ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೇಶ್ ಮೇಸ್ತಾ ಪ್ರಕರಣ: ಕಾಗೇರಿ ಹೇಳಿಕೆಗೆ ಕಾಂಗ್ರೆಸ್ ನಾಯಕರ ಖಂಡನೆ

ಕಾಗೇರಿ ಯಾರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದರು?
Published 27 ಏಪ್ರಿಲ್ 2024, 13:45 IST
Last Updated 27 ಏಪ್ರಿಲ್ 2024, 13:45 IST
ಅಕ್ಷರ ಗಾತ್ರ

ಶಿರಸಿ: ‘ಹೊನ್ನಾವರದ ಪರೇಶ್ ಮೇಸ್ತಾ ಸಾವಿನ ಪ್ರಕರಣದಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ನೀಡಿರುವ ಹೇಳಿಕೆ ಖಂಡನೀಯ. ಅವರಿಂದ ಇಂಥ ಕೀಳುಮಟ್ಟದ ಹೇಳಿಕೆ ನಿರೀಕ್ಷಿಸಿರಲಿಲ್ಲ’ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಕಿಡಿಕಾರಿದರು.

‘ಪರೇಶ್ ಮೇಸ್ತಾ ಪ್ರಕರಣದಲ್ಲಿ ಐಜಿಪಿ ಹೇಮಂತ್ ನಿಂಬಾಳ್ಕರ್ ಹಸ್ತಕ್ಷೇಪವಿತ್ತು’ ಎಂಬ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿಕೆಗೆ ತಾಲ್ಲೂಕಿನ ಹುಲೇಕಲ್‍ನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಪ್ರತಿಕ್ರಿಯಿಸಿದ ಅವರು, ‘ನಾನು ಜಿಲ್ಲಾ ಉಸ್ತುವಾರಿ ಇದ್ದ ಸಂದರ್ಭದಲ್ಲಿ ಪರೇಶ್ ಮೇಸ್ತಾ ಪ್ರಕರಣ ನಡೆದಿತ್ತು. ಆದರೆ ಅದು ಸಹಜ ಸಾವಲ್ಲ, ಕೊಲೆ ಎಂದು ಬಿಜೆಪಿಗರು ಗಲಾಟೆ ಮಾಡಿದರು. ಸ್ಥಳಕ್ಕೆ ನಾನೂ ಭೇಟಿ ನೀಡಿದ್ದೆ, ಇಡೀ ರಾತ್ರಿ ಸಭೆ ಮಾಡಿದ್ದೆ. ಕೆಲವರು ಕಾನೂನು ಸುವ್ಯವಸ್ಥೆ ಕೈಗೆ ತೆಗೆದುಕೊಂಡರು. ಪೊಲೀಸರು‌ ಕರ್ತವ್ಯ ನಿಭಾಯಿಸಿದರು. ಅಂದಿನ ಐಜಿ ಕೂಡ ಹೊನ್ನಾವರಕ್ಕೆ ಬಂದಿದ್ದರು. ಅವರ ಕಾರಿಗೆ ಬೆಂಕಿ ಹಚ್ಚಿದರು. ಸುದೈವವಶಾತ್ ಅವರು ಅಪಾಯದಿಂದ ಪಾರಾಗಿದ್ದರು. ಸಿಬಿಐ ಈ ಪ್ರಕರಣ ಹಸ್ತಾಂತರಿಸಿದಾಗ ಇದು ಸಹಜ ಸಾವು, ಕೊಲೆಯಲ್ಲ ಎಂಬ ವರದಿ ಬಂದು ಎಷ್ಟೋ ವರ್ಷವಾಗಿದೆ. ಆದರೆ ಇಷ್ಟು ವರ್ಷ ಮಲಗಿದ್ದ ಕಾಗೇರಿ ಈಗ ಯಾಕೆ ಎದ್ದರು? ಜವಾಬ್ದಾರಿ ಸ್ಥಾನದಲ್ಲಿರುವ, ಹಿರಿಯ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಇದು ಶೋಭೆ ತರುವುದಿಲ್ಲ. ಅವರಿಂದ ಇಂಥ ಕೀಳು ಮಟ್ಟದ ಹೇಳಿಕೆ ಅಪೇಕ್ಷಿಸಿರಲಿಲ್ಲ’ ಎಂದರು.

ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಮಾತನಾಡಿ, ‘ಪರೇಶ್ ಮೇಸ್ತಾ ಪ್ರಕರಣದಲ್ಲಿ ಹಿಂದುಳಿದ ವರ್ಗಗಳ ಯುವಕರ ಮೇಲೆ ಮಾತ್ರ ಯಾಕೆ ಕೇಸ್ ದಾಖಲಾಯಿತು? ಹೋರಾಟದ ನೇತೃತ್ವ ವಹಿಸಿದ್ದ ಕಾಗೇರಿಯವರಂಥ ನಾಯಕರ ಮೇಲೆ ಯಾಕೆ ಕೇಸ್ ದಾಖಲಾಗಿಲ್ಲ. ಇವರು ಯಾರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದರು?’ ಎಂದು ಪ್ರಶ್ನಿಸಿದರು. 

‘ಮೇಸ್ತಾ ಪ್ರಕರಣದಲ್ಲಿ ನನ್ನ ಗಂಡನ ಮೇಲೆ ಈಗ ಕಾಗೇರಿ ಆರೋಪ ಹೊರಿಸಿದ್ದಾರೆ. ಕಾಗೇರಿ ಅಂದು ಶಾಸಕರಾಗಿದ್ದರು. ನ್ಯಾಯಕ್ಕಾಗಿ ಹೋರಾಟ ನಡೆಸಿದ್ದೆವು ಎನ್ನುತ್ತಾರೆ. ಹಾಗಿದ್ದರೆ ಆ ಪ್ರಕರಣದಲ್ಲಿ ಹಿಂದುಳಿದ ವರ್ಗದ ಯುವಕರ ಮೇಲೆ ಮಾತ್ರ ಯಾಕೆ ಪ್ರಕರಣ ಆಗಿದೆ, ಹೋರಾಟ ನಡೆಸಿದ ನಿಮ್ಮಂಥ ನಾಯಕರ ಮೇಲೆ ಯಾಕೆ ಆಗಿಲ್ಲ?’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT