ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಯಲ್ಲಿ ಮತ್ತೆ ಕೇಳಿದ ಮಕ್ಕಳ ಕಲರವ- : ಮೊದಲ ದಿನ ಶೇ 95.2ರಷ್ಟು ಹಾಜರಾತಿ

ಪುಟಾಣಿಗಳಿಗೆ ಅದ್ಧೂರಿ ಸ್ವಾಗತ, ಶಿಕ್ಷಕರು
Last Updated 25 ಅಕ್ಟೋಬರ್ 2021, 14:16 IST
ಅಕ್ಷರ ಗಾತ್ರ

ಕಾರವಾರ: ಕೋವಿಡ್ ಕಾರಣದಿಂದ ಬಾಗಿಲು ಮುಚ್ಚಿದ್ದ ಶಾಲೆಗಳು ಸೋಮವಾರ ಪುನಃ ಆರಂಭವಾಗಿದ್ದು, ಚಿಣ್ಣರ ಕಲರವ ಮತ್ತೆ ಕೇಳಿಬಂತು. ಸಮವಸ್ತ್ರ ಧರಿಸಿ, ಚೀಲ ಹೆಗಲಿಗೇರಿಸಿ ಬಂದಿದ್ದ ಪುಟಾಣಿಗಳನ್ನು ಶಿಕ್ಷಕರು ಪ್ರೀತಿಯಿಂದ ಬರಮಾಡಿಕೊಂಡರು. ಹಲವೆಡೆ ಶಾಲೆಗಳಿಗೆ ತಳಿರು ತೋರಣಗಳ ಶೃಂಗಾರ ಮಾಡಲಾಗಿತ್ತು. ಮತ್ತೆ ಕೆಲವೆಡೆ ಮೆರವಣಿಗೆ ಆಯೋಜಿಸಲಾಗಿತ್ತು.

ಒಂದರಿಂದ ಐದನೇ ತರಗತಿಗಳೂ ಆರಂಭವಾಗುವ ಮೂಲಕ ಶಾಲೆಗಳಲ್ಲಿ ಭೌತಿಕ ಬೋಧನೆ ಸಂಪೂರ್ಣವಾಗಿ ಶುರುವಾಗಿದೆ. ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ ನೋಂದಣಿಯಾದ 97,332 ವಿದ್ಯಾರ್ಥಿಗಳ ಪೈಕಿ 92,670 ಮಕ್ಕಳು ಮೊದಲ ದಿನ ಹಾಜರಾಗಿದ್ದಾರೆ. ಶೇ 95.2ರಷ್ಟು ಹಾಜರಾತಿ ದಾಖಲಾಗಿದೆ.

ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ತರಗತಿಗಳು ನಿಗದಿಯಾಗಿವೆ. ಸುಮಾರು ಒಂದೂವರೆ ವರ್ಷದ ನಂತರ ತರಗತಿಗಳು ಪುನಃ ಶುರುವಾಗಿದ್ದು, ಪಾಲಕರು ಲಗುಬಗೆಯಲ್ಲೇ ಮಕ್ಕಳನ್ನು ಶಾಲೆಗೆ ಕಳುಹಿಸಲು ಸಿದ್ಧತೆ ಮಾಡಿಕೊಂಡಿದ್ದರು. ಬಹುತೇಕ ಎಲ್ಲ ಮಕ್ಕಳೂ ತಮ್ಮ ಪಾಲಕರೊಂದಿಗೇ ಶಾಲೆಗೆ ಬಂದರು. ಶಾಲಾ ಅವಧಿ ಮುಗಿದಾಗ ಪಾಲಕರನ್ನು ಕಂಡ ಮಕ್ಕಳು, ನಗು ನಗುತ್ತ ಮನೆ ಕಡೆ ಹೆಜ್ಜೆ ಹಾಕಿದರು.

ನಗರದ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಶಿಕ್ಷಕರು ಮಕ್ಕಳ ದೇಹದ ಉಷ್ಣತೆ ಪರೀಕ್ಷೆ ಮಾಡಿ, ಮುಖಗವಸು ಧರಿಸಿದ್ದನ್ನು ಖಾತ್ರಿ ಪಡಿಸಿಕೊಂಡ ಬಳಿಕ ತರಗತಿಗಳಿಗೆ ಕಳುಹಿಸಿದರು. ಮೊದಲ ದಿನವೇ ಉತ್ತಮ ಹಾಜರಾತಿಯೂ ಕಂಡುಬಂತು. ಹಿಂದೂ ಹೈಸ್ಕೂಲ್‌ನ ಬಾಲಮಂದಿರದಲ್ಲಿ ಶಾರದಾ ಪೂಜೆ ಮಾಡಿದ್ದು ವಿಶೇಷವಾಗಿತ್ತು.

ವಾದ್ಯ ಮೇಳದ ಸ್ವಾಗತ:

ಹೊನ್ನಾವರ ತಾಲ್ಲೂಕಿನ ಯಲಕೊಟ್ಟಿಗೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಶಾಲಾ ಪ್ರಾರಂಭೋತ್ಸವವನ್ನು ಅದ್ಧೂರಿಯಾಗಿ ಹಮ್ಮಿಕೊಳ್ಳಲಾಗಿತ್ತು. ಮಕ್ಕಳನ್ನು ಬೈಲಗದ್ದೆಯ ಸುರೇಶ್ ಮರಾಠಿ ಮತ್ತು ತಂಡದವರ ವಾದ್ಯ ಮೇಳದೊಂದಿಗೆ ಸ್ವಾಗತಿಸಲಾಯಿತು.

ವಿದ್ಯಾರ್ಥಿಗಳು ಶಾಲಾ ಆವರಣದ ಒಳಗೆ ಪ್ರವೇಶಿಸುತ್ತಿದ್ದಂತೆಯೇ ವೇಷಧಾರಿಗಳು ಕುಣಿತದೊಂದಿಗೆ ಮನರಂಜನೆ ನೀಡಿದರು. 18 ತಿಂಗಳ ನಂತರ ಶಾಲೆಗೆ ಬಂದ ಪುಟಾಣಿಗಳಿಗೆ ಪೂರ್ಣಕುಂಭ ಸ್ವಾಗತ ಮಾಡಿ, ಹೂ ಪಕಳೆಗಳನ್ನು ಚೆಲ್ಲಿ, ಆರತಿ ಬೆಳಗಿ ಬರಮಾಡಿಕೊಂಡರು. ದೀಪ ಬೆಳಗಿ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಲಾಯಿತು. ಶಾಲಾಭಿವೃದ್ಧಿ ಸಮಿತಿಯಿಂದ ಸಿಹಿತಿಂಡಿ ವಿತರಿಸಲಾಯಿತು.

ಪ್ರಭಾರ ಮುಖ್ಯ ಶಿಕ್ಷಕ ಸುಬ್ರಾಯ ಶಾನಭಾಗ್, ಉಪ್ಪೋಣಿ ಗ್ರಾಮ ಪಂಚಾಯಿತಿ ಸದಸ್ಯ ಮಂಜುನಾಥ ಗೌಡ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೇಶವ ಗೌಡ, ಉಪಾಧ್ಯಕ್ಷೆ ನಾಗರತ್ನಾ ನಾಯ್ಕ, ವಿನೋದ ನಾಯ್ಕ ಇದ್ದರು.

------

***

ಒಂದೂವರೆ ವರ್ಷದ ಬಳಿಕ ಮಗಳನ್ನು ಶಾಲೆಗೆ ಕಳುಹಿಸಿದ್ದು, ಅವ್ಯಕ್ತ ಭಾವನೆಯಿದೆ. ಕೋವಿಡ್ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಿರುವ ಕಾರಣ ಆತಂಕವಿಲ್ಲ.

- ಗೀತಾ ಪಡುವಳಕರ್, ಕಾರವಾರ

***

ಟೀಚರ್, ಸರ್, ಫ್ರೆಂಡ್ಸ್ ನೋಡಿದ್ದು ಖುಷಿಯಾಯಿತು. ಮನೆಯಲ್ಲೇ ಇದ್ದು ಬೇಜಾರಾಗಿತ್ತು. ಶಾಲೆಗೆ ಅಪ್ಪ ಕರ್ಕೊಂಡು ಬಂದು ವಾಪಸ್ ಕರ್ಕೊಂಡು ಹೋಗ್ತಾರೆ.

- ದಿಶಾ ರಾಯ್ಕರ್, ಕಾರವಾರ, ಐದನೇ ತರಗತಿ ವಿದ್ಯಾರ್ಥಿನಿ

***

ಶಾಲೆಗಳಲ್ಲಿ ತರಗತಿಗಳ ಪುನರಾರಂಭಕ್ಕೆ ಸೂಕ್ತ ಸಿದ್ಧತೆ ಮಾಡಿಕೊಂಡಿದ್ದ ಕಾರಣ ಎಲ್ಲೂ ಸಮಸ್ಯೆಯಾಗಲಿಲ್ಲ. ಪಾಲಕರೂ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ.

- ಹರೀಶ ಗಾಂವ್ಕರ್, ಕಾರವಾರ ಶೈಕ್ಷಣಿಕ ಜಿಲ್ಲೆ ಉಪ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT