ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ ನಗರಸಭೆಗೆ ಆರ್ಥಿಕ ‘ಏಟು’

Published 2 ಸೆಪ್ಟೆಂಬರ್ 2023, 4:55 IST
Last Updated 2 ಸೆಪ್ಟೆಂಬರ್ 2023, 4:55 IST
ಅಕ್ಷರ ಗಾತ್ರ

ಗಣಪತಿ ಹೆಗಡೆ

ಕಾರವಾರ: ವಿವಿಧ ಮೂಲಗಳಿಂದ ಸಂಗ್ರಹವಾಗುವ ತೆರಿಗೆ ಮೊತ್ತದಲ್ಲಿ ಆಡಳಿತ ನಿರ್ವಹಣೆ ಜತೆಗೆ ಅಭಿವೃದ್ಧಿ ಕೆಲಸ ನಡೆಸಬೇಕಿರುವ ನಗರಸಭೆಗೆ ಈ ಬಾರಿ ಆರ್ಥಿಕ ಹೊರೆ ಬಿದ್ದಿದೆ. ನಗರಸಭೆ ನಿಧಿ ಪ್ರಮಾಣ ಮೀರಿ ಕಾಮಗಾರಿ ನಡೆಸಿದ್ದು ಇದಕ್ಕೆ ಕಾರಣ ಎಂಬುದು ನಗರಸಭೆಯ ಕೆಲ ಸದಸ್ಯರ ಆರೋಪ.

ನಗರಸಭೆಗೆ ಆಸ್ತಿ ತೆರಿಗೆ, ಉದ್ದಿಮೆ ಪರವಾನಗಿ, ಲೀಸ್ ಬಾಡಿಗೆ ಶುಲ್ಕ, ಅನಧಿಕೃತ ಆಸ್ತಿ ತೆರಿಗೆ, ಸ್ವಚ್ಛತಾ ಶುಲ್ಕ ಸಂಗ್ರಹವೂ ಸೇರಿದಂತೆ ವಿವಿಧ ಶುಲ್ಕ ಆಕರಿಸಿ ನಿಧಿ ಸಂಗ್ರಹಿಸುತ್ತದೆ. ಈ ಮೊತ್ತದಲ್ಲಿಯೇ ಕಚೇರಿ ನಿರ್ವಹಣೆಯ ಜತೆಗೆ ನಗರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಚಟುವಟಿಕೆ ನಡೆಸಬೇಕಾಗುತ್ತದೆ.

ಸದ್ಯ ನಗರಸಭೆಯ ವಾರ್ಷಿಕ ನಿಧಿ ಸಂಗ್ರಹ ₹12,78,30,000 ಇದೆ. ಅದರಲ್ಲಿಯೇ ದೈನಂದಿನ ಖರ್ಚು ವೆಚ್ಚ ನಿಭಾಯಿಸಲು ನಿಗದಿತ ಮೊತ್ತ ಮೀಸಲಿಟ್ಟು ಉಳಿದ ಹಣವನ್ನು ಅಭಿವೃದ್ಧಿ ಯೋಜನೆಗಳಿಗೆ ವ್ಯಯಿಸಬೇಕಾಗುತ್ತಿದೆ. ಆದರೆ, ನಗರಸಭೆ ನಿಧಿಯ ಅಡಿಯಲ್ಲಿ ಗುತ್ತಿಗೆದಾರರಿಗೆ ₹17 ಕೋಟಿಯಷ್ಟು ಬಿಲ್ ಪಾವತಿಸುವುದು ಬಾಕಿ ಉಳಿದುಕೊಂಡಿದ್ದು, ಅದನ್ನೂ ನಗರಸಭೆ ನಿಧಿಯಲ್ಲಿಯೇ ಪಾವತಿಸುವ ಸವಾಲು ಎದುರಾಗಿದೆ.

ನಗರಸಭೆ ಗುತ್ತಿಗೆದಾರರಿಗೆ ಕೋಟ್ಯಂತರ ಮೊತ್ತದ ಬಿಲ್ ಪಾವತಿಸಬೇಕಾಗಿದೆ. ಗುತ್ತಿಗೆದಾರರೂ ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದರಿಂದ ಅವರಿಗೆ ಬೇಗನೆ ಬಿಲ್ ಮೊತ್ತ ಪಾವತಿಸುವ ಕೆಲಸವಾಗಬೇಕು.
ಮಾಧವ ನಾಯಕ, ನೊಂದಾಯಿತ ಸಿವಿಲ್ ಗುತ್ತಿಗೆದಾರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ

‘ಹಿಂದಿನ ಎರಡು ವರ್ಷಗಳಲ್ಲಿ ನಗರಸಭೆ ನಿಧಿ ಅಡಿ ಕೈಗೊಂಡ ಕಾಮಗಾರಿ ಮೊತ್ತವೇ ₹10 ಕೋಟಿ ದಾಟಿದೆ. ಅದಕ್ಕೂ ಕೆಲ ವರ್ಷ ಹಿಂದೆ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳಿಗೂ ಮೊತ್ತ ಪಾವತಿಸುವುದು ಬಾಕಿ ಉಳಿದಿದೆ. ಒಟ್ಟಾರೆ ₹17 ಕೋಟಿಯಷ್ಟು ಬಿಲ್ ಮೊತ್ತ ಬಾಕಿ ಉಳಿಸಿಕೊಳ್ಳಲಾಗಿದ್ದು, ನಗರಸಭೆಯ ವಾರ್ಷಿಕ ಆದಾಯಕ್ಕಿಂತ ಇದು ಒಂದೂವರೆ ಪಟ್ಟು ಹೆಚ್ಚಾಗುತ್ತಿದೆ’ ಎನ್ನುತ್ತಾರೆ ನಗರಸಭೆಯ ಹಿರಿಯ ಸದಸ್ಯರೊಬ್ಬರು.

‘ಕಳೆದ ಸಾಲಿನಲ್ಲಿ ನಗರಸಭೆ ಆದಾಯದ ಇತಿಮಿತಿ ಮೀರಿ ನಗರಸಭೆ ನಿಧಿಯಲ್ಲಿ ಕೆಲವು ಕಾಮಗಾರಿ ಕೈಗೊಳ್ಳಲಾಗಿದೆ. ಆದಾಯಕ್ಕೆ ತಕ್ಕಂತೆ ಕ್ರಿಯಾಯೋಜನೆ ಸಿದ್ಧಪಡಿಸುವ ಬದಲು ಮಿತಿ ಮೀರಿ ಕೆಲಸ ಮಾಡಿಸಲಾಗಿದೆ. ಈಗ ಗುತ್ತಿಗೆದಾರರಿಗೆ ಬಿಲ್ ಪಾವತಿಸಲಾಗದ ಆರ್ಥಿಕ ದುಸ್ಥಿತಿಗೆ ನಗರಸಭೆ ತಲುಪಿದೆ’ ಎಂಬುದು ಗುತ್ತಿಗೆದಾರ ಮುರಳಿ ಗೊವೇಕರ್ ಆರೋಪ.

ಈ ಬಾರಿ ಸಂಗ್ರಹವಾಗುವ ನಗರಸಭೆ ನಿಧಿಯಲ್ಲಿ ಅಗತ್ಯ ಕಾಮಗಾರಿಗಳನ್ನೂ ಕೈಗೊಳ್ಳಬೇಕಾಗುವ ಜತೆಗೆ ಗುತ್ತಿಗೆದಾರರಿಗೆ ಹಳೆ ಬಾಕಿ ಪಾವತಿಸುವ ಸವಾಲೂ ಇದೆ.
ಕೆ.ಚಂದ್ರಮೌಳಿ, ಪೌರಾಯುಕ್ತ

‘ವಾರ್ಷಿಕವಾಗಿ ಸಂಗ್ರಹವಾಗುವ ₹12.78 ಕೋಟಿ ನಗರಸಭೆ ನಿಧಿಯಲ್ಲಿ ಆಡಳಿತ ನಿರ್ವಹಣೆಗೆ ₹6 ಕೋಟಿಗೂ ಹೆಚ್ಚು ಮೊತ್ತ ವೆಚ್ಚವಾಗುತ್ತದೆ. ಉಳಿದ ಮೊತ್ತದಲ್ಲಿ ಅಗತ್ಯ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ. ಆದರೆ ಮೂರು ವರ್ಷಗಳ ಕಾಮಗಾರಿಗಳಿಗೆ ತಗಲುವಷ್ಟು ಮೊತ್ತ ಗುತ್ತಿಗೆದಾರರಿಗೆ ಈಗ ಪಾವತಿಸಬೇಕಾಗಿದೆ. ಇದರಿಂದ ಆರ್ಥಿಕ ಹೊರೆ ಎದುರಿಸಬೇಕಾಗಿದೆ’ ಎಂಬುದು ನಗರಸಭೆಯ ಅಧಿಕಾರಿಯೊಬ್ಬರ ಅಳಲು.

211 ಕಾಮಗಾರಿಗಳ ತನಿಖೆ

‘ನಗರಸಭೆ ನಿಧಿಯಲ್ಲಿ ಕೈಗೊಳ್ಳಲಾದ ಕಾಮಗಾರಿಗಳ ₹17 ಕೋಟಿ ಬಿಲ್ ಪಾವತಿಸುವುದು ಬಾಕಿ ಇದೆ. ನಗರದಲ್ಲಿ ಎರಡು ವರ್ಷಗಳಲ್ಲಿ ಸುಮಾರು 211 ಕಾಮಗಾರಿಗಳನ್ನು ನಗರಸಭೆ ನಿಧಿಯಲ್ಲಿ ಕೈಗೊಳ್ಳಲಾಗಿದೆ. ಅವುಗಳ ಬಗ್ಗೆ ಅಗತ್ಯ ಪರಿಶೀಲನೆ ನಡೆಸಲಾಗುತ್ತದೆ. ಕಡತಗಳ ಪರಿಶೀಲನೆಯ ಜತೆಗೆ ಕಾಮಗಾರಿಯ ವಾಸ್ತವ ಸ್ಥಿತಿಯನ್ನೂ ಅಧ್ಯಯನ ಮಾಡಲಾಗುವುದು’ ಎಂದು ಪೌರಾಯುಕ್ತ ಕೆ.ಚಂದ್ರಮೌಳಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT