ಸೌಕರ್ಯದ ನಿರೀಕ್ಷೆಯಲ್ಲಿ ಮಠಗಳ ನಾಡು ಸೋಂದಾ

ಶಿರಸಿ: ತಾಲ್ಲೂಕಿನ ಸೋಂದಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮೂರು ಪ್ರಮುಖ ಮಠಗಳಿವೆ. ಐತಿಹಾಸಿಕ ಕೋಟೆ, ಮುಂಡಿಗೆರೆ ಪಕ್ಷಿಧಾಮವನ್ನು ಒಳಗೊಂಡ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ.
2016ರ ವರೆಗೂ ಸೋಂದಾ ಹುಲೇಕಲ್ ಗ್ರಾಮ ಪಂಚಾಯ್ತಿಯ ಭಾಗವಾಗಿತ್ತು. ಬಳಿಕ ವಿಭಜನೆಗೊಂಡು ಪ್ರತ್ಯೇಕ ಗ್ರಾಮ ಪಂಚಾಯ್ತಿ ಆಗಿ ರೂಪುಗೊಂಡಿದೆ. ಸೋಂದಾ, ಮಠದೇವಳ, ಔಡಾಳ, ಮೊಗದ್ದೆ ಎಂಬ ನಾಲ್ಕು ಗ್ರಾಮಗಳನ್ನು ಒಳಗೊಂಡಿದೆ.
ಸ್ವರ್ಣವಲ್ಲಿ ಮಠ, ವಾದಿರಾಜ ಮಠ, ಜೈನ ಮಠ ಇಲ್ಲಿವೆ. ಜತೆಗೆ ವೀರಶೈವರ ಮಠವೂ ಇದೆ. ನಾಡಿನ ಪ್ರಮುಖ ಮಠಗಳಿರುವ ಕಾರಣಕ್ಕೆ ಭಕ್ತರು ನೂರಾರು ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಮಳೆಗಾಲದಲ್ಲಿ ಬೆಳ್ಳಕ್ಕಿಗಳಿಗೆ ಆಶ್ರಯ ನೀಡುವ ಮುಂಡಿಗೆಕೆರೆ ಪಕ್ಷಿ ವೀಕ್ಷಕರನ್ನು ಸೆಳೆಯುತ್ತದೆ. ಸೋದೆ ಅರಸರ ಕಾಲದ ಕೋಟೆಗಳು ಗಮನಸೆಳೆಯುವ ತಾಣವಾಗಿದ್ದರೂ ಈಚೆಗೆ ಸೊರಗಿವೆ.
ಪ್ರವಾಸಿಗರು ಹೆಚ್ಚು ಭೇಟಿ ನೀಡುವ ತಾಣವಾಗಿರುವುದು ಸೋಂದಾದ ಅಭಿವೃದ್ಧಿಗೆ ಅನುಕೂಲವಾಗಿದೆ ಎಂಬುದು ಗ್ರಾಮಸ್ಥರ ಅಭಿಪ್ರಾಯವಾಗಿದ್ದರೂ, ನಿರೀಕ್ಷಿತ ಮಟ್ಟದ ಅಭಿವೃದ್ಧಿ ಕಂಡಿಲ್ಲ ಎಂಬುದು ಹಲವರ ವಾದ.
‘ಸೋಂದಾಕ್ಕೆ ಐತಿಹಾಸಿಕ ಹಿನ್ನೆಲೆ ಇದ್ದು ಇಲ್ಲಿನ ಸುತ್ತಮುತ್ತಲಿನ ಊರುಗಳು ಸೌಕರ್ಯ ಹೊಂದಿದಂತೆ ಕಾಣುತ್ತವೆ. ಆದರೆ ತೆಂಕಿನಬೈಲ್, ಕೆಶಿನ್ಮನೆ ಭಾಗದಲ್ಲಿ ಇನ್ನೂ ಕಚ್ಚಾ ರಸ್ತೆ ಇದೆ. ಶಾಲೆಗೆ ತೆರಳುವ ಮಕ್ಕಳಿಗೆ ಸರಿಯಾದ ರಸ್ತೆ ಇಲ್ಲದೆ ಸಮಸ್ಯೆ ಉಂಟಾಗುತ್ತಿದೆ. ಮೊಗದ್ದೆ ಭಾಗದಲ್ಲೂ ಇಂತಹ ಸಮಸ್ಯೆ ಇದೆ’ ಎನ್ನುತ್ತಾರೆ ತೆಂಕಿನಬೈಲ್‍ನ ಚಂದ್ರು ಮರಾಠಿ.
‘ಮಠಗಳಿರುವುದು ಗ್ರಾಮದ ಅಭಿವೃದ್ಧಿಗೆ ವರದಾನವಾಗಿದೆ. ಐತಿಹಾಸಿಕ ತಾಣಗಳು, ಜಲಮೂಲಗಳ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ನಿಭಾಯಿಸುತ್ತಿವೆ. ಪ್ರತ್ಯೇಕ ಗ್ರಾಮ ಪಂಚಾಯ್ತಿ ಆಗಿ ರಚನೆಗೊಂಡ ಬಳಿಕ ಮೂಲಸೌಕರ್ಯಗಳ ಅಭಿವೃದ್ಧಿಯೂ ನಿರೀಕ್ಷಿತ ಮಟ್ಟದಲ್ಲಿದೆ’ ಎನ್ನುತ್ತಾರೆ ಸೊಂದಾ ಜಾಗೃತ ವೇದಿಕೆಯ ಅಧ್ಯಕ್ಷ ರತ್ನಾಕರ ಹೆಗಡೆ ಬಾಡಲಕೊಪ್ಪ.
ವರವಾದ ಗೋಬರ್ ಧನ್ ಘಟಕ
ಸ್ವಚ್ಛ ಭಾರತ ಮಿಷನ್ ಯೋಜನೆ ಅಡಿ ಸೋಂದಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಾದಿರಾಜ ಮಠದ ಆವರಣದಲ್ಲಿ ಹಸಿ ತ್ಯಾಜ್ಯ ಬಳಸಿ ಗೋಬರ್ ಗ್ಯಾಸ್ ಉತ್ಪಾದಿಸುವ ಘಟಕ ಆರಂಭಿಸಲಾಗಿದೆ.
‘2018ರಲ್ಲಿ ಘಟಕವನ್ನು ಜಿಲ್ಲಾ ಪಂಚಾಯ್ತಿ ಸೂಚನೆಯಂತೆ ಗ್ರಾಮ ಪಂಚಾಯ್ತಿ ನೆರವಿನಲ್ಲಿ ನಿರ್ಮಿಸಲಾಯಿತು. ಮಠಕ್ಕೆ ಪ್ರತಿನಿತ್ಯ ನೂರಾರು ಭಕ್ತರು ಭೇಟಿ ಕೊಡುವ ಕಾರಣ ಅಡುಗೆ ತ್ಯಾಜ್ಯಗಳು ಹೆಚ್ಚಿರುತ್ತವೆ. ಅವುಗಳನ್ನು ಎಸೆಯದೆ ಗ್ಯಾಸ್ ಮೂಲಕ ಮರುಬಳಕೆ ಮಾಡಿಕೊಳ್ಳಲಾಗುತ್ತಿದೆ’ ಎನ್ನುತ್ತಾರೆ ಪಿಡಿಒ ಯೋಗಿತಾ ಹೆಗಡೆ.
------------------
ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದ್ದು ರಸ್ತೆಗಳ ಅಭಿವೃದ್ಧಿಗೆ ಪ್ರಯತ್ನಿಸಲಾಗುತ್ತಿದೆ. ನರೇಗಾದಲ್ಲಿ ಪ್ರತಿಶತ ಸಾಧನೆ ಮಾಡಲಾಗಿದೆ.
ಮಮತಾ ಜೈನ್
ಸೋಂದಾ ಗ್ರಾಮ ಪಂಚಾಯ್ತಿ ಅಧ್ಯಕ್ಷೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.