ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

153 ವರ್ಷದ ಸರ್ಕಾರಿ ಪ್ರೌಢಶಾಲೆಗಿಲ್ಲ ಅನುದಾನ; ಕಾಂಪೌಂಡ್ ನಿರ್ಮಿಸಿದ ಶಿಕ್ಷಕಿಯರು

Published 3 ಜುಲೈ 2024, 20:18 IST
Last Updated 3 ಜುಲೈ 2024, 20:18 IST
ಅಕ್ಷರ ಗಾತ್ರ

ಕಾರವಾರ: ಇಲ್ಲಿನ 153 ವರ್ಷಗಳ ಇತಿಹಾಸವುಳ್ಳ ಜಿಲ್ಲೆಯ ಮೊದಲ ಸರ್ಕಾರಿ ಪ್ರೌಢಶಾಲೆಯ ಕಾಂಪೌಂಡ್ ಅನ್ನು 2015ರಲ್ಲಿ ರಸ್ತೆ ವಿಸ್ತರಣೆಗಾಗಿ ಕೆಡವಲಾಗಿತ್ತು. ಅನುದಾನ ಸಿಗದ ಕಾರಣ ಮತ್ತೆ ನಿರ್ಮಿಸಿರಲಿಲ್ಲ. ಆದರೆ, ವಿದ್ಯಾರ್ಥಿಗಳು ಮತ್ತು ಶಾಲೆಯ ಹಿತದೃಷ್ಟಿಯಿಂದ ಐವರು ಶಿಕ್ಷಕಿಯರೇ ಸ್ವಂತ ಖರ್ಚಿನಲ್ಲಿ ಅದನ್ನು ನಿರ್ಮಿಸಿದ್ದಾರೆ.

ಕಾರವಾರ–ಕೋಡಿಬಾಗ ಮುಖ್ಯರಸ್ತೆಯ ವಿಸ್ತರಣೆಗಾಗಿ 9 ವರ್ಷಗಳ ಹಿಂದೆ ಕಾಂಪೌಂಡ್‌ ತೆರವುಗೊಳಿಸಿದ್ದರಿಂದ ತಕ್ಷಣಕ್ಕೆ ಪರ್ಯಾಯ ಕ್ರಮ ಕೈಗೊಂಡಿರಲಿಲ್ಲ. ಆಗಲೂ ಶಿಕ್ಷಕಿಯರೇ, ದಪ್ಪನೆಯ ಮೆಶ್ ಅಳವಡಿಸಿ ಬಟ್ಟೆಯ ಆವರಣಗೋಡೆ ನಿರ್ಮಿಸಿದ್ದರು. ಆದರೆ, ಅದು ಹೆಚ್ಚು ಸುರಕ್ಷಿತವಲ್ಲದ ಕಾರಣ ಮತ್ತೆ ಶಿಕ್ಷಕಿಯರೇ ₹ 60 ಸಾವಿರದವರೆಗೆ ಖರ್ಚು ಮಾಡಿ ಕಾಂಕ್ರೀಟ್ ಕಂಬ, ಹಲಗೆ ಮತ್ತು ಕಬ್ಬಿಣದ ಗೇಟ್ ಅಳವಡಿಸಿ ಸುಸಜ್ಜಿತ ಕಾಂಪೌಂಡ್‌ ನಿರ್ಮಿಸಿದ್ದಾರೆ.

‘ಕಾಂಪೌಂಡ್‌ ನಿರ್ಮಾಣಕ್ಕೆ ಶಿಕ್ಷಣ ಇಲಾಖೆಗೆ ಶಾಲಾಭಿವೃದ್ಧಿ ಸಮಿತಿಯಿಂದ ಹಲವು ಬಾರಿ ಕೋರಿದರೂ ಸ್ಪಂದನೆ ಸಿಗಲಿಲ್ಲ. ಸಮೀಪದಲ್ಲೇ ಶಾಸಕರ ಮಾದರಿ ಶಾಲೆಯ ಕಟ್ಟಡ ನಿರ್ಮಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ 1 ರಿಂದ 7ನೇ ತರಗತಿಯವರೆಗಿನ 80 ವಿದ್ಯಾರ್ಥಿಗಳು ಇಲ್ಲಿನ ಪ್ರೌಢಶಾಲೆ ಕಟ್ಟಡದಲ್ಲಿ ಓದುತ್ತಿದ್ದಾರೆ. ಸದ್ಯಕ್ಕೆ ಎಲ್ಲರೂ ಸೇರಿ ಒಟ್ಟು 200 ವಿದ್ಯಾರ್ಥಿಗಳು ಇದ್ದಾರೆ. ಹೀಗಾಗಿ ಎಲ್ಲರ ಸುರಕ್ಷತೆ ಹಿತದೃಷ್ಟಿಯಿಂದ ಕಾಂಪೌಂಡ್‌ ನಿರ್ಮಿಸುವುದು ಅಗತ್ಯವಿತ್ತು’ ಎಂದು ಶಾಲಾಭಿವೃದ್ಧಿ ಸಮಿತಿ ಸದಸ್ಯ ಗುರುನಾಥ ಮಾಹೇಕರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆಡುವಾಗ ಅಥವಾ ಬೇರೆ ಸಂದರ್ಭದಲ್ಲಿ ವಿದ್ಯಾರ್ಥಿಗಳು ಅಪಘಾತಕ್ಕೀಡಾಗುವ ಸಾಧ್ಯತೆ ಹೆಚ್ಚಿತ್ತು. ಅದಕ್ಕೆ ಶಾಲೆಯ ಶಿಕ್ಷಕಿಯರೇ ಸ್ವಂತ ಹಣ ಖರ್ಚು ಮಾಡಿ, ಕಾಂಪೌಂಡ್‌ ನಿರ್ಮಿಸಿದ್ದಾರೆ’ ಎಂದರು.

‘ಪ್ರಭಾರ ಮುಖ್ಯ ಶಿಕ್ಷಕಿ ಮೀನಾಕ್ಷಿ ನಾಯಕ, ಶಿಕ್ಷಕಿಯರಾದ ಮಮತಾ ಕವರಿ, ಮಂಗಲಾ ಹೆಗಡೆ, ಸವಿತಾ ಗೌಡ ಮತ್ತು ಶಿಲ್ಪಾ ಕಾಕರಮಠ ಅವರು ಈ ಸೌಲಭ್ಯಕ್ಕಾಗಿ ಖರ್ಚು ಮಾಡಿದ್ದಾರೆ. ಗಾರೆ ಕೆಲಸ ಮಾಡುವ ಕೆಲ ವಿದ್ಯಾರ್ಥಿಗಳ ಪಾಲಕರು ನಿರ್ಮಾಣ ಕಾರ್ಯಕ್ಕೆ ಸಹಕರಿಸಿದ್ದಾರೆ’ ಎಂದರು.

ಕಾರವಾರದ ಸರ್ಕಾರಿ ಪ್ರೌಢಶಾಲೆಗೆ ಶಿಕ್ಷಕಿಯರು ಸ್ವಂತ ವೆಚ್ಚ ಭರಿಸಿ ನಿರ್ಮಿಸಿರುವ ಆವರಣಗೋಡೆ
ಕಾರವಾರದ ಸರ್ಕಾರಿ ಪ್ರೌಢಶಾಲೆಗೆ ಶಿಕ್ಷಕಿಯರು ಸ್ವಂತ ವೆಚ್ಚ ಭರಿಸಿ ನಿರ್ಮಿಸಿರುವ ಆವರಣಗೋಡೆ
ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಶಾಲೆಯ ಕಾಂಪೌಂಡ್‌ ನಿರ್ಮಿಸಲಾಗಿದೆ. ಈ ಒಟ್ಟಾರೆ ಕಾರ್ಯಕ್ಕೆ ತಗುಲಿದ ವೆಚ್ಚವನ್ನು ನಾವು ಶಿಕ್ಷಕಯರೇ ಭರಿಸಿದ್ದೇವೆ.
–ಮೀನಾಕ್ಷಿ ನಾಯಕ, ಮುಖ್ಯ ಶಿಕ್ಷಕಿ
ಕಾಂಪೌಂಡ್‌ ನಿರ್ಮಾಣಕ್ಕೆ ಇಲಾಖೆಯಿಂದ ಪ್ರತ್ಯೇಕ ಅನುದಾನ ಇಲ್ಲ. ಅದಕ್ಕೆ ನಗರಸಭೆಗೆ ಅನುದಾನ ಕೋರಲಾಗಿತ್ತು. ಅಲ್ಲಿಂದಲೂ ನೆರವು ಸಿಗದ ಕಾರಣ ಸಮಸ್ಯೆಯಾಗಿತ್ತು.
–ಅಧಿಕಾರಿ, ಶಿಕ್ಷಣ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT