ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಡವರ ಸೇವೆ ಮಾಡುವುದೇ ನಿಜವಾದ ಜೀವನ: ಶಾಸಕ ಶಿವರಾಮ ಹೆಬ್ಬಾರ್‌

ಕ್ರಿಸ್‌ಮಸ್‌ ಕಾರ್ಯಕ್ರಮ
Published 23 ಡಿಸೆಂಬರ್ 2023, 14:03 IST
Last Updated 23 ಡಿಸೆಂಬರ್ 2023, 14:03 IST
ಅಕ್ಷರ ಗಾತ್ರ

ಮುಂಡಗೋಡ: ‘ಜೀವನದಲ್ಲಿ ಹಣ ಗಳಿಸುವುದು ಮುಖ್ಯವಲ್ಲ. ಆದರೆ, ಗಳಿಸಿದ ಹಣದಲ್ಲಿ ಬಡವರಿಗೆ ಕೈಲಾದಷ್ಟು ಸಹಾಯ ಮಾಡಿದಾಗ ಜೀವನ ಸಾರ್ಥಕವಾಗುತ್ತದೆ. ಬಡವರ ಸೇವೆ ಮಾಡುವುದೇ ನಿಜವಾದ ಧರ್ಮ ಪಾಲನೆ ಮಾಡಿದಂತಾಗುತ್ತದೆ’ ಎಂದು ಶಾಸಕ ಶಿವರಾಮ ಹೆಬ್ಬಾರ್‌ ಹೇಳಿದರು.

ತಾಲ್ಲೂಕಿನ ಇಂದೂರ ಗ್ರಾಮದಲ್ಲಿ ಶುಕ್ರವಾರ ಸಂಜೆ ಬೆಥೆಸ್ಥಾ ಚಾರಿಟೇಬಲ್‌ ಟ್ರಸ್ಟ್‌ ವತಿಯಿಂದ ಆಯೋಜಿಸಿದ್ದ ಕ್ರಿಸ್‌ಮಸ್‌ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಎಲ್ಲ ಧರ್ಮಗಳು ಸಮಾನತೆಯ ಸಂದೇಶ ಸಾರಿವೆ. ಅದನ್ನು ಅಳವಡಿಸಿಕೊಂಡು ಜೀವನ ನಡೆಸಬೇಕು. ಒಳ್ಳೆಯ ಕೆಲಸ ಮಾಡುವಾಗ ಜಾತಿ, ಧರ್ಮದ ಪ್ರಶ್ನೆಯೇ ಬರುವುದಿಲ್ಲ. ಸಮಾಜದಲ್ಲಿ ಬಡವ ಶ್ರೀಮಂತ ಎಂಬ ಬೇಧ–ಭಾವ ದೂರಾಗಿ ಎಲ್ಲರೂ ಒಂದಾಗಿ ಬದುಕಬೇಕು. ಆಗ ಮಾತ್ರ ಬದುಕಿಗೆ ಸಾರ್ಥಕತೆ ಸಿಗುತ್ತದೆ’ ಎಂದರು.

‘ಬಡತನ, ನಿರುದ್ಯೋಗ ಹಾಗೂ ಅನಕ್ಷರತೆಯು ಸಮಾಜವನ್ನು ಹಿಂದಿನಿಂದಲೂ ಕಾಡುತ್ತಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ, ಅವರನ್ನು ವಿದ್ಯಾವಂತರನ್ನಾಗಿ ಮಾಡುವ ಮೂಲಕ ಸಮಾಜಕ್ಕೆ ಅಂಟಿರುವ ಈ ಮೂರು ರೋಗಗಳಿಂದ ಮುಕ್ತಿ ನೀಡಬಹುದು. ಬೆಥೆಸ್ಥಾ ಟ್ರಸ್ಟ್‌ನವರು ಸಮಾಜ ಉಪಯೋಗಿ ಕೆಲಸಗಳನ್ನು ಮಾಡುತ್ತ, ಸೌಹಾರ್ದತೆಯ ಸಂದೇಶ ನೀಡುತ್ತಿದ್ದಾರೆ’ ಎಂದು ಹೇಳಿದರು.

ಹೊಲಿಗೆ ತರಬೇತಿ ಪಡೆದ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ಉಚಿತವಾಗಿ ನೀಡಲಾಯಿತು. ಕೆಡಿಸಿಸಿ ಬ್ಯಾಂಕ್‌ ನಿರ್ದೇಶಕ ಎಲ್‌.ಟಿ.ಪಾಟೀಲ, ಬೆಥೆಸ್ಥಾ ಚಾರಿಟೇಬಲ್‌ ಟ್ರಸ್ಟ್‌ ಅಧ್ಯಕ್ಷ ಸಾಜಿ ಥಾಮಸ್‌ ಪರೇಲ್‌ ಮಾತನಾಡಿದರು.

ಇಂದೂರ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಶಿಧರ ಪರವಾಪುರ, ಬಿಜು ಥಾಮಸ್‌, ಸನ್ನಿ ಜಾರ್ಜ್‌, ಇಬು ಜಾಯ್‌, ಜಿಜಿ ಪರೇಲ್‌, ಬಿಜೆಪಿ ಮಂಡಲ ಅಧ್ಯಕ್ಷ ನಾಗಭೂಷಣ ಹಾವಣಗಿ, ರವಿಗೌಡ ಪಾಟೀಲ, ಬಿ.ಕೆ.ಪಾಟೀಲ, ಸಲು ಜಾರ್ಜ್‌, ಬಿಜು ಪರೇಲ್‌, ಸಿದ್ಧು ಹಡಪದ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT