ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ ಕುಮಟಾ ಹೆದ್ದಾರಿ | ಭಾರಿ ವಾಹನ ಸಂಚಾರ: ರಸ್ತೆ ಕಾಮಗಾರಿಗೆ ಹಿನ್ನಡೆ

ಶಿರಸಿ ಕುಮಟಾ ಹೆದ್ದಾರಿ (766–ಇ) ವಿಸ್ತರಣೆ ಕಾಮಗಾರಿ
Published 6 ಡಿಸೆಂಬರ್ 2023, 4:35 IST
Last Updated 6 ಡಿಸೆಂಬರ್ 2023, 4:35 IST
ಅಕ್ಷರ ಗಾತ್ರ

ಶಿರಸಿ: ವಾಹನ ದಟ್ಟಣೆ, ಭಾರಿ ವಾಹನಗಳ ಸಂಚಾರದ ಕಾರಣಕ್ಕೆ ಶಿರಸಿ ಕುಮಟಾ ಹೆದ್ದಾರಿ (766–ಇ) ವಿಸ್ತರಣೆ ಕಾಮಗಾರಿಗೆ ದೇವಿಮನೆ ಘಟ್ಟ ಪ್ರದೇಶದಲ್ಲಿ ತೀರಾ ಹಿನ್ನಡೆ ಉಂಟಾಗುತ್ತಿದೆ. ಇದರಿಂದ ನಿಗದಿತ ಸಮಯದೊಳಗೆ ಕಾಮಗಾರಿ ಮುಗಿಯುವುದು ಅನುಮಾನ ಎನ್ನಲಾಗಿದೆ.

ಸಾಗರಮಾಲಾ ಯೋಜನೆಯಡಿ ಆರ್.ಎನ್.ಎಸ್. ಇನ್ಫ್ರಾಸ್ಟ್ರಕ್ಚರ್ ಕಂಪನಿ ಶಿರಸಿ ಕುಮಟಾ ರಸ್ತೆ ವಿಸ್ತರಣೆ ಕಾಮಗಾರಿ ಕೈಗೆತ್ತಿಕೊಂಡಿದ್ದು, ಶಿರಸಿಯಿಂದ ದೇವಿಮನೆ ಘಟ್ಟದವರೆಗೆ ಕಾಮಗಾರಿ ಬಹುತೇಕ ಪೂರ್ಣಗೊಳಿಸಿದೆ. ಘಟ್ಟದ ಕೆಳ ಭಾಗದಲ್ಲಿ ಕುಮಟಾದಿಂದ ಕತಗಾಲವರೆಗೆ ಒಂದು ಕಡೆ ರಸ್ತೆ ನಿರ್ಮಿಸಲಾಗಿದ್ದು, ಇನ್ನೊಂದು ಪಾರ್ಶ್ವ ಬಾಕಿಯಿದೆ.

ಈಗಾಗಲೇ ಅಮ್ಮಿನಳ್ಳಿ ಸೇತುವೆ ಪೂರ್ಣಗೊಂಡಿದ್ದು, ಪ್ರಸ್ತುತ 11 ಸೇತುವೆಗಳ ನಿರ್ಮಾಣ ಹಾಗೂ ದೇವಿಮನೆ ಘಟ್ಟ ಭಾಗದ 8 ಕಿ.ಮೀ. ಇಕ್ಕಟ್ಟಿನ ರಸ್ತೆಯ ವಿಸ್ತರಣೆಗೆ ಚಾಲನೆ ನೀಡಲಾಗಿದೆ.

ದೇವಿಮನೆ ಘಟ್ಟದ ರಸ್ತೆಯಂಚಿನ ಧರೆಗೆ ಪಿಚ್ಚಿಂಗ್ ಗೋಡೆ ನಿರ್ಮಿಸುವ ಕೆಲಸ ನಡೆದಿದೆ. ಹಲವು ಕಡೆ ಸಣ್ಣ ಸಿಡಿಗಳು, ರಸ್ತೆ ಅಂಚಿನ ಕಟ್ಟೆಗಳ ನಿರ್ಮಾಣ, ಊರುಗಳು ಇದ್ದ ಕಡೆ ಕಾಂಕ್ರಿಟ್ ಗಟಾರ ನಿರ್ಮಾಣ ಕೆಲಸ ಸಾಗಿದೆ. ಇದಕ್ಕಾಗಿ ಗುತ್ತಿಗೆ ಕಂಪನಿಯ ಮಣ್ಣು, ಕಾಂಕ್ರೀಟ್ ಸಾಗಿಸುವ ವಾಹನಗಳು, ಇತರ ಯಂತ್ರಗಳನ್ನು ಸಾಗಿಸುವ ಬೃಹತ್ ವಾಹನಗಳ ಓಡಾಟ ಜೋರಾಗಿದೆ. ಆದರೆ ಗುತ್ತಿಗೆ ಕಂಪನಿಗೆ ಈ ಪ್ರದೇಶದಲ್ಲಿ ಸುಲಲಿತವಾಗಿ ರಸ್ತೆ ಕಾಮಗಾರಿ ನಡೆಸುವುದು ಸಮಸ್ಯೆ ತಂದೊಡ್ಡಿದೆ.

ನಿತ್ಯ 1500–2000ಕ್ಕೂ ಹೆಚ್ಚು ವಾಹನಗಳ ಸಂಚಾರದ ಜತೆ ಭಾರಿ ವಾಹನಗಳ ಓಡಾಟದ ನಡುವೆ ಅವುಗಳಿಗೆ ಓಡಾಡಲು ಜಾಗ ಬಿಟ್ಟುಕೊಡುತ್ತ ಕಾಮಗಾರಿ ನಡೆಸುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.

ದೇವಿಮನೆ ಘಟ್ಟ ಪ್ರದೇಶದಲ್ಲಿ ರಸ್ತೆ ಇಕ್ಕಟ್ಟಾಗಿರುವ ಕಾರಣಕ್ಕೆ ಕಾಮಗಾರಿ ನಡೆಸಲು ಸಮಸ್ಯೆ ಆಗಬಾರದೆಂಬ ಉದ್ದೇಶಕ್ಕೆ ಈ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸುವಂತೆ ಗುತ್ತಿಗೆ ಕಂಪನಿ ಜಿಲ್ಲಾಡಳಿತಕ್ಕೆ ಕೋರಿತ್ತು. ಅದರಂತೆ ನ.1ರಿಂದ ಡಿ.ಅಂತ್ಯದವರೆಗೆ ಸಂಚಾರ ನಿಷೇಧಿಸಿ ಆದೇಶ ಹೊರಡಿಸಲಾಗಿತ್ತು. ನಂತರ ಜನಪ್ರತಿನಿಧಿಗಳ ಒತ್ತಡ, ಜನಸಾಮಾನ್ಯರ ಆಗ್ರಹದ ಮೇರೆಗೆ ನಿರ್ಬಂಧ ಹಿಂಪಡೆಯಲಾಗಿತ್ತು.

ಭಾರಿ ವಾಹನಗಳಿಗೆ ಈ ಮಾರ್ಗದಲ್ಲಿ ಸಂಚರಿಸಲು ಅವಕಾಶ ನೀಡದಂತೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಮೌಖಿಕ ಸೂಚನೆ ನೀಡಿದ್ದರು. ಆದರೆ ಎಲ್ಲ ವಾಹನಗಳಂತೆ ಭಾರಿ ಸರಕು ಸಾಗಾಣಿಕೆ ವಾಹನಗಳು ಇದೇ ಮಾರ್ಗದಲ್ಲಿ ನಿರಂತರವಾಗಿ ಸಾಗುತ್ತಿವೆ.

‘ಕೇವಲ 12 ಅಡಿ ಅಗಲದ ರಸ್ತೆಯಲ್ಲಿ ಬೃಹತ್ ಯಂತ್ರಗಳ ಜತೆ ಕಾಮಗಾರಿ ನಡೆಸುವುದು ಕೆಲಸಗಾರರಿಗೆ ದುಸ್ತರವಾಗಿದೆ. ನಿತ್ಯ ಕಾಮಗಾರಿ ನಡೆಯುವಾಗ ಹತ್ತಾರು ಬಾರಿ ಕೆಲಸ ಸ್ಥಗಿತಗೊಳಿಸಿ, ಜೆಸಿಬಿ ಪಕ್ಕಕ್ಕೆ ಸರಿಸಿ ಇತರ ವಾಹನಗಳಿಗೆ ಜಾಗ ಬಿಟ್ಟುಕೊಡುವ ಅನಿವಾರ್ಯತೆ ಎದುರಾಗುತ್ತದೆ. ಇದರಿಂದಾಗಿ ಒಂದು ದಿನದಲ್ಲಿ ಮಾಡುವ ಕಾಮಗಾರಿಗೆ ಎರಡು ದಿನ ಸಮಯ ಹಿಡಿಯುತ್ತಿದೆ’ ಎನ್ನುತ್ತಾರೆ ಸ್ಥಳದಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರು.

‘ಸೇತುವೆ ನಿರ್ಮಾಣಕ್ಕಾಗಿ ಪರ್ಯಾಯ ರಸ್ತೆ ವ್ಯವಸ್ಥೆ ಮಾಡಿದ್ದು, ಈಗಾಗಲೇ ಮೊಸಳೆ ಗುಂಡಿ, ತೆಪ್ಪಗಿ, ಚಂಡಮುರ್ಕಿ ಹಳ್ಳಗಳ ಸೇತುವೆಗೆ ಪಕ್ಕದಲ್ಲಿ ತಾತ್ಕಾಲಿಕ ರಸ್ತೆ ಮಾಡಲಾಗಿದೆ. ಎಲ್ಲಾ ಕಡೆ ಹೊಸ ಸೇತುವೆ ನಿರ್ಮಾಣಕ್ಕೆ ತಯಾರಿ ನಡೆಸಲಾಗಿದೆ. ಬೆಣ್ಣೆ ಹೊಳೆ ಸೇತುವೆಗೂ ಪರ್ಯಾಯ ದಾರಿ ನಿರ್ಮಿಸಲು ಪೈಪ್‌ಗಳ ಶೇಖರಣೆ ಮಾಡಲಾಗಿದೆ. ಉಳಿದೆಡೆಗಳಲ್ಲಿ ಕಾಮಗಾರಿ ವೇಗವಾಗಿ ನಡೆಯುತ್ತಿದ್ದರೂ, ಘಟ್ಟ ಪ್ರದೇಶದಲ್ಲಿ ಮಾತ್ರ ತೀರಾ ನಿಧಾನಗತಿಯಿಂದ ಸಾಗುವಂತಾಗಿದೆ’ ಎಂಬುದು ಗುತ್ತಿಗೆ ಕಂಪನಿ ಎಂಜಿನಿಯರೊಬ್ಬರ ಮಾತು.

ಇಕ್ಕಟ್ಟಾದ ರಸ್ತೆಯಾದ ಕಾರಣ ಕಾರ್ಮಿಕರು ಜೀವ ಭಯದ ನಡುವೆ ಕೆಲಸ ಮಾಡುವ ಅನಿವಾರ್ಯತೆ ಇದೆ. ಭಾರಿ ವಾಹನಗಳ ಸಂಚಾರ ನಿರ್ಬಂಧಿಸಿದರೆ ಕಾಮಗಾರಿ ಬೇಗ ಪೂರ್ಣಗೊಳಿಸಬಹುದು

-ಭೂಪೇಶಕಾರ್ಮಿಕ

ಭಾರಿ ವಾಹನಗಳು ಬಂದಾಗ ನಮ್ಮ ಕಾಮಗಾರಿ ನಡೆಸುವುದು ಸಮಸ್ಯೆ ಆಗುತ್ತದೆ. ಅವುಗಳ ಪ್ರಮಾಣ ಹೆಚ್ಚಿದಷ್ಟು ಕಾಮಗಾರಿಯ ವೇಗ ಕುಂಟುತ್ತದೆ

-ಗೋವಿಂದ ಭಟ್ ಗುತ್ತಿಗೆ ಕಂಪನಿ ಎಂಜಿನಿಯರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT