ಶಿರಸಿ: ಜೇನು ಕೃಷಿಗೆ ಉತ್ತೇಜನ ನೀಡಲು ರಾಜ್ಯ ಸರ್ಕಾರ ಪ್ರತಿ ವರ್ಷ ಬಿಡುಗಡೆ ಮಾಡುತ್ತಿದ್ದ ‘ಜೇನು ಕೃಷಿ ಅಭಿವೃದ್ಧಿ ಯೋಜನೆ ಅನುದಾನ’ ಕಡಿತಗೊಳಿಸಿದ್ದು, ಜೇನು ಕೃಷಿ ವಿಸ್ತರಣೆಗೆ ತೊಡಕಾಗಿ ಮಾರ್ಪಟ್ಟಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಜೇನು ಕೃಷಿ ವರ್ಷದಿಂದ ವರ್ಷಕ್ಕೆ ವಿಸ್ತಾರವಾಗುತ್ತಿದೆ. ಸಾವಿರಾರು ಆಸಕ್ತ ರೈತರು ಜೇನು ಕೃಷಿಯಲ್ಲಿ ತೊಡಗಿಕೊಂಡು ಆರ್ಥಿಕ ಸ್ವಾವಲಂಬನೆ ಸಾಧಿಸುತ್ತಿದ್ದಾರೆ. ಆದರೆ ಜಿಲ್ಲೆಯ ಕಳೆದ ಸಾಲಿಗೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ಜೇನು ಕೃಷಿ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಅನುದಾನ ಶೇ 65ರಷ್ಟು ಇಳಿಕೆಯಾಗಿದೆ. ಕಳೆದ ವರ್ಷ ಜಿಲ್ಲೆಯ ತೋಟಗಾರಿಕಾ ಇಲಾಖೆಗೆ ₹ 37 ಲಕ್ಷ ಬಿಡುಗಡೆ ಮಾಡಲಾಗಿತ್ತು. ಈ ಬಾರಿ ₹ 13.76 ಲಕ್ಷ ಮಾತ್ರ ಬಿಡುಗಡೆ ಮಾಡಲಾಗಿದೆ. ಇದು ಜೇನು ಕ್ಷೇತ್ರ ವಿಸ್ತರಣೆಯ ಉತ್ಸಾಹದಲ್ಲಿದ್ದ ಯುವ ಕೃಷಿಕರನ್ನು ನಿರಾಸೆಗೆ ತಳ್ಳಿದೆ.
ಜೇನು ಕೃಷಿ ಅಭಿವೃದ್ಧಿ ಯೋಜನೆಯಡಿ ಫಲಾನುಭವಿಗಳಿಗೆ ಜೇನುಗಾರಿಕೆ ತರಬೇತಿ ಹಾಗೂ 10 ತಿಂಗಳ ತೋಟಗಾರಿಕೆ ತರಬೇತಿಯ ಮಾದರಿಯಲ್ಲಿ 3 ತಿಂಗಳ ಅರ್ಹತಾ ಪತ್ರದ ತರಬೇತಿ ನಡೆಸಲಾಗುತ್ತಿತ್ತು. ಆಸಕ್ತ ಫಲಾನುಭವಿಗಳಿಗೆ ಜೇನು ಪೆಟ್ಟಿಗೆ, ಜೇನು ಕುಟುಂಬ ಹಾಗೂ ಸ್ಟ್ಯಾಂಡ್ ಗಳನ್ನು ನೀಡಲಾಗುತ್ತಿತ್ತು. ಕಳೆದ ವರ್ಷ 335 ಅರ್ಹ ಫಲಾನುಭವಿಗಳಿಗೆ ಅನುದಾನ ಹಂಚಲಾಗಿದ್ದು, ಈ ಬಾರಿ ಕೇವಲ 93 ಫಲಾನುಭವಿಗಳಿಗೆ ಅನುದಾನದಡಿ ಸಹಾಯಧನ ನೀಡಲು ಸಾಧ್ಯವಾಗಿದೆ ಎಂಬುದು ತೋಟಗಾರಿಕಾ ಇಲಾಖೆ ಅಧಿಕಾರಿಗಳ ಮಾತು.
ಯೋಜನೆಯಡಿ ಮಧುವನಗಳ ಸ್ಥಾಪನೆಗೆ ಫಲಾನುಭವಿಗಳಿಗೆ ಸಹಾಯಧನ ನೀಡಲಾಗುತ್ತಿದ್ದು, ಕಳೆದ ವರ್ಷ ₹ 24 ಲಕ್ಷ ನೀಡಿದ್ದು, ಈ ಬಾರಿ ₹ 10 ಲಕ್ಷ ನೀಡಲಾಗಿದೆ. ಇದರಿಂದ ಖಾಸಗಿ ಮಧುವನಗಳ ನಿರ್ವಹಣೆ ಸವಾಲಾಗಿದೆ. ಜತೆಗೆ, ಇಲಾಖೆಯ ಮಧುವನಗಳು, ತರಬೇತಿ ಕೇಂದ್ರಗಳ ಅಭಿವೃದ್ಧಿ ಹಾಗೂ ನಿರ್ವಹಣೆಯೂ ಮರೀಚಿಕೆಯಾಗಿದೆ. ಜೇನುಗಾರಿಕೆ ಅಭಿವೃದ್ಧಿಗಾಗಿ ಹೊರಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನೇಮಕ ನನೆಗುದಿಗೆ ಬಿದ್ದಿದೆ. ಪ್ರಚಾರ, ಅಧ್ಯಯನ ಪ್ರವಾಸ ಹಾಗೂ ಉತ್ತೇಜನ ಚಟುವಟಿಕೆಗಳು ನಿಂತ ನೀರಾಗಿವೆ. ಇದರಿಂದ ಜಿಲ್ಲೆಯಲ್ಲಿ ಜೇನು ಕೃಷಿ ಹಿನ್ನಡೆ ಅನುಭವಿಸುವಂತಾಗಿದೆ ಎಂಬುದು ಜೇನು ಕೃಷಿಕರ ದೂರಾಗಿದೆ.
ಕಳೆದ ವರ್ಷ ಎರಡು ಜೇನು ಪೆಟ್ಟಿಗೆಗಳಿಗೆ ಸಹಾಯಧನ ಲಭಿಸಿತ್ತು. ಆದರೆ ಈ ಬಾರಿ ಒಂದು ಪೆಟ್ಟಿಗೆಗೂ ದೊರೆಯದಿರುವುದು ಹೊಸ ಪೆಟ್ಟಿಗೆಗಳ ಖರೀದಿಸಲು ಸಮಸ್ಯೆಯಾಗುತ್ತಿದೆ ಎನ್ನುತ್ತಾರೆ ಶಿರಸಿಯ ಜೇನು ಕೃಷಿಕ ಕೃಷ್ಣಮೂರ್ತಿ ಭಟ್.
ಜೇನು ಪೆಟ್ಟಿಗೆ ಜೇನು ಕುಟುಂಬ ಬೇಕೆಂದು ಹಲವು ಆಸಕ್ತ ಕೃಷಿಕರು ತೋಟಗಾರಿಕಾ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅನುದಾನ ಕೊರತೆಯ ಕಾರಣಕ್ಕೆ ಸಹಾಯಧನ ಪಡೆಯಲು ಸಾಧ್ಯವಾಗುತ್ತಿಲ್ಲ.ಆದರ್ಶ ಹೆಗಡೆ ಶಿರಸಿ ಜೇನು ಕೃಷಿಕ
ಕಳೆದ ವರ್ಷಕ್ಕಿಂತ ಈ ಬಾರಿ ಜೇನು ಕೃಷಿ ವಿಸ್ತರಣೆ ಸಂಬಂಧ ಫಲಾನುಭವಿಗಳ ಬೇಡಿಕೆ ಹೆಚ್ಚಿದೆ. ಆದರೆ ಸರ್ಕಾರ ಬಿಡುಗಡೆ ಮಾಡಿದ ಅನುದಾನ ಕೊರತೆಯಿದ್ದು ಇರುವ ಅನುದಾನ ಅರ್ಹರಿಗೆ ನೀಡಲಾಗಿದೆಬಿ.ಪಿ.ಸತೀಶ ತೋಟಗಾರಿಕೆ ಇಲಾಖೆ ಉಪನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.