ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳ ಪರಿಶೀಲಿಸಿ ನೈಜ ವರದಿ ನೀಡಿ: ಶಾಸಕ ಭೀಮಣ್ಣ ನಾಯ್ಕ

Published 16 ಮೇ 2023, 13:20 IST
Last Updated 16 ಮೇ 2023, 13:20 IST
ಅಕ್ಷರ ಗಾತ್ರ

ಶಿರಸಿ: ಜನರ ಸಮಸ್ಯೆ ಅರಿಯದೆ ಸಭೆಗೆ ಮಾಹಿತಿ ನೀಡುವ ಅಧಿಕಾರಿಗಳಿಗೆ ನೂತನ ಶಾಸಕ ಭೀಮಣ್ಣ ನಾಯ್ಕ  ಮಂಗಳವಾರ ಎಚ್ಚರಿಕೆ ನಡೆಯಿತು.

ಇಲ್ಲಿನ ಆಡಳಿತ ಸೌಧದಲ್ಲಿ ಕುಡಿಯುವ ನೀರಿನ ಸಮಸ್ಯೆ ಸಂಬಂಧ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು, ಸಮಸ್ಯೆ ಇರುವ ಕಡೆಗಳಲ್ಲಿ ಸ್ಥಳ ಪರಿಶೀಲಿಸದೆ, ಜನರ ಸಮಸ್ಯೆ ಅರಿಯದೆ ಸಭೆಗೆ ಮಾಹಿತಿ ನೀಡಿದ ಕೆಲ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

‘ಕ್ಷೇತ್ರದಲ್ಲಿ ಕುಡಿಯುವ ನೀರಿಗೆ ತತ್ವಾರವಿದೆ. ಗ್ರಾಮೀಣ ಭಾಗದ ಹಲವೆಡೆ ಸಮಸ್ಯೆ ಉಲ್ಬಣಿಸುತ್ತಿದೆ. ಶಿರಸಿ, ಸಿದ್ದಾಪುರ ನಗರ ಪ್ರದೇಶಗಳ ನೀರಿನ ಮೂಲಗಳು ಬತ್ತಿವೆ. ಶಾಶ್ವತ ಪರಿಹಾರವಿಲ್ಲದೆ ಜನರು ಕಂಗಾಲಾಗಿದ್ದಾರೆ. ಶಿರಸಿಯ ಲಾಲಗೌಡನಗರದಲ್ಲಿ ಹಲವು ತಿಂಗಳುಗಳಿಂದ ನೀರಿನ ಸಮಸ್ಯೆಯಿದೆ. ಚುನಾವಣಾ ಪ್ರಚಾರ ಸಂದರ್ಭದಲ್ಲಿ ಸ್ವತಃ ನನ್ನ ಗಮನಕ್ಕೆ ಬಂದಿದೆ. ಸಭೆಯಲ್ಲಿ ಎಲ್ಲವೂ ಸರಿಯಿದೆ ಎಂದು ಅಧಿಕಾರಿಗಳು ಮಾಹಿತಿ ನೀಡುತ್ತಾರೆ. ಈ ಕ್ಷಣವೇ ಸ್ಥಳಕ್ಕೆ ತೆರಳಿ ಸಮಸ್ಯೆ ನೋಡೋಣವೇ?’ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ನೀರಿನ ಸಮಸ್ಯೆ ಇರುವ  ಕಾಲಘಟ್ಟದಲ್ಲಿ ಸ್ಥಳ ಪರಿಶೀಲಿಸದೆ ಯಾವುದೇ ಸಮಸ್ಯೆಯಿಲ್ಲ ಎಂದು ಸರ್ಕಾರಕ್ಕೆ ವರದಿ ನೀಡುವ ಅಧಿಕಾರಿಗಳು ಎಚ್ಚರವಾಗಬೇಕು. ಮಾನವೀಯ ಆಧಾರದಲ್ಲಿ ಕೆಲಸ ಮಾಡಬೇಕು. ತಕ್ಷಣ ಸಮಸ್ಯೆ ನಿವಾರಣೆಗೆ ಅಧಿಕಾರಿಗಳು ಕ್ರಮವಹಿಸಬೇಕು ಎಂದ ಅವರು, ಮೂರು ದಿನಗಳಲ್ಲಿ ಸ್ಥಳ ಪರಿಶೀಲಿಸಿ ಸಮಗ್ರ ವರದಿ ಕೊಡಲು ಅಧಿಕಾರಿಗಳಿಗೆ ಸೂಚನೆ ಕೊಟ್ಟರು.

ಸಭೆಗೆ ಶಿರಸಿ ತಹಶೀಲ್ದಾರ್ ಹೇಮಂತ ಮಾಹಿತಿ ನೀಡಿ, ತಾಲ್ಲೂಕಿನ 9 ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಉದ್ಭವವಾಗಿತ್ತು. ಕೊಳವೆ ಬಾವಿ, ಟ್ಯಾಂಕರ್, ಜಲಜೀವನ ಮಿಷನ್ ಯೋಜನೆಯಡಿ ಸಧ್ಯ ನೀರು ಪೂರೈಸಲಾಗುತ್ತಿದೆ. ವಾರದೊಳಗೆ ಮಳೆ ಆಗದಿದ್ದರೆ 17 ಪಂಚಾಯ್ತಿಯಲ್ಲಿ ಸಮಸ್ಯೆ ಆಗಬಹುದು. ಹಳೆಯ ಬಾವಿ ಸ್ವಚ್ಛತೆ, ಕೊಳವೆ ಬಾವಿ ದುರಸ್ತಿ ಮಾಡಿಸಲಾಗುತ್ತಿದೆ ಎಂದರು.

ಸಿದ್ದಾಪುರ ಪಟ್ಟಣ ಪಂಚಾಯ್ತಿ ಅಧಿಕಾರಿ ಮಾಹಿತಿ ನೀಡಿ, ಸಿದ್ದಾಪುರ ಪಟ್ಟಣಕ್ಕೆ ಅರೆಂದೂರು ನಾಲಾದಿಂದ ನೀರು ಪೂರೈಕೆ ಆಗುತ್ತಿತ್ತು. ಆದರೆ ಈ ಬಾರಿ ನೀರು ಈಗಾಗಲೇ ಖಾಲಿಯಾಗಿದೆ. ನಾಳೆಯಿಂದ 14 ವಾರ್ಡ್‌ಗಳ ಎಲ್ಲ ಮನೆಗಳಿದ್ದು ಎಲ್ಲರಿಗೂ ಟ್ಯಾಂಕರ್ ನೀರು ಪೂರೈಸಬೇಕಿದೆ ಎಂದರು. 

ಈ ವೇಳೆ ಉಪವಿಭಾಗಾಧಿಕಾರಿ ದೇವರಾಜ್ ಆರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT