ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನಡಾ ಗ್ರಾಮಕ್ಕೆ ಅಭಿವೃದ್ಧಿ ಕನವರಿಕೆ

ಜೊಯಿಡಾ ತಾಲ್ಲೂಕಿನ ಕುಗ್ರಾಮದಲ್ಲಿ ಕಂಬಳಿಯೇ ಆಂಬುಲೆನ್ಸ್: ಸೂಕ್ತ ರಸ್ತೆಯೂ ಇಲ್ಲ
Last Updated 23 ಆಗಸ್ಟ್ 2022, 14:52 IST
ಅಕ್ಷರ ಗಾತ್ರ

ಜೊಯಿಡಾ: ಇಲ್ಲಿ ಸಂಚರಿಸಲು ಸರಿಯಾದ ರಸ್ತೆಯಿಲ್ಲ. ಗಂಭೀರವಾಗಿ ಅನಾರೋಗ್ಯ ಪೀಡಿತರಿಗೆ ಕಂಬಳಿಯೇ ಆಂಬುಲೆನ್ಸ್! ಮಳೆಗಾಲದಲ್ಲಿ ಸುಮಾರು ಆರು ಕಿಲೋಮೀಟರ್ ಕೆಸರಿನಲ್ಲೇ ಸಂಚರಿಸಬೇಕು. ಅಲ್ಲಲ್ಲಿ ಸಿಗುವ ಹಳ್ಳಗಳನ್ನು ಜೀವ ಕೈಯಲ್ಲಿ ಹಿಡಿದು ದಾಟಬೇಕು.

ಇದು ‌ತಾಲ್ಲೂಕಿನ ಆವೇಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊನಡಾ ಪ್ರದೇಶದ ದುಃಸ್ಥಿತಿಯಾಗಿದೆ. ಈ ಪ್ರದೇಶದಲ್ಲಿ ದೊಡ್ಡ ಮಳೆಯಾದರೆ ಅಧಿಕ ಪ್ರಮಾಣದಲ್ಲಿ ನೀರು ರಸ್ತೆಯಲ್ಲಿ ಸಂಗ್ರಹವಾಗುತ್ತದೆ. ನೀರಿನ ರಭಸಕ್ಕೆ ರಸ್ತೆಯೂ ಕೊಚ್ಚಿ ಹೋಗಿ ನಡೆದುಕೊಂಡು ಹೋಗಲೂ ಕಷ್ಟವಾಗುತ್ತದೆ. ಬಹುತೇಕ ಸಮಯದಲ್ಲಿ ಇಲ್ಲಿನವರು ಕಾಡಿನ ಮಧ್ಯೆ ಇರುವ ಕಾಲು ದಾರಿಗಳಲ್ಲಿ ತಮ್ಮ ದ್ವಿಚಕ್ರ ವಾಹನಗಳನ್ನು ಉಸೋಡಾ ರೆಸಾರ್ಟ್‌ನಲ್ಲಿ ಇಟ್ಟು ನಡೆದುಕೊಂಡು ಹೋಗುತ್ತಾರೆ.

ಸುಮಾರು 15 ಮನೆಗಳಿದ್ದು, 80ಕ್ಕಿಂತ ಹೆಚ್ಚು ಜನ ವಾಸವಿದ್ದಾರೆ. ಅಂಗನವಾಡಿ ಅಥವಾ ಪ್ರಾಥಮಿಕ ಶಾಲೆಯಾಗಲೀ ಇಲ್ಲ. ಇಲ್ಲಿನ 10 ಮಕ್ಕಳು ವಿದ್ಯಾಭ್ಯಾಸಕ್ಕೆ ಸುಮಾರು ಆರು ಕಿಲೋಮೀಟರ್ ದೂರದ ಗಣೇಶಗುಡಿಗೆ ಹೋಗಬೇಕು.

ಇತ್ತೀಚೆಗೆ ಹುಲಿ ಹಾಗೂ ಚಿರತೆಗಳ ದಾಳಿಗೆ ಸಾಕು ಪ್ರಾಣಿಗಳು ಬಲಿಯಾಗುತ್ತಿವೆ. ಈ ಭಾಗದಲ್ಲಿ ಕರಡಿಗಳ ಹಾವಳಿ ಅಧಿಕವಿದೆ. ಆದ್ದರಿಂದ ಗ್ರಾಮಸ್ಥರು ಕಾಡಿನ ನಡುವಿನ ದಾರಿಯಲ್ಲಿ ಸಂಚರಿಸಲು ಭಯಪಡುತ್ತಿದ್ದಾರೆ. ತಮ್ಮ ಮಕ್ಕಳನ್ನು ಬೇರೆ ಬೇರೆ ಭಾಗಗಳಲ್ಲಿ ಬಾಡಿಗೆ ಮನೆಗಳಲ್ಲಿಟ್ಟು ವಿದ್ಯಾಭ್ಯಾಸ ಮಾಡಿಸುತ್ತಿದ್ದಾರೆ.

ಬುಡಕಟ್ಟು ದನಗರ ಗೌಳಿ ಜನಾಂಗದವರು ಅಧಿಕ ಸಂಖ್ಯೆಯಲ್ಲಿದ್ದು, ಎಲ್ಲರಿಗೂ ಕೃಷಿಯೇ ಜೀವನಾಧಾರವಾಗಿದೆ. 200ಕ್ಕೂ ಅಧಿಕ ಸಂಖ್ಯೆಯಲ್ಲಿ ಜಾನುವಾರು ಇವೆ. ಅವು ಅನಾರೋಗ್ಯಕ್ಕೆ ತುತ್ತಾದರೆ ಚಿಕಿತ್ಸೆ ನೀಡಲು ಪಶು ವೈದ್ಯಾಧಿಕಾರಿ ಅಥವಾ ಸಿಬ್ಬಂದಿ ಬರುವುದೇ ಇಲ್ಲ.

ಕಳಪೆ ಕಾಮಗಾರಿ ಆರೋಪ:

ಕಳೆದ ವರ್ಷ ಗ್ರಾಮ ಪಂಚಾಯಿತಿಯಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಸುಮಾರು 300 ಮೀಟರ್ ರಸ್ತೆ ಖಡೀಕರಣ ಮಾಡಲಾಗಿತ್ತು. ಆದರೆ, ಅದು ಒಂದೇ ಮಳೆಗೆ ಹಾಳಾಗಿದೆ ಎಂಬುದು ಸ್ಥಳೀಯರ ಆರೋಪವಾಗಿದೆ.

‘ಕುಡಿಯುವ ನೀರಿನ ವ್ಯವಸ್ಥೆ ಬಿಟ್ಟರೆ ಮತ್ಯಾವ ಮೂಲ ಸೌಕರ್ಯವೂ ನಮಗಿಲ್ಲ. ಮಕ್ಕಳ ಶಿಕ್ಷಣ, ಉದ್ಯೋಗದಂಥ ಅನಿವಾರ್ಯಗಳಿಗಾಗಿ ಗ್ರಾಮಸ್ಥರು ಬೇರೆ, ಬೇರೆ ಭಾಗಗಳಿಗೆ ವಲಸೆ ಹೋಗುತ್ತಿದ್ದಾರೆ. ಆದಷ್ಟು ಬೇಗ ಆಡಳಿತ ನಮ್ಮ ಸಮಸ್ಯೆಗಳಿಗೆ ಸ್ಪಂದಿಸಬೇಕು. ನಮಗೂ ಒಳ್ಳೆಯ ಜೀವನ ನಡೆಸಲು ಅವಕಾಶ ನೀಡಬೇಕು’ ಎಂದು ಸ್ಥಳೀಯ ವಿನಾಯಕ ದೇಸಾಯಿ ಅಳಲು ತೋಡಿಕೊಂಡಿದ್ದಾರೆ.

‘ಸೌಕರ್ಯಗಳ ಕೊರತೆಯಿಂದಾಗಿ ಕೃಷಿ ಮಾಡುವುದನ್ನೇ ಬಿಟ್ಟಿದ್ದೇವೆ. ಅಲ್ಲಿ ಇಲ್ಲಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದೇವೆ. ಸರ್ಕಾರ ನಮಗೆ ಮೂಲಸೌಕರ್ಯಗಳನ್ನು ಒದಗಿಸಬೇಕು. ಇಲ್ಲವಾದರೆ ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ ಪುನರ್ ವಸತಿ ನೀಡಲಿ’ ಎಂದು ಸ್ಥಳೀಯರಾದ ವಾಘು ತಾಟೆ, ದೊಂಡು ಪಾಟೀಲ ಒತ್ತಾಯಿಸಿದ್ದಾರೆ.

ಪ್ರತಿನಿಧಿಗಳು ಬಂದೇ ಇಲ್ಲ!:

‘ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸದಸ್ಯರು, ತಾಲ್ಲೂಕಿನ ಹಿರಿಯ ಅಧಿಕಾರಿಗಳು, ಶಾಸಕರು ಗ್ರಾಮಕ್ಕೆ ಬಂದೇ ಇಲ್ಲ. ಹೀಗಾಗಿ ನಮ್ಮ ನೈಜ ಸಮಸ್ಯೆಗಳನ್ನು ಆಡಳಿತಕ್ಕೆ ತೋರಿಸಲಾಗದೇ ಪರದಾಡುತ್ತಿದ್ದೇವೆ. ಚುನಾವಣೆ ಸಂದರ್ಭದಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಪಕ್ಷಗಳ ಕಾರ್ಯಕರ್ತರು ಬಂದು ಭರವಸೆ ನೀಡುತ್ತಾರೆ. ಹಲವು ವರ್ಷಗಳಿಂದ ನಮಗೆ ಅಭಿವೃದ್ಧಿ ಎಂದರೆ ಬರೀ ಆಶ್ವಾಸನೆಯಾಗಿದೆ’ ಎನ್ನುತ್ತಾರೆ ಸ್ಥಳೀಯರಾದ ಬಜ್ಜು ಪಾಟೀಲ, ರವಿ ಶೇಟ್, ರಾಮ ನಾಯ್ಕ, ವಿಠು ಎಡೆಗೆ.

‘₹ 30 ಲಕ್ಷ ವ್ಯಯ’:

‘ಶಾಸಕರ ವಿಶೇಷ ಅನುದಾನದಡಿಯಲ್ಲಿ ₹ 30 ಲಕ್ಷ ಅನುದಾನವನ್ನು ಇಲ್ಲಿನ ರಸ್ತೆ ಖಡೀಕರಣಕ್ಕೆ ವ್ಯಯಿಸಲಾಗಿದೆ. ಮೂರ್ನಾಲ್ಕು ತಿಂಗಳಲ್ಲಿ ರಸ್ತೆ ಕೆಲಸ ಪ್ರಾರಂಭಿಸಲಾಗುತ್ತದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಎಂಜಿನಿಯರ್ ಮುಹಮ್ಮದ್ ಇಜಾನ್ ಸಬೂರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT