ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜೊಯಿಡಾ: ಅಡಿಕೆ ತೋಟದಲ್ಲಿ ನಿವೃತ್ತ ಸೈನಿಕನಿಂದ ಮಿಶ್ರ ಕೃಷಿ

Published 21 ಜೂನ್ 2024, 6:19 IST
Last Updated 21 ಜೂನ್ 2024, 6:19 IST
ಅಕ್ಷರ ಗಾತ್ರ

ಜೊಯಿಡಾ: ಸೇನೆಯಿಂದ ನಿವೃತ್ತರಾದ ಮಾಜಿ ಸೈನಿಕೊಬ್ಬರು ಊರಲ್ಲಿಯೇ ಎರಡು ಎಕರೆ ಜಮೀನಿನಲ್ಲಿ ಅಡಿಕೆ ತೋಟ ಹಾಗೂ ಮಿಶ್ರ ಕೃಷಿ ಮಾಡಿ ಮಾದರಿಯಾಗಿದ್ದಾರೆ.

ತಾಲ್ಲೂಕಿನ ಸಿಟ್ಟೆಗಾಳಿಯವರಾದ, ಸದ್ಯ ಜೊಯಿಡಾದಲ್ಲಿ ವಾಸಿಸುತ್ತಿರುವ ಮಾಜಿ ಸೈನಿಕ ರತ್ನಾಕರ ಕೃಷ್ಣ ಗಾವಡಾ ಅವರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರಾಗಿದ್ದಾರೆ. ಅಡಿಕೆ ತೋಟದಲ್ಲಿ ಬಾಳೆ, ಕಾಳುಮೆಣಸು ಬೆಳೆಯುವ ಜತೆಗೆ ಹಿಪ್ಪಲಿ ಕೂಡ ಬೆಳೆಯುತ್ತಿದ್ದಾರೆ. ಜತೆಗೆ ಜೇನು ಪೆಟ್ಟಿಗೆಗಳನ್ನಿಟ್ಟು ಜೇನು ಕೃಷಿಯಲ್ಲಿಯೂ ತೊಡಗಿದ್ದಾರೆ.

‘1993 ರಲ್ಲಿ ಸೈನಿಕನಾಗಿ ದೇಶ ಸೇವೆಗೆ ಸೇರಿದ್ದೆ. ರಾಜಸ್ಥಾನದ ಜೋಧಪುರದಿಂದ ವೃತ್ತಿ ಆರಂಭಿಸಿ 2016 ರಲ್ಲಿ ಸೇನೆಯಿಂದ ನಿವೃತ್ತಿ ಹೊಂದಿದೆ. ಆ ಬಳಿಕ ಗ್ರಾಮ ಲೆಕ್ಕಾಧಿಕಾರಿ, ಬ್ಯಾಂಕ್ ಮುಂತಾದ ನೌಕರಿಗಳಿಗೆ ಪರೀಕ್ಷೆಗಳನ್ನು ಎದುರಿಸಿದೆ. ಪರೀಕ್ಷೆಯಲ್ಲಿ ಪಾಸಾಗಿ ನೌಕರಿಯೂ ಸಿಗುವ ಹಂತದಲ್ಲಿ ಊರು ತೊರೆದು ಹೋಗಲು ಮನಸ್ಸಾಗಲಿಲ್ಲ. ಚಾಪೋಲಿಯಲ್ಲಿ ಎರಡು ಎಕರೆ ಜಮೀನು ಖರೀದಿ ಮಾಡಿ ಅಡಿಕೆ ತೋಟ ಮಾಡಿದೆ’ ಎಂದು ಕೃಷಿ ಚಟುವಟಿಕೆ ಆರಂಭಿಸಿದ ಕಥೆ  ಹೇಳತೊಡಗಿದರು.

‘ಅಡಿಕೆ ಗೊನೆಗಳಿಗೆ ಔಷಧ ಸಿಂಪಡಿಸುವ ಕೆಲಸವನ್ನು ಸ್ವತಃ ಮಾಡುತ್ತೇನೆ. ಇದರಿಂದ ಕೃಷಿ ವೆಚ್ಚ ಕಡಿಮೆಯಾಗುತ್ತದೆ. ಕೂಲಿಕಾರ್ಮಿಕರ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ. ಗೊಬ್ಬರ ಹಾಕುವ, ಅಡಿಕೆ ತೆಗೆಯುವ, ಸುಲಿಯುವ ಕೆಲಸಗಳಿಗೆ ಮಾತ್ರ ಕೂಲಿಯವರನ್ನು ತೆಗೆದುಕೊಳ್ಳುತ್ತೇನೆ. ಸದ್ಯ ಕೂಲಿಯವರು ಸಿಗುತ್ತಿಲ್ಲ. ಬಹುತೇಕ ಕೆಲಸಗಳನ್ನು ಅನಿವಾರ್ಯವಾಗಿ ನಾವೇ ಮಾಡಬೇಕಾಗುತ್ತದೆ. ತೋಟ ಬೆಳವಣಿಗೆ ಹಂತದಲ್ಲಿದ್ದು ಸದ್ಯ ಸುಮಾರು 3 ಕ್ವಿಂಟಲ್ ಅಡಿಕೆ ಸಿಗುತ್ತದೆ. ಇದರಿಂದ ₹ 1.5 ಲಕ್ಷ ಆದಾಯ ಬರುತ್ತಿದೆ. ಅಡಿಕೆಯ ಜತೆಗೆ ಬಾಳೆ, ಕರಿಮೆಣಸಿನ ಬಳ್ಳಿಗಳನ್ನು ಬೆಳೆಯಲಾಗಿದೆ. ಹಿಪ್ಪಲಿ ಯಿಂದ ಸ್ವಲ್ಪ ಮಟ್ಟಿಗೆ ಆದಾಯ ಬರುತ್ತಿದೆ, 8 ಜೇನು ಪೆಟ್ಟಿಗೆಗಳನ್ನು ಇಟ್ಟಿದ್ದು ಅದರಿಂದಲೂ ಉತ್ತಮ ಆದಾಯ ಬರುವ ನಿರೀಕ್ಷೆ ಇದೆ’ ಎನ್ನುತ್ತಾರೆ ರತ್ನಾಕರ ಗಾವಡಾ.

ರತ್ನಾಕರ ಗಾವಡಾ ತಮ್ಮ ಜಮೀನಿನಲ್ಲಿ ಅಡಿಕೆ ಗಿಡಗಳನ್ನು ನೆಡುತ್ತಿರುವುದು
ರತ್ನಾಕರ ಗಾವಡಾ ತಮ್ಮ ಜಮೀನಿನಲ್ಲಿ ಅಡಿಕೆ ಗಿಡಗಳನ್ನು ನೆಡುತ್ತಿರುವುದು
ಕೃಷಿ ಚಟುವಟಿಕೆಯಲ್ಲಿ ಇರುವ ನೆಮ್ಮದಿ ಬೇರೆ ಯಾವ ವೃತ್ತಿಯಲ್ಲೀ ಸಿಗದು ಎಂಬುದು ಕೃಷಿ ಆರಂಭಿಸಿದ ಬಳಿಕ ಮನದಟ್ಟಾಗಿದೆ.
ರತ್ನಾಕರ ಗಾವಡಾ ಕೃಷಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT