ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ | ಈಜುಕೊಳದಲ್ಲಿ ಪಾಚಿಗಟ್ಟಿದ ನೀರು

Published 17 ಡಿಸೆಂಬರ್ 2023, 4:40 IST
Last Updated 17 ಡಿಸೆಂಬರ್ 2023, 4:40 IST
ಅಕ್ಷರ ಗಾತ್ರ

ಕಾರವಾರ: ಇಲ್ಲಿನ ಎಂ.ಜಿ ರಸ್ತೆಯಲ್ಲಿರುವ ನಗರಸಭೆಯ ಈಜುಕೊಳ ಬಾಗಿಲು ಮುಚ್ಚಿ ವರ್ಷ ಕಳೆದಿದೆ. ನವೀಕರಣ ಕೆಲಸವೂ ಸ್ಥಗಿತಗೊಂಡಿದ್ದು, ಈಜುಕೊಳದಲ್ಲಿ ನೀರು ಖಾಲಿ ಮಾಡದ ಪರಿಣಾಮ ಪಾಚಿಗಟ್ಟಿರುವ ನೀರು ಆತಂಕ ಹುಟ್ಟಿಸಿದೆ.

ನಗರಸಭೆ ಸುಪರ್ದಿಯಲ್ಲಿರುವ ಈಜುಕೊಳವನ್ನು ಸ್ಥಳೀಯ ಸಂಸ್ಥೆಯೊಂದು ಸ್ವಂತ ವೆಚ್ಚ ಭರಿಸಿ ನವೀಕರಿಸಲು ಮುಂದೆ ಬಂದಿತ್ತು. ಕಳೆದ ವರ್ಷ ನಗರಸಭೆಯ ಆಡಳಿತ ಮಂಡಳಿಯ ಸಾಮಾನ್ಯಸಭೆಯಲ್ಲಿ ಕಾಮಗಾರಿಗೆ ಅನುಮೋದನೆ ನೀಡಲಾಗಿತ್ತು. ಕೆಲಸ ಆರಂಭಿಸಿ ವರ್ಷ ಸಮೀಪಿಸಿದೆ. ಆದರೆ ಇನ್ನೂ ಶೇ 25ರಷ್ಟು ಕೆಲಸವೂ ಪೂರ್ಣಗೊಂಡಿಲ್ಲ.

ಈಜುಕೊಳದ ಆವರಣದಲ್ಲಿ ಆಳೆತ್ತರದವರೆಗೆ ಗಿಡಗಂಟಿಗಳು ಬೆಳೆದು ನಿಂತಿವೆ. 12 ಅಡಿ ಆಳದ ಈಜುಕೊಳದಲ್ಲಿ ಪೂರ್ಣ ಪ್ರಮಾಣದಲ್ಲಿ ನೀರು ನಿಂತಿದೆ. ಮಳೆಗಾಲದಲ್ಲಿಯೂ ಮಳೆನೀರು ಸೇರಿಕೊಂಡಿದೆ. ಹಲವು ತಿಂಗಳು ಕಳೆದಿದ್ದರಿಂದ ನೀಲಿ ಬಣ್ಣದ ಈಜುಕೊಳದಲ್ಲಿ ಹಸಿರು ಬಣ್ಣದ ನೀರು ನಿಂತಿದೆ. ಪಾಚಿಗಳು ನೀರಿನಲ್ಲಿ ತೇಲುತ್ತಿವೆ.

ಈಜುಕೊಳದಲ್ಲಿ ಪಾಚಿಗಟ್ಟಿರುವ ನೀರನ್ನು ತೆರವು ಮಾಡಿ ಕೊಳವನ್ನು ಶುಚಿಯಾಗಿಡುವಂತೆ ಗುತ್ತಿಗೆ ಪಡೆದ ಸಂಸ್ಥೆಗೆ ಸೂಚಿಸಲಾಗುವುದು.
ಸದಾನಂದ ಸಾಳೆಹಿತ್ತಲ, ನಗರಸಭೆ ಎಇಇ

‘ಈಜುಕೊಳದ ಪಕ್ಕದಲ್ಲಿ ಉಪನೋಂದಣಾಧಿಕಾರಿ ಕಚೇರಿ, ಹೂವು ಹಣ್ಣಿನ ಮಾರುಕಟ್ಟೆ, ಅಂಗಡಿ ಮುಂಗಟ್ಟುಗಳು ಇವೆ. ನಗರದ ಹೃದಯಭಾಗದಲ್ಲಿರುವ ಈಜುಕೊಳದಲ್ಲಿ ಮಲೀನ ನೀರು ನಿಲ್ಲಲು ಅವಕಾಶ ಮಾಡಿಕೊಟ್ಟಿದ್ದು ಸೊಳ್ಳೆ ಉತ್ಪತ್ತಿಗೆ ಕಾರಣವಾಗುತ್ತಿದೆ. ಇದರಿಂದ ಅಕ್ಕಪಕ್ಕದ ಪ್ರದೇಶದಲ್ಲಿ ಸೊಳ್ಳೆ ಕಾಟವೂ ಹೆಚ್ಚಿದ್ದು ರೋಗರುಜಿನ ಹರಡುವ ಆತಂಕ ಎದುರಾಗಿದೆ’ ಎನ್ನುತ್ತಾರೆ ಅಂಗಡಿಕಾರ ಪರೇಶ ಬಾಡಕರ್.

‘ಪ್ರವಾಸಿಗರ ಆಗಮನ ಹೆಚ್ಚಿದ್ದು ಸಮುದ್ರದಲ್ಲಿ ಸ್ನಾನ ಮಾಡಿದ ಪ್ರವಾಸಿಗರು ಈಜುಕೊಳದಲ್ಲಿಯೂ ಸ್ನಾನ ಮಾಡಲು ಆಸಕ್ತಿ ತೋರುತ್ತಾರೆ. ಅಲ್ಲದೆ ಕ್ರಿಸ್ಮಸ್ ರಜೆ ಅವಧಿಯ ವೇಳೆ ಮಕ್ಕಳು ಈಜು ಚಟುವಟಿಕೆಯಲ್ಲಿ ತೊಡಗಲು ಮುಂದಾಗುತ್ತಾರೆ. ನಗರದಲ್ಲಿ ಸಿಹಿನೀರಿನ ಈಜುಕೊಳ ಇದ್ದೂ ಪ್ರಯೋಜನಕ್ಕೆ ಬರದಂತಾಗಿದೆ. ಕೆಲವು ವರ್ಷಗಳಿಂದಲೂ ಈ ಸಮಸ್ಯೆ ಮುಂದುವರೆದಿದೆ’ ಎಂದು ಖುರ್ಸಾವಾಡಾದ ದತ್ತಾನಂದ ನಾಯ್ಕ ಬೇಸರ ವ್ಯಕ್ತಪಡಿಸಿದರು.

‘ಈಜುಕೊಳ ನವೀಕರಣ ಕಾಮಗಾರಿಯನ್ನು ಕಳೆದ ಬೇಸಿಗೆಯಲ್ಲೇ ಮುಗಿಸಲು ಸೂಚಿಸಲಾಗಿತ್ತು. ನಿಧಾನಗತಿಯಲ್ಲಿ ಕೆಲಸ ಮಾಡಲಾಗುತ್ತಿದೆ. ಕೆಲವು ದಿನದಿಂದ ಕೆಲಸವೂ ನಡೆಯುತ್ತಿಲ್ಲ’ ಎಂದು ನಗರಸಭೆ ಅಧಿಕಾರಿಯೊಬ್ಬರು ಹೇಳಿದರು.

ಹಲವು ಬಾರಿ ನೋಟಿಸ್‌

‘ಈಜುಕೊಳದ ನವೀಕರಣ ಕಾಮಗಾರಿ ಇಷ್ಟರೊಳಗೆ ಪೂರ್ಣಗೊಳ್ಳಬೇಕಿತ್ತು. ಸ್ವ ಆಸಕ್ತಿಯಿಂದ ಈಜುಕೊಳದ ನಿರ್ವಹಣೆಗೆ ಮುಂದೆ ಬಂದಿರುವ ಸಂಸ್ಥೆಯವರು ಅಂದಾಜು ₹23 ಲಕ್ಷ ವೆಚ್ಚದಲ್ಲಿ ನವೀಕರಣ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ನವೀಕರಣ ಕೆಲಸ ನಿಧಾನಗತಿಯಲ್ಲಿ ನಡೆಯುತ್ತಿರುವುದಕ್ಕೆ ಹಲವು ಬಾರಿ ನೋಟಿಸ್‌ ನೀಡಲಾಗಿದೆ. ತ್ವರಿತವಾಗಿ ಕೆಲಸ ಮಾಡುವಂತೆ ಇನ್ನೊಮ್ಮೆ ಸೂಚಿಸಲಾಗುವುದು’ ಎಂದು ನಗರಸಭೆ ಎಇಇ ಸದಾನಂದ ಸಾಳೆಹಿತ್ತಲ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT