ಗುರುವಾರ , ಫೆಬ್ರವರಿ 2, 2023
27 °C
ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಹಾಲಕ್ಕಿ ಸಾಂಪ್ರದಾಯಿಕ ನೃತ್ಯಕ್ಕೆ ಅವಕಾಶ

ರಾಜಪಥದಲ್ಲಿ ಸುಗ್ಗಿ ಕುಣಿತದ ಹಿಗ್ಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಜಿಲ್ಲೆಯ ಹಾಲಕ್ಕಿ ಒಕ್ಕಲಿಗ ಸಮುದಾಯದ ಸಾಂಪ್ರದಾಯಿಕ ಸುಗ್ಗಿ ಕುಣಿತ ಈ ಬಾರಿ ರಾಷ್ಟ್ರಮಟ್ಟದಲ್ಲಿ ಮಿಂಚಲಿದೆ. ಗಣರಾಜ್ಯೋತ್ಸವದ ದಿನ ನವದೆಹಲಿಯ ರಾಜಪಥದಲ್ಲಿ ನಡೆಯಲಿರುವ ಸ್ತಬ್ಧಚಿತ್ರಗಳ ಪ್ರದರ್ಶನದಲ್ಲಿ ಈ ಕುಣಿತಕ್ಕೆ ಅವಕಾಶ ಕಲ್ಪಿಸಲಾಗಿದೆ.

ನಾರಿಶಕ್ತಿ ಘೋಷವಾಕ್ಯದಡಿ ಕರ್ನಾಟಕ ರಾಜ್ಯದ ಸ್ತಬ್ಧಚಿತ್ರ ಪ್ರದರ್ಶಿತಗೊಳ್ಳುತ್ತಿದೆ. ಪದ್ಮಶ್ರೀ ತುಳಸಿಗೌಡ ಸೇರಿದಂತೆ ತಳ ಸಮುದಾಯದಿಂದ ಬಂದು ಉನ್ನತ ಸಾಧನೆ ಮಾಡಿದ ರಾಜ್ಯದ ಮೂವರು ಮಹಿಳಾ ಸಾಧಕಿಯರ ಕಲಾಕೃತಿ ಹೊಂದಿರುವ ಸ್ತಬ್ಧಚಿತ್ರದ ಮೆರವಣಿಗೆ ನಡೆಯಲಿದೆ. ಇದರೊಟ್ಟಿಗೆ ಸುಗ್ಗಿ ಕುಣಿತದ ಆಕರ್ಷಣೆ ಇರಲಿದೆ.

ದೇಶದ ವಿವಿಧ ರಾಜ್ಯಗಳ ಜಾನಪದ ಕಲಾಪ್ರಕಾರಗಳ ಪ್ರದರ್ಶನಕ್ಕೆ ಗಣರಾಜೋತ್ಸವ ಪರೇಡ್‍ನಲ್ಲಿ ಅವಕಾಶ ಸಿಗುತ್ತದೆ. ಈ ಬಾರಿ ಕರ್ನಾಟಕದಿಂದ ಜಿಲ್ಲೆಯ ಜಾನಪದ ಕಲೆಯನ್ನು ಪ್ರತಿನಿಧಿಸಲಾಗುತ್ತಿದೆ. ಅಮದಳ್ಳಿಯ ಪುರುಷೋತ್ತಮ ಗೌಡ ನೇತೃತ್ವದಲ್ಲಿ ಬಂಟದೇವ ಯುವಕ ಸಂಘದ ಸುಮಾರು 25 ಜನರ ತಂಡ ಈಗಾಗಲೇ ದೆಹಲಿಗೆ ತೆರಳಿದೆ.

‘ನವದೆಹಲಿಯಲ್ಲಿ ಸುಗ್ಗಿ ಕುಣಿತ ಕಲೆ ಪ್ರದರ್ಶಿಸಲು ಜ.11ರಂದು ಸರ್ಕಾರದಿಂದ ಸೂಚನೆ ಬಂದಿತ್ತು. 16ರಂದು ದೆಹಲಿಗೆ ಬಂದಿಳಿದು ತರಬೇತಿ ಆರಂಭಿಸಿದೆವು. ಜ.23ರಂದು ಸೇನೆಯ ಆರ್.ಆರ್.ಕ್ಯಾಂಪಿನ್ ಝೇಂಕಾರ ಸಭಾಂಗಣದಲ್ಲಿ ನಡೆದ ರಾಷ್ಟ್ರಮಟ್ಟದ ಕಲಾ ಪ್ರದರ್ಶನದಲ್ಲೂ ಸುಗ್ಗಿ ಕುಣಿತ ಪ್ರದರ್ಶಿಸಿದ್ದೇವೆ. ರಾಜಪಥದಲ್ಲಿಯೂ ತರಬೇತಿ ನಡೆಸಲಾಗುತ್ತಿದೆ’ ಎಂದು ಕಲಾವಿದ ಪುರುಷೋತ್ತಮ ಗೌಡ ಪ್ರತಿಕ್ರಿಯಿಸಿದರು.

‘ದೆಹಲಿಯಲ್ಲಿ ಸುಮಾರು 20ಕ್ಕೂ ಹೆಚ್ಚು ಸುಗ್ಗಿ ಕುಣಿತದ ಕಾರ್ಯಕ್ರಮಗಳನ್ನು ಪ್ರದರ್ಶಿಸಿದ್ದೇವೆ. ಆದರೆ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಸಿಕ್ಕಿರುವ ಅವಕಾಶ ಅವಿಸ್ಮರಣೀಯವಾಗಲಿದೆ. ಇದು ಹಾಲಕ್ಕಿಗರ ಕಲೆಗೆ ದೇಶ ನೀಡಿದ ಗೌರವ ಎಂದು ಭಾವಿಸುತ್ತೇವೆ’ ಎಂದು ಸಂತಸ ಹಂಚಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು