ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರದ ಬೀದಿಗಳಲ್ಲಿ ಭಾಗಶಃ ಕತ್ತಲು!

ನಿರ್ವಹಣೆಯಿಲ್ಲದೇ ಬೆಳಗದ ಹಲವು ಬೀದಿದೀಪಗಳು: ದುರಸ್ತಿಗೆ ನಾಗರಿಕರ ಒತ್ತಾಯ
Last Updated 25 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಕಾರವಾರ: ಇಕ್ಕಟ್ಟಾದ ರಸ್ತೆಗಳು, ಅಲ್ಲೇ ಅಡ್ಡಾದಿಡ್ಡಿ ಮಲಗಿರುವ ಜಾನುವಾರು. ಎದುರಿನಿಂದ ಪ್ರಖರ ಬೆಳಕಿನ ಹೆಡ್‌ಲೈಟ್ ಬೆಳಗಿಸಿಕೊಂಡು ಬರುವ ವಾಹನಗಳು. ಅಷ್ಟರಲ್ಲಿ ಪಾದಚಾರಿಯು ರಸ್ತೆಯಂಚಿಗೆ ಸುರಕ್ಷಿತವಾಗಿ ಹೆಜ್ಜೆಯಿಡಲು ಅಡ್ಡಿಯಾಗುವ ಕತ್ತಲು!

ಹೌದು, ನಗರದ ವಿವಿಧ ರಸ್ತೆಗಳಲ್ಲಿ ಬೀದಿದೀಪಗಳು ಸರಿಯಾಗಿ ಬೆಳಗುತ್ತಿಲ್ಲ. ಇದರಿಂದ ಕತ್ತಲಾದ ಮೇಲೆ ಸಂಚರಿಸುವುದು ಕಷ್ಟವಾಗುತ್ತಿದೆಎಂದು ನಾಗರಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ನಗರದ ಪ್ರಮುಖ ರಸ್ತೆ ಗ್ರೀನ್‌ಸ್ಟ್ರೀಟ್‌ನಲ್ಲಿಸುಭಾಸ್ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ, ಹಬ್ಬುವಾಡದ ಒಳಭಾಗದಲ್ಲಿ ವಿವಿಧೆಡೆ, ಕೆಎಚ್‌ಬಿ ಕಾಲೊನಿಯಲ್ಲಿ, ಕೋಡಿಬಾಗದ ಕೆಲವೆಡೆ ಬೀದಿದೀಪಗಳು ಬೆಳಕು ನೀಡುತ್ತಿಲ್ಲ ಎಂದು ದೂರುತ್ತಿದ್ದಾರೆ.

‘ಗ್ರೀನ್‌ಸ್ಟ್ರೀಟ್‌ನಲ್ಲಿಅಂಗಡಿಗಳ ಮುಂದೆ ಅಳವಡಿಸಿರುವ ಬಲ್ಬ್‌ಗಳ ಬೆಳಕೇಸಾರ್ವಜನಿಕರಸಂಚಾರಕ್ಕೆ ಆಸರೆಯಾಗಿದೆ. ಸಂಜೆಯಾಗುತ್ತಿದ್ದಂತೆ ಬೀಡಾಡಿ ದನಗಳು, ಎಮ್ಮೆಗಳು ದಿನವೂ ಈ ರಸ್ತೆಯಲ್ಲಿ ಠಿಕಾಣಿ ಹೂಡುತ್ತವೆ.‍ಪಾದಚಾರಿ ಮಾರ್ಗವನ್ನು ಅಂಗಡಿಗಳು ಅತಿಕ್ರಮಿಸಿಕೊಂಡಿವೆ. ಹೀಗಾಗಿ ಸಾರ್ವಜನಿಕರು ವಿಧಿಯಿಲ್ಲದೇ ಕತ್ತಲೆಯಲ್ಲಿ ರಸ್ತೆಯ ನಡುವೆಯೇ ಹೆಜ್ಜೆ ಹಾಕುತ್ತಾರೆ. ಇದು ಅಪಾಯಕಾರಿಯಲ್ಲವೇ’ ಎನ್ನುವುದು ನಗರದ ವಿನಯ ಕುಮಾರ್ ಅವರ ಪ್ರಶ್ನೆಯಾಗಿದೆ.

‘ಕಾರವಾರ ನಗರವು ಹೆದ್ದಾರಿಯ ಅಂಚಿನಲ್ಲೇ ಇರುವ ಕಾರಣ ಭದ್ರತೆಯ ದೃಷ್ಟಿಯಿಂದ ಇಲ್ಲಿ ರಾತ್ರಿ ಸೂಕ್ತ ಬೆಳಕಿನ ವ್ಯವಸ್ಥೆ ಬೇಕು. ಸೂಕ್ಷ್ಮ ಪ್ರದೇಶವೂ ಆಗಿರುವ ಕಾರಣ ಇದಕ್ಕೆ ಹೆಚ್ಚು ಆದ್ಯತೆ ಕೊಡಬೇಕು. ಇದು ನಗರ ಮಾತ್ರವಲ್ಲ ದೇಶದ ಭದ್ರತೆಯ ಪ್ರಶ್ನೆಯೂ ಹೌದು’ ಎನ್ನುವುದು ವಿದ್ಯಾರ್ಥಿ ಪ್ರಶಾಂತ ನಾಯಕ ಅವರ ಅನಿಸಿಕೆಯಾಗಿದೆ.

‘ಬೆಲೆಬಾಳುವ ಆಭರಣಗಳನ್ನು ಧರಿಸಿ, ಮೊಬೈಲ್, ಪರ್ಸ್ ಜೊತೆಯಲ್ಲಿಟ್ಟುಕೊಂಡು ಹೋಗಲೂ ಆತಂಕವಾಗುತ್ತದೆ. ಕಾರವಾರ ಎಷ್ಟೇ ಸುರಕ್ಷಿತವಾಗಿದ್ದರೂ ಕತ್ತಲೆ ಪ್ರದೇಶಕ್ಕೆ ಬಂದಾಗ ಮನಸ್ಸಿಗೆ ಕಸಿವಿಸಿಯಾಗುತ್ತದೆ. ಸಾಕಷ್ಟು ಬೆಳಕು ಇದ್ದಲ್ಲಿ ಹೋಗುವಾಗ ಇರುವ ಸ್ಥೈರ್ಯ ಕತ್ತಲಲ್ಲಿ ಇರುವುದಿಲ್ಲ. ಆದ್ದರಿಂದ ನಗರದ ಅಭಿವೃದ್ಧಿ, ಪ್ರಸಿದ್ಧಿಯಲ್ಲಿ ಬೀದಿದೀಪದ ಪಾಲೂ ಇದೆ’ ಎನ್ನುತ್ತಾರೆ ಅವರು.

ಟ್ಯೂಬ್‌ಲೈಟ್, ಎಲ್‌ಇಡಿ, ಹೈಮಾಸ್ಟ್ ದೀಪಗಳನ್ನು ನಗರದ ಬೀದಿ ಬದಿಯ ವಿದ್ಯುತ್ ಕಂಬಗಳಿಗೆ ಅಳವಡಿಸಲಾಗಿದೆ. ಮರಗಳು ಇರುವ ಪ್ರದೇಶಗಳಲ್ಲಿ ವಿದ್ಯುತ್ ದೀಪದ ಬೆಳಕು ಎಲೆಗಳ ನಡುವೆ ಕಳೆದುಹೋಗುತ್ತಿದೆ. ಅವುಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡಬೇಕು ಎನ್ನುವುದು ನಾಗರಿಕರ ಒತ್ತಾಯವಾಗಿದೆ.

ಸಮಸ್ಯೆ ಪರಿಹರಿಸಲು ಆದ್ಯತೆ‌’:‘ನಗರದ ಕೆಲವು ಪ್ರದೇಶಗಳಲ್ಲಿ ಬೀದಿದೀಪಗಳ ಸಮಸ್ಯೆ ಇರುವುದು ಗಮನಕ್ಕೆ ಬಂದಿದೆ. ಅವುಗಳ ದುರಸ್ತಿ ಹಾಗೂ ಹೊಸದು ಅಳವಡಿಸುವ ಬಗ್ಗೆ ಗಮನ ಹರಿಸಲಾಗುವುದು’ ಎಂದು ನಗರಸಭೆಯ ಎಲೆಕ್ಟ್ರಿಕಲ್ಸ್ ವಿಭಾಗದ ಎಂಜಿನಿಯರ್ ವೀಣಾ ಪೆಡ್ನೇಕರ್‌ ತಿಳಿಸಿದ್ದಾರೆ.

‘ಗ್ರೀನ್‌ಸ್ಟ್ರೀಟ್‌ನಲ್ಲಿ ಹೆಸ್ಕಾಂ ತಂತಿಯಲ್ಲಿ ಲೋಡ್ ಸಮಸ್ಯೆಯಿದೆ. ಸಂಜೆಯೇ ಬೀದಿದೀಪಗಳ ಸ್ವಿಚ್ ಆನ್ ಮಾಡಿದ್ದರೂ ರಾತ್ರಿ 10.30ರ ಸುಮಾರಿಗೆ ಅವು ಬೆಳಗಲು ಶುರು ಮಾಡುತ್ತವೆ. ಈಸಮಸ್ಯೆ ಪರಿಹರಿಸಲು ಕ್ರಮ ತೆಗೆದುಕೊಳ್ಳಲಾಗುತ್ತದೆ’ ಎಂದು ಅವರು ಹೇಳಿದ್ದಾರೆ.

‘ಉಳಿದಂತೆ ಕೋಡಿಬೀರ್ ದೇವಸ್ಥಾನ, ಕೆಎಚ್‌ಬಿ ಕಾಲೊನಿಯ ಕೆಲವೆಡೆ ಬಲ್ಬ್ ಹಾಳಾಗಿವೆ. ಸೈಯದ್ ಗಲ್ಲಿ, ಥಾಮ್ಸೆ ವಾಡ, ಕೇಶವನಾಯ್ಕ ವಾಡ, ತೇಲಂಗ ರಸ್ತೆಯಲ್ಲಿ ಬಹಳ ಹಿಂದಿನ ಲೈಪ್ ಫಿಟ್ಟಿಂಗ್ ಇವೆ. ಅವುಗಳ ದುರಸ್ತಿ ಸಾಧ್ಯವಿಲ್ಲ. ಅನುದಾನ ಬಂದ ಕೂಡಲೇ ಹೊಸದನ್ನು ಅಳವಡಿಸಲಾಗುತ್ತದೆ. ದೂರುಗಳು ಬಂದ ಕೂಡಲೇ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದೇವೆ’ ಎಂದು ಅವರು ಮಾಹಿತಿ ನೀಡಿದ್ದಾರೆ.‘ಬೀದಿದೀಪಗಳ ನಿರ್ವಹಣೆ, ಸಮಯಕ್ಕೆ ಆನ್, ಆಫ್ ಮಾಡುವುದು ಗುತ್ತಿಗೆದಾರರ ಜವಾಬ್ದಾರಿಯಾಗಿದೆ. ಒಟ್ಟಿನಲ್ಲಿ ನಾಗರಿಕರಿಗೆ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT