ಬುಧವಾರ, ಮಾರ್ಚ್ 22, 2023
26 °C

ಅಡಿಕೆ ಕೃಷಿಯಲ್ಲಿ ಅತಿಥಿ ಉಪನ್ಯಾಸಕನ ಸಾಧನೆ: ಯುವಕರಿಗೆ ಮಾದರಿಯಾದ ಸುನೀಲ ಶೇಟಕರ್

ಜ್ಞಾನೇಶ್ವರ ದೇಸಾಯಿ Updated:

ಅಕ್ಷರ ಗಾತ್ರ : | |

ಜೊಯಿಡಾ: ಒಂದು ಹಂತದ ಓದು ಮುಗಿದ ನಂತರ ನೌಕರಿಗಾಗಿ ನಗರಕ್ಕೆ ವಲಸೆ ಹೋಗುತ್ತಿ ರುವುದು ಈಚಿನ ಸಾಮಾನ್ಯ ಸಂಗತಿ. ತಾಲ್ಲೂಕಿನ ನಂದಿಗದ್ದಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅವುರ್ಲಿಯ ಸುನೀಲ್ ಪ್ರಭಾಕರ ಶೇಟಕರ್ ಇದಕ್ಕೆ ತದ್ವಿರುದ್ಧ.

ಎಂ.ಎ., ಬಿ.ಇಡಿ ಪದವೀಧರ ರಾಗಿರುವ ಅವರು ಸದ್ಯ ಕುಂಬಾರ ವಾಡಾದ ಸರ್ಕಾರಿ ಪದವಿಪೂರ್ವ ಕಾಲೇಜಿ ನಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವೃತ್ತಿ ಜತೆಗೆ ಅಡಿಕೆ ಕೃಷಿಯಲ್ಲಿ ಕ್ರಿಯಾಶೀಲವಾಗಿ ತೊಡಗಿಸಿ ಕೊಂಡಿದ್ದಾರೆ.

ಸುನೀಲ್ ಸ್ನಾತಕೋತ್ತರ ಪದವಿ ಪಡೆದರೂ ಕೃಷಿಯ ಕಡೆಗಿನ ಸೆಳೆತ ಅವರನ್ನು ರೈತರನ್ನಾಗಿಸಿದೆ. ಕಾಲೇಜಿನಲ್ಲಿ ಪಾಠ ಮಾಡುವ ಜತೆಗೆ ಬಿಡುವಿನ ವೇಳೆಯಲ್ಲಿ ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಾರೆ. ಸುಮಾರು ಒಂದು ಎಕರೆ ಅಡಿಕೆ ತೋಟವನ್ನು ಐದು ವರ್ಷದಿಂದ ಅಭಿವೃದ್ಧಿಪಡಿಸುತ್ತಿರುವ ಅವರು ಇದರಿಂದ ಬರುವ ಆದಾಯದಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.

‘ತೋಟಕ್ಕೆ ಗೊಬ್ಬರ ಹಾಕುವುದು, ಅಡಿಕೆ ಗೊನೆಗಳಿಗೆ ಔಷಧ ಸಿಂಪಡಿಸುವ ಕೆಲಸಗಳನ್ನು ಸ್ವತಃ ಮಾಡುತ್ತೇನೆ. ಇದರಿಂದ ಕೃಷಿ ವೆಚ್ಚ ಕಡಿಮೆ ಆಗುತ್ತಿದೆ. ಕೂಲಿಕಾರ್ಮಿಕರ ಮೇಲಿನ ಅವಲಂಬನೆ ಕಡಿಮೆಯಾಗುತ್ತಿದೆ. ಜತೆಗೆ ದೈಹಿಕ ವ್ಯಾಯಾಮವೂ ಆಗುತ್ತದೆ’ ಎನ್ನುತ್ತಾರೆ ಸುನೀಲ ಶೇಟಕರ್.

‘ವರ್ಷಕ್ಕೆ ಸರಾಸರಿ ₹2 ಲಕ್ಷದಷ್ಟು ಆದಾಯ ಗಳಿಸುತ್ತಿದ್ದೇನೆ. ತೋಟ ಬೆಳ ವಣಿಗೆ ಹಂತದಲ್ಲಿದ್ದು ಇಳುವರಿ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರಿಕೆಯಾಗುವ ನಿರೀಕ್ಷೆ ಇದೆ. ಅಡಿಕೆ ಜತೆಗೆ ಕಾಳುಮೆಣಸಿನ ಬಳ್ಳಿಗಳನ್ನೂ ಬೆಳೆಸುತ್ತಿದ್ದೇನೆ’ ಎಂದರು.

‘ತೋಟಗಾರಿಕೆ ಹಾಗೂ ಕೃಷಿಗೆ ಸಂಬಂಧಿಸಿದಂತೆ ಸರ್ಕಾರದ ವಿವಿಧ ಯೋಜನೆಗಳು ತೋಟಗಾರಿಕೆ ಬಗ್ಗೆ ರೈತರ ಒಲವು ಹೆಚ್ಚಾಗಲು ಕಾರಣವಾಗಿದೆ. ಸುನೀಲ ಅವರಂತಹ ಪದವೀಧರರು ಕೃಷಿಯತ್ತ ಒಲವು ಬೆಳೆಸಿಕೊಂಡಿರುವುದು ಸಕಾರಾತ್ಮಕ ಬೆಳವಣಿಗೆ’ ಎನ್ನುತ್ತಾರೆ ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಇಖ್ಖೆಳಿಕರ್.

ತೋಟವಾಗಿ ಬದಲಾದ ಗದ್ದೆ

ಪರಂಪರಾಗತವಾಗಿ ಭತ್ತ ಬೆಳೆಯುತ್ತಿದ್ದ ಗದ್ದೆಯಲ್ಲಿ ಅಡಿಕೆ ತೋಟ ನಿರ್ಮಿಸಲು ಸುನೀಲ ಶೇಟಕರ್ ಕುಟುಂಬ ಆಸಕ್ತಿ ತೋರಿತು. ಅದರ ಫಲವಾಗಿ ಹೆಚ್ಚು ಕಾರ್ಮಿಕರ ನೆರವಿಲ್ಲದೆ ತೋಟ ನಿರ್ಮಿಸುವ ಸಾಹಸವನ್ನು ಸುನೀಲ್ ಮತ್ತು ಕುಟುಂಬ ಸದಸ್ಯರು ಕೈಗೊಂಡರು.

‘ಭತ್ತ ಉತ್ಪಾದನಾ ವೆಚ್ಚ ಹೆಚ್ಚಾಗಿದ್ದು, ಸೂಕ್ತ ಮಾರುಕಟ್ಟೆಯೂ ಇಲ್ಲ. ಅಡಿಕೆ ತೋಟದಲ್ಲಿ ಕೆಲಸ ಅಧಿಕವಿದ್ದರೂ ದೀರ್ಘಕಾಲದವರೆಗೆ ಒಳ್ಳೆಯ ನಿರ್ವಹಣೆ ಮಾಡಿದರೆ ಉತ್ತಮ ಆದಾಯ ಗಳಿಸಲು ಸಾಧ್ಯ ಎಂಬ ಭರವಸೆಯಿಂದ ಭತ್ತ ಬೆಳೆಯುವ ಜಮೀನಿನಲ್ಲಿ ಅಡಿಕೆ ತೋಟ ಮಾಡಿದ್ದೇನೆ’ ಎನ್ನುತ್ತಾರೆ ಸುನೀಲ ಶೇಟಕರ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು