ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ ಮಾರಿಕಾಂಬಾ ಜಾತ್ರೆ: ಅಮ್ಮನ ಅಂಗಳದಲ್ಲಿ ಬಹುಮುಖಿ ಸಂಸ್ಕೃತಿ ಸಮ್ಮಿಲನ

Published 21 ಮಾರ್ಚ್ 2024, 5:20 IST
Last Updated 21 ಮಾರ್ಚ್ 2024, 5:20 IST
ಅಕ್ಷರ ಗಾತ್ರ

ಶಿರಸಿ: ಇಲ್ಲಿ ಜಾತ್ರೆಯೆಂದರೆ ಕೇವಲ ಊರೊಂದು ಸಂಭ್ರಮಿಸುವುದಿಲ್ಲ. ಕೆಲಸ, ಒತ್ತಡ, ತಲ್ಲಣ, ದುಗುಡಗಳನ್ನೆಲ್ಲ ಬದಿಗಿಟ್ಟು ಇಡೀ ಸಮುದಾಯ ಒಂದಾಗಿ ಮಹಾಮಾಯಿ ಮಾರಿಕಾಂಬೆಯ ಜಾತ್ರೋತ್ಸವವನ್ನು ಕಣ್ತುಂಬಿಕೊಳ್ಳುತ್ತದೆ. 

ಬಹುದಿನಗಳಿಂದ ಕಾಯುತ್ತಿದ್ದ, ಬಹಳಷ್ಟು ಕಾಯಕಜೀವಿಗಳ ಶ್ರಮದಿಂದ ಶಿರಸಿ ಮಾರಿಕಾಂಬೆಯ ಜಾತ್ರಾ ಸಿದ್ಧತೆ ಪೂರ್ಣಗೊಂಡ ಜಾತ್ರೆ ಎದುರು ನಿಂತಿದೆ. ಭಕ್ತರನ್ನು ಪೊರೆವ ಮಾರೆಮ್ಮ ತೇರು ಹತ್ತಿ, ಗದ್ದುಗೆಗೆ ಹೊರಟು ನಿಂತಿದ್ದಾಳೆ. ಅದೆಂಥ ಜೀವಕಳೆ ಅಮ್ಮನ ಮೊಗದಲ್ಲಿ. ಮೊದಲ ನೋಟದಲ್ಲೇ ಮನಸ್ಸಿಗೊಂದಿಷ್ಟು ಸಮಾಧಾನ, ಸಾಂತ್ವನ ಹೇಳುವ ಮಹಾತಾಯಿ ಮಾರಿಕಾಂಬೆ. ಅಚ್ಚಗೆಂಪಿನ ಮುಖವರ್ಣಿಕೆಯಲ್ಲಿ ಅಡಗಿರುವ ಮಾತೃ ನೋಟ ಅದು ಭಕ್ತರ ಅನುಭವಕ್ಕೆ ಮಾತ್ರ ನಿಲುಕುವಂಥದ್ದು.

ಮಾರಿಕಾಂಬಾ ಜಾತ್ರೆಯೆಂದರೆ ಮೇಲ್ನೋಟಕ್ಕೆ ಕಾಣುವುದು ದೇವಿಯ ಕಲ್ಯಾಣೋತ್ಸವ, ರಥೋತ್ಸವ, ಶೋಭಾಯಾತ್ರೆ, ಆಸೀನಳಾಗುವ ದೇವಿಗೆ ಗದ್ದುಗೆಯಲ್ಲಿ ಪೂಜೆ, ಹರಕೆ ಸೇವೆಗಳು. ಜಾತ್ರೆಯ ಅಂಗವಾಗಿ ಬರುವ ಮನರಂಜನೆ ಆಟಿಕೆಗಳು, ಅಂಗಡಿ ಸಾಲುಗಳು, ಬಳೆ ಪೇಟೆ, ತಿಂಡಿ–ತಿನಿಸುಗಳು, ಮಿಠಾಯಿ ಅಂಗಡಿ, ಬಣ್ಣದ ದೀಪ, ಜನದಟ್ಟಣಿ, ಊರತುಂಬೆಲ್ಲ ಕಾಣುವ ಹೊಸ ಮುಖಗಳು ಇವಿಷ್ಟೇ. ಆದರೆ ಶಿರಸಿ ಮಾರಿಕಾಂಬಾ ಜಾತ್ರೆಯೆಂದರೆ ನಾಡು–ನುಡಿಯ ಗಡಿಯನ್ನು ಬೆಸೆಯುವ ಸೇತುವೆಯಾಗಿದೆ. ದೇವಾಲಯದ ಬಾಬುದಾರರು, ದೇವಾಲಯದ ಆಡಳಿತ ಮಂಡಳಿ, ಸಿಬ್ಬಂದಿ ಇವರೆಲ್ಲರ ಬಿಡುವಿಲ್ಲದ ಕೆಲಸಗಳು ತೆರೆಯ ಹಿಂದೆ ನಡೆಯುತ್ತಿರುತ್ತವೆ. ಮಾರಿಕಾಂಬಾ ದೇವಾಲಯಕ್ಕೆ ಸಂಬಂಧಿಸಿ ಸುಮಾರು 65 ಬಾಬುದಾರ ಕುಟುಂಬಗಳಿವೆ. ಬಹುತೇಕ ಎಲ್ಲ ಕುಟುಂಬದವರಿಗೂ ಜಾತ್ರೆಯಲ್ಲಿ ಒಂದೊಂದು ಹೊಣೆಗಾರಿಕೆ ಹಂಚಿಕೆಯಾಗಿರುತ್ತದೆ. ಇದು ಸಾಂಪ್ರದಾಯಿಕ ಹೊಣೆಗಾರಿಕೆ. ವಂಶಪಾರಂಪರ್ಯವಾಗಿ ಬಂದಿರುವ ಜವಾಬ್ದಾರಿಯನ್ನು ಅಮ್ಮನಿಗಾಗಿ ಶ್ರದ್ಧೆಯಿಂದ ಮಾಡುತ್ತಾರೆ.

ಗೌಡರು, ಉಪ್ಪಾರರು, ಬಡಿಗೇರರು, ಮರಾಠಿಗರು, ಮೇಟಿಗಳು, ಆಸಾದಿಗಳು ಹೀಗೆ ಬಾಬುದಾರ ಕುಟುಂಬಗಳೆಲ್ಲವೂ ಕೃಷಿಕ ಹಿನ್ನೆಲೆ, ಕೃಷಿ ಕರ‍್ಮಿಕ ಹಿನ್ನೆಲೆಯವೇ ಆಗಿವೆ. ಎಲ್ಲ ಸಮುದಾಯಗಳನ್ನು ಒಟ್ಟಿಗೆ ಸೇರಿಸುವ, ಬಹುಮುಖಿ ಸಂಸ್ಕೃತಿಯನ್ನು ಬಿಂಬಿಸುವ ಜಾತ್ರೆ, ಬಿಡುವಿಲ್ಲದೇ ಕೆಲಸ ಮಾಡುವ ಕಾಯಕ ಜೀವಿಗಳಿಗೆ ಹೊಸ ಚೈತನ್ಯ ತುಂಬುತ್ತದೆ.

ಎರಡು ತಿಂಗಳ ಹಿಂದಿನಿಂದ ಮಾಡಿರುವ ಸಿದ್ಧತೆ ಪೂರ್ಣಗೊಂಡು, ಈಗ ಮಾರಿಕಾಂಬೆ ಗುದ್ದುಗೆಯೇರುವ ಕ್ಷಣ ಬಂದಿದೆ. ಅಮ್ಮನ ಸೇವೆಯಲ್ಲಿ ನಿರತರಾಗಿದ್ದವರಿಗೆ ಈಗ ಸಡಗರ. ಮನೆತುಂಬ ನೆಂಟರಿಷ್ಟರು ಬಂದಿದ್ದಾರೆ. ಇಡೀ ಮನೆ–ಮನಸ್ಸೆಲ್ಲ ಸಂಭ್ರಮದಲ್ಲಿ ಮುಳುಗಿದೆ.

ಮಾರಿಕಾಂಬಾ ಜಾತ್ರೆ ಸಂದರ್ಭದಲ್ಲಿ ಬಾಬುದಾರರ ಪಾತ್ರ ಮಹತ್ವದ್ದಾಗಿದೆ. ಒಂದೊಂದು ಸಮುದಾಯದವರು ಒಂದೊಂದು ಜವಾಬ್ದಾರಿ ನಿರ್ವಹಿಸಿ ಜಾತ್ರೆಯ ಯಶಸ್ಸಿಗೆ ಕೈಜೋಡಿಸುತ್ತಾರೆ
ಜಗದೀಶ ಗೌಡ– ಬಾಬುದಾರ ಪ್ರಮುಖ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT