ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ | ಶಿಥಿಲಾವಸ್ಥೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ

ಹುಲೇಕಲ್:ಜೀವಭಯದಲ್ಲಿ ರೋಗಿಗಳಿಗೆ ಉಪಚರಿಸುವ ಅನಿವಾರ್ಯತೆ
ರಾಜೇಂದ್ರ ಹೆಗಡೆ
Published 25 ಜನವರಿ 2024, 4:45 IST
Last Updated 25 ಜನವರಿ 2024, 4:45 IST
ಅಕ್ಷರ ಗಾತ್ರ

ಶಿರಸಿ: ತಾಲ್ಲೂಕಿನ ಹುಲೇಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಶಿಥಿಲಗೊಂಡಿದ್ದು, ರೋಗಿಗಳು ಜೀವಭಯದ ನಡುವೆ ಚಿಕಿತ್ಸೆ ಪಡೆಯುವಂತಾಗಿದೆ.

ಹುಲೇಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲೇಕಲ್‍ನಲ್ಲಿ ಇರುವ ಅಂದಾಜು 30 ವರ್ಷ ಮೇಲ್ಪಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಈಗ ಶಿಥಿಲಗೊಂಡಿದೆ. ಹುಲೇಕಲ್, ಸೋಂದಾ, ನಕ್ಷೆ, ಶಿಂಗನಳ್ಳಿ, ಕೊಟ್ಗೆಮನೆ, ಮೇಲಿನ ಓಣಿಕೇರಿ, ಔಡಾಳ, ಬಕ್ಕಳ ಸೇರಿದಂತೆ 20ಕ್ಕೂ ಹೆಚ್ಚು ಹಳ್ಳಿಗಳ ಕೇಂದ್ರಬಿಂದು ಆಗಿರುವ ಆಸ್ಪತ್ರೆಯಲ್ಲಿ ಜನರು ಚಿಕಿತ್ಸೆಗೆ ಬರಲು ಹಿಂಜರಿಯುತ್ತಿದ್ದಾರೆ.

ಆರೋಗ್ಯ ಕೇಂದ್ರ ನಿರ್ಮಾಣ ಆದಂದಿನಿಂದ ಸಮರ್ಪಕ ದುರಸ್ತಿ ಭಾಗ್ಯ ಕಂಡಿಲ್ಲ. ಕಟ್ಟಡದ ಚಾವಣಿಯ ಸಿಮೆಂಟ್ ಪದರು ಕೆಳಗಡೆ ಬೀಳುತ್ತಿದೆ. ಛತ್ತಿಗೆ ಬಳಸಲಾದ ಕಬ್ಬಿಣದ ರಾಡ್‌ಗಳು ಹೊರಗೆ ಕಾಣುತ್ತಿವೆ. ಗೋಡೆಗಳು ಅಲ್ಲಲ್ಲಿ ಬಿರುಕು ಬಿಟ್ಟಿವೆ, ಕಂಬಗಳು ಜೀರ್ಣಗೊಂಡಿವೆ.

‘ಮಳೆಗಾಲದಲ್ಲಿ ಆರೋಗ್ಯ ಕೇಂದ್ರ ಸೋರುವುದರಿಂದ ರೋಗಿಗಳ ಜತೆ ಸಿಬ್ಬಂದಿ ಕೂಡ ಪರದಾಡಬೇಕಿದೆ. ರೋಗಿಗಳಿಗೆ ಚಿಕಿತ್ಸೆ ನೀಡುವಾಗಲೆಲ್ಲ ಸಿಮೆಂಟ್ ಉದುರಿ ಬೀಳುತ್ತಿದ್ದು, ಆತಂಕದ ನಡುವೆ ಕೆಲಸ ಮಾಡುವುದು ಅನಿವಾರ್ಯವಾಗಿದೆ’ ಎನ್ನುತ್ತಾರೆ ಆರೋಗ್ಯ ಕೇಂದ್ರದ ಸಿಬ್ಬಂದಿಯೊಬ್ಬರು.

‘ನಿತ್ಯ ಸರಾಸರಿ 50ಕ್ಕೂ ಹೆಚ್ಚು ಹೊರ ರೋಗಿಗಳು ಆರೋಗ್ಯ ತಪಾಸಣೆಗೆ ಇಲ್ಲಿಗೆ ಬಂದು ಹೋಗುತ್ತಾರೆ. ಆಸ್ಪತ್ರೆಗೆ ಸಂಪರ್ಕಿಸುವ ರಸ್ತೆ ಕೂಡ ಸಂಪೂರ್ಣ ಹಾಳಾಗಿದೆ. ಆಸ್ಪತ್ರೆಗೆ ಬರುವ ರೋಗಿಗಳಿಗೆ ತೀರಾ ಸಮಸ್ಯೆಗೆ ಕಾರಣವಾಗುತ್ತಿದೆ’ ಎಂದೂ ಹೇಳಿದರು.

‘ಔಷಧ, ಕಾಗದ ಪತ್ರಗಳನ್ನು ಸಂಗ್ರಹಿಸಿಡಲು ಕೇಂದ್ರದ ಕಟ್ಟಡದಲ್ಲಿ ಸ್ಥಳದ ಕೊರತೆಯಿದ್ದು, ವೈದ್ಯರ ಕೊಠಡಿಯಲ್ಲಿ, ಹೋರಾಂಗಣದಲ್ಲಿ ಇಡುವ ಸ್ಥಿತಿ ಇದೆ. ಹಳೆಯ ಕಟ್ಟಡ ದುರಸ್ತಿಗೊಳಿಸುವಂತೆ ವರ್ಷಗಳಿಂದ ಮನವಿ ಮಾಡಿದರೂ ಈವರೆಗೆ ಯಾವ ಕ್ರಮಕೈಗೊಂಡಿಲ್ಲ. ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಶೀಘ್ರವೇ 30 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ನಿರ್ಮಿಸಲಾಗುವುದು’ ಎನ್ನುತ್ತಿದ್ದಾರೆ ಎಂಬುದು ಗ್ರಾಮಸ್ಥ ಕೇಶವ ಹೆಗಡೆ ಅವರ ಆರೋಪ.

ಪ್ರಾಥಮಿಕ ಆರೋಗ್ಯ ಕೇಂದ್ರದ ಕಂಬ ಶಿಥಿಲವಾಗಿರುವುದು
ಪ್ರಾಥಮಿಕ ಆರೋಗ್ಯ ಕೇಂದ್ರದ ಕಂಬ ಶಿಥಿಲವಾಗಿರುವುದು

ಈಗಿರುವ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅದು ಮಂಜೂರಾದರೆ ಈಗಿರುವ ಕಟ್ಟಡ ತೆರವು ಮಾಡಿ ಅದೇ ಜಾಗದಲ್ಲಿ ಹೊಸ ಕಟ್ಟಡ ನಿರ್ಮಿಸಲಾಗುವುದು- ಡಾ.ವಿನಾಯಕ ಭಟ್ ತಾಲ್ಲೂಕು ವೈದ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT