ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಡಗೋಡ: ಪಟ್ಟಣದ ಹೊರವಲಯದಲ್ಲಿ ಚಿರತೆ ಪ್ರತ್ಯಕ್ಷ

Published 6 ಆಗಸ್ಟ್ 2023, 14:12 IST
Last Updated 6 ಆಗಸ್ಟ್ 2023, 14:12 IST
ಅಕ್ಷರ ಗಾತ್ರ

ಮುಂಡಗೋಡ: ಪಟ್ಟಣದ ಹೊರವಲಯದ ಕಲಘಟಗಿ ರಸ್ತೆ ಪಕ್ಕದಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಅರಣ್ಯ ಸಿಬ್ಬಂದಿ ಚಿರತೆಯ ಹೆಜ್ಜೆ ಗುರುತು ಹಿಂಬಾಲಿಸಿ, ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಧ್ವನಿವರ್ಧಕದ ಮೂಲಕ ಮಾಹಿತಿ ನೀಡಿದ್ದಾರೆ.

ಸ್ಮಶಾನದ ಕಾಂಪೌಂಡ್‌ ಗೋಡೆಯೊಂದರ ಮೇಲೆ ಶನಿವಾರ ಸಂಜೆ ಚಿರತೆ ಓಡಾಡುತ್ತಿರುವುದನ್ನು ದಾರಿಹೋಕರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ, ಚಿರತೆ ಓಡಾಟ ಖಚಿತಪಡಿಸಿಕೊಳ್ಳಲು ಭಾನುವಾರು ವಲಯ ಅರಣ್ಯ ಅಧಿಕಾರಿ ಸುರೇಶ ಕುಲ್ಲೊಳ್ಳಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಈ ವೇಳೆ ಗೋವಿನಜೋಳದ ಗದ್ದೆಯಲ್ಲಿ ಚಿರತೆ ಓಡಾಡಿರುವ ಹೆಜ್ಜೆ ಗುರುತು ಪತ್ತೆಯಾಗಿದ್ದು, ವೈರಲ್‌ ಆಗಿರುವ ವಿಡಿಯೊ ಇದೇ ಜಾಗದ್ದು ಎಂದು ಅರಣ್ಯ ಸಿಬ್ಬಂದಿ ಖಚಿತಪಡಿಸಿದ್ದಾರೆ.

ಪಟ್ಟಣದ ಹೊರವಲಯದ ಬಂಕಾಪುರ ರಸ್ತೆಯ ಸಿಟಿ ಫಾರ್ಮ್‌ ಹಾಗೂ ಎಪಿಎಂಸಿ ಸಮೀಪ ಕೆಲವು ತಿಂಗಳುಗಳ ಹಿಂದೆ ಚಿರತೆ ಪ್ರತ್ಯಕ್ಷವಾಗಿರುವ ಬಗ್ಗೆ ಬೈಕ್‌ ಸವಾರರು ದೂರಿದ್ದರು. ಈಗ ಕಲಘಟಗಿ ರಸ್ತೆ ಸಮೀಪ ಚಿರತೆ ಕಂಡುಬಂದಿದೆ. ಒಂದೇ ಚಿರತೆಯು ಪಟ್ಟಣದ ಹೊರವಲಯದ ಕಾಡಿನಲ್ಲಿ ಸಂಚರಿಸುತ್ತಿದ್ದು, ಕೆಲವೊಮ್ಮೆ ರಸ್ತೆ ಪಕ್ಕ ಪ್ರತ್ಯಕ್ಷವಾಗುತ್ತಿರಬಹುದು ಎಂದು ಶಂಕಿಸಲಾಗಿದೆ.

ʼಚಿರತೆ ಪ್ರತ್ಯಕ್ಷವಾಗಿರುವುದು ಖಚಿತವಾಗುತ್ತಿದ್ದಂತೆ ಧ್ವನಿವರ್ಧಕದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಗದ್ದೆಯಲ್ಲಿ ಕೆಲಸ ಮಾಡುವಾಗ ಕಾಡುಪ್ರಾಣಿಗಳು ಕಂಡು ಬಂದರೆ ಅಥವಾ ಕಾಡು ಪ್ರಾಣಿಗಳ ಹೆಜ್ಜೆ ಗುರುತು ಮೂಡಿರುವುದು ಕಂಡಕೂಡಲೇ ಸ್ಥಳೀಯ ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಬೇಕು’  ಎಂದು ವಲಯ ಅರಣ್ಯಾಧಿಕಾರಿ ಸುರೇಶ ಕುಲ್ಲೊಳ್ಳಿ ತಿಳಿಸಿದ್ದಾರೆ.

‘ಕಲಘಟಗಿ ರಸ್ತೆ ಪಕ್ಕ ಪ್ರತ್ಯಕ್ಷವಾಗಿರುವ ಚಿರತೆ ಒಂದೇ ಸ್ಥಳದಲ್ಲಿ ಇರುವುದಿಲ್ಲ. ಮುಂದೆ ಸಂಚರಿಸಿರುತ್ತದೆ. ಆದರೂ,  ಪಾದಚಾರಿಗಳು, ಬೈಕ್‌ ಸವಾರರು ಆ ಮಾರ್ಗದಲ್ಲಿ ಸಂಚರಿಸುವಾಗ ತುಸು ಎಚ್ಚರಿಕೆ ವಹಿಸಬೇಕು. ಚಿರತೆಯಿಂದ ಇಲ್ಲಿಯವರೆಗೂ ಯಾವುದೇ ತೊಂದರೆಯಾಗಿಲ್ಲʼ ಎಂದು ಅವರು ಹೇಳಿದರು.

ಚಿರತೆ ಪ್ರತ್ಯಕ್ಷವಾಗಿರುವ ಸ್ಥಳದ ಆಸುಪಾಸಿನಲ್ಲಿ ಉಪವಲಯ ಅರಣ್ಯಾಧಿಕಾರಿ ಗಿರೀಶ ಕೋಳೂರ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿದರು.

ಗೋವಿನಜೋಳದ ಗದ್ದೆಯಲ್ಲಿ ಕಂಡುಬಂದಿರುವ ಚಿರತೆಯ ಹೆಜ್ಜೆಗುರುತು
ಗೋವಿನಜೋಳದ ಗದ್ದೆಯಲ್ಲಿ ಕಂಡುಬಂದಿರುವ ಚಿರತೆಯ ಹೆಜ್ಜೆಗುರುತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT