ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ನಿರೀಕ್ಷೆ ಮೂಡಿಸಿದ ‘ಪ್ರಾಜೆಕ್ಟ್ ಡಾಲ್ಫಿನ್’

ಕೇಂದ್ರ ಸರ್ಕಾರದ ಯೋಜನೆಯಡಿ ಸಂರಕ್ಷಿತ ಜೀವಿಗಳ ರಕ್ಷಣೆಗೆ ಪ್ರಸ್ತಾವ ಸಲ್ಲಿಕೆ
Last Updated 26 ಸೆಪ್ಟೆಂಬರ್ 2020, 19:31 IST
ಅಕ್ಷರ ಗಾತ್ರ

ಕಾರವಾರ: ಕೇಂದ್ರ ಸರ್ಕಾರದ ‘ಪ್ರಾಜೆಕ್ಟ್ ಡಾಲ್ಫಿನ್’ ಯೋಜನೆಯ ಭಾಗವಾಗಿ, ರಾಜ್ಯದ ಕರಾವಳಿಯಲ್ಲಿ ಡಾಲ್ಫಿನ್‌ಗಳ ಸಂರಕ್ಷಣೆಗೆ ಸಿದ್ಧತೆ ನಡೆದಿದೆ. ಕರಾವಳಿಯ ಮೂರೂ ಜಿಲ್ಲೆಗಳಲ್ಲಿ ಕೈಗೊಳ್ಳಬಹುದಾದ ಚಟುವಟಿಕೆಗಳನ್ನು ಉಲ್ಲೇಖಿಸಿ ಅರಣ್ಯ ಇಲಾಖೆಗೆ ಪ್ರಸ್ತಾವ ಸಲ್ಲಿಕೆಯಾಗಿದೆ.

ಆ. 15ರಂದು ಸ್ವಾತಂತ್ರ್ಯೋತ್ಸವದ ಭಾಷಣದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ‘ಪ್ರಾಜೆಕ್ಟ್ ಡಾಲ್ಫಿನ್’ ಘೋಷಿಸಿದ್ದರು. ಅದರಂತೆ ರಾಜ್ಯ ಅರಣ್ಯ ಸಚಿವಾಲಯವು ಪ್ರಸ್ತಾವ ಸಲ್ಲಿಸಲು ಕಾರವಾರದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಅವರಿಗೆ ಸೂಚಿಸಿತ್ತು.

‘ಕಾರವಾರ, ಗೋಕರ್ಣ, ಮುರ್ಡೇಶ್ವರ, ನೇತ್ರಾಣಿ, ಉಡುಪಿ, ಮಂಗಳೂರು ಸುತ್ತಮುತ್ತ ಹಂಪ್‌ಬ್ಯಾಕ್ ಡಾಲ್ಫಿನ್‌ಗಳು ವಾಸಿಸುತ್ತವೆ. ಅವುಗಳ ಸಂರಕ್ಷಣೆ, ಸಂಶೋಧನೆ, ಅಧ್ಯಯನ ಮತ್ತು ನಿರ್ವಹಣೆ ಮಾಡುವ ವಿಧಾನಗಳ ಬಗ್ಗೆ ಚರ್ಚಿಸಲಾಗುತ್ತಿದೆ. ವನ್ಯಜೀವಿ ಮಂಡಳಿ, ಕಡಲಜೀವ ವಿಜ್ಞಾನ ಕೇಂದ್ರ, ಕೇಂದ್ರೀಯ ಸಮುದ್ರ ಮೀನುಗಾರಿಕಾ ಅಧ್ಯಯನ ಸಂಸ್ಥೆ (ಸಿ.ಎಂ.ಎಫ್.ಆರ್.ಐ) ಹಾಗೂ ಮೀನುಗಾರರನ್ನು ಇದರಲ್ಲಿ ತೊಡಗಿಸಿಕೊಳ್ಳಲು ಉದ್ದೇಶಿಸಲಾಗಿದೆ’ ಎಂದು ಡಾ. ವಸಂತ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಾರವಾರದ ಮಾಜಾಳಿಯಿಂದ ಮಂಗಳೂರಿನಲ್ಲಿ ರಾಜ್ಯದ ಗಡಿಯವರೆಗಿನ 320 ಕಿಲೋಮೀಟರ್ ಉದ್ದದ ಕರಾವಳಿಯಲ್ಲಿ ಡಾಲ್ಫಿನ್ ಸಂರಕ್ಷಣೆಯ ವಿಧಾನಗಳ ಮಾಹಿತಿ ಕೇಳಿದ್ದಾರೆ. ಅವುಗಳ ಸಂರಕ್ಷಣಾ ಕೇಂದ್ರ, ಡಾಲ್ಫಿನ್ ಪ್ರವಾಸೋದ್ಯಮ ಮುಂತಾದ ಚಟುವಟಿಕೆಗಳಿಗೆ ಅಂದಾಜು ₹ 10 ಕೋಟಿ ಬೇಕಾಗಬಹುದು’ ಎಂದು ಅವರು ಮಾಹಿತಿ ನೀಡಿದರು.

ಕಾರವಾರದಲ್ಲಿ ಕೂರ್ಮಗಡ, ಲೈಟ್‌ಹೌಸ್, ಮಾಜಾಳಿ ಸುತ್ತಮುತ್ತ ಡಾಲ್ಫಿನ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುತ್ತವೆ. ಅವುಗಳನ್ನು ನೋಡಲೆಂದೇ ಪ್ರತಿವರ್ಷ ನೂರಾರು ಪ್ರವಾಸಿಗರು ದೋಣಿಗಳಲ್ಲಿ ಪ್ರಯಾಣಿಸುತ್ತಾರೆ. ನಾನಾ ಕಾರಣಗಳಿಂದ ಮೃತಪಟ್ಟ ಡಾಲ್ಫಿನ್‌ಗಳ ಕಳೇಬರಗಳು ಇಲ್ಲಿನ ಟ್ಯಾಗೋರ್ ಕಡಲತೀರದಲ್ಲಿ ಈ ಹಿಂದೆ ಕಾಣಸಿಕ್ಕಿದ್ದವು.

‘ಪ್ರವಾಸೋದ್ಯಮಕ್ಕೂ ಸಹಕಾರಿ’:‘ಕಾರವಾರದ ಕಡಲತೀರವು ಇಂಡೊ ಪೆಸಿಫಿಕ್ ಹಂಪ್ ಬ್ಯಾಕ್‌ ಡಾಲ್ಫಿನ್‌ಗಳಿಗೆ ಪ್ರಸಿದ್ಧವಾಗಿದೆ. ಸಂರಕ್ಷಿತ ಜೀವಿಗಳಾಗಿರುವ ಅವು, ಸಮುದ್ರದಲ್ಲಿ ಸುಮಾರು 20 ಮೀಟರ್‌ ಆಳದಲ್ಲಿ ಜೀವಿಸುತ್ತವೆ. ಇಲ್ಲಿ ಹೆಚ್ಚು ನಡುಗಡ್ಡೆಗಳಿವೆ. ಹಾಗಾಗಿ ಅವುಗಳ ವಾಸಕ್ಕೆ ಯೋಗ್ಯವಾದ ಸ್ಥಳವಾಗಿದೆ’ ಎನ್ನುತ್ತಾರೆ ಕಾರವಾರದ ಕಡಲ ಜೀವ ವಿಜ್ಞಾನ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಶಿವಕುಮಾರ ಹರಗಿ.

‘ಈಚಿನ ಕೆಲವು ವರ್ಷಗಳಿಂದ ಈ ಭಾಗದಲ್ಲಿ ಬಂದರು ಕಾಮಗಾರಿ, ನೌಕಾನೆಲೆ, ಅವೈಜ್ಞಾನಿಕ ಮೀನುಗಾರಿಕೆ ಮುಂತಾದ ಕಾರಣಗಳಿಂದ ಅವುಗಳ ವಾಸಸ್ಥಾನಕ್ಕೆ ತೊಂದರೆಯಾಗಿದೆ. ಇದರಿಂದ ಸಾವಿಗೀಡಾಗುತ್ತಿವೆ. ಅವುಗಳನ್ನು ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ಇದರಿಂದ ಪರಿಸರ ಪೂರಕವಾದ ಪ್ರವಾಸೋದ್ಯಮಕ್ಕೂ ನೆರವಾಗುತ್ತದೆ’ ಎನ್ನುವುದು ಅವರ ಅಭಿಪ್ರಾಯವಾಗಿದೆ.

***

ಡಾಲ್ಫಿನ್ ಸಂರಕ್ಷಣೆಯ ಬಗ್ಗೆ ರಾಜ್ಯದಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆಯಾಗಬೇಕು. ಅಲ್ಲಿಂದ ಒಪ್ಪಿಗೆ ಸಿಕ್ಕಿದ ಕೂಡಲೇ ರೂಪರೇಷೆ ಪ್ರಕಾರ ಸಂರಕ್ಷಣಾ ಕಾರ್ಯ ಶುರುವಾಗಲಿದೆ.

– ವಸಂತ ರೆಡ್ಡಿ, ಉಪ ಅರಣ್ಯ ಸಂರಕ್ಷಣಾಧಿಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT