ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ದುಬಾರಿಯಾಗಲಿದೆ ‘ಟುಪಲೇವ್’ ನಿರ್ವಹಣೆ!

ಯುದ್ಧವಿಮಾನ ಮ್ಯೂಸಿಯಂ ಹಸ್ತಾಂತರಕ್ಕೆ ಎಡಿಸಿ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿ
Published 13 ಫೆಬ್ರುವರಿ 2024, 7:43 IST
Last Updated 13 ಫೆಬ್ರುವರಿ 2024, 7:43 IST
ಅಕ್ಷರ ಗಾತ್ರ

ಕಾರವಾರ: ಇಲ್ಲಿನ ಟ್ಯಾಗೋರ್ ಕಡಲತೀರದ ಐಎನ್ಎಸ್ ಚಪಲ್ ಯುದ್ಧನೌಕೆ ವಸ್ತುಸಂಗ್ರಹಾಲಯದ ಉದ್ಯಾನದಲ್ಲಿ ಮೂರುವರೆ ತಿಂಗಳ ಹಿಂದಿನಿಂದಲೇ ಬಂದು ನೆಲೆನಿಂತಿರುವ ‘ಟುಪಲೇವ್’ (142–ಎಂ) ಯುದ್ಧವಿಮಾನ ಸಾರ್ವಜನಿಕ ವೀಕ್ಷಣೆಗೆ ನೀಡಲು ಇನ್ನೂ ಕೆಲ ತಗಲುವ ಸಾಧ್ಯತೆ ಇದೆ. ವಿಮಾನ ನಿರ್ವಹಣೆ ದುಬಾರಿಯಾಗಲಿರುವುದು ಜಿಲ್ಲಾಡಳಿತಕ್ಕೆ ಚಿಂತೆ ತಂದಿದೆ.

ಯುದ್ಧವಿಮಾನವನ್ನು ಕಾರವಾರಕ್ಕೆ ಕರೆತರುವುದರ ಜತೆಗೆ ಅದರ ಜೋಡಣೆಯ ವೆಚ್ಚವನ್ನು ನೌಕಾದಳ ನಿಭಾಯಿಸಿದೆ. ವಿಮಾನವನ್ನು ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಲು ಇನ್ನಷ್ಟೆ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಬೇಕಾಗಿದೆ.

‘53.6 ಮೀ. ಉದ್ದ ಮತ್ತು 35 ಮೀ.ಗೂ ಹೆಚ್ಚು ಅಗಲವಿರುವ ಯುದ್ಧವಿಮಾನ ವಸ್ತುಸಂಗ್ರಹಾಲಯ ನಿರ್ವಹಣೆಗೆ ತಗುಲಲಿರುವ ವೆಚ್ಚದ ಮಾಹಿತಿಯೇ ಜಿಲ್ಲಾಡಳಿತಕ್ಕೆ ದಿಗಿಲುಬಡಿಸಿದೆ. ಇದೇ ಕಾರಣಕ್ಕೆ ಹಸ್ತಾಂತರಕ್ಕೆ ವಿಳಂಬವಾಗುತ್ತಿದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

‘ಟುಪಲೇವ್ ಯುದ್ಧವಿಮಾನದ ಜೋಡಣೆ ಕಾರ್ಯದವರೆಗೆ ನೌಕಾದಳ ಜವಾಬ್ದಾರಿ ನಿಭಾಯಿಸಿದೆ. ಹಸ್ತಾಂತರ ಪ್ರಕ್ರಿಯೆಗೆ ಮುನ್ನ ನೌಕಾದಳದವರು ಕೆಲ ಸೂಚನೆಗಳನ್ನು ನೀಡಿದ್ದಾರೆ. ಹವಾನಿಯಂತ್ರಿತ ವ್ಯವಸ್ಥೆಯೂ ಸೇರಿದಂತೆ ಹಲವು ಸೌಲಭ್ಯವುಳ್ಳ ವಿಮಾನವನ್ನು ನಿರ್ವಹಣೆ ಮಾಡಲು ಮಾಸಿಕ ಕನಿಷ್ಠ ₹2 ಲಕ್ಷ ವೆಚ್ಚ ತಗಲುತ್ತದೆ. ನಿರ್ವಹಣೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ’ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಯುದ್ಧವಿಮಾನ ಹಸ್ತಾಂತರ ಮಾಡಿಕೊಂಡ ತಕ್ಷಣದಿಂದಲೇ ಅದರ ನಿರ್ವಹಣೆ ಜವಾಬ್ದಾರಿ ಜಿಲ್ಲಾಡಳಿತಕ್ಕೆ ಸೇರುತ್ತದೆ. ಆದರೆ ಹಸ್ತಾಂತರಕ್ಕೆ ಮೊದಲು ವಿಮಾನ ನಿರ್ವಹಣೆಗೆ ಅಗತ್ಯ ತಯಾರಿ ಮಾಡಿಕೊಳ್ಳಬೇಕಾಗುತ್ತದೆ. ಅಲ್ಲದೆ ಇನ್ನಿತರ ಕೆಲ ತಾಂತ್ರಿಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಾಗಿದೆ. ಹೀಗಾಗಿ ಹೆಚ್ಚುವರಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ತಜ್ಞರನ್ನು ಒಳಗೊಂಡ ಸಮಿತಿ ರಚಿಸಲಾಗಿದ್ದು, ಇದೇ ಸಮಿತಿ ನೌಕಾದಳದ ಜತೆಗೆ ಸಂವಹನ ನಡೆಸಿ ಹಸ್ತಾಂತರ ಪ್ರಕ್ರಿಯೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ’ ಎಂದು ತಿಳಿಸಿದರು.

2017ರಲ್ಲಿ ಭಾರತೀಯ ಸೇನೆಯ ಕರ್ತವ್ಯದಿಂದ ನಿವೃತ್ತಿಯಾದ ಯುದ್ಧವಿಮಾನವನ್ನು ತಮಿಳುನಾಡಿನ ಅರಕ್ಕೋಣಮ್‍ನಲ್ಲಿರುವ ರಾಜೋಲಿ ನೌಕಾನೆಲೆಯಿಂದ ಕಳೆದ ಸೆಪ್ಟೆಂಬರನಲ್ಲಿ ಇಲ್ಲಿಗೆ ತರಲಾಗಿದೆ.

ಟುಪಲೇವ್ ಯುದ್ಧವಿಮಾನ ವಸ್ತುಸಂಗ್ರಹಾಲಯ ನಿರ್ವಹಣೆಗೆ ವಾರ್ಷಿಕವಾಗಿ ₹20 ಲಕ್ಷಕ್ಕಿಂತ ಹೆಚ್ಚಿನ ಮೊತ್ತ ತಗಲಬಹುದು ಎಂದು ನೌಕಾದಳದ ಅಧಿಕಾರಿಗಳು ಅಂದಾಜಿಸಿ ಮಾಹಿತಿ ನೀಡಿದ್ದಾರೆ
ಗಂಗೂಬಾಯಿ ಮಾನಕರ ಜಿಲ್ಲಾಧಿಕಾರಿ
ವೀಕ್ಷಣೆಗೆ ಪ್ರವಾಸಿಗರ ಕಾತರ
ಐಎನ್ಎಸ್ ಚಪಲ್ ಯುದ್ಧನೌಕೆ ವೀಕ್ಷಣೆಗೆ ಬರುವ ಪ್ರವಾಸಿಗರಲ್ಲದೆ ಹೆದ್ದಾರಿಯಿಂದ ಗೋವಾದತ್ತ ಪ್ರಯಾಣಿಸುವ ಪ್ರವಾಸಿಗರು ಯುದ್ಧವಿಮಾನ ಕಂಡು ಅದರ ವೀಕ್ಷಣೆಗೆ ಉದ್ಯಾನಕ್ಕೆ ಭೇಟಿ ನೀಡುತ್ತಿದ್ದಾರೆ. ಆದರೆ ಸಾರ್ವಜನಿಕ ವೀಕ್ಷಣೆಗೆ ಅವಕಾಶ ಇಲ್ಲದ್ದನ್ನು ತಿಳಿದು ಬೇಸರಗೊಳ್ಳುತ್ತಿದ್ದಾರೆ. ಕೆಲವರು ಯುದ್ಧವಿಮಾನ ವೀಕ್ಷಣೆಗೆ ಮುಕ್ತಗೊಳಿಸಿದ ಬಳಿಕ ಮಾಹಿತಿ ನೀಡುವಂತೆ ಇಲ್ಲಿನ ಸಿಬ್ಬಂದಿಗೆ ಮನವಿ ಮಾಡಿದ್ದಾರೆ. ‘ಯುದ್ಧನೌಕೆ ವೀಕ್ಷಣೆಗೆ ಬಂದ 180ಕ್ಕೂ ಹೆಚ್ಚು ಪ್ರವಾಸಿಗರು ಯುದ್ಧವಿಮಾನ ವಸ್ತುಸಂಗ್ರಹಾಲಯ ಉದ್ಘಾಟನೆಗೊಂಡ ತಕ್ಷಣ ಮಾಹಿತಿ ನೀಡುವಂತೆ ದೂರವಾಣಿ ಸಂಖ್ಯೆ ನೀಡಿ ಮರಳಿದ್ದಾರೆ. ಕೆಲವರು ವಾರಕ್ಕೆ ಒಂದೆರಡು ಬಾರಿ ಕರೆ ಮಾಡಿ ವಿಚಾರಿಸುತ್ತಿದ್ದಾರೆ’ ಎಂದು ಯುದ್ಧನೌಕೆ ವಸ್ತುಸಂಗ್ರಹಾಲಯದ ಪ್ರವಾಸಿ ಮಾರ್ಗದರ್ಶಿ ವಿಜಯ ನಾಯ್ಕ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT