ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉತ್ತರ ಕನ್ನಡ | ಗ್ರಿಡ್ ಸ್ಥಾಪನೆಗೆ ‘ಸಾಮರ್ಥ್ಯ ನವೀಕರಣ’ ತೊಡಕು

ಐದು ಗ್ರಿಡ್‍ಗಳ ಸ್ಥಾಪನೆಗೆ ಪುನಃ ಪ್ರಸ್ತಾವ ಸಲ್ಲಿಕೆ
Published 10 ಜುಲೈ 2024, 5:25 IST
Last Updated 10 ಜುಲೈ 2024, 5:25 IST
ಅಕ್ಷರ ಗಾತ್ರ

ಶಿರಸಿ: ವಿದ್ಯುತ್ ಗ್ರಿಡ್ ಸ್ಥಾಪನೆಗೆ ಸಂಬಂಧಿಸಿ 110 ಕೆವಿಯಿಂದ 132 ಕೆವಿಗೆ ಹೆಚ್ಚಿಸುವ ‘ಸಾಮರ್ಥ್ಯ ನವೀಕರಣ’ ನಿಯಮವು ಈಗಾಗಲೇ ಅನುಮೋದನೆಗೊಂಡಿದ್ದ ಗ್ರಿಡ್‍ಗಳ ಅನುಷ್ಠಾನಕ್ಕೆ ತಡೆಯಾಗಿದೆ. ಇದು ನಿರಂತರ ಹಾಗೂ ಸಮರ್ಪಕ ವಿದ್ಯುತ್ ನಿರೀಕ್ಷೆಯಲ್ಲಿದ್ದ ಗ್ರಾಹಕರ ನಿರಾಸೆಗೆ ಕಾರಣವಾಗಿದೆ. 

ಉತ್ತರ ಕನ್ನಡ ಜಿಲ್ಲೆಯಲ್ಲಿ 5.5 ಲಕ್ಷ ವಿದ್ಯುತ್ ಗ್ರಾಹಕರಿದ್ದಾರೆ. ಹೆಸ್ಕಾಂ ವ್ಯಾಪ್ತಿಯಲ್ಲಿ ಸರಾಸರಿ 130.42 ಚ.ಕಿ.ಮೀ.ಗೆ ಒಂದು ವಿದ್ಯುತ್ ಗ್ರಿಡ್ ಇರಬೇಕೆಂದಿದ್ದರೂ ಉತ್ತರ ಕನ್ನಡದಲ್ಲಿ ಆ ಪ್ರಮಾಣ 302 ಚ.ಕಿ.ಮೀ.ಗೆ ಒಂದು ಗ್ರಿಡ್ ಇದೆ. ಇದಲ್ಲದೇ 300 ಚ.ಕಿ.ಮೀ. ಮೀರಿದ 2 ಮಾರ್ಗಗಳಿವೆ.

ವಾರ್ಷಿಕವಾಗಿ ಈ ಮಾರ್ಗಗಳಲ್ಲಿ ಸರಾಸರಿ 2,862 ಬಾರಿ ವಿದ್ಯುತ್ ಅಡಚಣೆ ಆಗುತ್ತಿದೆ. ಈ ಎಲ್ಲ ಕಾರಣಕ್ಕೆ ಸಮರ್ಪಕ ವಿದ್ಯುತ್ ಪೂರೈಸಲು ಹೆಸ್ಕಾಂಗೆ ಸಮಸ್ಯೆ ಆಗುತ್ತಿದೆ. ಇದೇ ಕಾರಣಕ್ಕೆ ಎರಡು ವರ್ಷಗಳ ಹಿಂದೆ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ 110 ಕೆವಿ ಸಾಮರ್ಥ್ಯದ ಹೊಸ ಗ್ರಿಡ್ ಸ್ಥಾಪನೆಗೆ ಮಂಜೂರಾತಿ ದೊರೆತಿತ್ತು.

ಬನವಾಸಿ ಹಾಗೂ ಭಟ್ಕಳ ಗ್ರಿಡ್ ಹೊರತುಪಡಿಸಿ ಬಹುತೇಕ ಕಡೆ ತಾಂತ್ರಿಕ ಸಮಸ್ಯೆಯಿಂದ ಅನುಷ್ಠಾನ ವಿಳಂಬವಾಗಿತ್ತು. ಇದೀಗ ಈ ವಿಳಂಬಕ್ಕೆ ಬೆಲೆ ತೆರಬೇಕಾದ ಸ್ಥಿತಿ ಎದುರಾಗಿದ್ದು, ಹಾಲಿ ಮಂಜೂರಾದ ಗ್ರಿಡ್‍ಗಳ ಸಾಮರ್ಥ್ಯ ಕಡಿಮೆ ಎಂಬ ಕಾರಣಕ್ಕೆ ಇವುಗಳ ಸಾಮರ್ಥ್ಯ ಹೆಚ್ಚಿಸಿ ಕಾಮಗಾರಿ ನಡೆಸಲು ಮತ್ತೆ ಅನುಮೋದನೆ ಪಡೆಯಬೇಕಿದೆ. 

ಸಾಮರ್ಥ್ಯ ನವೀಕರಣ ಪ್ರಕ್ರಿಯೆ ತಕ್ಷಣ ಆದರೆ ತ್ವರಿತವಾಗಿ ಗ್ರಿಡ್ ಸ್ಥಾಪನೆ ಆಗಲಿದೆ. ಅದರ ಹೊರತಾಗಿ ಬೇರಾವುದೇ ತೊಂದರೆಯಿಲ್ಲ
ಸುನೀಲ್ ಕುಮಾರ, ಕೆಪಿಟಿಸಿಎಲ್ ಎಂಜಿನಿಯರ್, ಶಿರಸಿ

‘ಕೇಂದ್ರ ಸರ್ಕಾರವು 110 ಕೆವಿ ಸಾಮರ್ಥ್ಯದ ಬದಲು 132 ಕೆವಿ ಸಾಮರ್ಥ್ಯದ ಗ್ರಿಡ್ ಸ್ಥಾಪನೆ ಮಾಡಬೇಕು. ಅದಕ್ಕೆ ಈ ಹಿಂದೆ ಸಲ್ಲಿಸಿದ್ದ ಯೋಜನೆ ನೀಲನಕ್ಷೆ ಬದಲಿಗೆ ಹೊಸದಾಗಿ ಪ್ರಸ್ತಾವ ಸಲ್ಲಿಸಿ ಅನುಮತಿ ಪಡೆಯಬೇಕು ಎಂದು ಆದೇಶಿಸಿದೆ. ಹೀಗಾಗಿ ಜಿಲ್ಲೆಯಲ್ಲಿ ಮಂಜೂರಾಗಿದ್ದ ಐದಕ್ಕೂ ಹೆಚ್ಚು ಗ್ರಿಡ್‍ಗಳ ಅನುಷ್ಠಾನಕ್ಕೆ ತಾತ್ಕಾಲಿಕ ತಡೆ ಬಿದ್ದಂತಾಗಿದೆ’ ಎಂಬುದು ಕೆಪಿಟಿಸಿಎಲ್ ಅಧಿಕಾರಿಗಳ ಮಾಹಿತಿ. 

‘ಹೆಸ್ಕಾಂ ಶಿರಸಿ ವೃತ್ತದ ಕಚೇರಿಯಿಂದ 2010 ರಿಂದ ಈವರೆಗೆ 33 ವಿದ್ಯುತ್ ಗ್ರಿಡ್ ಸ್ಥಾಪನೆಗೆ ಮಂಜೂರು ನೀಡುವಂತೆ ವಿದ್ಯುತ್‌ ಪ್ರಸರಣ ನಿಗಮಕ್ಕೆ ₹590 ಕೋಟಿ ಯೋಜನೆಯ ಪ್ರಸ್ತಾವ ಕಳುಹಿಸಲಾಗಿದೆ. ಅದರಲ್ಲಿ ಜಾಗದ ಕೊರತೆಯ ಕಾರಣಕ್ಕೆ ಹಲವು ಗ್ರಿಡ್‍ಗಳಿಗೆ ಮಂಜೂರಾತಿ ಸಿಕ್ಕಿರಲಿಲ್ಲ. ಆದರೆ ಜಾಗದ ಸಮಸ್ಯೆಯಿಲ್ಲದ ಹತ್ತರಗಿ, ಕಾನಸೂರು, ಸಾಮ್ರಾಣಿ, ತೇರಗಾಂವ, ಮಾದನಗೇರಿ ಗ್ರಿಡ್‌ಗಳಿಗೆ ಮಂಜೂರಾತಿ ದೊರೆತಿತ್ತು’ ಎಂದು ಹೆಸ್ಕಾಂ ಅಧಿಕಾರಿಗಳು ತಿಳಿಸಿದರು.

‘ವಿವಿಧ ಕಾರಣಕ್ಕೆ ಇವುಗಳ ಕಾಮಗಾರಿ ನಡೆದಿರಲಿಲ್ಲ. ಆದರೆ ಈಗ ಈ ಎಲ್ಲ ಗ್ರಿಡ್‍ಗಳ ನೀಲನಕ್ಷೆಯನ್ನು 132 ಕೆವಿ ಸಾಮರ್ಥ್ಯದ ಗ್ರಿಡ್ ಗೆ ನವೀಕರಿಸಿ ಅನುಮೋದನೆ ಪಡೆಯಬೇಕಾದ ಸ್ಥಿತಿ ಎದುರಾಗಿದೆ. ಹೀಗಾಗಿ ಇವುಗಳ ಅನುಷ್ಠಾನ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ’ ಎಂದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT