ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಬಹುಮುಖ ಪ್ರತಿಭೆಯ ‘ಶ್ರೇಯ’

ಭರತನಾಟ್ಯ, ಚಿತ್ರಕಲೆ, ನಟನೆಯಲ್ಲಿ ಛಾಪು ಮೂಡಿಸುವ ಬಾಲಕಿ
Last Updated 13 ನವೆಂಬರ್ 2022, 19:30 IST
ಅಕ್ಷರ ಗಾತ್ರ

ಶಿರಸಿ: ‘ಮಕ್ಕಳ ಕೈನಿಂದ ಮೊಬೈಲ್ ದೂರ ಮಾಡಬೇಕು ಎಂಬ ಚಿಂತೆ ಬಹುತೇಕ ಪಾಲಕರನ್ನು ಈಚೆಗೆ ಕಾಡುತ್ತಿದೆ. ಆದರೆ, ತಾಲ್ಲೂಕಿನ ಮುಂಡಿಗೇಸರದ ಬಾಲಕಿಯೊಬ್ಬಳ ಪಾಲಕರಿಗೆ ಇಂತಹ ಚಿಂತೆಯ ಬದಲು ಮಗಳು ಇನ್ಯಾವ ಕಲೆಯಲ್ಲಿ ಪರಿಣಿತಿ ಸಾಧಿಸಬಹುದು ಎಂಬ ಕುತೂಹಲ ಕಾಡುತ್ತದೆ.

ಅಷ್ಟರಮಟ್ಟಿಗೆ ಹಲವು ಕಲೆ, ಹವ್ಯಾಸದಲ್ಲಿ ನೈಪುಣ್ಯತೆ ಸಾಧಿಸಿರುವುದು ಎಂ.ವಿ.ಶ್ರೇಯಾ ಸಾಧನೆ. ಮುಂಡಿಗೇಸರದ ವಿಶ್ವೇಶ್ವರ ಹೆಗಡೆ, ಶಶಿಕಲಾ ಎಸ್. ಶಿಕ್ಷಕ ದಂಪತಿಯ ಪುತ್ರಿಯಾಗಿರುವ ಈಕೆ ನಗರದ ಸರ್ಕಾರಿ ಮಾರಿಕಾಂಬಾ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ.

ಚಿಕ್ಕ ವಯಸ್ಸಿಗೆ ಭರತನಾಟ್ಯ ಕಲೆಯಲ್ಲಿ ಪ್ರೌಢಿಮೆ ಸಾಧಿಸಿರುವುದು ಈಕೆ, ನೃತ್ಯ ಗುರು ಸೀಮಾ ಭಾಗ್ವತ್ ಬಳಿ ಭರತನಾಟ್ಯ ಸೀನಿಯರ್ ತರಬೇತಿ ಪೂರ್ಣಗೊಳಿಸಿದ್ದಾಳೆ. ಐದನೆ ವಯಸ್ಸಿಗೆ ಭರತನಾಟ್ಯ ಕಲೆಯಿಂದ ಆಕರ್ಷಿಗೊಂಡು ಸಣ್ಣ ವಯಸ್ಸಿಗೆ ಭರತನಾಟ್ಯ ಹೆಜ್ಜೆ ರೂಢಿಸಿಕೊಳ್ಳುವ ಪ್ರಯತ್ನ ಮಾಡಿದ್ದಳು. ಹಲವು ವೇದಿಕೆಯಲ್ಲಿ ಪ್ರತಿಭೆ ಪ್ರದರ್ಶನ ನೀಡಿದ್ದಾಳೆ.

ರಂಗಭೂಮಿ ಚಟುವಟಿಕೆಯಲ್ಲೂ ತೊಡಗಿಸಿಕೊಂಡಿರುವ ಶ್ರೇಯಾ ನಟನೆಯಲ್ಲಿ ತೋರುವ ಚಾಕಚಕ್ಯತೆ ಪ್ರೇಕ್ಷಕರನ್ನು ನಿಬ್ಬೆರಗುಗೊಳಿಸಿದೆ. ಯಕ್ಷಗಾನ ಕಲೆಯತ್ತಲೂ ಒಲವು ಬೆಳೆಸಿಕೊಂಡು ಅದನ್ನೂ ಕಲಿತಿದ್ದಾಳೆ. ಪ್ರೌಢಶಾಲೆಗಳ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಯಕ್ಷಗಾನ ಹೆಜ್ಜೆ ಹಾಕಿ ಪ್ರಶಸ್ತಿ ಗಳಿಸುವ ಮೂಲಕ ಈ ಕಲೆಯಲ್ಲೂ ಸೈ ಎನಿಸಿಕೊಂಡಿದ್ದಾಳೆ.

ಹಳೆಯ ಸಿ.ಡಿ., ಕಲ್ಲು, ಗೋಡೆ ಹೀಗೆ ಅವಕಾಶ ಸಿಕ್ಕ ಕಡೆಯಲ್ಲಿ ಅಂದದ ಚಿತ್ರ ಬಿಡಿಸುವ ಹವ್ಯಾಸವೂ ಅಂಟಿಕೊಂಡಿದೆ. ಶ್ರೇಯಾ ಶೈಕ್ಷಣಿಕ ಸಾಧನೆಯಲ್ಲೂ ಹಿಂದೆ ಬಿದ್ದಿಲ್ಲ. ಪ್ರತಿ ವರ್ಷ ತರಗತಿಯಲ್ಲಿ ಮೊದಲ ರ‍್ಯಾಂಕ್‍ ಗಳಿಕೆ ವಿಶೇಷವಾಗಿದೆ.

‘ಮಗಳು 20ಕ್ಕೂ ಹೆಚ್ಚು ಕಲೆ, ಹವ್ಯಾಸಗಳಲ್ಲಿ ನೈಪುಣ್ಯತೆ ಸಾಧಿಸುತ್ತಿದ್ದಾಳೆ. ಬಿಡುವಿನ ಸಮಯವನ್ನು ಸಾಧನೆಗೆ ಬಳಸಿಕೊಳ್ಳುವೆ ಎಂಬ ಆಕೆಯ ಛಲ ನಮಗೂ ಸ್ಫೂರ್ತಿ. ಸ್ಪರ್ಧೆಗಳಲ್ಲಿ ಜಯಿಸಿದ ಪಾರಿತೋಷಕ ಲೆಕ್ಕವಿಡಲು ಆಗುತ್ತಿಲ್ಲ’ ಎಂದು ಖುಷಿ ಹಂಚಿಕೊಳ್ಳುತ್ತಾರೆ ತಾಯಿ ಶಶಿಕಲಾ ಎಸ್.

***

ಭರತನಾಟ್ಯ ಕ್ಷೇತ್ರದಲ್ಲಿ ಸಾಧನೆ ಮಾಡುವ ಜತೆಗೆ ವೈದ್ಯೆಯಾಗಿ ಸಮಾಜಕ್ಕೆ ಸೇವೆ ಸಲ್ಲಿಸಬೇಕು ಎಂಬ ಕನಸು ಇಟ್ಟುಕೊಂಡಿದ್ದೇನೆ.

ಎಂ.ವಿ.ಶ್ರೇಯಾ,ಬಾಲ ಪ್ರತಿಭೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT