ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ | ಮಾರಿಕಾಂಬಾ ಜಾತ್ರಾ: ₹1.75 ಕೋಟಿ ಕಾಣಿಕೆ ಸಂಗ್ರಹ

ಒಂಭತ್ತು ದಿನಗಳ ಮಾರಿಕಾಂಬಾ ಜಾತ್ರಾ ಮಹೋತ್ಸವ
Published 31 ಮಾರ್ಚ್ 2024, 15:46 IST
Last Updated 31 ಮಾರ್ಚ್ 2024, 15:46 IST
ಅಕ್ಷರ ಗಾತ್ರ

ಶಿರಸಿ: ಅದ್ದೂರಿಯಾಗಿ ನಡೆದ ಒಂಭತ್ತು ದಿನಗಳ ಮಾರಿಕಾಂಬಾ ಜಾತ್ರೆಯಲ್ಲಿ ದೇವಸ್ಥಾನಕ್ಕೆ ₹ 1.75 ಕೋಟಿಗೂ ಹೆಚ್ಚು ಕಾಣಿಕೆ ಸಂಗ್ರಹವಾಗಿದೆ.

ಮಾರ್ಚ್‌ 20ರಿಂದ ದೇವಿ ದರ್ಶನ ಆರಂಭಗೊಂಡು 27ರ ಬೆಳಿಗ್ಗೆ 10.30ರ ಅವಧಿವರೆಗೆ ಸಂಗ್ರಹವಾಗಿರುವ ಮೊತ್ತ ಇದಾಗಿದೆ. ಬಿಡಕಿಬೈಲಿನ ಜಾತ್ರಾ ಗದ್ದುಗೆಯಲ್ಲಿ ಇಡಲಾಗಿದ್ದ ಎರಡು ಕಣಜ, ಏಳು ಕಾಣಿಕೆ ಡಬ್ಬಿಗಳಿಗೆ ಲಕ್ಷಾಂತರ ಭಕ್ತರು ದೇವಿ ದರ್ಶನ ಪಡೆದುಕೊಂಡು ಕೈಲಾದಷ್ಟು ಕಾಣಿಕೆ ಸಲ್ಲಿಸಿದ್ದರು. ಜಾತ್ರೆ ಮುಕ್ತಾಯಗೊಂಡ ಬಳಿಕ ಕಾಣಿಕೆ ಡಬ್ಬಿಗಳನ್ನು ದೇವಸ್ಥಾನದಲ್ಲಿ ತೆರೆದು ಸಂಪೂರ್ಣ ಎಣಿಕೆ ಮಾಡಲಾಗಿದೆ. ನೂರಕ್ಕೂ ಹೆಚ್ಚು ಸ್ವಯಂ ಸೇವಾ ಕಾರ್ಯಕರ್ತರು, ದೇವಸ್ಥಾನ ಸಿಬ್ಬಂದಿ, ಬ್ಯಾಂಕ್ ಸಿಬ್ಬಂದಿ ನಗದು ಎಣಿಕೆ ಕಾರ್ಯ ನಡೆಸಿದರು. 

‘ಬೆಳ್ಳಿಯ ತೊಟ್ಟಿಲು, ಕಣ್ಣುಗಳು, ಮೂಗುಬೊಟ್ಟು, ಬಂಗಾರದ ತಾಳಿಗಳು ಕಾಣಿಕೆ ಹುಂಡಿಯಲ್ಲಿ ಸಿಕ್ಕಿವೆ. ಸಂತಾನ ಭಾಗ್ಯ ಹರಕೆ ಫಲಿಸಿದ ಕಾರಣ ಬೆಳ್ಳಿಯ ತೊಟ್ಟಿಲುಗಳನ್ನು ಭಕ್ತರು ಕಾಣಿಕೆಯಾಗಿ ನೀಡಿದ್ದಾರೆ. ಉಳಿದಂತೆ ಭಟ್ಕಳ ಸಾರಿಗೆ ಡಿಪೊ ಹೆಸರಲ್ಲಿ ₹ 3,500ರ ನಗದು ಹಣವನ್ನು ದೇವಿಗೆ ಸಮರ್ಪಿಸಲಾಗಿದೆ. ಉಳಿದಂತೆ ಹತ್ತನೇ ತರಗತಿ ಪರೀಕ್ಷೆ ಉತ್ತೀರ್ಣವಾಗಲೆಂದು ಕೆಲ ವಿದ್ಯಾರ್ಥಿಗಳು ಪತ್ರದಲ್ಲಿ ಬರೆದು ದೇವಿಗೆ ಸಮರ್ಪಿಸಿದ್ದಾರೆ’ ಎಂದು ದೇವಾಲಯ ಮೂಲಗಳು ಮಾಹಿತಿ ನೀಡಿವೆ. 

‘2.60 ಲಕ್ಷ ಲಡ್ಡುಗಳು ಖಾಲಿಯಾಗಿವೆ. 1 ಲಕ್ಷ ಭಕ್ತರಿಗೆ ಮಾರಿಗುಡಿ ಶಾಲೆ ಬಳಿ ಉಚಿತ ಅನ್ನ ಪ್ರಸಾದ ವಿತರಿಸಲಾಗಿದೆ. ತಲಾ 2 ಲಕ್ಷಕ್ಕೂ ಹೆಚ್ಚಿನ ಉಡಿ, ಕುಂಕುಮ ಪ್ರಸಾದಗಳು ಮಾರಾಟವಾಗಿವೆ’ ಎಂದು ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಆರ್.ಜಿ.ನಾಯ್ಕ ಮಾಹಿತಿ ನೀಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT