ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರವಾರ | ಪ್ರಚಾರದ ಗೀಳು ಜನರಿಗೆ ಗೋಳು

ಫ್ಲೆಕ್ಸ್, ಬ್ಯಾನರ್ ಅಳವಡಿಕೆಯಿಂದ ಸಂಚಾರಕ್ಕೆ ಕಿರಿಕಿರಿ, ನಗರ ಸೌಂದರ್ಯಕ್ಕೆ ಧಕ್ಕೆ; ದೂರು
ಗಣಪತಿ ಹೆಗಡೆ
Published 12 ಫೆಬ್ರುವರಿ 2024, 5:32 IST
Last Updated 12 ಫೆಬ್ರುವರಿ 2024, 5:32 IST
ಅಕ್ಷರ ಗಾತ್ರ

ಕಾರವಾರ: ಜಿಲ್ಲೆಯಲ್ಲಿಯೂ ಈಚಿನ ವರ್ಷದಲ್ಲಿ ‘ಬ್ಯಾನರ್, ಫ್ಲೆಕ್ಸ್ ರಾಜಕಾರಣ’ ಹೆಚ್ಚಿದೆ. ಮಹಾನಗರಗಳಲ್ಲಿ ಮಾತ್ರ ವ್ಯಾಪಿಸಿದ್ದ ಶ್ರದ್ಧಾಂಜಲಿ, ಜನ್ಮದಿನದ ಶುಭಾಶಯಗಳಿಗೆ ಫ್ಲೆಕ್ಸ್ ಹಚ್ಚಿ ಶುಭಾಶಯ ಕೋರುವ ಗೀಳು ಇಲ್ಲಿಯೂ ಕೆಲವರಿಗೆ ಅಂಟಿದೆ. ಅದರ ಪರಿಣಾಮವಾಗಿ ನಗರ ಸೌಂದರ್ಯಕ್ಕೆ ಧಕ್ಕೆ ಉಂಟಾಗುತ್ತಿದೆ ಎಂಬ ದೂರು ಹೆಚ್ಚುತ್ತಿದೆ.

ಕಾರವಾರ, ಶಿರಸಿ ಸೇರಿದಂತೆ ಹಲವು ನಗರ, ಪಟ್ಟಣಗಳ ಜತೆಗೆ ಗ್ರಾಮೀಣ ಭಾಗದಲ್ಲಿಯೂ ಬ್ಯಾನರ್ ಹಾವಳಿ ಹೆಚ್ಚಿದೆ. ಸಮಾರಂಭ, ಶುಭಾಯಯ ಕೋರಲು ಅಳವಡಿಸಿದ ಫ್ಲೆಕ್ಸ್, ಬ್ಯಾನರ್, ಭಿತ್ತಿಪತ್ರಗಳು ಕಾರ್ಯಕ್ರಮ ಮುಗಿದು ಹಲವು ತಿಂಗಳು ಕಳೆದ ಬಳಿಕವೂ ತೆರವುಗೊಳ್ಳುತ್ತಿಲ್ಲ. ಹೀಗೆ ತಿಂಗಳುಗಟ್ಟಲೆ ಸಾರ್ವಜನಿಕ ಸ್ಥಳಗಳಲ್ಲಿ ರಾರಾಜಿಸುವ ಬ್ಯಾನರ್‌ಗಳಲ್ಲಿ ಬಹುತೇಕ ಸ್ಥಳೀಯ ಸಂಸ್ಥೆಗಳಿಂದ ಅನುಮತಿ ಪಡೆಯದೆ ಅಳವಡಿಸಿದ್ದು ಎಂಬುದು ವ್ಯವಸ್ಥೆಯ ದೋಷಕ್ಕೆ ಹಿಡಿದ ಕೈಗನ್ನಡಿ.

ಜ.22 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ವೇಳೆ ಎಲ್ಲೆಡೆ ಸಂಭ್ರಮ ಮನೆ ಮಾಡಿತ್ತು. ಆಗ ಕಾರವಾರ ಸೇರಿದಂತೆ ಹಲವೆಡೆ ಕೇಸರಿ ಪತಾಕೆ, ಬ್ಯಾನರ್, ಬಂಟಿಂಗ್ಸ್ ಅಳವಡಿಸಲಾಗಿತ್ತು. ಅವುಗಳ ಪೈಕಿ ಬಹುತೇಕ ಇನ್ನೂ ತೆರವುಗೊಂಡಿಲ್ಲ. ಅಪಾಯಕಾರಿ ತಿರುವಿನ ಬಳಿ, ಪ್ರಮುಖ ವೃತ್ತಗಳಲ್ಲಿ ದೊಡ್ಡ ಗಾತ್ರದ ಬ್ಯಾನರ್ ಅಳವಡಿಸಿ ಸಂಚಾರಕ್ಕೆ ಸಮಸ್ಯೆ ಉಂಟುಮಾಡುತ್ತಿರುವ ದೂರುಗಳು ಹೆಚ್ಚಿವೆ. ಆದರೆ, ಬಹುತೇಕ ‘ಪ್ರಭಾವಿ’ಗಳಿಗೆ ಸಂಬಂಧಿಸಿದ ಬ್ಯಾನರ್ ಇದಾಗಿರುವ ಕಾರಣ ಪೊಲೀಸರು, ಸ್ಥಳೀಯ ಸಂಸ್ಥೆಗಳು ಕ್ರಮವಹಿಸದೆ ಸುಮ್ಮನಾಗುತ್ತಿರುವ ಆರೋಪಗಳಿವೆ.

ಶಿರಸಿ ನಗರದ ಪ್ರಮುಖ ವೃತ್ತ, ರಸ್ತೆ ವಿಭಜಕಗಳು, ವಿದ್ಯುತ್ ಕಂಬಗಳ ಮೇಲೆ ಅನಧಿಕೃತವಾಗಿ ಆಳೆತ್ತರದ ಫ್ಲೆಕ್ಸ್, ಬ್ಯಾನರ್‌ ಅಳವಡಿಕೆ ನಿರಂತವಾಗಿದೆ. ನಗರ ಪ್ರದೇಶದಲ್ಲಿ ಪರವಾನಗಿ ಇಲ್ಲದೇ ಫ್ಲೆಕ್ಸ್, ಬ್ಯಾನರ್‌ಗಳನ್ನು ಅಳವಡಿಸುವುದು ಸಾಮಾನ್ಯವಾಗಿದೆ.

‘ಪರವಾನಗಿ ಇಲ್ಲದೇ ಜಾಹೀರಾತು ಬ್ಯಾನರ್ ಅಳವಡಿಸುವವರಿಗೆ ನೋಟಿಸ್‌ ನೀಡಲಾಗುವುದು’ ಎಂದು ಪೌರಾಯುಕ್ತ ಕಾಂತರಾಜ್ ಹೇಳಿದರು.

ಹಳಿಯಾಳ ಪಟ್ಟಣದಲ್ಲಿ ಪ್ಲಾಸ್ಟಿಕ್‌ ಬ್ಯಾನರ್‌ ಸಂಪೂರ್ಣ ನಿಷೇಧಿಸಲಾಗಿದ್ದರೂ ಬ್ಯಾನರ್‌, ಫ್ಲೆಕ್ಸ್‌, ಬಂಟಿಂಗ್ಸ್‌ ಅಳವಡಿಕೆ ಮುಂದುವರೆದಿದೆ. ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್‌ ಅಳವಡಿಸಲು ಅನುಮತಿ ಪಡೆಯುವಂತೆ  ನಿತ್ಯ ಕಸ ವಿಲೇವಾರಿ ಮಾಡುವ ವಾಹನದ ಮೂಲಕ ಜಾಗೃತಿ ಮೂಡಿಸುತ್ತಿದ್ದರೂ ಅದನ್ನು ನಿರ್ಲಕ್ಷಿಸಲಾಗುತ್ತಿದೆ.

‘ಬ್ಯಾನರ್‌, ಫ್ಲೆಕ್ಸ್ ಅಳವಡಿಕೆಗೆ ಕಡ್ಡಾಯವಾಗಿ ಪುರಸಭೆ ಅನುಮತಿ ಪಡೆಯಲು ಸೂಚಿಸಲಾಗಿದೆ. ನಿಯಮ ಮೀರಿದವರಿಗೆ ಶಿಸ್ತುಕ್ರಮ ಜರುಗಿಸಲಾಗುತ್ತದೆ’ ಎಂದು ಪುರಸಭೆ ಪರಿಸರ ಎಂಜಿನಿಯರ್‌ ಬಿ.ಎಸ್‌.ದರ್ಶಿತಾ ಹೇಳಿದರು. 

ಯಲ್ಲಾಪುರ ಪಟ್ಟಣದ ಬಸ್ ನಿಲ್ದಾಣ ವೃತ್ತ, ದೇವಿ ದೇವಸ್ಥಾನ ರಸ್ತೆ, ಹಳೆ ಪೆಟ್ರೋಲ್ ಪಂಪ್ ವೃತ್ತಗಳು ಸದಾ ಬ್ಯಾನರ್‌ನಿಂದ ತುಂಬಿರುತ್ತವೆ. ಗ್ರಾಮಾಂತರ ಭಾಗದಲ್ಲಿ ರಾಮೋತ್ಸವಕ್ಕೆ ಹಾಕಿದ ಅನೇಕ ಬ್ಯಾನರ್‌ಗಳನ್ನು ಇನ್ನೂ ತೆಗೆಯದ ಬಗ್ಗೆ ಆರೋಪವಿದೆ.

‘ಗ್ರಾಮದೇವಿ ಜಾತ್ರೆ ಮತ್ತು ಯುಗಾದಿ ಉತ್ಸವದ ಸಂದರ್ಭದಲ್ಲಿ ಬ್ಯಾನರ್ ಪರವಾನಗಿಯಿಂದ ₹80 ಸಾವಿರಕ್ಕೂ ಹೆಚ್ಚು ಆದಾಯ ಬಂದಿದೆ’ ಎಂದು ಪಟ್ಟಣ ಪಂಚಾಯಿತಿ ಅಧಿಕಾರಿ ಸುರೇಶ ತುಳಸೀಕರ್ ಹೇಳುತ್ತಾರೆ.

ಭಟ್ಕಳ ಪಟ್ಟಣದ ಶಂಶುದ್ದೀನ್ ವೃತ್ತ, ಹಳೇ ಬಸ್ ವೃತ್ತ, ಹೂವಿನ ಮಾರುಕಟ್ಟೆಯಲ್ಲಿ ರಸ್ತೆಯ ಎರಡು ಇಕ್ಕೆಲಗಳಲ್ಲಿ ಫ್ಲೆಕ್ಸ್‌ಗಳು ಅಲ್ಲಲ್ಲಿ ರಾರಾಜಿಸುತ್ತದೆ. ಪಟ್ಟಣದ ಅಳವಡಿಸಿರುವ ಬಹುತೇಕ ಬ್ಯಾನರ್‌ಗಳಿಗೆ ಪುರಸಭೆಯ ಪರವಾನಗಿ ಪಡೆದುಕೊಂಡಿಲ್ಲ. ಶಂಶುದ್ದೀನ್ ವೃತ್ತದಲ್ಲಿರುವ ಗೋಪುರಕ್ಕೆ ಯಾವುದೇ ಭಿತ್ತಿಪತ್ರ, ಪೋಸ್ಟರ್ ಹಾಕಬಾರದು ಎನ್ನುವ ಆದೇಶ ಇದ್ದರೂ, ಆದೇಶವನ್ನು ಗಾಳಿಗೆ ತೂರಿ ಭಿತ್ತಿಪತ್ರ ಅಂಟಿಸಲಾಗುತ್ತಿದೆ.

ಕುಮಟಾದ ಸ್ಥಳೀಯ ಸಂಸ್ಥೆಗಳ ಅನುಮತಿ ಪಡೆಯದೆ ಹಾಗೂ ನಿರ್ದಿಷ್ಟ ಶುಲ್ಕ ಕೂಡ ಪಾವತಿಸದೆ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ಸಾರ್ವಜನಿಕ ಸ್ಥಳ, ರಸ್ತೆ ಬದಿಯಲ್ಲಿ ರಾಜಕೀಯ ಪಕ್ಷಗಳು, ಸಂಘ-ಸಂಸ್ಥೆಗಳವರು, ಫ್ಲೆಕ್ಸ್, ಬ್ಯಾನರ್, ಕಟೌಟ್ ಅಳವಡಿಸಿ ಪ್ರಚಾರ ಪಡೆಯುತ್ತಿದ್ದಾರೆ.

‘ಸಾರ್ವಜನಿಕ ಸ್ಥಳಗಳಲ್ಲಿ ಪ್ರಚಾರ ಸಾಮಗ್ರಿ ಅಳವಡಿಸುತ್ತಿರುವುದಕ್ಕೆ ಸಂಬಂಧಪಟ್ಟವರಿಗೆ ನೊಟೀಸ್ ನೀಡಿ ಶುಲ್ಕ ವಸೂಲಾತಿಗೆ ಕ್ರಮ ಕೈಕೊಳ್ಳಲಾಗುವುದು’ ಎಂದು ಪುರಸಭೆ ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ ಹೇಳಿದರು.

‘ಸಿದ್ದಾಪುರ ಪಟ್ಟಣದ ವ್ಯಾಪ್ತಿಯಲ್ಲಿ ಅನಧಿಕೃತ ಫ್ಲೆಕ್ಸ್ ಅಥವಾ ಬ್ಯಾನರ್ ಅನಧಿಕೃತವಾಗಿ ಅಳವಡಿಸಿದವರಿಗೆ ದಂಡವಿಧಿಸುವ ಅವಕಾಶವಿದೆ. ಆದರೆ ಪ್ರಸ್ತುತ ದಂಡ ವಿಧಿಸುವ ಬದಲು ಸಂಬಂಧಪಟ್ಟವರಿಗೆ ತಿಳಿಸಿ ಅನುಮತಿ ಪಡೆಯಲು ಅಥವಾ ತೆರವುಗೊಳಿಸಲು ಸೂಚಿಸಲಾಗುತ್ತಿದೆ’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಜಗದೀಶ ನಾಯ್ಕ ಮಾಹಿತಿ ನೀಡಿದರು.

ಅಂಕೋಲಾ ಪಟ್ಟಣದ ಹಲವು ಬಾಗಗಳಲ್ಲಿ ಎಲ್ಲಿ ನೋಡಿದರು ಫ್ಲೆಕ್ಸ್, ಬ್ಯಾನರ್‌ಗಳು ತುಂಬಿಕೊಂಡಿವೆ. ಅವುಗಳಿಂದ ಸಾರ್ವಜನಿಕರಿಗೆ ಬಹಳಷ್ಟು ಕಿರಿಕಿರಿ ಉಂಟಾಗುತ್ತಿದೆ ಎಂಬುದು ಪಟ್ಟಣದ ನಿವಾಸಿ ಲೊಕೇಶ ಅವರ ದೂರು.

ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಎಂ.ಜಿ.ಹೆಗಡೆ, ಶಾಂತೇಶ ಬೆನಕನಕೊಪ್ಪ, ಸಂತೋಷಕುಮಾರ ಹಬ್ಬು, ಎಂ.ಜಿ.ನಾಯ್ಕ, ಸುಜಯ್ ಭಟ್, ಮೋಹನ ನಾಯ್ಕ, ವಿಶ್ವೇಶ್ವರ ಗಾಂವ್ಕರ, ಮೋಹನ ದುರ್ಗೇಕರ.

ಶಿರಸಿ ನಗರದ ಐದು ರಸ್ತೆ ವೃತ್ತದ ಬಳಿ ರಸ್ತೆ ಮಧ್ಯದ ಬೀದಿದೀಪಗಳ ಕಂಪಬಗಳಿಗೆ ಫ್ಲೆಕ್ಸ್ ಅಳವಡಿಸಿರುವುದು.
ಶಿರಸಿ ನಗರದ ಐದು ರಸ್ತೆ ವೃತ್ತದ ಬಳಿ ರಸ್ತೆ ಮಧ್ಯದ ಬೀದಿದೀಪಗಳ ಕಂಪಬಗಳಿಗೆ ಫ್ಲೆಕ್ಸ್ ಅಳವಡಿಸಿರುವುದು.
ಹೊನ್ನಾವರ ತಾಲ್ಲೂಕಿನ ಹಡಿನಬಾಳ ಸಮೀಪ ರಸ್ತೆ ತಿರುವಿನಲ್ಲಿ ಅನಧಿಕೃತವಾಗಿ ನಾಮಫಲಕ ಹಾಗೂ ಬ್ಯಾನರ್‌ಗಳನ್ನು ಅಳವಡಿಸಲಾಗಿದೆ.
ಹೊನ್ನಾವರ ತಾಲ್ಲೂಕಿನ ಹಡಿನಬಾಳ ಸಮೀಪ ರಸ್ತೆ ತಿರುವಿನಲ್ಲಿ ಅನಧಿಕೃತವಾಗಿ ನಾಮಫಲಕ ಹಾಗೂ ಬ್ಯಾನರ್‌ಗಳನ್ನು ಅಳವಡಿಸಲಾಗಿದೆ.
ಹಳಿಯಾಳ ಪಟ್ಟಣದ ಹಳೆ ಬಸ್ ನಿಲ್ದಾಣದ ಆವರಣಗೋಡೆಗೆ ವಿವಿಧ ರೀತಿಯ ಜಾಹೀರಾತು ಭಿತ್ತಿಪತ್ರ ಅಂಟಿಸಿರುವುದು.
ಹಳಿಯಾಳ ಪಟ್ಟಣದ ಹಳೆ ಬಸ್ ನಿಲ್ದಾಣದ ಆವರಣಗೋಡೆಗೆ ವಿವಿಧ ರೀತಿಯ ಜಾಹೀರಾತು ಭಿತ್ತಿಪತ್ರ ಅಂಟಿಸಿರುವುದು.
ಮುಂಡಗೋಡ ಪಟ್ಟಣದ ಶಿವಾಜಿ ವೃತ್ತದಲ್ಲಿ ಫ್ಲೆಕ್ಸ್‌ ಬಂಟಿಂಗ್ಸ್‌ ಅಳವಡಿಸಿರುವುದು.
ಮುಂಡಗೋಡ ಪಟ್ಟಣದ ಶಿವಾಜಿ ವೃತ್ತದಲ್ಲಿ ಫ್ಲೆಕ್ಸ್‌ ಬಂಟಿಂಗ್ಸ್‌ ಅಳವಡಿಸಿರುವುದು.

ಹಳಿಯಾಳದ ರಾಜ್ಯ ಹೆದ್ದಾರಿಗಳಲ್ಲಿ ಅನೇಕ ಬ್ಯಾನರ್‌ಗಳು ಊರಿನ ಫಲಕಗಳಿಗೆ ಅಡ್ಡಲಾಗಿ ಮುಚ್ಚಿಕೊಂಡಿರುವುದರಿಂದ ವಾಹನದ ಚಾಲಕ ಹಾಗೂ ಪ್ರಯಾಣಿಕರಿಗೂ- ತೊಂದರೆಯಾಗುತ್ತಿದೆ ವಿಕ್ಟರ್ ಫರ್ನಾಂಡಿಸ್ ಹಳಿಯಾಳ ನಿವಾಸಿ

ಗ್ರಾಮೀಣ ಭಾಗದಲ್ಲಿ ಫ್ಲೆಕ್ಸ್ ಅಥವಾ ಬ್ಯಾನರ್‌ಗಳನ್ನು ಹಚ್ಚುವವರ ಸಂಖ್ಯೆ ಕಡಿಮೆ. ಹಲವರಿಗೆ ಇದಕ್ಕೆ ಅನುಮತಿ ಪಡೆಯಬೇಕೆಂಬ ಮಾಹಿತಿಯ ಕೊರತೆ ಇದೆ - ಸುಬ್ರಹ್ಮಣ್ಯ ಹೆಗಡೆ ಕೋಲಸಿರ್ಸಿ ಗ್ರಾಮ ಪಂಚಾಯಿತಿ ಪಿಡಿಒ

ಫ್ಲೆಕ್ಸ್‌ ಅಳವಡಿಕೆಗೆ ನಿರ್ದಿಷ್ಟ ದರ ನಿಗದಿ ಮಾಡಿ ಷರತ್ತು ಹಾಕಿ ಅನುಮತಿ ನೀಡಬೇಕು. ಇದರಿಂದ ಸ್ಥಳೀಯ ಸಂಸ್ಥೆಗೂ ಆದಾಯ ಬರುತ್ತದೆ- ಶ್ರೀಧರ ಉಪ್ಪಾರ ಮುಂಡಗೋಡ

ರಸ್ತೆಯುದ್ದಕ್ಕೂ ಅಳವಡಿಸಲಾದ ಬಾವುಟ ಫ್ಲೆಕ್ಸ್‌ಗಳನ್ನು ಆಯಾ ಸಂಭ್ರಮಾಚರಣೆ ಬಳಿಕ ತೆರವುಗೊಳಿಸದೆ ಬಿಟ್ಟಿರುವುದರಿಂದ ನಗರದ ಸೌಂದರ್ಯಕ್ಕೆ ಧಕ್ಕೆ ಉಂಟಾಗುತ್ತಿದೆ- ರಾಹುಲ್ ನಾಯ್ಕ ಕಾರವಾರ ಕೋಡಿಬಾಗ ನಿವಾಸಿ

ಶುಭಾಶಯ ಕೋರುವ ವೃತ್ತ...! ಮುಂಡಗೋಡ ಪಟ್ಟಣದ ಶಿವಾಜಿ ವೃತ್ತವು ಸುದ್ದಿಗಳನ್ನು ತಿಳಿಸುವ ಶುಭಾಶಯ ಕೋರುವ ವೃತ್ತವಾಗಿ ಮಾರ್ಪಡುತ್ತಿದೆ. ತಾಲ್ಲೂಕಿನಲ್ಲಿ ಏನೇ ಕಾರ್ಯಕ್ರಮಗಳಿದ್ದರೂ ಸಾಧಕರಿಗೆ ಶುಭಾಶಯ ತಿಳಿಸುವುದಿದ್ದರೂ ಅಥವಾ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸುವುದಿದ್ದರೂ ಈ ವೃತ್ತದಲ್ಲಿ ಬ್ಯಾನರ್‌ ಫ್ಲೆಕ್ಸ್‌ಗಳ ಮೂಲಕ ಸಾರ್ವಜನಿಕರಿಗೆ ತಿಳಿಸುವ ಕೆಲಸ ಆಗುತ್ತದೆ. ಈಚಿನ ವರ್ಷಗಳಲ್ಲಿ ಅಳವಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬಸ್‌ ನಿಲ್ದಾಣ ರಸ್ತೆ ಸಂತೆ ಮಾರುಕಟ್ಟೆ ಕ್ರಾಸ್‌ ಸೇರಿದಂತೆ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಫ್ಲೆಕ್ಸ್‌ ಅಳವಡಿಕೆ ಹೆಚ್ಚಿದೆ. ‘ಪಟ್ಟಣ ವ್ಯಾಪ್ತಿಯಲ್ಲಿ ಫ್ಲೆಕ್ಸ್‌ ಬ್ಯಾನರ್ ಅಳವಡಿಕೆಗೆ ಪಟ್ಟಣ ಪಂಚಾಯಿತಿಯಿಂದ ಅನುಮತಿ ನೀಡಲಾಗುತ್ತಿದೆ. ಕೆಲವೊಂದು ಮಾರ್ಗಸೂಚಿಗಳನ್ನು ಪಾಲಿಸಲು ಸಂಬಂಧಿಸಿದವರಿಗೆ ಸೂಚಿಸಿ ನಿಗದಿಪಡಿಸಿದ ದರ ಭರಣ ಮಾಡಿಸಿಕೊಳ್ಳಲಾಗುತ್ತದೆ’ ಎಂದು ಮುಖ್ಯಾಧಿಕಾರಿ ಚಂದ್ರಶೇಖರ ಬಿ. ಹೇಳಿದರು.

ಜನಪ್ರತಿನಿಧಿಗಳಿಗೆ ‘ಕ್ಷುಲ್ಲಕ’ ವಿಚಾರ ಹೊನ್ನಾವರದಲ್ಲಿ ನಾಮಕರಣದಿಂದ ಹಿಡಿದು ಶ್ರದ್ಧಾಂಜಲಿಯವರೆಗಿನ ವಿವಿಧ ಘಟನೆಗಳನ್ನು ಸಾರುವ ವೈಯಕ್ತಿಕ ಶುಭಾಶಯ ಕೋರುವ ಬ್ಯಾನರ್‌ಗಳು ನಾಯಿಕೊಡೆಗಳಂತೆ ಅನಧಿಕೃತವಾಗಿ ಉದ್ಭವವಾಗುತ್ತಿವೆ. ಬ್ಯಾನರ್ ಅಳವಡಿಕೆಯ ವಿವಾದ ಪೊಲೀಸ್ ಠಾಣೆಯ ಮೆಟ್ಟಿಲೇರಿದ ಘಟನೆಗಳು ಕೂಡ ನಡೆದಿವೆ. ಜಾಹಿರಾತುಗಳು ಪಂಚಾಯಿತಿಗೆ ಆದಾಯ ತರಬಹುದೆಂದು ಗೊತ್ತಿದ್ದರೂ ಜನಪ್ರತಿನಿಧಿಗಳಿಗೆ ಇವೆಲ್ಲ ‘ಕ್ಷುಲ್ಲಕ’ ವಿಷಯವಾಗಿ ಕಾಣುತ್ತಿವೆ! ‘ಫ್ಲೆಕ್ಸ್‌ಗಳಿಂದ ಗ್ರಾಮ ನೈರ್ಮಲ್ಯ ಕೂಡ ಹಾಳಾಗುತ್ತಿದೆ’ ಎಂದು ಚಿಕ್ಕನಕೋಡ ಗ್ರಾಮ ಪಂಚಾಯಿತಿ ಸದಸ್ಯ ನಾಗೇಶ ನಾಯ್ಕ ದೂರಿದರು. ‘ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನಧಿಕೃತ ನಾಮಫಲಕ ಬ್ಯಾನರ್ ಅಳವಡಿಕೆಯ ವಿಚಾರವನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂಬುದು ಹೊನ್ನಾವರ ತಾಲ್ಲೂಕು ಪಂಚಾಯಿತಿ ಇಒ ಜಿ.ಎಸ್.ನಾಯ್ಕ ಅಭಿಪ್ರಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT