ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುವಿನ ಮನಸ್ಸು ವಿಸ್ತಾರವಾಗಿರಲಿ: ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ

Published 4 ಜುಲೈ 2023, 10:17 IST
Last Updated 4 ಜುಲೈ 2023, 10:17 IST
ಅಕ್ಷರ ಗಾತ್ರ

ಶಿರಸಿ: ಗುರು ತಪಸ್ಸಿನ ಮೂಲಕ ತಮ್ಮ ಮನಸ್ಸನ್ನು ವಿಸ್ತಾರಗೊಳಿಸಿಕೊಳ್ಳಬೇಕು ಎಂದು ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಸ್ವರ್ಣವಲ್ಲೀ ಮಠದಲ್ಲಿ ಸೋಮವಾರ ಆಯೋಜಿಸಿದ್ದ 33ನೇ ಚಾತುರ್ಮಾಸ್ಯ ವ್ರತ ಸಂಕಲ್ಪ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಿಷ್ಯರಿಗೆ ಹರಸುವಾತ ತಪಸ್ಸು ಮಾಡಲೇಬೇಕು. ಪ್ರತಿ ಗುರು ತನ್ನ ಶಿಷ್ಯರ ಬಗ್ಗೆ, ಶಿಕ್ಷಕ ತನ್ನ ವಿದ್ಯಾರ್ಥಿಗಳ ಬಗ್ಗೆ ತಪಸ್ಸು ಮಾಡಬೇಕು. ಹಾಗಾದರೆ ಮಾತ್ರ ಪ್ರತಿಯೊಬ್ಬರ ಉನ್ನತಿ ಸಾಧ್ಯವಿದೆ ಎಂದರು.

ಹಿಂದೂ ಧರ್ಮದಲ್ಲಿ ಗುರುವಿಗೆ ಇರುವ ಮಹತ್ವ ಇತರ ಧರ್ಮಗಳಲ್ಲಿ ಇಲ್ಲ ಎಂದ ಸ್ವಾಮೀಜಿ, ಇಂದು ಹಿಂದೂ ಧರ್ಮ ಆತಂಕದ ಸ್ಥಿತಿಯಲ್ಲಿದೆ. ಧರ್ಮದ ರಕ್ಷಣೆಗೆ ಪ್ರತಿಯೊಬ್ಬರೂ ಪಣ ತೊಡಬೇಕು ಎಂದರು.

ವ್ಯಾಸ ಎಂದರೆ ವಿಸ್ತಾರ. ವ್ಯಾಸ ಮಹರ್ಷಿಗಳು ಅಷ್ಟೇ ವಿಸ್ತಾರವಾದ ವ್ಯಕ್ತಿತ್ವ ಉಳ್ಳವರಾಗಿದ್ದಾರೆ. ಅವರು ತಪಸ್ಸಿನ ಮೂಲಕ ಶಕ್ತಿ ಸಂಪನ್ನರಾಗಿದ್ದಾರೆ. ಅವರ ಪೂಜೆಯ ಮೂಲಕ ಚಾತುರ್ಮಾಸ್ಯ ಆರಂಭಿಸಿದರೆ ಒಳಿತಾಗುತ್ತದೆ ಎಂದು ಹೇಳಿದರು.

ಗುರುವಾಣಿ ಗ್ರಂಥ ಬಿಡುಗಡೆ ಮಾಡಿದ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅಶೋಕ ಹಾರ್ನಳ್ಳಿ ಮಾತನಾಡಿ, ಶಿಷ್ಯರ ಬುದ್ದಿ ಮಟ್ಟಕ್ಕೆ ಇಳಿದು ಜೀವನ ದರ್ಶನ ಮಾಡಿಸುವವರು ನಿಜವಾದ ಗುರು. ಸ್ವರ್ಣವಲ್ಲೀ ಸ್ವಾಮೀಜಿ ಅಂಥ ವ್ಯಕ್ತಿತ್ವ ಹೊಂದಿರುವವರಾಗಿದ್ದಾರೆ ಎಂದರು.

ಕಾರ್ಯಕ್ರಮದ ಅಂಗವಾಗಿ ವೈದ್ಯ ಸೀತಾರಾಮ ಹೆಗಡೆ ದಾವಣಗೆರೆ, ಆಡಳಿತಗಾರ ಆರ್.ಎಸ್.ಭಟ್ ಸುಗಾವಿ, ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಅವರನ್ನು ಸನ್ಮಾನಿಸಲಾಯಿತು. ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್.ಹೆಗಡೆ ಸ್ವಾಗತಿಸಿದರು. ಆರ್.ಎಸ್.ಹೆಗಡೆ ನಿರೂಪಿಸಿದರು. ಜಿ.ವಿ.ಹೆಗಡೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT