ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿಯಲ್ಲಿ ಕಣ್ಗಾವಲಿಗಿಲ್ಲ ಸಿಸಿಟಿವಿ ಬಲ

ಹೆಚ್ಚುತ್ತಿರುವ ಅಪಘಾತ, ಅಪರಾಧ ಪ್ರಕರಣ: ಆರೋಪಿಗಳ ಪತ್ತೆಗೆ ಹರಸಾಹಸ
Published 20 ಜನವರಿ 2024, 4:41 IST
Last Updated 20 ಜನವರಿ 2024, 4:41 IST
ಅಕ್ಷರ ಗಾತ್ರ

ಶಿರಸಿ: ಕಾನೂನು ಬಾಹಿರ ಚಟುವಟಿಕೆ, ಸಂಚಾರ ನಿಯಮ ಪಾಲನೆ ಮೇಲೆ ಕಣ್ಗಾವಲಿಡಬೇಕಿದ್ದ ಸಿಸಿಟಿವಿ ಕ್ಯಾಮೆರಾಗಳು ನಗರದ ಆಯಕಟ್ಟಿನ ಸ್ಥಳದಲ್ಲಿ ಇಲ್ಲದಿರುವುದು ಅಪರಾಧಿಕ ಚಟುವಟಿಕೆ ಹೆಚ್ಚಲು ಕಾರಣವಾಗುತ್ತಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.

ಕೆಲ ವರ್ಷಗಳ ಹಿಂದೆ ನಗರಸಭೆ ವತಿಯಿಂದ ಇಲ್ಲಿನ ಮರಾಠಿಕೊಪ್ಪ ವೃತ್ತ, ಜೂ ವೃತ್ತ, ಐದು ರಸ್ತೆ ವೃತ್ತ ಸೇರಿ ಕೆಲವೆಡೆ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗಿತ್ತು. ನಿರ್ವಹಣೆಯ ಕೊರತೆಯಿಂದ ಅವು ಹಾಳಾಗಿ ಹಲವು ತಿಂಗಳುಗಳು ಕಳೆದಿವೆ.

‘ನಗರದಲ್ಲಿ ನಿಯಮ ಬಾಹಿರ, ಅತಿವೇಗವಾಗಿ ವಾಹನ ಚಲಾಯಿಸುವವರ ಸಂಖ್ಯೆ ಹೆಚ್ಚುತ್ತಿದೆ. ವೃತ್ತಗಳಲ್ಲಿ ವೇಗವಾಗಿ ವಾಹನ ಚಲಾಯಿಸಿ ಸಂಚಾರ ನಿಯಮಕ್ಕೆ ಕೆಲವರು ಧಕ್ಕೆ ತರುತ್ತಿದ್ದಾರೆ. ಅತಿ ವೇಗದಿಂದ ವಾಹನ ಚಲಾಯಿಸಿ ಅಪಘಾತಕ್ಕೆ ಕಾರಣವಾಗಿ ವಾಹನಗಳನ್ನು ನಿಲ್ಲಿಸದೇ ಪರಾರಿಯಾಗುವುದುಂಟು. ಗೋವುಗಳ ಕಳ್ಳತನ, ಬೈಕ್ ಕಳ್ಳತನ ಹಾಗೇ ರಾತ್ರಿ ನಡೆಯುವ ಅಪರಾಧ ಪ್ರಕರಣಗಳ ಬಗ್ಗೆಯೂ ನಿಗಾವಹಿಸಿ ಕ್ರಮ ಕೈಗೊಳ್ಳುವುದಕ್ಕೆ ಸಿಸಿಟಿವಿ ಕ್ಯಾಮರಾಗಳು  ಅನುಕೂಲವಾಗುತ್ತವೆ. ಆದರೆ ಆಯಕಟ್ಟಿನ ಸ್ಥಳದಲ್ಲಿ ಕ್ಯಾಮರಾಗಳಿಲ್ಲ’ ಎಂಬುದು ಜನರ ದೂರು.

‘ನಗರ ವ್ಯಾಪ್ತಿಯಲ್ಲಿ ಈ ಹಿಂದೆ ಅಳವಡಿಸಿದ್ದ 32ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾಗಳು ನಿರ್ವಹಣೆಯಿಲ್ಲದೆ ಹಾಳಾಗಿವೆ. ನಂತರದಲ್ಲಿ ಅವುಗಳ ದುರಸ್ತಿಯಾಗಲಿ, ಹೊಸದರ ಅಳವಡಿಕೆಯಾಗಲಿ ನಡೆದಿಲ್ಲ. ಇದರಿಂದ ಹಲವು ಬಾರಿ ಆರೋಪಿಗಳು ಪೊಲೀಸರ ದೃಷ್ಟಿಯಿಂದ ದೂರ ಉಳಿಯಲು ಅನುಕೂಲವಾಗಿದೆ’ ಎಂದು ದೂರುತ್ತಾರೆ ಮಾದೇವ ನಾಯ್ಕ.

ಕಳ್ಳತನ ಸೇರಿದಂತೆ ಇತರ ಅಪರಾಧ ಕೃತ್ಯಗಳು ಜರುಗಿದ ಘಟನಾ ಸ್ಥಳದ ಸುತ್ತಮುತ್ತಲ ಮನೆಗಳಲ್ಲಿ ಸಿಸಿ ಕ್ಯಾಮರಾಗಳಿವೆಯೇ? ಎಂದು ವಿಚಾರಿಸುವ ಸ್ಥಿತಿ ಪೊಲೀಸ್ ಇಲಾಖೆಯದ್ದಾಗಿದೆ. ಕ್ಯಾಮರಾ ಅಳವಡಿಕೆಗೆ ಇಲಾಖೆಗೆ ಅನುದಾನ ಇರದ ಕಾರಣ ಖಾಸಗಿಯವರಲ್ಲಿ, ಸುರಕ್ಷತೆ ದೃಷ್ಟಿಯಿಂದ ಸಿಸಿ ಕ್ಯಾಮರಾ ಅಳವಡಿಸಿಕೊಳ್ಳುವಂತೆ ಇಲಾಖೆಯ ಅಧಿಕಾರಿಗಳು ವಿನಂತಿಸುವ ಸನ್ನಿವೇಶವಿದೆ. 

ಸದ್ಯ ಸಿಸಿಟಿವಿ ಕ್ಯಾಮರಾಗಳನ್ನು ಬಾಡಿಗೆ ಆಧಾರದಲ್ಲಿ ಪಡೆಯಲು ನಗರಾಡಳಿತ ನಿರ್ಧರಿಸಿದೆ. ಮುಂದಿನ ದಿನಗಳಲ್ಲಿ ಶಾಶ್ವತ ಅಳವಡಿಕೆಗೆ ಚಿಂತನೆ ನಡೆಸಲಾಗುವುದು.

-ಕಾಂತರಾಜ್ ಪೌರಾಯುಕ್ತ

ಬಾಡಿಗೆ ಸಿಸಿಟಿವಿಗೆ ಮೊರೆ

ಮಾರ್ಚ್ ತಿಂಗಳಲ್ಲಿ ಮಾರಿಕಾಂಬಾ ದೇವಿಯ ಜಾತ್ರೆ ಜರುಗಲಿದ್ದು ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಈ ಸಂದರ್ಭದಲ್ಲಿ ಅವರ ಸುರಕ್ಷತೆ ಜತೆ ಅಪರಾಧ ಕೃತ್ಯಗಳು ಜರುಗದಂತೆ ನಿಗಾ ಇಡಲು ಸಿಸಿ ಕ್ಯಾಮರಾ ಅತ್ಯಗತ್ಯವಾಗಿದೆ. ನಗರಸಭೆಯು ಜಾತ್ರೆ ಅವಧಿಯಲ್ಲಿ ಅಂದಾಜು ₹5 ಲಕ್ಷ ಬಾಡಿಗೆ ಆಧಾರದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ನಿರ್ಧರಿಸಿದೆ. ಇದು ಸಾರ್ವಜನಿಕ ವಲಯದಲ್ಲಿ ಆಕ್ಷೇಪಕ್ಕೂ ಕಾರಣವಾಗಿದೆ. ‘ಶಾಶ್ವತವಾಗಿ ಸಿಸಿಟಿವಿ ಕ್ಯಾಮರಾ ಅಳವಡಿಕೆಗೆ ನಗರಸಭೆ ಮುಂದಾಗಬೇಕೇ ಹೊರತು ಜನರ ಕಣ್ಣುಕಟ್ಟುವ ಕೆಲಸ ಮಾಡಬಾರದು’ ಎಂದು ಹರೀಶ ನಾಯ್ಕ ಆಕ್ರೋಶ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT