ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್.ಟಿ.ಗೆ ಹಾಲಕ್ಕಿ ಸಮುದಾಯ ಸೇರಿಸಿ

ಪದ್ಮಶ್ರೀ ಸುಕ್ರಿ ಗೌಡ, ತುಳಸಿ ಗೌಡ ಭಾಗಿ;ಧರಣಿಯಲ್ಲಿ ಆಗ್ರಹ
Last Updated 25 ಜನವರಿ 2023, 14:32 IST
ಅಕ್ಷರ ಗಾತ್ರ

ಕಾರವಾರ: ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಆಗ್ರಹಿಸಿ ಹಾಲಕ್ಕಿ ಸಮುದಾಯದ ನೂರಾರು ಜನರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು. ಪದ್ಮಶ್ರೀ ಸುಕ್ರಿ ಗೌಡ, ತುಳಸಿ ಗೌಡ ಧರಣಿ ಬೆಂಬಲಿಸಿದರು.

ಎಂಟಕ್ಕೂ ಹೆಚ್ಚು ಬೇಡಿಕೆಗಳನ್ನು ಮುಂದಿಟ್ಟು ನಡೆದ ಧರಣಿಯಲ್ಲಿ ವಿವಿಧ ತಾಲ್ಲೂಕುಗಳ ಜನರು ಪಾಲ್ಗೊಂಡಿದ್ದರು. ಮೂರು ತಾಸು ಸಾಂಕೇತಿಕ ಧರಣಿ ಬಳಿಕ ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ ಅವರಿಗೆ ಮನವಿ ಸಲ್ಲಿಸಿ ಧರಣಿ ಕೈಬಿಡಲಾಯಿತು.

ಸುಕ್ರಿ ಗೌಡ ಮಾತನಾಡಿ, ‘ಹಾಲಕ್ಕಿ ಜನ ಮುಗ್ಧರು. ಪರಿಸರದ ಜತೆ ಬದುಕುವವರು. ಈ ಸಮುದಾಯವನ್ನು ಬುಡಕಟ್ಟು ಪಂಗಡ ಎಂದು ಸರ್ಕಾರ ಪರಿಗಣಿಸಲಿ’ ಎಂದು ಒತ್ತಾಯಿಸಿದರು.

ತುಳಸಿ ಗೌಡ ಮಾತನಾಡಿ, ‘ಪರಿಸರ ಸಂರಕ್ಷಣೆ ಉಸಿರಾಗಿಸಿಕೊಂಡ ಹಾಲಕ್ಕಿ ಸಮುದಾಯದ ಬೇಡಿಕೆ ಈಡೇರಬೇಕು’ ಎಂದರು.

ಧರಣಿಗೆ ಬೆಂಬಲಿಸಿದ ಕಾಂಗ್ರೆಸ್ ಮುಖಂಡ ಸತೀಶ ಸೈಲ್, ‘ಸರ್ಕಾರ ಈವರೆಗೂ ಹಾಲಕ್ಕಿ ಒಕ್ಕಲಿಗರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸದಿರುವುದು ಅನ್ಯಾಯ. ಹಾಲಕ್ಕಿ ಒಕ್ಕಲಿಗರಿಗೆ ಯಾವ ಪಕ್ಷದವರೂ ನ್ಯಾಯ ಕೊಡಿಸಿಲ್ಲ. ಹೀಗಾಗಿ ಪಕ್ಷಾತೀತ ಹೋರಾಟ ನಡೆಸಬೇಕಾಗಿದೆ. ಅಗತ್ಯ ಬಿದ್ದರೆ ಕಾನೂನು ಹೋರಾಟವನ್ನೂ ನಡೆಸಬೇಕು’ ಎಂದರು.

ಜೆಡಿಎಸ್ ಮುಖಂಡ ಸೂರಜ್ ಸೋನಿ, ‘ನ್ಯಾಯಸಮ್ಮತ ಬೇಡಿಕೆ ಮುಂದಿಟ್ಟು ನಡೆಸುವ ಹೋರಾಟವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಹಾಲಕ್ಕಿಗಳನ್ನು ಎಸ್.ಟಿ. ಪಟ್ಟಿಗೆ ಸೇರಿಸಲು ಆಗ್ರಹಿಸಿ ಈ ಹಿಂದೆ ಪಾದಯಾತ್ರೆಯನ್ನೂ ನಡೆಸಲಾಗಿತ್ತು’ ಎಂದರು.

ಸಮುದಾಯದ ಪ್ರಮುಖ ಮೋಹನದಾಸ ಗೌಡ, ‘ಸರ್ಕಾರದ ಅಭಿವೃದ್ಧಿ ಯೋಜನೆಗಳಿಗೆ ಹಾಲಕ್ಕಿ ಸಮುದಾಯದ ಸಾವಿರಾರು ಕುಟುಂಬಗಳು ಸಂತ್ರಸ್ತರಾಗಿವೆ. ಆದರೆ, ಈವರೆಗೆ ಉದ್ಯೋಗ, ಪರಿಹಾರ ಸಿಕ್ಕಿಲ್ಲ. ಬಡ ಜನಾಂಗದವರು ಎಂಬ ಕಾರಣಕ್ಕೆ ನಿರ್ಲಕ್ಷಿಸಲಾಗುತ್ತಿದೆ’ ಎಂದರು.

ಗೋವಿಂದ ಗೌಡ, ಸುಬ್ರಾಯ ಗೌಡ, ಕೃಷ್ಣ ಗೌಡ, ಅಶೋಕ ಗೌಡ, ವಿನಾಯಕ ಗೌಡ ಇದ್ದರು.

ಬೇಡಿಕೆಗಳೇನು?:

* ಬಜೆಟ್‍ನಲ್ಲಿ ಹಾಲಕ್ಕಿ ಒಕ್ಕಲು ಸಮುದಾಯಕ್ಕೆ ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಬೇಕು

* ಅಭಿವೃದ್ಧಿ ಯೋಜನೆಗೆ ನಿರಾಶ್ರಿತರಾದವರಿಗೆ ಉದ್ಯೋಗದ ಜತೆಗೆ ಸೂಕ್ತ ಪರಿಹಾರ ನೀಡಬೇಕು

* ಗಂಗಾವಳಿ ನದಿಗೆ ಕಿಂಡಿ ಅಣೆಕಟ್ಟು ನಿರ್ಮಾಣ, ಕುಮಟಾ ಬೈಪಾಸ್ ಯೋಜನೆ ಕೈಬಿಡಬೇಕು

* ಸುಗ್ಗಿ ಕುಣಿತದ ಕಲಾವಿದರಿಗೆ, ಪರಂಪರಾಗತ ಸೀಮೆ ಗೌಡರಿಗೆ ಹಾಗೂ ಊರ ಗೌಡರಿಗೆ ಮಾಸಾಶನ ನೀಡಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT