ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಂಕಣ ರೈಲ್ವೆ:ಶೇ.99 ವಿದ್ಯುತ್ ಚಾಲಿತ ರೈಲು

ವಿದ್ಯುದ್ದೀಕರಣಗೊಂಡ ಹಲವು ತಿಂಗಳ ಬಳಿಕ ಸೌಲಭ್ಯ ಪೂರ್ಣ
Last Updated 10 ಫೆಬ್ರುವರಿ 2023, 16:36 IST
ಅಕ್ಷರ ಗಾತ್ರ

ಕಾರವಾರ: ಮೂರು ರಾಜ್ಯಗಳಲ್ಲಿ ಹಾದುಹೋಗುವ ಕೊಂಕಣ ರೈಲು ಮಾರ್ಗ ಸಂಪೂರ್ಣ ವಿದ್ಯುದ್ದೀಕರಣಗೊಂಡ ಏಳೆಂಟು ತಿಂಗಳ ಬಳಿಕ ಶೇ.99ರಷ್ಟು ರೈಲುಗಳು ವಿದ್ಯುತ್ ಚಾಲಿತವಾಗಿ ಓಡಾಟ ನಡೆಸಲು ಸಿದ್ಧತೆ ನಡೆದಿದೆ.

ಫೆ.12 ರಂದು ಕೊಂಕಣ ರೈಲ್ವೆ ವ್ಯಾಪ್ತಿಯ 12 ರೈಲುಗಳಿಗೆ ವಿದ್ಯುತ್ ಚಾಲಿತ ಲೋಕೊಮೊಟಿವ್ ಅಳವಡಿಕೆ ಆಗುತ್ತಿದೆ. ಇದರೊಂದಿಗೆ ಈ ಮಾರ್ಗದಲ್ಲಿ ಓಡಾಟ ನಡೆಸುವ 60ಕ್ಕೂ ಹೆಚ್ಚು ರೈಲುಗಳು ಸಂಪೂರ್ಣ ವಿದ್ಯುತ್ ಚಾಲಿತವಾಗಿ ಸಂಚರಿಸಲು ಅನುಕೂಲ ಆಗಲಿದೆ. ಸದ್ಯ 45 ರಿಂದ 48 ರಷ್ಟು ರೈಲುಗಳಿಗೆ ಮಾತ್ರ ಎಲೆಕ್ಟ್ರಿಕ್ ಲೋಕೊಮೊಟಿವ್ ಅಳವಡಿಕೆ ಮಾಡಲಾಗಿತ್ತು.

ಲೋಕಮಾನ್ಯ ತಿಲಕ್-ಎರ್ನಾಕುಲಂ-ಲೋಕಮಾನ್ಯತಿಲಕ್ ಎಕ್ಸಪ್ರೆಸ್ (12223/12224), ಪುಣೆ-ಎರ್ನಾಕುಲಂ ಜಂಕ್ಷನ್- ಪುಣೆ ಎಕ್ಸಪ್ರೆಸ್ (22150/22149), ಮುಂಬೈ-ಮಂಗಳೂರು-ಮುಂಬೈ ಎಕ್ಸಪ್ರೆಸ್ (12133/12134), ಸಾವಂತವಾಡಿ ರೋಡ್-ಮಡಗಾಂವ-ಸಾವಂತವಾಡಿ ರೋಡ್ (50107/50108), ಮಡಗಾಂವ-ಮುಂಬೈ-ಮಡಗಾಂವ (11099 /11100), ದೀವಾ-ಸಾವಂತವಾಡಿ ರೋಡ್-ದೀವಾ (10106/10105) ರೈಲುಗಳು ವಿದ್ಯುತ್ ಚಾಲಿತವಾಗಲಿವೆ.

‘ವಿದ್ಯುತ್ ಚಾಲಿತ ಎಂಜಿನ್ ಲಭ್ಯತೆ ಇಲ್ಲದ ಕಾರಣ ಈವರೆಗೆ ದೂರಗಾಮಿ ರೈಲುಗಳನ್ನು ಡೀಸೆಲ್ ಎಂಜಿನ್ ಮೂಲಕ ಓಡಿಸಲಾಗುತ್ತಿತ್ತು. ಸರಕು ಸಾಗಣೆಯ ರೈಲುಗಳನ್ನು ಮಾತ್ರ ವಿದ್ಯುತ್ ಚಾಲಿತವಾಗಿದ್ದವು. ಎಲೆಕ್ಟ್ರಿಕ್ ಲೋಕೊಮೊಟಿವ್ ಸಂಪರ್ಕಿಸುವ ವ್ಯವಸ್ಥೆಯನ್ನು ಪೂರ್ಣಗೊಳಿಸಲಾಗಿದ್ದು, ಶೇ.99ರಷ್ಟು ರೈಲುಗಳು ಇದನ್ನೇ ಆಧರಿಸಿ ಸಂಚರಿಸಲಿವೆ’ ಎಂದು ಕೊಂಕಣ ರೈಲ್ವೆ ಪ್ರಾದೇಶಿಕ ವ್ಯವಸ್ಥಾಪಕ ಬಾಳಾಸಾಹೇಬ್ ಬಿ.ನಿಕಂ ಪ್ರತಿಕ್ರಿಯಿಸಿದರು.

‘ಕೊಂಕಣ ರೈಲ್ವೆ ವ್ಯಾ‍ಪ್ತಿಯಲ್ಲಿ ಬೆಂಗಳೂರು–ಕಾರವಾರ ನಡುವೆ ಓಡಾಡುವ ಐದು ರೈಲುಗಳಿಗೆ ಮಾತ್ರ ಡೀಸೆಲ್ ಎಂಜಿನ್ ಮೂಲಕ ಸಾಗಲಿದೆ. ಪಡೀಲ್ ಬಳಿಕ ಘಟ್ಟ ವ್ಯಾಪ್ತಿಯಲ್ಲಿ ವಿದ್ಯುದ್ದೀಕರಣ ನಡೆಯದ ಕಾರಣ ಈ ರೈಲಿಗೆ ಎಲೆಕ್ಟ್ರಿಕ್ ಲೋಕೊಮೊಟಿವ್ ಅಳವಡಿಸುತ್ತಿಲ್ಲ’ ಎಂದು ತಿಳಿಸಿದರು.

ಕೊಂಕಣ ರೈಲ್ವೆ ವ್ಯಾಪ್ತಿಯ 741 ಕಿ.ಮೀ. ಮಾರ್ಗವನ್ನು ₹1287 ಕೋಟಿ ವೆಚ್ಚದಲ್ಲಿ ಕಳೆದ ಮಾರ್ಚ್‍ನಲ್ಲಿಯೇ ಸಂಪೂರ್ಣ ವಿದ್ಯುದ್ದೀಕರಣ ಮಾಡಲಾಗಿತ್ತು. ಡೀಸೆಲ್ ಎಂಜಿನ್ ಚಾಲಿತ ರೈಲುಗಳನ್ನು ಹಂತ, ಹಂತವಾಗಿ ವಿದ್ಯುತ್ ಚಾಲಿತವಾಗಿ ಮಾರ್ಪಡಿಸುವ ಪ್ರಯತ್ನ ನಡೆದಿತ್ತು.

***

ವಿದ್ಯುತ್ ಚಾಲಿತವಾಗಿ ರೈಲುಗಳು ಸಂಚರಿಸಲಿರುವ ಕಾರಣ ಪರಿಸರ ಹಾನಿ ಕಡಿಮೆಯಾಗಲಿದೆ. ಜತೆಗೆ ರೈಲ್ವೆ ಮಂಡಳಿಯ ವೆಚ್ಚವೂ ತಗ್ಗಲಿದೆ.
-ಬಾಳಾಸಾಹೇಬ್ ಬಿ.ನಿಕಂ, ಕೊಂಕಣ ರೈಲ್ವೆ ಪ್ರಾದೇಶಿಕ ವ್ಯವಸ್ಥಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT