ಕಾರವಾರ: ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಕ್ಕೆ ಮೊದಲ ಹಂತದಲ್ಲಿ ಅಭ್ಯರ್ಥಿ ಘೋಷಣೆ ಮಾಡಿರುವ ಕಾಂಗ್ರೆಸ್, ಇನ್ನುಳಿದ ಮೂರರಲ್ಲಿ ಅಭ್ಯರ್ಥಿ ಯಾರಾಗಬಹುದು ಎಂಬ ಕುತೂಹಲ ಜೀವಂತವಾಗಿಟ್ಟಿದೆ.
ಕಾಂಗ್ರೆಸ್ ಪಾಳಯದಲ್ಲಿ ಟಿಕೆಟ್‍ಗೆ ಹೆಚ್ಚು ಪೈಪೋಟಿ ಇಲ್ಲವಾಗಿದ್ದ ಹಳಿಯಾಳ, ಕಾರವಾರ ಮತ್ತು ಭಟ್ಕಳ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ಹಳಿಯಾಳದಿಂದ ಹಾಲಿ ಶಾಸಕ ಆರ್.ವಿ.ದೇಶಪಾಂಡೆ, ಕಾರವಾರದಿಂದ ಮಾಜಿ ಶಾಸಕ ಸತೀಶ್ ಸೈಲ್, ಭಟ್ಕಳದಿಂದ ಮಾಜಿ ಶಾಸಕ ಮಂಕಾಳ ವೈದ್ಯ ಕಣಕ್ಕೆ ಇಳಿಯುವುದು ನಿಶ್ಚಿತವಾಗಿದೆ.
ಏಳು ಬಾರಿ ಶಾಸಕರಾಗಿರುವ ಆರ್.ವಿ.ದೇಶಪಾಂಡೆ 9ನೇ ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಅಣಿಯಾಗಿದ್ದಾರೆ. ಆರನೆ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತಿದ್ದಾರೆ. 2009ರ ಉಪಚುನಾವಣೆ ಹಾಗೂ 2019ರಲ್ಲಿ ಕಾರವಾರ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗಿ ಸತೀಶ್ ಸೈಲ್ ಕಣಕ್ಕೆ ಇಳಿದಿದ್ದರು. 2013ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಶಾಸಕರಾಗಿದ್ದರು. ಈಗ ಮೂರನೆ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.
2013ರ ಚುನಾವಣೆಯಲ್ಲಿ ಭಟ್ಕಳ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಮಂಕಾಳ ವೈದ್ಯ 2019ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದರು. ಪಕ್ಷ ಸತತ ಎರಡನೇ ಬಾರಿಗೆ ಅವರಿಗೆ ಮಣೆ ಹಾಕಿದೆ.
ಹಳಿಯಾಳ ಕ್ಷೇತ್ರದಲ್ಲಿ ವರ್ಷದ ಹಿಂದೆ ಪಕ್ಷದ ಟಿಕೆಟ್ ಪಡೆಯಲು ಪೈಪೋಟಿ ಇತ್ತು. ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದ ಎಸ್.ಎಲ್.ಘೋಟ್ನೇಕರ್ ಪಕ್ಷದ ಅಭ್ಯರ್ಥಿಯಾಗಲು ಪ್ರಯತ್ನಿಸಿದ್ದರು. ಈ ಬಗ್ಗೆ ಬಹಿರಂಗವಾಗಿಯೂ ಹೇಳಿಕೆ ನೀಡಿದ್ದರು. ಬಳಿಕ ಅವರು ಜೆ.ಡಿ.ಎಸ್ ಪಕ್ಷಕ್ಕೆ ಸೇರಿಕೊಂಡಿದ್ದರು. ಹೀಗಾಗಿ ಪಕ್ಷದ ಟಿಕೆಟ್ ಪಡೆಯಲು ಆರ್.ವಿ.ದೇಶಪಾಂಡೆ ಮಾರ್ಗ ಸುಲಭವಾಯಿತು.
ಕಾರವಾರದಲ್ಲಿ ಸತೀಶ್ ಸೈಲ್ ಪಕ್ಷದ ಚಟುವಟಿಕೆಯಿಂದ ದೂರವಿದ್ದಾರೆ ಎಂಬ ಆರೋಪ ಆಗಾಗ ಕೇಳಿಬರುತ್ತಲೇ ಇದ್ದವು. ಹೀಗಾಗಿ ಜಿಲ್ಲಾ ಪಂಚಾಯ್ತಿ ಸದಸ್ಯೆ ಚೈತ್ರಾ ಕೊಠಾರಕರ್ ಪಕ್ಷದ ಅಭ್ಯರ್ಥಿಯಾಗಲು ತಯಾರಿ ನಡೆಸಿದ್ದರು. ಸೈಲ್ ಪಕ್ಷೇತರರಾಗಿ ಸ್ಪರ್ಧಿಸಲಿದ್ದಾರೆ ಎಂಬ ವದಂತಿಯೂ ಇದ್ದವು. ಇದರಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾರಾಗಬಹುದು ಎಂಬ ಕುತೂಹಲವೂ ಇತ್ತು.
ಭಟ್ಕಳ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಕಂಡಿದ್ದ ಮಂಕಾಳ ವೈದ್ಯ ಈ ಬಾರಿಯೂ ಪಕ್ಷೇತರರಾಗಿ ಕಣಕ್ಕೆ ಇಳಿಯುತ್ತಾರೆ ಎಂದು ವಿಶ್ಲೇಷಿಸಲಾಗಿತ್ತು. ಪಕ್ಷದ ಚಟುವಟಿಕೆಗಳಿಂದ ಅಂತರ ಕಾಯ್ದುಕೊಳ್ಳುವ ಮೂಲಕ ಕಾರ್ಯಕರ್ತರ ವಲಯದಲ್ಲೂ ಗೊಂದಲ ಮೂಡಿಸಿದ್ದರು. ಇದರಿಂದಾಗಿ ಮಾಜಿ ಶಾಸಕ ಜೆ.ಡಿ.ನಾಯ್ಕ ಅಭ್ಯರ್ಥಿತನದ ಆಕಾಂಕ್ಷಿ ಎಂಬ ಚರ್ಚೆಯೂ ಮುನ್ನೆಲೆಗೆ ಬಂದಿತ್ತು. ಆದರೆ ಅಂತಿಮವಾಗಿ ಪಕ್ಷ ಮಂಕಾಳ ಸ್ಪರ್ಧೆಗೆ ಮಣೆ ಹಾಕಿ ಗೊಂದಲಕ್ಕೆ ತೆರೆ ಎಳೆದಿದೆ.
ಕುತೂಹಲದಲ್ಲಿ ಮೂರು ಕ್ಷೇತ್ರ:
ಕಾಂಗ್ರೆಸ್ ಬಿಡುಗಡೆ ಮಾಡಿರುವ ಮೊದಲ ಹಂತದ ಪಟ್ಟಿಯಲ್ಲಿ ಜಿಲ್ಲೆಯ ಶಿರಸಿ–ಸಿದ್ದಾಪುರ, ಕುಮಟಾ–ಹೊನ್ನಾವರ ಮತ್ತು ಯಲ್ಲಾಪುರ ಮುಂಡಗೋಡ ಕ್ಷೇತ್ರಗಳಿಗೆ ಅಭ್ಯರ್ಥಿ ಅಂತಿಮಗೊಳಿಸಿಲ್ಲ.
ಕುಮಟಾ ಕ್ಷೇತ್ರದಲ್ಲಿ ಮಾಜಿ ಶಾಸಕ ಶಾರದಾ ಶೆಟ್ಟಿ ಸೇರಿದಂತೆ 16 ಮಂದಿ ಪಕ್ಷದ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ. ಈ ಪಟ್ಟಿಗೆ ಈಚೆಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಿವೇದಿತ್ ಆಳ್ವಾ ಸೇರಿಕೊಂಡಿದ್ದಾರೆ. ಶಿರಸಿ ಕ್ಷೇತ್ರದಲ್ಲಿ ಭೀಮಣ್ಣ ನಾಯ್ಕ ಸೇರಿದಂತೆ ಆರಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದಾರೆ.
ಮುಂಡಗೋಡ–ಯಲ್ಲಾಪುರ ಕ್ಷೇತ್ರದಲ್ಲಿ ಈಚೆಗೆ ಬಿಜೆಪಿ ತೊರೆದು ಪಕ್ಷ ಸೇರಿದ ಮಾಜಿ ಶಾಸಕ ವಿ.ಎಸ್.ಪಾಟೀಲ್ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಅವರ ಬಳಿಕ ಬಿಜೆಪಿಯಿಂದ ಕೈ ಪಾಳಯಕ್ಕೆ ಜಿಗಿದಿದ್ದ ಶ್ರೀನಿವಾಸ ಭಟ್ಟ ಧಾತ್ರಿ ಅಭ್ಯರ್ಥಿಯಾಗಲು ಪೈಪೋಟಿಗೆ ಇಳಿದಿದ್ದಾರೆ.
‘ಅಭ್ಯರ್ಥಿಗಳಾಗಲು ಒಂದಕ್ಕಿಂತ ಹೆಚ್ಚು ಪ್ರಬಲರು ಪೈಪೋಟಿಗೆ ಇಳಿದಿರುವ ಕ್ಷೇತ್ರಗಳಲ್ಲಿ ಭಿನ್ನಮತದ ಸಮಸ್ಯೆ ಎದುರಾಗಬಹುದು ಎಂಬ ಕಾರಣಕ್ಕೆ ಕೊನೆ ಕ್ಷಣದಲ್ಲಿ ಟಿಕೆಟ್ ಘೊಷಿಸಲು ಪಕ್ಷ ಮುಂದಾಗಿದೆ’ ಎಂದು ಕಾಂಗ್ರೆಸ್ ಹಿರಿಯ ಮುಖಂಡರೊಬ್ಬರು ಪ್ರತಿಕ್ರಿಯಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.