ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಅಭಿವೃದ್ಧಿಗೆ ಹಲವು ತೊಡಕು: ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್ ಬೇಸರ

ಮೂಲಸೌಕರ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್ ಬೇಸರ
Last Updated 5 ಏಪ್ರಿಲ್ 2021, 12:28 IST
ಅಕ್ಷರ ಗಾತ್ರ

ಕಾರವಾರ: ‘ಬಂದರು ಸೇರಿದಂತೆ ವಿವಿಧ ಮೂಲಸೌಕರ್ಯಗಳ ಅಭಿವೃದ್ಧಿ ವಿಚಾರದಲ್ಲಿ ಉತ್ತರ ಕನ್ನಡದಲ್ಲಿ ಆಗುತ್ತಿರುವಷ್ಟು ಅಚಡಣೆಗಳು ರಾಜ್ಯದ ಮತ್ತೆಲ್ಲೂ ಆಗುತ್ತಿಲ್ಲ. ಪರಿಸರದ ಕಾರಣದಿಂದಾಗಿ ವಿವಿಧ ಯೋಜನೆಗಳು ರದ್ದಾಗುತ್ತಿವೆ’ ಎಂದು ಮೂಲಸೌಕರ್ಯ, ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್ ಬೇಸರ ವ್ಯಕ್ತಪಡಿಸಿದರು.

‌ನಗರದ ಬಂದರು ಇಲಾಖೆಯ ಕಚೇರಿಯ ಆವರಣದಲ್ಲಿ ಸೋಮವಾರ ಆಯೋಜಿಸಲಾದ ‘ರಾಷ್ಟ್ರೀಯ ನಾವಿಕ ದಿನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕಾರವಾರ ಬಂದರಿನ ಎರಡನೇ ಹಂತದ ಅಭಿವೃದ್ಧಿಗೆ ₹ 1,200 ಕೋಟಿ ಮಂಜೂರಾಗಿದೆ. ವಿಶೇಷ ಆರ್ಥಿಕ ವಲಯದ ರಕ್ಷಣೆಗಾಗಿ ವಿಶೇಷ ಜೆಟ್ಟಿ ನಿರ್ಮಾಣಕ್ಕೆ ಕೋಸ್ಟ್ ಗಾರ್ಡ್ ಯೋಜಿಸಿದೆ. ಹುಬ್ಬಳ್ಳಿ– ಅಂಕೋಲಾ ರೈಲು ಮಾರ್ಗದ ಕಾಮಗಾರಿ ಸೇರಿದಂತೆ ವಿವಿಧ ಯೋಜನೆಗಳು ಕಾರ್ಯಗತವಾಗುತ್ತಿಲ್ಲ. ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಲಾಗಿದೆ’ ಎಂದು ತಿಳಿಸಿದರು.

‘ಎರಡು ದಿನದಲ್ಲಿ ಮೊದಲ ಸಭೆ’:‘ಹೊಸದಾಗಿ ರಚನೆಯಾಗಿರುವ ಕರ್ನಾಟಕ ಬಂದರು ಮತ್ತು ಒಳನಾಡು ಸಾರಿಗೆ ಮಂಡಳಿಗೆ ಮುಖ್ಯಮಂತ್ರಿಯೇ ಅಧ್ಯಕ್ಷರು. ಬಂದರು ಇಲಾಖೆ ಸಚಿವರು ಉಪಾಧ್ಯಕ್ಷರು. ನಿಗಮದ ಮೊದಲ ಸಭೆಯು ಎರಡು, ಮೂರು ದಿನಗಳಲ್ಲಿ ನಡೆಯಲಿದೆ’ ಎಂದು ಕಪಿಲ್ ಮೋಹನ್ ತಿಳಿಸಿದರು.

‘ಮಂಡಳಿಯ ಕೇಂದ್ರ ಕಚೇರಿಯನ್ನು ಕಾರವಾರದಲ್ಲೇ ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದಕ್ಕೆ ಸ್ವಲ್ಪ ಜಮೀನಿನ ಅಗತ್ಯವಿದ್ದು, ಇದಕ್ಕಾಗಿ ಕಳುಹಿಸಿದ ಪ್ರಸ್ತಾವವು ಜಿಲ್ಲಾಧಿಕಾರಿ ಬಳಿಯಿದೆ. ಅದನ್ನು ಕೂಡಲೇ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಿ’ ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾತನಾಡಿ, ‘ಸರ್ಕಾರದ ವಿವಿಧ ಯೋಜನೆಗಳಿಂದಾಗಿ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಸಾಧ್ಯತೆಗಳಿವೆ. ಇಲ್ಲಿರುವ ಅವಕಾಶಗಳನ್ನು ತೆರೆದಿಡಲು ಇದೊಂದು ಸಂದರ್ಭವಾಗಿದೆ. ಅಭಿವೃದ್ಧಿ ಕಾರ್ಯಗಳಿಗೆ ಎಲ್ಲರೂ ಸಹಕರಿಸಬೇಕು’ ಎಂದು ಮನವಿ ಮಾಡಿದರು.

ಬೆಂಗಳೂರಿನ ಮೈಸೂರು ಮರ್ಕಂಡೈಲ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಎಚ್.ಎಸ್.ಶೆಟ್ಟಿ ಮಾತನಾಡಿ, ‘ಕಾರವಾರ ಬಂದರಿನಲ್ಲಿ ಮೂಲ ಸೌಕರ್ಯಗಳ ಕೊರತೆಯಿಂದ ಹೆಚ್ಚಿನ ವ್ಯವಹಾರ ನಡೆಸಲು ಸಮಸ್ಯೆಯಾಗುತ್ತಿದೆ. ಕಾರ್ಮಿಕರು, ಸರಕು ನಿರ್ವಹಣೆ ವ್ಯವಸ್ಥೆ, ಸಂಪರ್ಕ ಸಮಸ್ಯೆಗಳಿವೆ. ಇವುಗಳನ್ನು ಬಗೆಹರಿಸಲು ಸರ್ಕಾರಕ್ಕೂ ಇಚ್ಛಾಶಕ್ತಿಯಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೋವಿಡ್ ಸಂದರ್ಭದಲ್ಲಿ ಬಂದ ಹಡಗುಗಳಲ್ಲಿದ್ದ ಸಿಬ್ಬಂದಿಯ ಆರೋಗ್ಯ ತಪಾಸಣೆ ಮಾಡಿದ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ‘ನಾವಿಕ ದಿನಾಚರಣೆ’ ಅಂಗವಾಗಿ ಹಮ್ಮಿಕೊಂಡ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಅಲ್ಲದೇ ಕಾರವಾರ ಬಂದರಿನಲ್ಲಿ ಹೆಚ್ಚು ವಹಿವಾಟು ಮಾಡಿದ ಉದ್ಯಮಿಗಳನ್ನು ಗೌರವಿಸಲಾಯಿತು.

ಬಂದರು ಇಲಾಖೆ ನಿರ್ದೇಶಕ ಕ್ಯಾಪ್ಟನ್ ಸಿ.ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಕ್ಯಾಪ್ಟನ್ ಸೂರ್ಯಪ್ರಕಾಶ, ಕ್ಯಾಪ್ಟನ್ ಸಾಯ್ ವುನ್ ವಿನ್, ಬಂದರು ಅಧಿಕಾರಿ ಕ್ಯಾಪ್ಟನ್ ಅರುಣ್ ಗಾಂವ್ಕರ್ ವೇದಿಕೆಯಲ್ಲಿದ್ದರು.

*****

ಒಂದು ವರ್ಷದ ಪ್ರಮುಖಾಂಶಗಳು

* ₹ 36.05 ಕೋಟಿ ವೆಚ್ಚದಲ್ಲಿ ಬಂದರಿನ ಹೂಳೆತ್ತುವ ಕಾಮಗಾರಿ

* ₹ 15.75 ವೆಚ್ಚದಲ್ಲಿ ಅಗ್ನಿ ಶಾಮಕ ವ್ಯವಸ್ಥೆಯ ಅಳವಡಿಕೆ

* ₹ 45.43 ಲಕ್ಷ ವೆಚ್ಚದಲ್ಲಿ ಸ್ವಯಂ ಚಾಲಿತ ಹಡಗು ಪತ್ತೆ ಮತ್ತು ರಾಡಾರ್ ವ್ಯವಸ್ಥೆ

* ಈ ಕಾಮಗಾರಿಗಳಿಗೆ ಈಗಾಗಲೇ ಕಾರ್ಯಾದೇಶ ಜಾರಿಯಾಗಿದೆ.

*****

ಕಾರವಾರ ಬಂದರಿನ ಸಾಧನೆ (2020– 21)

ಬಂದ ಹಡಗುಗಳು: 133

ಒಟ್ಟು ಆಮದಾದ ಸರಕು: 4.85 ಲಕ್ಷ ಟನ್

ಒಟ್ಟು ರಫ್ತಾದ ಸರಕು: 2.63 ಲಕ್ಷ ಟನ್

ನಿರ್ವಹಿಸಲಾದ ಒಟ್ಟು ಸರಕು: 7.49 ಲಕ್ಷ ಟನ್

ಒಂದು ವರ್ಷದ ಆದಾಯ: ₹ 15.21 ಕೋಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT