ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷಯ: ಆರು ತಿಂಗಳು ಚಿಕಿತ್ಸೆ ಪರಿಣಾಮಕಾರಿ

ಕಾರ್ಯಾಗಾರದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶರದ್ ನಾಯಕ ಸಲಹೆ
Last Updated 4 ಮಾರ್ಚ್ 2022, 15:22 IST
ಅಕ್ಷರ ಗಾತ್ರ

ಕಾರವಾರ: ‘ಕ್ಷಯರೋಗ ಪೀಡಿತರು ಕೆಲವು ದಿನ ಔಷಧಿ ಸೇವಿಸಿ ಸೋಂಕು ಗುಣವಾಯಿತು ಎಂದು ನಿರ್ಲಕ್ಷಿಸಬಾರದು. ಆರು ತಿಂಗಳು ಚಿಕಿತ್ಸೆ ಪಡೆಯುವುದು ಸೂಕ್ತ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶರದ್ ನಾಯಕ ಸಲಹೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಯ ಕ್ಷಯರೋಗ ವಿಭಾಗದಿಂದ ನಗರದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾದ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಕ್ಷಯರೋಗವು ಕೆಲವು ದಿನಗಳ ಚಿಕಿತ್ಸೆಯಿಂದ ಗುಣವಾದಂತೆ ಭಾಸವಾಗಬಹುದು. ಆದರೆ, ಅದರ ಬ್ಯಾಕ್ಟೀರಿಯಾ ದೇಹದಲ್ಲೇ ಇರುತ್ತದೆ. ಅದು ಮತ್ತಷ್ಟು ಬಲವಾಗಿ ಸೋಂಕು ಉಂಟು ಮಾಡಬಹುದು. ಆದ್ದರಿಂದ ಚಿಕಿತ್ಸೆಯನ್ನು ನಿರ್ಲಕ್ಷಿಸಬಾರದು. ಜೊತೆಗೇ ಕಡ್ಡಾಯವಾಗಿ ಪೌಷ್ಟಿಕ ಆಹಾರ ಸೇವನೆ ಮಾಡಬೇಕು. ಆಗ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಲು ಸಾಧ್ಯವಿದೆ’ ಎಂದು ಹೇಳಿದರು.

ಜಿಲ್ಲಾ ಕ್ಷಯ ರೋಗ ನಿಯಂತ್ರಾಣಾಧಿಕಾರಿ ಡಾ.ಮಹಾಬಲೇಶ್ವರ ಹೆಗಡೆ ಮಾತನಾಡಿ, ‘ಕ್ಷಯರೋಗವು ಮೈಕೊ ಬ್ಯಾಕ್ಟಿರಿಯಂ ಟ್ಯುಬರ್‌ಕ್ಯೂಲೋಸಿಸ್ ಎಂದು ಸೂಕ್ಷ್ಮ ರೋಗಾಣುವಿನಿಂದ ಗಾಳಿಯ ಮೂಲಕ ಹರಡುತ್ತದೆ. ರೋಗಿಯು ಕೆಮ್ಮಿದಾಗ ಮತ್ತು ಸೀನಿದಾಗ ಎದುರು ಇರುವ ವ್ಯಕ್ತಿಗೆ ಹರಡುತ್ತದೆ. ಕ್ಷಯ ರೋಗದ ಪತ್ತೆಗೆ ಕಫ ಪರೀಕ್ಷೆ ಹಾಗೂ ಎಕ್ಸ್ ರೇ, ‘ಸಿ.ಬಿ.ನಾಟ್ ಅಥವಾ ಟ್ರೂನಾಟ್’ ಪರೀಕ್ಷೆಗಳ ಮೂಲಕ ಉಚಿತವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷೆ ಮಾಡಿಸಬಹುದು’ ಎಂದು ಮಾಹಿತಿ ನೀಡಿದರು.

‘ಕ್ಷಯ ರೋಗವು ಮಕ್ಕಳಿಗೂ ಬರಬಹುದು. ಶ್ವಾಸಕೋಶದ ಮೂಲಕ ದೇಹದ ಯಾವುದೇ ಅಂಗಕ್ಕೂ ಬಾಧಿಸಬಹುದು. ಹಾಗಾಗಿ ‍ಪರೀಕ್ಷೆ ಮಾಡಿಸಿಕೊಳ್ಳುವುದು ಸೂಕ್ತ’ ಎಂದು ತಿಳಿಸಿದರು.

‘ಈ ರೋಗವನ್ನು ತಡೆಯಲು ಕ್ಷಯರೋಗಿಗಳು ಕೆಮ್ಮುವಾಗ, ಸೀನುವಾಗ ಬಾಯಿ, ಮೂಗಿನ ಬಳಿ ಕರವಸ್ತ್ರ ಹಿಡಿದುಕೊಳ್ಳಬೇಕು. ಮುಖಗವಸು ಧರಿಸುವುದೂ ಪರಿಣಾಮಕಾರಿಯಾಗಿದೆ. ರೋಗಿಯು ಎಲ್ಲೆಂದರಲ್ಲಿ ಕಫವನ್ನು ಉಗುಳಬಾರದು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT