ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ದರ್ಶಕ್ ಆ್ಯಪ್: ಬೆಳೆ ಸಮೀಕ್ಷೆ ಆ್ಯಪ್ ಬಳಕೆಗೆ ರೈತರ ನಿರಾಸಕ್ತಿ

Published 6 ಅಕ್ಟೋಬರ್ 2023, 7:36 IST
Last Updated 6 ಅಕ್ಟೋಬರ್ 2023, 7:36 IST
ಅಕ್ಷರ ಗಾತ್ರ

ಶಿರಸಿ: ಬೆಳೆ ಸಮೀಕ್ಷೆ ಸುಲಭ ಮಾಡಲು ಸರ್ಕಾರ ಜಾರಿಗೊಳಿಸಿದ ಬೆಳೆ ದರ್ಶಕ್ ಆ್ಯಪ್ ಬಳಕೆಗೆ ರೈತರು ಆಸಕ್ತಿ ತೋರದ ಕಾರಣ ಕೃಷಿ ಇಲಾಖೆ ನೇಮಿಸುವ ಖಾಸಗಿ ವ್ಯಕ್ತಿಗಳೇ ಜಮೀನು ಸುತ್ತಿ ಬೆಳೆ ಸಮೀಕ್ಷೆ ಕೈಗೊಳ್ಳುವಂತಾಗಿದೆ. ಇದರಿಂದ ಸಮೀಕ್ಷೆ ಪೂರ್ಣಗೊಳ್ಳಲು ಸಮಯಾವಕಾಶ ಹಿಡಿಯುವಂತಾಗಿದೆ. 

ರಾಜ್ಯ ಸರ್ಕಾರವು ಬೆಳೆ ಸಮೀಕ್ಷೆಯನ್ನು ಸ್ವತಃ ರೈತರು ಮಾಡಲಿ ಎಂಬ ಉದ್ದೇಶದಿಂದ 2020ರಲ್ಲಿ ಆ್ಯಪ್‌ ಅನ್ನು ಪರಿಚಯಿಸಿದೆ. ಆದರೆ ಜಿಲ್ಲೆಯ ಬಹುತೇಕ ರೈತರು ಈ ಆ್ಯಪ್‌ ಬಳಕೆ ಮಾಡಲು ಈಗಲೂ ಹಿಂಜರಿಯುತ್ತಿದ್ದಾರೆ. ‘ನಮಗೆ ಆ್ಯಪ್‌ ಬಳಕೆ ಗೊತ್ತಾಗುತ್ತಿಲ್ಲ. ಗೊತ್ತಾದರೂ ನೆಟ್‌ವರ್ಕ್ ಸಮಸ್ಯೆಯಿಂದ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ’ ಎನ್ನುತ್ತಾರೆ. ಇದು ಕೃಷಿ, ಕಂದಾಯ ಇಲಾಖೆಗಳಿಗೆ ತಲೆನೋವಾಗಿ ಪರಿಣಮಿಸಿದೆ. 

ಜಿಲ್ಲೆಯಲ್ಲಿ ಒಟ್ಟು 5.94 ಲಕ್ಷ ಪ್ಲಾಟ್‌ಗಳ ಸಮೀಕ್ಷೆ ಗುರಿಯಿದ್ದು, 4.26 ಲಕ್ಷ ಪ್ಲಾಟ್‌ಗಳ ಬೆಳೆ ಸಮೀಕ್ಷೆ ಈಗಾಗಲೇ ಕೃಷಿ ಇಲಾಖೆ ನೇಮಿಸಿದ ಖಾಸಗಿ ವ್ಯಕ್ತಿಗಳಿಂದ ಆಗಿದೆ. ಆದರೆ ಈವರೆಗೆ ಬರೀ 1830 ರೈತರು ಮಾತ್ರ ಆ್ಯಪ್‌ನಲ್ಲಿ ಸ್ವತಃ ಬೆಳೆ ಮಾಹಿತಿ ಅಪ್‌ಲೋಡ್‌ ಮಾಡಿದ್ದಾರೆ. ‘ಇಲಾಖೆ ಕಳುಹಿಸುವ ಜನರಿಗಾಗಿ ಕಾಯುತ್ತಾರೆ ಹೊರತು ಸ್ವತಃ ಬೆಳೆ ಸಮೀಕ್ಷೆ ಮಾಡಿಕೊಳ್ಳುತ್ತಿಲ್ಲ. ಶೇ 95ಕ್ಕೂ ಹೆಚ್ಚು ರೈತರು ಕೃಷಿ ಇಲಾಖೆಯ ಖಾಸಗಿ ವ್ಯಕ್ತಿಗಳನ್ನೇ ನೆಚ್ಚಿಕೊಂಡಿದ್ದಾರೆ. ಕಡಿಮೆ ಸಂಖ್ಯೆಯ ಯುವ ರೈತರು, ಸ್ಮಾರ್ಟ್‌ಫೋನ್‌ ಬಳಸುವ ರೈತರು ಮಾತ್ರ ತಾವೇ ಸಮೀಕ್ಷೆ ಮಾಡಿಕೊಳ್ಳುತ್ತಿದ್ದಾರೆ. ಇದು ಇಲಾಖೆಗಳಿಗೆ ಹೊರೆಯಾಗುತ್ತಿದೆ' ಎಂಬುದು ಕಂದಾಯ ಇಲಾಖೆ ಅಧಿಕಾರಿಯೊಬ್ಬರ ಮಾತಾಗಿದೆ.

‘ಆರಂಭಿಕ ವರ್ಷಗಳಲ್ಲಿ ರೈತರಿಗೆ ಸಮಸ್ಯೆಯಾಗದಿರಲಿ ಎಂಬ ಉದ್ದೇಶದಿಂದ ಖಾಸಗಿ ವ್ಯಕ್ತಿಗಳನ್ನು ನೇಮಿಸಿ ಅವರ ಮೂಲಕ ಬೆಳೆ ಸಮೀಕ್ಷೆ ನಡೆಸಲಾಗಿತ್ತು. ಈ ವರ್ಷ ಕೂಡ ರೈತರು ಆ್ಯಪ್‌ ಬಳಕೆ ಮಾಡಿಕೊಳ್ಳಲು ಹಿಂಜರಿಯುತ್ತಿರುವ ಕಾರಣದಿಂದ ಮತ್ತೆ ಖಾಸಗಿ ವ್ಯಕ್ತಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 300ಕ್ಕೂ ಹೆಚ್ಚು ಖಾಸಗಿ ವ್ಯಕ್ತಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಇವರು ರೈತರ ಹೊಲಗಳಿಗೆ ತೆರಳಿ ಸಮೀಕ್ಷೆ ನಡೆಸುತ್ತಾರೆ. ಆದರೆ ಈ ವ್ಯವಸ್ಥೆಯಿಂದ ಸಮೀಕ್ಷೆ ಸ್ವಲ್ಪ ವಿಳಂಬವೇ ಆಗುತ್ತದೆ’  ಎಂಬುದು ಕಂದಾಯ ಹಾಗೂ ಕೃಷಿ ಅಧಿಕಾರಿಗಳ ಮಾಹಿತಿ. 

ಈಗಾಗಲೇ ಶೇ 72.14ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ. ಕೆಲವೇ ರೈತರು ಸ್ವತಃ ನೋಂದಾಯಿಸಿದ್ದಾರೆ. ಕೆಲವು ದಿನಗಳಲ್ಲಿ ಬೆಳೆ ಸಮೀಕ್ಷೆ ಪೂರ್ಣಗೊಳ್ಳಲಿದೆ.

–ಹೊನ್ನಪ್ಪ ಗೌಡ ಕೃಷಿ ಇಲಾಖೆ ಜಂಟಿ ನಿರ್ದೇಶಕ

ಹಳ್ಳಿಗಳಲ್ಲಿ ನೆಟ್‌ವರ್ಕ್ ಸಮಸ್ಯೆ ಇರುತ್ತದೆ. ಆಧಾರ್‌ ಕಾರ್ಡ್‌ ಸ್ಕ್ಯಾನ್‌ ಮಾಡಲು ಆ್ಯಪ್‌ನಲ್ಲಿ ಸಾಧ್ಯವಾಗುವುದಿಲ್ಲ. ಏನಾದರೂ ಸ್ವಲ್ಪ ಏರುಪೇರಾದರೆ ‘ಮಿಸ್‌ ಮ್ಯಾಚ್‌’ ಎಂಬ ಸಂದೇಶ ಬರುತ್ತದೆ. ಏನಾದರೂ ತಪ್ಪಾದರೆ ಹೇಗೆ ಎಂಬ ಭಯ ಕಾಡುತ್ತದೆ.

–ರಘುಪತಿ ಹೆಗಡೆ ಶಿರಸಿ ಕೃಷಿಕ 

ಬೆಳೆ ದರ್ಶಕ್ ಆ್ಯಪ್‘ನಲ್ಲಿ ನೋಂದಣಿ ಮಾಡಿಕೊಂಡ ರೈತರ ತಾಲ್ಲೂಕುವಾರು ಮಾಹಿತಿ ತಾಲ್ಲೂಕು: ಸ್ವತಃ ನೋಂದಣಿ ಮಾಡಿಕೊಂಡ ರೈತರು ಅಂಕೋಲಾ:11 ಭಟ್ಕಳ:08 ದಾಂಡೇಲಿ:00 ಹಳಿಯಾಳ: 51 ಹೊನ್ನಾವರ:52 ಜೊಯಿಡಾ:59 ಕಾರವಾರ: 00 ಕುಮಟಾ:  30 ಮುಂಡಗೋಡ:214 ಸಿದ್ದಾಪುರ: 438 ಶಿರಸಿ: 775 ಯಲ್ಲಾಪುರ: 192

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT