ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವತಾಣ ಯಾಣದಲ್ಲಿ ಮದ್ಯ, ಗಾಂಜಾದ ಘಮಲು!!

ಯಾಣದ ಅರಣ್ಯ ಪ್ರದೇಶದಲ್ಲಿ ವಿದೇಶಿಗರ ಮೋಜು ಮಸ್ತಿ
Published 23 ಮೇ 2023, 19:30 IST
Last Updated 23 ಮೇ 2023, 19:30 IST
ಅಕ್ಷರ ಗಾತ್ರ

ಶಿರಸಿ: ಶಿವಕ್ಷೇತ್ರವಾಗಿ ಪ್ರಖ್ಯಾತಿ ಪಡೆದಿರುವ ಯಾಣದ ಅರಣ್ಯ ಪ್ರದೇಶವು ವಿದೇಶಿ ಪ್ರವಾಸಿಗರ ಪಾಲಿಗೆ ಅನೈತಿಕ ಚಟುವಟಿಕೆ ನಡೆಸುವ ತಾಣವಾಗಿ ಮಾರ್ಪಟ್ಟಿದೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಅಂಕೋಲಾ ಹಾಗೂ ಕುಮಟಾ ತಾಲ್ಲೂಕುಗಳ ಗಡಿ ಭಾಗದಲ್ಲಿರುವ ಯಾಣ ನೋಡಲು ಪ್ರತಿ ವರ್ಷ ಅಸಂಖ್ಯ ಪ್ರವಾಸಿಗರು ಆಗಮಿಸುತ್ತಾರೆ. ಸ್ಥಳೀಯ ಪ್ರವಾಸಿಗರು ನಿಗದಿತ ಸಮಯದೊಳಗೆ ವಾಪಸ್ ತೆರಳಿದರೆ, ಬಹುತೇಕ ವಿದೇಶಿ ಪ್ರವಾಸಿಗರು ಭೈರವೇಶ್ವರನ ದರ್ಶನದ ನಂತರ ದಟ್ಟ ಅರಣ್ಯ ಪ್ರವೇಶ ಮಾಡಿ, ರಾತ್ರಿ ಅಲ್ಲಿಯೇ ಟೆಂಟ್ ಹಾಕಿ, ಫೈರ್ ಕ್ಯಾಂಪ್ ಮಾಡಿ ಮೋಜು ಮಸ್ತಿಯಲ್ಲಿ ತೊಡಗುತ್ತಿದ್ದಾರೆ. ಇದು ಪರಿಸರ ಪ್ರಿಯರ ಆತಂಕಕ್ಕೆ ಕಾರಣವಾಗಿದೆ.

‘ಇತ್ತೀಚೆಗೆ ಫೈರ್ ಕ್ಯಾಂಪ್ ವೇಳೆ ಕೆಲ ಪ್ರದೇಶಕ್ಕೆ ಬೆಂಕಿ ಆವರಿಸಿತ್ತು. ಅದನ್ನು ಆರಿಸಿ ಸ್ವಿಡನ್ ದೇಶದ ಪ್ರವಾಸಿಗರಿಗೆ ಎಚ್ಚರಿಕೆ ನೀಡಿ ಕಳುಹಿಸಲಾಗಿತ್ತು. ಆದರೆ ಈಗೀಗ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ. ಸ್ಥಳೀಯರು ಹಾಗೂ ಪ್ರವಾಸಿ ಮಿತ್ರ ಸಿಬ್ಬಂದಿ ಎಚ್ಚರಿಕೆ ನೀಡಿದರೂ ಪ್ರಯೋಜನ ಆಗುತ್ತಿಲ್ಲ’ ಎಂದು ಸ್ಥಳೀಯ ನಿವಾಸಿ ಕುಮಾರ ನಾಯ್ಕ ಹೇಳಿದರು.

‘ಸ್ಥಳೀಯವಾಗಿ ಬಾಡಿಗೆಗೆ ಸಿಗುವ ಬೈಕ್‌ಗಳನ್ನು ತೆಗೆದುಕೊಂಡು ಯಾಣಕ್ಕೆ ಬರುವ ವಿದೇಶಿ ಜೋಡಿಗಳು ಯಾಣದ ರಸ್ತೆ ಪಕ್ಕದಲ್ಲಿ ಬೈಕ್ ನಿಲ್ಲಿಸಿ ಕಾಡಿನತ್ತ ಸಾಗುತ್ತಾರೆ. ಮದ್ಯಸೇವನೆ, ಗಾಂಜಾದಂಥ ಅಮಲಿನ ಪದಾರ್ಥಗಳ ಬಳಕೆಯನ್ನು ಎಗ್ಗಿಲ್ಲದೆ ಮಾಡುತ್ತಾರೆ. ಕೆಲವರು ಗುಂಪುಗುಂಪಾಗಿ ಇಂಥ ಕೃತ್ಯಗಳಲ್ಲಿ ತೊಡಗುವ ಕಾರಣ ಸ್ಥಳೀಯ ಒಬ್ಬಿಬ್ಬರು ಏನೂ ಮಾಡಲಾಗುವುದಿಲ್ಲ’ ಎಂದು ಹೇಳಿದರು.

‘ಯಾಣ ಪ್ರದೇಶ ದಟ್ಟವಾದ ಅರಣ್ಯದಿಂದ ಸುತ್ತುವರೆದಿದೆ. ಮರದಿಂದ ಉದುರಿದ ಎಲೆಗಳು ಒಣಗಿದ್ದು, ರಾತ್ರಿ ವೇಳೆ ಫೈರ್ ಕ್ಯಾಂಪ್ ಮಾಡುವಾಗ ಅರಣ್ಯಕ್ಕೆ ಬೆಂಕಿ ತಗಲಿದ ಉದಾಹರಣೆಯಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಕಾಡಿನಲ್ಲೇ ಉಳಿದು ಹಲವು ಪ್ರವಾಸಿಗರು ಟ್ರೆಕ್ಕಿಂಗ್, ಫೈರ್ ಕ್ಯಾಂಪ್ ಸಹ ಮಾಡುತ್ತಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಗೂ ಮಾಹಿತಿ ನೀಡಲಾಗಿದೆ’ ಎಂದು ಇಲ್ಲಿನ ರಾಮದಾಸ ಭಟ್ ಹೇಳಿದರು.

ಯಾಣದ ಅರಣ್ಯದಲ್ಲಿ ಫೈರ್ ಕ್ಯಾಂಪ್ ಮದ್ಯ, ಗಾಂಜಾದಂಥ ಅಮಲಿನ ಸೇವನೆ  ಸ್ಥಳೀಯರಿಗೆ ಜಗ್ಗದ ವಿದೇಶಿ ಪ್ರವಾಸಿಗರು  ಅರಣ್ಯಕ್ಕೆ ಬೆಂಕಿ ಆವರಿಸುವ ಆತಂಕ
ಯಾಣದಲ್ಲಿ ವಿಎಫ್ಸಿ ವತಿಯಿಂದ ಸಾಕಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದೇವೆ. ಆದರೂ ಅರಣ್ಯ ಪ್ರದೇಶದಲ್ಲಿ ತಂಗದಂತೆ ಸೂಚನೆ ಎಚ್ಚರಿಕೆ ನೀಡಿದರೂ ವಿದೇಶಿ ಪ್ರವಾಸಿಗರು ಕೇಳುತ್ತಿಲ್ಲ. ಈ ಬಗ್ಗೆ ಅರಣ್ಯ ಸಮಿತಿಗಳಿಗೆ ಇನ್ನಷ್ಟು ಅಧಿಕಾರ ನೀಡಬೇಕು.
ದೀಪಯ್ಯ ನಾಯ್ಕ– ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ
ಅಂಕೋಲಾ ವಿಭೂತಿ ಜಲಪಾತದ ಕಡೆಯಿಂದ ಯಾಣಕ್ಕೆ ತೆರಳುವ ಮಾರ್ಗಗಳಲ್ಲಿ ಇಂಥ ಘಟನೆಗಳು ಜರುತ್ತಿವೆ. ವಿಷಯ ತಿಳಿದ ತಕ್ಷಣ ಸಂಬಂಧಪಟ್ಟ ಅಧಿಕಾರಿಗೆ ಮಾಹಿತಿ ನೀಡಿ ಕ್ರಮ ಕೈಗೊಳ್ಳಲಾಗುತ್ತಿದೆ.
ರಾಜು ನಾಯ್ಕ– ಕತಗಾಲ ಉಪವಲಯ ಅರಣ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT