ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಳ್ಳವರು ‘ಗ್ಯಾರಂಟಿ’ಯಿಂದ ಹಿಂದೆ ಸರಿಯಲಿ: ಮಂಕಾಳ ವೈದ್ಯ

Published 4 ಸೆಪ್ಟೆಂಬರ್ 2024, 13:54 IST
Last Updated 4 ಸೆಪ್ಟೆಂಬರ್ 2024, 13:54 IST
ಅಕ್ಷರ ಗಾತ್ರ

ಮುಂಡಗೋಡ: ‘ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಕೇವಲ ಚುನಾವಣೆಗೋಸ್ಕರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿಲ್ಲ. ಉಳ್ಳವರು ಯೋಜನೆಯಿಂದ ಹಿಂದೆ ಸರಿದರೆ ಇನ್ನಷ್ಟು ಬಡವರಿಗೆ ಅನುಕೂಲವಾಗಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ತಾಲ್ಲೂಕು ಕಾರ್ಯಾಲಯವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಅರ್ಹರು ಗ್ಯಾರಂಟಿ ಯೋಜನೆಯಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಪ್ರತಿ ತಾಲ್ಲೂಕಿನಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಸಮಿತಿ ರಚಿಸಲಾಗಿದೆ. ಯೋಜನೆಯಿಂದ ವಂಚಿತರಾದವರನ್ನು ಪತ್ತೆ ಹಚ್ಚಿ, ಅವರಿಗೂ ಪಂಚ ಯೋಜನೆಯ ಸೌಲಭ್ಯ ಸಿಗುವಂತೆ ಮಾಡುವುದು ಪ್ರಾಧಿಕಾರ ಸಮಿತಿಯ ಕೆಲಸವಾಗಿದೆ’ ಎಂದರು.

‘ಜಿಲ್ಲೆಯಲ್ಲಿ 1.800 ಜನರು ಗ್ಯಾರಂಟಿ ಯೋಜನೆ ಬೇಡವೆಂದು ಈಗಾಗಲೇ ಬರೆದುಕೊಟ್ಟಿದ್ದಾರೆ. ಪಂಚ ಯೋಜನೆಗಳು ಬಡವರು ಸುಖ, ನೆಮ್ಮದಿಯಿಂದ ಬದುಕಲು ನೆರವಾಗಿವೆ. ಗ್ಯಾರಂಟಿ ಯೋಜನೆಗಳು ರಾಜ್ಯ ಕಾಂಗ್ರೆಸ್‌ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಾಗಿವೆ’ ಎಂದರು.

ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ‘ಸಮಾಜದ ಕಟ್ಟಕಡೆಯ ವ್ಯಕ್ತಿಯ ಬಗ್ಗೆ ಯೋಚನೆ ಮಾಡಿದಾಗ ಮಾತ್ರ ನಿಜ ಅರ್ಥದಲ್ಲಿ ಜನ ಸೇವೆ ಆಗುತ್ತದೆ. ಎಲ್ಲ ಅರ್ಹರು ಗ್ಯಾರಂಟಿ ಯೋಜನೆ ಲಾಭ ಪಡೆಯಲಿ’ ಎಂದರು.

ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ ನಾಯ್ಕ, ತಾಲ್ಲೂಕು ಸಮಿತಿಯ ಅಧ್ಯಕ್ಷ ರಾಜಶೇಖರ ಹಿರೇಮಠ, ಮುಖಂಡ ವಿ.ಎಸ್ ಪಾಟೀಲ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಜ್ಞಾನೇಶ್ವರ ಗುಡಿಯಾಳ, ಎಚ್‌.ಎಂ.ನಾಯ್ಕ, ಶಿರಶಿ ಉಪವಿಭಾಗಾಧಿಕಾರಿ ಕಾವ್ಯಾರಾಣಿ, ತಹಶೀಲ್ದಾರ್ ಶಂಕರ ಗೌಡಿ, ತಾಲ್ಲೂಕು ಪಂಚಾಯಿತಿ ಇಒ ಟಿ.ವೈ.ದಾಸನಕೊಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT