ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಘೇ ಉಘೇ ಮಾರೆಮ್ಮ...

ಸತ್ಯ ತತ್ವದ ಶಕ್ತಿದಾಯಿನಿ ಶ್ರೀಮಾರಿಕಾಂಬೆ
Published 20 ಮಾರ್ಚ್ 2024, 7:35 IST
Last Updated 20 ಮಾರ್ಚ್ 2024, 7:35 IST
ಅಕ್ಷರ ಗಾತ್ರ

ಶಿರಸಿ: ನೀನನ್ನ ಕರೆದರೆ ನಾ ನಿನ್ನ ಪೊರೆವೆನೆಂದು ಅಭಯ ನೀಡುವ ಶಿರಸಿ ಮಾರಿಕಾಂಬೆಗೆ ದ್ವೈವಾರ್ಷಿಕ ಜಾತ್ರಾ ಮಹೋತ್ಸವದ ಸಂಭ್ರಮ. ಮಾರಿ ಅಮ್ಮನ ಈ ಜಾತ್ರೆ ನಾಡಿನೆಲ್ಲೆಡೆ ಮನೆಮಾತು. ಹುಟ್ಟಿದ ಮೇಲೆ ಒಮ್ಮೆಯಾದರೂ ಘಟ್ಟ ಹತ್ತಿ ಶಿರಸಿಯ ಜಾತ್ರೆ ಕಾಣದಿದ್ದರೆ ಜೀವನ ವ್ಯರ್ಥವೆಂಬ ದಕ್ಷಿಣೋತ್ತರ ಜಿಲ್ಲೆಗಳಲ್ಲಿ ಪ್ರಚಲಿತವಿರುವ ಮಾತು ಮಾರಿಕಾಂಬಾ ಜಾತ್ರಾ ವೈಭವಕ್ಕೆ ಸಾಕ್ಷಿಯಾಗಿದೆ. 

ಜಾತ್ರೆಗೆ ಸಂಬಂಧಿಸಿದಂತೆ ಎಲ್ಲ ಮಾರಿಜಾತ್ರೆಗಳ ಆಚರಣೆಯ ಜತೆ ಥಳಕು ಹಾಕಿಕೊಂಡ ಕಥೆಯೇ ಇಲ್ಲಿಯೂ ಪ್ರಚಲಿತದಲ್ಲಿದೆ. ಮಹಿಷಾಸುರನೆಂಬ ರಾಕ್ಷಸ ದೇವಿಗೆ ಮೋಸ ಮಾಡಿ ವಿವಾಹವಾಗುತ್ತಾನೆ. ಮಕ್ಕಳಾದ ಮೇಲೆ ಗಂಡನ ರಾಕ್ಷಸತ್ವ ಬಯಲಾಗುತ್ತದೆ. ಮೋಸಗಾರ ರಾಕ್ಷಸನನ್ನು ಸಂಹರಿಸಲು ಕತ್ತಿಹಿಡಿಯುವ ಉರಿಮಾಯಿ ಮಾರಿಕಾಂಬೆ ರಕ್ಕಸನನ್ನು ಸಂಹರಿಸಿ, ತಾನಿದ್ದ ಗುಡಿಸಲಿಗೆ ಬೆಂಕಿಯಿಟ್ಟು ತಾನೇ ದಹಿಸಿಹೋಗಿ ಮಹಾಸತಿಯಾಗುತ್ತಾಳೆ. ಇದು ಮಾರಿಕಾಂಬೆಯ ಜೀವನದ ಕಥೆ. ಇದರ ಸಂಕ್ಷಿಪ್ತ ರೂಪಾಚರಣೆಯೇ ಜಾತ್ರಾ ಮಹೋತ್ಸವದ ಕಾರ್ಯಾಚರಣೆಗಳಾಗಿವೆ. ದೇವಾಲಯದಲ್ಲಿರುವ ಪಟ್ಟದ ಕೋಣವೇ ಮಹಿಷಾಸುರನ ಪ್ರತೀಕವಾಗಿದೆ. 1930ರವರೆಗೂ ಜಾತ್ರೆಯಲ್ಲಿ ಕೋಣನ ಬಲಿ ನಡೆಯುತ್ತಿದ್ದು ನಂತರ ಕೈಬಿಡಲಾಗಿದೆ. ಸಾಂಕೇತಿಕವಾಗಿ ಕುಂಬಳ ಕಾಯಿಯ ಸಾತ್ವಿಕ ಬಲಿಯನ್ನು ನೀಡಲಾಗುತ್ತಿದೆ.

ತನ್ನ ಸತ್ಯ ತತ್ವಕೆ ತಾನುರಿದು ಶಕ್ತಿದಾಯಿನಿಯಾಗಿ ನಿಂತ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ಶಿಷ್ಟ ಮತ್ತು ಜನಪದೀಯ ಆಚರಣೆಗಳ ಮಿಶ್ರ ರೂಪವಾಗಿಯೂ ತೆರೆದುಕೊಳ್ಳುತ್ತದೆ. ಮಾರಿಕಾಂಬಾ ಜಾತ್ರೆಯ ಪೂರ್ವವಿಧಿಯಲ್ಲಿ ಬೇರೆಬೇರೆ ದಿಕ್ಕುಗಳಲ್ಲಿ ಐದು ಹೊರಬೀಡುಗಳು ನಡೆಯುತ್ತವೆ. ಆಯ್ದ ಮಂಗಳವಾರ ಮತ್ತು ಶುಕ್ರವಾರದ ರಾತ್ರಿಗಳಂದು ಶ್ರೀದೇವಿಯ ಉತ್ಸವ ಮೂರ್ತಿಯ ಮೆರವಣಿಗೆ, ಶ್ರೀದೇವಿಯ ಆಯುಧಗಳ ಪೂಜೆ, ಉಡಿಸಮರ್ಪಣೆ ಮೊದಲಾದ ಧಾರ್ಮಿಕ ಆಚರಣೆಗಳನ್ನೊಳಗೊಂಡಿರುತ್ತದೆ. ಊರಿನಿಂದ ಹೊರ ಭಾಗದಲ್ಲಿ ಪ್ರಸಾದ ಬೋಜನವೂ ನೆರವೇರುತ್ತದೆ. ರಥ ಕಟ್ಟಲೆಂದು ಮಂಗಳವಾದ್ಯ ಸಮೇತ ಕಾಡಿಗೆ ಹೋಗಿ ವೃಕ್ಷಪೂಜೆ ನಡೆಸಿ ಮರಕಡಿದು ತರುವುದು, ಕಂಕಣ ಕಟ್ಟಿದ ಪಟ್ಟದ ಕೋಣನ ಮೆರವಣಿಗೆಯ ದೃಶ್ಯಗಳು ಇಡೀ ನಗರದಲ್ಲಿ ಜಾತ್ರೆಯ ರಂಗನ್ನು ಚೆಲ್ಲುತ್ತಾ ಸಾಗುತ್ತವೆ. ನಂತರ ರಥೋತ್ಸವದ ಮುನ್ನಾದಿನ ದೇವಿಯನ್ನು ಹೊಸ ಸೀರೆ ಆಭರಣಗಳಿಂದಲಂಕರಿಸಿ ದೃಷ್ಠಿ ಬೊಟ್ಟನ್ನು ಇಟ್ಟು ನವವಧುವಿನಂತೆ ಶೃಂಗರಿಸಲಾಗುತ್ತದೆ. ವಿಜೃಂಬಣೆಯ ವಿವಾಹ ಮಹೋತ್ಸವವನ್ನು ನೆರವೇರಿಸಲಾಗುತ್ತದೆ. ದೇವಿಯ ತವರು ಮನೆಯವರೆಂದು ಭಾವಿಸಲಾಗುವ ನಾಡಿಗೇರರ ಕುಟುಂಬವನ್ನೂ ಸೇರಿದಂತೆ ಐದು ಕುಟುಂಬಗಳ ಪರಿಜನರು ದೇವಿಗೆ ವಿವಾಹಾನಂತರದ ಪೂಜೆಯನ್ನು ಸಮರ್ಪಿಸುತ್ತಾರೆ. ಇಡೀ ವೈವಾಹಿಕ ವಿಧಿವಿಧಾನಗಳು ಅಸಾದಿ ಸಂಪ್ರದಾಯದಂತೆ ನಡೆಯುತ್ತದೆ ಎನ್ನುವುದು ಉಲ್ಲೇಖನೀಯ. 

ಮುಂದೆ ನವವಿವಾಹಿತ ದೇವಿ ದರ್ಬಾರನ್ನು ನಡೆಸಲು ರಥದ ಮೇಲೆ ಕುಳಿತು ಬಿಡ್ಕಿಬಯಲಿನಲ್ಲಿರುವ ಜಾತ್ರಾ ಗದ್ದುಗೆಗೆ ಬಂದು ಪ್ರತಿಷ್ಠಾಪಿತಳಾಗುತ್ತಾಳೆ. ಈ ರಥೋತ್ಸವದಲ್ಲಿ ಲಕ್ಷಾಂತರ ಜನರು ಪಾಲ್ಗೊಳ್ಳುವದೊಂದು ವಿಶೇಷ. ಭಾವಾವೇಶಕ್ಕೆ ಒಳಗಾದ ಭಕ್ತ ವೃಂದವನ್ನು ನಿಯಂತ್ರಿಸುವದು ಹರಸಾಹಸವೆನ್ನಿಸುತ್ತದೆ. ನಂತರ ಏಳು ದಿನಗಳ ಕಾಲ ನಿರಂತರ ಸೇವೆ ಪಡೆದು ದರ್ಶನ ನೀಡುವ ಮಾರಿಕಾಂಬೆಯು ಒಂಬತ್ತನೆಯ ದಿನ ಮಹಾಮಾರಿಯಾಗಿ ಸಾಗುತ್ತಾಳೆ. ಮಾತಂಗಿ ಚಪ್ಪರಕ್ಕೆ ಸಾಂಕೇತಿಕವಾಗಿ ಬೆಂಕಿಯಿಟ್ಟು ಹಿನ್ನೋಡದೆ ಮುಂದೆ ಸಾಗಿ ವಿಸರ್ಜನೆಗೊಳ್ಳುವ ಎಲ್ಲ ವಿಧಿಗಳು ಹೃದಯ ಸ್ಪರ್ಶಿ ದೃಶ್ಯಗಳಾಗಿ ಉಳಿಯುವಂತಿದೆ.

ಮಾರಿಕಾಂಬಾ ದೇವಿ ಸಾಗುವ ರಥಕ್ಕೆ ಜೋಡಿಸಲು ತರುತ್ತಿರುವ ಕಳಸ
ಮಾರಿಕಾಂಬಾ ದೇವಿ ಸಾಗುವ ರಥಕ್ಕೆ ಜೋಡಿಸಲು ತರುತ್ತಿರುವ ಕಳಸ
ಮಾರಿಕಾಂಬಾ ರಥೋತ್ಸವದ ಸಂದರ್ಭ (ಕಡತ ಚಿತ್ರ)
ಮಾರಿಕಾಂಬಾ ರಥೋತ್ಸವದ ಸಂದರ್ಭ (ಕಡತ ಚಿತ್ರ)

ಯುಗಾದಿಯಂದು ಪುನರ್ ಪ್ರತಿಷ್ಠೆ

ಆಸ್ತಿಕರನ್ನು ಆಸ್ತೆಯಿಂದ ಪೊರೆಯುವ ಚಂಡಿ ಚಾಮುಂಡಿಯಾಗಿ ದುಷ್ಟರನ್ನು ಸಂಹರಿಸುವ ಮಹಾಮಾತೆಯ ಸಾನ್ನಿಧ್ಯದಲ್ಲಿ ದೀಪಾವಳಿ ಉತ್ಸವ ಕಾರ್ತೀಕೋತ್ಸವ ಶ್ರಾವಣ ಮಾಸದ ಹಾಗೂ ನವರಾತ್ರಿ ಉತ್ಸವ ಮತ್ತೂ ವೈಶಾಕ ಶುಕ್ಲ ಅಷ್ಟಮಿಯಂದು ಜಯಂತಿ ಉತ್ಸವಗಳು ಪ್ರಮುಖವಾದವು. ಇದರೊಂದಿಗೆ ಸಂದರ್ಭಕ್ಕೆ ತಕ್ಕಂತೆ ಕಿರು ಉತ್ಸವಗಳೂ ನೆರವೇರುತ್ತವೆ. ನಿತ್ಯ ವೈದಿಕ ಪದ್ದತಿಯಲ್ಲಿ ದೇವಿಪಾರಾಯಣ ಪೂಜೆಗಳೂ ನಡೆಯುತ್ತಲಿರುತ್ತವೆ. ಜಾತ್ರೆಯ ಸಂದರ್ಭದಲ್ಲಿ ಮೇಟಿದೀಪದಲ್ಲಿ ಪ್ರತಿಷ್ಠಾಪಿಸಿ ದೇವಿಯ ಪ್ರಾಣ ಶಕ್ತಿಯನ್ನು ಕಾಪಿಡುವ ವಿಶಿಷ್ಟ ಸಂಪ್ರದಾಯವಿದೆ. ಜಾತ್ರಾನಂತರ ಯುಗಾದಿಯಂದು ಶ್ರೀದೇವಿ ಮತ್ತೆ ಪ್ರತಿಷ್ಠಾಪನೆಗೊಂಡು ಭಕ್ತರ ಸೇವೆಯನ್ನು ಸ್ವೀಕರಿಸುತ್ತಾಳೆ. ಆತನಕ ದೇವಾಲಯದ ಬಾಗಿಲನ್ನು ಮುಚ್ಚಲಾಗುತ್ತದೆ.

ವಿವಿಧೆಡೆಯ ಭಕ್ತರು

ದಕ್ಷಿಣ ಭಾರತದ ಅತಿ ದೊಡ್ಡ ಜಾತ್ರೆಗೆ ನಾಡಿನ ಉದ್ದಗಲದಿಂದಲೂ ಭಕ್ತರು ಆಗಮಿಸಿ ಶಿರಸಿಯ ಶಿರಸ್ಸು ಮಾರಿಕಾಂಬೆಯ ಕೃಪೆಗೆ ಪಾತ್ರರಾಗುತ್ತಾರೆ. ರಾಜ್ಯದ ಹಾವೇರಿ ಹಾನಗಲ್ ಶಿಗ್ಗಾವಿ ಬ್ಯಾಡಗಿ ಹುಬ್ಬಳ್ಳಿ ಧಾರವಾಡ ಗದಗ ಬಿಜಾಪುರ ರಾಯಚೂರ ಬಾಗಲಕೋಟೆ ಮುಂಬಯಿ ಪೂಣಾ ಬೆಂಗಳೂರು ಉಡುಪಿ ಕಾರ್ಕಳ ಬೈಂದೂರ ಮಂಗಳೂರು ಸೇರಿದಂತೆ ದೇಶದ ನಾನಾ ಕಡೆಗಳಿಂದ ಮಾರಿಕಾಂಬೆಯ ಭಕ್ತರು ಆಗಮಿಸಿ ರಥೋತ್ಸವದಲ್ಲಿ ಪಾಲ್ಗೊಂಡು ದೇವಿ ದರ್ಶನ ಪಡೆಯುತ್ತಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT