್ರಾರಂಭಿಸಿದ್ದರೂ. ಸದ್ಯ ಕಟ್ಟಡದ ಆಧಾರಸ್ತಂಬ (ಪಿಲ್ಲರ್) ಅಳವಡಿಸುವ ಹೊಂಡದಲ್ಲಿ ಕೇವಲ ಕಬ್ಬಿಣದ ಸರಳುಗಳನ್ನು ಮಾತ್ರ ಅಳವಡಿಸಿ ಕೆಲಸ ನಿಲ್ಲಿಸಲಾಗಿದೆ.

ಇಕ್ಕಟ್ಟಾದ ಕಟ್ಟಡವೊಂದರಲ್ಲಿ ಸದ್ಯ ಪ್ರಾಥಮಿಕ ಆರೋಗ್ಯ ಕೇಂದ್ರ ನಡೆಯುತ್ತಿದೆ. ನಿತ್ಯ ನೂರಾರು ರೋಗಿಗಳು ಇದೇ ಕಟ್ಟಡದಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ವಿಶ್ವಪ್ರಸಿದ್ಧ ಪ್ರವಾಸಿ ತಾಣವೂ ಆಗಿರುವ ಕಾರಣ ಸಾವಿರಾರು ಸಂಖ್ಯೆಯಲ್ಲಿ ಜನರು ಗೋಕರ್ಣಕ್ಕೆ ಭೇಟಿ ನೀಡುತ್ತಿದ್ದಾರೆ. ಆದರೆ ಸುಸಜ್ಜಿತ ಆಸ್ಪತ್ರೆ ಇಲ್ಲದೆ ಪರದಾಡುವ ಸ್ಥಿತಿ ಉಂಟಾಗಿದೆ.

‘ಆಸ್ಪತ್ರೆಯ ಕಾಮಗಾರಿ ಬೇಗ ಮುಗಿಯಬೇಕಾಗಿದೆ. ಕೆಲಸ ವಿಳಂಬವಾಗುತ್ತಿರುವುದರ ಕುರಿತು ಶಾಸಕರಿಗೂ ಮಾಹಿತಿ ನೀಡಲಾಗಿದೆ. ಆದಷ್ಟು ಬೇಗ ಜನರ ಉಪಯೋಗಕ್ಕೆ ಆಸ್ಪತ್ರೆ ಸಿಗುವಂತಾಗಬೇಕು. ಸದ್ಯ ದಾನಿಗಳು ₹15 ಲಕ್ಷ ವೆಚ್ಚದಲ್ಲಿ ಕಟ್ಟಿಸಿಕೊಟ್ಟಿದ್ದ ಕಟ್ಟಡದಲ್ಲಿಯೇ ಜನರಿಗೆ ಚಿಕಿತ್ಸೆ ನೀಡಬೇಕಾಗಿದೆ’ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಜಗದೀಶ ನಾಯ್ಕ ಹೇಳುತ್ತಾರೆ.

‘ಮಳೆಯ ಕಾರಣಕ್ಕೆ ಕೆಲಸ ನಿಧಾನವಾಗಿ ನಡೆಯುತ್ತಿದೆ. ಕಾರ್ಮಿಕರು ಬೇರೆ ಕಡೆಯಿಂದ ಬರಬೇಕಿದೆ. ರಭಸದ ಮಳೆಯ ಕಾರಣ ಕೆಲಸಗಾರರೂ ಬರಲಿಲ್ಲ. ಒಮ್ಮೆ ಕೆಲಸಗಾರರು ಬಂದರೆ ಅವರಿಗೆ ನಿರಂತರವಾಗಿ ಕೆಲಸ ನೀಡಬೇಕು. ಇದೇ ಕಾರಣದಿಂದ ಕಾಮಗಾರಿ ಸ್ವಲ್ಪ ತಡವಾಗುತ್ತಿದೆ’ ಎಂದು ಕಾಮಗಾರಿಯ ಮೇಲ್ವಿಚಾರಣಾ ಎಂಜಿನೀಯರ್ ಬಾಲಚಂದ್ರ ಹೇಳುತ್ತಾರೆ.

‘ಸತತ ಪ್ರಯತ್ನದಿಂದ ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರ ಸಮುದಾಯ ಆಸ್ಪತ್ರೆಯಾಗಿ ಪರಿವರ್ತನೆಯಾಗಿದೆ. ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸುವ ಬಗ್ಗೆ ಅಧಿವೇಶನದಲ್ಲಿಯೂ ಪ್ರಸ್ತಾಪಿಸಿದ್ದೆ. ಹಿಂದಿನ ಸರ್ಕಾರ ಆಸ್ಪತ್ರೆ ಕಟ್ಟಡಕ್ಕೆ ಅನುದಾನ ಒದಗಿಸಿತ್ತು. ಕೆಲಸ ವಿಳಂಬ ಮಾಡದಂತೆ ಸೂಚನೆ ಕೊಡಲಾಗಿದೆ’ ಎಂದು ಶಾಸಕ ದಿನಕರ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.

ಗೋಕರ್ಣದ ಸರ್ಕಾರಿ ಆಸ್ಪತ್ರೆಯ ನೂತನ ಕಟ್ಟಡದ ಕಾಮಗಾರಿ ಪ್ರಾರಂಭವಾಗಿ 6 ತಿಂಗಳಾದರೂ ಮೇಲೇರದೇ ಪ್ರಾರಂಭದ ಹಂತದಲ್ಲಿಯೇ ಇದೆ
ಗೋಕರ್ಣದ ಸರ್ಕಾರಿ ಆಸ್ಪತ್ರೆಯ ನೂತನ ಕಟ್ಟಡದ ಕಾಮಗಾರಿ ಪ್ರಾರಂಭವಾಗಿ 6 ತಿಂಗಳಾದರೂ ಮೇಲೇರದೇ ಪ್ರಾರಂಭದ ಹಂತದಲ್ಲಿಯೇ ಇದೆ
ಆಸ್ಪತ್ರೆಯ ಕಾಮಗಾರಿಗೆ ವೇಗ ನೀಡಬೇಕಾಗಿದೆ. ಕಾಮಗಾರಿ ತಡವಾಗುತ್ತಿದ್ದ ಬಗ್ಗೆ ನಿರ್ದಿಷ್ಟ ಕಾರಣ ತಿಳಿದು ಬರುತ್ತಿಲ್ಲ
ಡಾ.ಜಗದೀಶ ನಾಯ್ಕ ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ
ಐದು ವೈದ್ಯರ ನೇಮಕಾತಿ ಸಾಧ್ಯತೆ
ಗೋಕರ್ಣ ಧಾರ್ಮಿಕ ಕ್ಷೇತ್ರವಾಗಿರುವ ಜತೆಗೆ ಪ್ರವಾಸೋದ್ಯಮದಲ್ಲಿ ಪ್ರಸಿದ್ಧಿ ಪಡೆದ ಕ್ಷೇತ್ರವಾಗಿದ್ದರಿಂದ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸುವ ಬೇಡಿಕೆ ಹಲವು ವರ್ಷಗಳಿಂದ ಇತ್ತು. ಹಿಂದಿನ ಸರ್ಕಾರದ ಆರೋಗ್ಯ ಸಚಿವ ಡಾ.ಕೆ.ಸುಧಾಕರ ಶಾಸಕ ದಿನಕರ ಶೆಟ್ಟಿ ಅವರ ಮನವಿಗೆ ಸ್ಪಂದಿಸಿ ಆಸ್ಪತ್ರೆ ಮೇಲ್ದರ್ಜೆಗೆ ಏರಿಸಲು ಆದೇಶಿಸಿದ್ದರು. ಆಸ್ಪತ್ರೆ ಕಟ್ಟಡ ನಿರ್ಮಾಣವಾದ ಬಳಿಕ 3 ರಿಂದ 5 ವೈದ್ಯರು ಆಸ್ಪತ್ರೆಗೆ ನೇಮಕಗೊಳ್ಳುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT