ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರು ಬೆಳೆಸಿ ಆದಾಯ ಗಳಿಸಿ, ಔಷಧ ಸಸ್ಯಗಳ ಕೃಷಿಗೆ ರೈತರ ಒಲವು

Last Updated 1 ಅಕ್ಟೋಬರ್ 2018, 19:45 IST
ಅಕ್ಷರ ಗಾತ್ರ

ಶಿರಸಿ: ಕಾಡಿನಲ್ಲಿ ನೈಸರ್ಗಿಕವಾಗಿ ಬೆಳೆಯುತ್ತಿದ್ದ ಮ್ಯಾಪಿಯಾ, ರಕ್ತ ಚಂದನ, ಶ್ರೀಗಂಧ, ಏಕನಾಯಕನ ಸಸ್ಯಗಳು ಕೃಷಿ ಜಮೀನಿನಲ್ಲಿ ಹಸಿರು ಹರಡಿವೆ. ಮಿತ ಆರೈಕೆಯ ಈ ಸಸ್ಯಗಳು ರೈತರಿಗೆ ಉಪ ಆದಾಯದ ಮೂಲಗಳಾಗಿ ಪರಿವರ್ತಿತಗೊಂಡಿವೆ.

ಜಿಲ್ಲೆಯ ಹಲವಾರು ರೈತರು ಔಷಧ ಸಸ್ಯವನ್ನು ತೋಟದಲ್ಲಿ ವಾಣಿಜ್ಯ ಬೆಳೆಯಾಗಿ ಬೆಳೆದು, ಉಪ ಆದಾಯದ ಮೂಲ ಹುಡುಕಿಕೊಂಡಿದ್ದಾರೆ. ‘8 ವರ್ಷಗಳ ಹಿಂದೆ ಶಿರಸಿ ಅರಣ್ಯ ಕಾಲೇಜಿನ ಪ್ರೊ. ಆರ್.ವಾಸುದೇವ ಅವರು ನನಗೆ ಪರಿಚಯಿಸಿದ್ದ ಮ್ಯಾಪಿಯಾ ಫೋಟಿಡಾ (ದೂರ್ವಾಸನೆ ಸಸ್ಯ) ಇಂದು ಕರ್ನಾಟಕ, ಗೋವಾ, ಮಹಾರಾಷ್ಟ್ರದ ಸುಮಾರು 60 ರೈತರ 250 ಎಕರೆ ಜಮೀನಿನಲ್ಲಿ ಆದಾಯ ಕೊಡುವ ಬೆಳೆಯಾಗಿದೆ. 15 ವರ್ಷಗಳ ಮರು ಖರೀದಿ ಒಪ್ಪಂದ ಮಾಡಿಕೊಂಡಿರುವುದಕ್ಕೆ ರೈತರಿಗೆ ಆತಂಕವೂ ಇಲ್ಲ’ ಎನ್ನುತ್ತಾರೆ ಬೆಳೆಗಾರ ಹಾಗೂ ಖರೀದಿದಾರರಾಗಿರುವ ಕಾರವಾರ ದೇವಳಮಕ್ಕಿ ಬರ್ಗಲ್‌ನ ‘ಅಥರ್ವ ನರ್ಸರಿ’ ಮಾಲೀಕ ಗಣೇಶ ನೆವ್ರೇಕರ್.

‘ನಾಟಿ ಮಾಡಿ 4ನೇ ವರ್ಷಕ್ಕೆ ಕಾಂಡ ಕಟಾವಿಗೆ ಬರುತ್ತದೆ. ಪ್ರೂನಿಂಗ್ ಸರಿಯಾದರೆ ಗಿಡವೊಂದರಿಂದ 1ರಿಂದ 1.5 ಕೆ.ಜಿ ಬೆಳೆ ತೆಗೆಯಬಹುದು. ಒಂದು ಸಸ್ಯ ಸತತ 11 ವರ್ಷಗಳವರೆಗೆ ಆದಾಯ ನೀಡುತ್ತದೆ. ಒಣ ಕಾಂಡದ ಕೆ.ಜಿ.ಯೊಂದಕ್ಕೆ ₹ 55ರಿಂದ ₹ 65ರವರೆಗೆ ದರವಿದೆ. ಒಂದು ಎಕರೆ ಅಡಿಕೆ ತೋಟದಲ್ಲಿ 2000 ಸಸಿ ನಾಟಿ ಮಾಡಬಹುದು. ಬಳಕೆ ಮಾಡದೇ ಪಾಳುಬಿಟ್ಟಿರುವ ಜಮೀನಿನನ್ನು ಸದ್ಬಳಕೆ ಮಾಡಿಕೊಳ್ಳಲು ಇದು ಸೂಕ್ತ ಬೆಳೆ’ ಎಂಬುದು ಅವರ ಅನುಭವ.

‘ಜಾಗತಿಕ ಮಾರುಕಟ್ಟೆಯಲ್ಲಿ ಅತ್ಯಂತ ಬೇಡಿಕೆಯಲ್ಲಿರುವ ಮ್ಯಾಪಿಯಾವನ್ನು ನಾವು ಖರೀದಿಸಿ, ಉತ್ತರ ಭಾರತಕ್ಕೆ ಕಳುಹಿಸುತ್ತೇವೆ. ಏಕನಾಯಕನ ಬಳ್ಳಿ (salacia reticulata) ಕೂಡ ಬೇಡಿಕೆಯಲ್ಲಿರುವ ಔಷಧ ಸಸ್ಯ. ಈ ಬೆಳೆಗಳಿಗೆ ನಿಶ್ಚಿತವಾಗಿ ಭವಿಷ್ಯವಿದೆ’ ಎಂಬ ಅಭಿಪ್ರಾಯ ಅವರದು.

ಕ್ಯಾನ್ಸರ್ ಔಷಧಕ್ಕೆ ಬಳಕೆ

‘ಮ್ಯಾಪಿಯಾದಲ್ಲಿರುವ ಕ್ಯಾಂಪ್ಟೊಥೇಸಿನ್‌ (camptothecin) ಎಂಬ ರಾಸಾಯನಿಕವು ಕ್ಯಾನ್ಸರ್ ರೋಗದ ಔಷಧಕ್ಕೆ ಬಳಕೆಯಾಗುತ್ತದೆ. ಈ ಔಷಧಕ್ಕೆ ಬಳಸುವ ಜಗತ್ತಿನ ಮೂರನೇ ಮುಖ್ಯವಾದ ರಾಸಾಯನಿಕ ಇದು. ರಾಷ್ಟ್ರೀಯ ಔಷಧ ಸಸ್ಯ ಮಂಡಳಿ ಕೂಡ ಈ ಬೆಳೆಯನ್ನು ಪ್ರೋತ್ಸಾಹಿಸುತ್ತಿದೆ. ಈ ಮೊದಲು ಚೀನಾದಿಂದ ಈ ರಾಸಾಯನಿಕ ಪೂರೈಕೆಯಾಗುತ್ತಿತ್ತು. ಸ್ಥಳೀಯವಾಗಿ ಬೆಳೆದರೆ ಉದ್ಯಮಿಗಳಿಗೆ ಗುಣಮಟ್ಟದ ಉತ್ಪನ್ನ ಸಿಕ್ಕರೆ, ಬೆಳೆಗಾರರಿಗೆ ಉಪ ಆದಾಯ ದೊರೆಯುತ್ತದೆ. ಮಧುಮೇಹ, ಬೊಜ್ಜು ನಿಯಂತ್ರಕವಾಗಿ ಬಳಕೆಯಾಗುವ ಏಕನಾಯಕನ ಸಸ್ಯ ಕೂಡ ಹೆಚ್ಚು ಬೇಡಿಕೆ ಇರುವಂತಹುದು. ಅರೆ ಮಲೆನಾಡಿನ ಹವಾಮಾನದಲ್ಲಿ ಒಳ್ಳೆಯ ಬೆಳೆ ಬರುತ್ತದೆ ’ ಎನ್ನುತ್ತಾರೆ ಪ್ರೊ ಆರ್.ವಾಸುದೇವ.

‘ಸೌಂದರ್ಯವರ್ಧಕ, ಔಷಧ, ಎಣ್ಣೆ, ಆಟಿಕೆ, ಗೊಂಬೆಗಳಿಗೆ ಬಳಕೆಯಾಗುವ ಶ್ರೀಗಂಧ ರೈತರನ್ನು ಸೆಳೆದಿದೆ. 3–4 ವರ್ಷಗಳ ಈಚೆಗೆ ಶ್ರೀಗಂಧ ಬೆಳೆಯಲು ರೈತರು ಆಸಕ್ತಿ ತೋರಿದ್ದಾರೆ. ಅರಣ್ಯ ಇಲಾಖೆ ರಿಯಾಯಿತಿ ದರದಲ್ಲಿ ಸಸಿಗಳನ್ನು ನೀಡುತ್ತಿದೆ. ಅರಣ್ಯ ಕಾಲೇಜಿನ ನರ್ಸರಿಯಲ್ಲಿ ಒಂದೂವರೆ ತಿಂಗಳ ಬೆಳವಣಿಗೆಯ 25ಸಾವಿರ ಸಸಿಗಳು ಚಿಗುರುತ್ತಿವೆ. ನಾಟಿ ಮಾಡಲು 8 ತಿಂಗಳ ಸಸಿ ಸೂಕ್ತ. ರಕ್ತ ಚಂದನ ಕೂಡ ಅತಿ ಹೆಚ್ಚು ಬೇಡಿಕೆಯಲ್ಲಿದೆ. ಕಳೆದ ವರ್ಷ 4ಸಾವಿರ ಸಸಿಗಳನ್ನು ವಿತರಿಸಿದ್ದೆವು. ಬೇಡಿಕೆಗೆ ತಕ್ಕಷ್ಟು ಸಸಿ ಸಿದ್ಧಪಡಿಸಲು ಆಗುತ್ತಿಲ್ಲ’ ಎನ್ನುತ್ತಾರೆ ಪ್ರಾಧ್ಯಾಪಕ ರಮೇಶ ರಾಥೋಡ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT