ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಎನ್.ಸಿ.ಸಿ ಕೆಡೆಟ್‌ಗಳಿಗೆ ಸಮುದ್ರಯಾನ ತರಬೇತಿ

Last Updated 23 ಸೆಪ್ಟೆಂಬರ್ 2022, 16:15 IST
ಅಕ್ಷರ ಗಾತ್ರ

ಕಾರವಾರ: ‘ಎನ್.ಸಿ.ಸಿ.ಯಲ್ಲಿ ‘ಸಿ’ ಪ್ರಮಾಣಪತ್ರ ‍ಪಡೆದವರಿಗೆ ಸಶಸ್ತ್ರ ಪಡೆಗಳಲ್ಲಿ ನೇಮಕಾತಿಗೆ ಅವಕಾಶಗಳು ಹೆಚ್ಚಿವೆ. ಅವರಿಗೆ ಸಂದರ್ಶನಗಳಿಗೆ ಹಾಜರಾಗಲು ಇತರರಿಗಿಂತ ಜಾಸ್ತಿ ಆದ್ಯತೆ ಸಿಗುತ್ತದೆ’ ಎಂದು ನೌಕಾಪಡೆಯ ಕರ್ನಾಟಕ ನೌಕಾ ವಲಯದ ಉಸ್ತುವಾರಿ ಅಧಿಕಾರಿ (ಎನ್.ಒ.ಐ.ಸಿ) ಕಮೊಡೋರ್ ವಿವೇಕ ಹೊಟ್ಟಿ ತಿಳಿಸಿದರು.

ಎನ್.ಸಿ.ಸಿ ಕೆಡೆಟ್‌ಗಳಿಗೆ ಹಮ್ಮಿಕೊಳ್ಳಲಾಗಿರುವ ಸಮುದ್ರಯಾನ ತರಬೇತಿ ಶಿಬಿರಕ್ಕೆ ಶುಕ್ರವಾರ ಸದಾಶಿವಗಡದ ‘ಜೆತ್ನಾ’ ಆವರಣದಲ್ಲಿ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಶಸ್ತ್ರ ಪಡೆಗಳಲ್ಲಿ ನೇಮಕಾತಿಗೆ ಸಂದರ್ಶನಕ್ಕೆ ಇತರ ಅಭ್ಯರ್ಥಿಗಳಾಗಿ ಭಾಗವಹಿಸುವವರಿಗೆ ಸ್ಪರ್ಧೆ ಬಹಳಷ್ಟಿದೆ. ವಿವಿಧ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಆದರೆ, ಎನ್.ಸಿ.ಸಿ.ಯ ಕೆಡೆಟ್‌ಗಳಿಗೆ ಪ್ರಾರಂಭಿಕ ತರಬೇತಿಗಳು ಆಗಿರುವ ಕಾರಣ ಆದ್ಯತೆ ನೀಡಲಾಗುತ್ತದೆ’ ಎಂದು ತಿಳಿಸಿದರು.

‘ಸಮುದ್ರದಲ್ಲಿ ಅಲೆಗಳ ನಡುವೆ ದೋಣಿಯನ್ನು ಸಾಗಿಸುವುದು ಹೊಸ ಅನುಭವ ನೀಡುತ್ತದೆ. ಗಾಳಿ ಮತ್ತು ಅಲೆಗಳಿಗೆ ಹೊಂದಾಣಿಕೆ ಮಾಡಿಕೊಂಡು ಸಮುದ್ರಯಾನ ಮಾಡುವುದು, ಸಾಮರ್ಥ್ಯವನ್ನು ಪರೀಕ್ಷೆಗೆ ಹಚ್ಚುವ ಇಂಥ ಅವಕಾಶಗಳು ಸಿಗುವುದು ಕಡಿಮೆ. ಎನ್.ಸಿ.ಸಿ ಸೇರಿಕೊಂಡಿರುವ ಕಾರಣ ನೀವೆಲ್ಲ ಇತರ ವಿದ್ಯಾರ್ಥಿಗಳಿಗಿಂತ ಮುನ್ನೆಲೆಯಲ್ಲಿ ಇರುತ್ತೀರಿ’ ಎಂದು ಹೇಳಿದರು.

ಕಾರವಾರದಲ್ಲಿ ಮೊದಲು:

ಪ್ರತಿ ವರ್ಷ ಗೋವಾದಲ್ಲಿ ನಡೆಯುತ್ತಿದ್ದ ಈ ತರಬೇತಿ ಶಿಬಿರವು ಇದೇ ಮೊದಲ ಬಾರಿಗೆ ಕಾರವಾರದಲ್ಲಿ ಆಯೋಜನೆಯಾಗಿದೆ.

10 ದಿನ ನಡೆಯುವ ಈ ಶಿಬಿರದಲ್ಲಿ ಉತ್ತರ ಕನ್ನಡ, ದಕ್ಷಿಣ ಕನ್ನಡ, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಸುಮಾರು 60 ಎನ್.ಸಿ.ಸಿ ಕೆಡೆಟ್‌ಗಳು ಪಾಲ್ಗೊಂಡಿದ್ದಾರೆ. ತಲಾ 27 ಅಡಿಗಳಷ್ಟು ಉದ್ದದ, ಮೋಟರ್ ಅಳವಡಿಸಿದ ಮೂರು ಹಾಯಿ ದೋಣಿಗಳಲ್ಲಿ 200ಕ್ಕೂ ಹೆಚ್ಚು ಕಿಲೋಮೀಟರ್ ಯಾನ ಮಾಡುವ ಗುರಿ ಹೊಂದಿದ್ದಾರೆ. ತಂಡಗಳಲ್ಲಿ ಕಾಳಿ ನದಿ ಹಾಗೂ ಅರಬ್ಬಿ ಸಮುದ್ರದಲ್ಲಿ ಸಾಗಲಿದ್ದಾರೆ.

ಅಲ್ಲದೇ ಶಿಬಿರಾರ್ಥಿಗಳು ಸೈಕ್ಲಿಂಗ್, ದೋಣಿಗಳಲ್ಲಿ ಪ್ರಯಾಣ ಮತ್ತು ನೌಕಾನೆಲೆಯ ನೌಕೆಗಳ ವೀಕ್ಷಣೆಯನ್ನೂ ಮಾಡಲಿದ್ದಾರೆ.

ಕಾರವಾರದ ‘8 ಕರ್ನಾಟಕ ನೇವಲ್ ಎನ್.ಸಿ.ಸಿ’ ಘಟಕವು ಹಮ್ಮಿಕೊಂಡಿರುವ ಶಿಬಿರದಲ್ಲಿ ಕರ್ನಾಟಕ ಮತ್ತು ಗೋವಾ ಎನ್.ಸಿ.ಸಿ ನಿರ್ದೇಶನಾಲಯಗಳ ವ್ಯಾಪ್ತಿಯ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ‘8 ಕರ್ನಾಟಕ ನೇವಲ್ ಎನ್.ಸಿ.ಸಿ’ಯ ಕಮಾಂಡಿಂಗ್ ಆಫೀಸರ್ ಸತ್ಯನಾಥ ಭೋಸ್ಲೆ, ಕಮಾಂಡರ್ ಭರತ್ ಕುಮಾರ್, ಕಮಾಂಡರ್ ರಿಜಿ, ಸಹಾಯಕ ಅಧಿಕಾರಿಗಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT