ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರು ರಾಜಕಾರಣದಿಂದ ದೂರವಿರಿ

ಮಕ್ಕಳಿಗೆ ತೊಂದರೆಯಾಗದಂತೆ ಕೆಲಸ ನಿರ್ವಹಿಸಿ: ಸಚಿವ ವೈದ್ಯ ಸೂಚನೆ
Published 8 ಜೂನ್ 2023, 13:06 IST
Last Updated 8 ಜೂನ್ 2023, 13:06 IST
ಅಕ್ಷರ ಗಾತ್ರ

ಭಟ್ಕಳ: ‘ಶಿಕ್ಷಕರು ರಾಜಕಾರಣ ಮಾಡುವುದನ್ನು ಬಿಡಬೇಕು. ರಾಜಕಾರಣ ಮಾಡುವುದರಿಂದ ಶಿಕ್ಷಕರಿಗೇ ತೊಂದರೆ ಆಗಲಿದೆ’ ಎಂದು ಸಚಿವ ಮಂಕಾಳ ವೈದ್ಯ ಹೇಳಿದರು.

ಪಟ್ಟಣದ ಅರ್ಬನ್ ಬ್ಯಾಂಕ್ ಸಭಾಂಗಣದಲ್ಲಿ ತಾಲ್ಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ಮುಖ್ಯಶಿಕ್ಷಕರೊಂದಿಗೆ ಗುರುವಾರ ಸಭೆ ಅವರು ನಡೆಸಿದರು. ‘ಶಿಕ್ಷಕರು ಶಾಲೆಯಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ನಿಮ್ಮ ಜೊತೆಗೆ ನಾನಿದ್ದೇನೆ’ ಎಂದರು.

‘ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸಿ ಅವರಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ತಾವಿರುವ ಶಾಲೆಯನ್ನು ತಮ್ಮದೇ ಶಾಲೆಯೆಂದು ತಿಳಿದು ಊರವರ ಸಹಕಾರದಿಂದ ಅಭಿವೃದ್ಧಿಪಡಿಸಬೇಕು’ ಎಂದರು.

‘ಶಾಲೆಗಳಲ್ಲಿ ಯಾವುದೇ ರೀತಿಯ ತೊಂದರೆ, ಮೂಲಸೌಕರ್ಯಗಳ ಕೊರತೆ ಇದ್ದರೂ ಸರಿಪಡಿಸಿಕೊಡುತ್ತೇನೆ. ರಾಜ್ಯದಲ್ಲಿ ನಮ್ಮ ಕ್ಷೇತ್ರದ ಶಾಲೆಗಳು ಮಾದರಿಯಾಗಬೇಕೆನ್ನುವುದು ನನ್ನ ಬಯಕೆ’ ಎಂದರು.

ತಾಲ್ಲೂಕು ಪಂಚಾಯತ್ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಚಿಕ್ಕನಮನೆ, ಪ್ರಭಾರ ಕ್ಷೇತ್ರಶಿಕ್ಷಣಾಧಿಕಾರಿ ಶಾರದಾ ನಾಯಕ ಇದ್ದರು.

‘ಅಡುಗೆ ಅನಿಲದ ಅನುದಾನ ಸರಿಯಾಗಿ ಬಿಡುಗಡೆ ಆಗುತ್ತಿಲ್ಲ. ಕೆಲವು ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದು, ಅತಿಥಿ ಶಿಕ್ಷಕರ ನೇಮಕ ಮಾಡಿಲ್ಲ. ಗುರುಭವನಕ್ಕೆ ಜಾಗ ಮಂಜೂರಿಯಾಗಿದ್ದು ಕಟ್ಟಡಕ್ಕೆ ಅನುದಾನ ಒದಗಿಸಬೇಕು. ಶಾಲಾ ಶಿಕ್ಷಕರನ್ನು ಬಿಎಲ್‌ಒ ಕರ್ತವ್ಯಕ್ಕೆ ನಿಯೋಜಿಸುವುದರಿಂದ ಶಿಕ್ಷಕರಿಗೆ ಕೆಲಸದ ಹೊರೆ ಜಾಸ್ತಿಯಾಗುತ್ತಿದೆ’ ಹೀಗೆ ಹಲವು ವಿಷಯಗಳನ್ನು ಶಿಕ್ಷಕರು ಸಭೆಯ ಗಮನಕ್ಕೆ ತಂದರು.

‘ಮಲ್ಲಾರಿ ಶಾಲೆ ಕಳೆದ ಮಳೆಗಾಲದಲ್ಲಿ ಸಂಪೂರ್ಣ ಶಿಥಿಲವಾಗಿದ್ದು ಸ್ಥಳಕ್ಕೆ ಜಿಲ್ಲಾಧಿಕಾರಿ ಬಂದು ಹೋದರೂ ಯಾವುದೇ ಕ್ರಮ ಆಗಿಲ್ಲ. ಮಕ್ಕಳ ಹಿತದೃಷ್ಟಿಯಿಂದ ಕೂಡಲೇ ಶಾಲೆ ಕಟ್ಟಡ ನಿರ್ಮಿಸಬೇಕು’ ಎಂದು ಆಗ್ರಹಿಸಲಾಯಿತು.

‘ಅರಣ್ಯ ಜಾಗದಲ್ಲಿದ್ದ ಹಲವು ಶಾಲೆಗಳಿಗೆ ಹಕ್ಕು ಪತ್ರ ನೀಡಲಾಗಿದೆ. ಆದರೆ ಪಹಣಿ ಪತ್ರಿಕೆಯಲ್ಲಿ ಶಾಲೆ ಹೆಸರು ದಾಖಲಾಗಿಲ್ಲ’ ಎಂದು ಹಲವು ಮುಖ್ಯಶಿಕ್ಷಕರು ಸಚಿವರ ಗಮನಕ್ಕೆ ತಂದರು.

ಶಾಲೆಗೂ ಬೇಕು ‘ಗ್ಯಾರಂಟಿ’ ‘ಶಾಲೆಗಳಲ್ಲಿ ಕುಡಿಯುವ ನೀರೆತ್ತುವ ಯಂತ್ರ ಇರುವುದರಿಂದ ವಿದ್ಯುತ್ ಬಿಲ್ ಹೆಚ್ಚಾಗಿ ಬರುತ್ತಿದೆ. ಸರ್ಕಾರದ ‘ಗ್ಯಾರಂಟಿ’ ಯೋಜನೆಯಲ್ಲಿ ಶಾಲೆಗಳನ್ನೂ ಸೇರ್ಪಡೆ ಮಾಡಬೇಕು’ ಎಂದು ಶಿಕ್ಷಕರೊಬ್ಬರು ಸಚಿವರ ಮುಂದೆ ವಿಷಯ ಪ್ರಸ್ತಾಪಿಸಿದರು. ಸಚಿವರು ‘ಇದೊಂದು ಉತ್ತಮ ವಿಚಾರ’ ಎಂದರೂ ಈ ಪ್ರಸ್ತಾವದಿಂದ ಸರ್ಕಾರಕ್ಕೆ ಹೊರೆಯಾಗಬಹುದು ಎಂದು ‘ಶಾಲೆಗಳ ಅಭಿವೃದ್ಧಿಗೆ ಶಿಕ್ಷಕರ ಪಾತ್ರವೂ ಮುಖ್ಯ’ ಎಂದಷ್ಟೇ ಹೇಳಿ ಸುಮ್ಮನಾದರು. ಕೆಲವು ಶಿಕ್ಷಕರು ‘ಗ್ಯಾರಂಟಿ ಯೋಜನೆ ಸೌಲಭ್ಯ ಸರ್ಕಾರಿ ನೌಕರರಿಗೆ ಬೇಡ. ಆದರೆ ಶಾಲೆಗಳಲ್ಲಿನ ವಿದ್ಯುತ್ ಬಿಲ್ ಅನ್ನು ಗ್ಯಾರಂಟಿ ಯೋಜನೆಯಡಿ ತಂದರೆ ಉತ್ತಮವಾದೀತು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT