ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಉತ್ತರ ಕನ್ನಡ | ದಾಖಲೆ ಪ್ರಮಾಣದಲ್ಲಿ ಬಿಯರ್ ವಹಿವಾಟು

ಬಿಸಿಲ ಝಳದ ಪರಿಣಾಮ: 2 ತಿಂಗಳಲ್ಲಿ 1.82 ಲಕ್ಷ ಬಾಕ್ಸ್ ಬಿಯರ್ ಮಾರಾಟ
Published 21 ಮೇ 2024, 4:28 IST
Last Updated 21 ಮೇ 2024, 4:28 IST
ಅಕ್ಷರ ಗಾತ್ರ

ಕಾರವಾರ: ಬಿಸಿಲಿನ ಪ್ರಖರತೆ ಹೆಚ್ಚಿದ್ದ ಕಾರಣಕ್ಕೆ ಮದ್ಯಪ್ರಿಯರು ಬಿಯರ್ ಸೇವನೆಗೆ ಮೊರೆ ಹೋದ ಪರಿಣಾಮ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳ ಅವಧಿಯಲ್ಲಿ 1.82 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದೆ. ಇದು ಈವರೆಗಿನ ದಾಖಲೆ ಎಂಬುದಾಗಿ ಅಬಕಾರಿ ಇಲಾಖೆ ಹೇಳುತ್ತಿದೆ.

ಪ್ರತಿ ಬಾರಿ ಬೇಸಿಗೆಯಲ್ಲಿ ಜಿಲ್ಲೆಯ ಕರಾವಳಿ ಭಾಗದಲ್ಲಿ ಸೆಕೆ ವಿಪರೀತವಾಗಿದ್ದರಿಂದ ಈ ಭಾಗದಲ್ಲಿ ಬಿಯರ್ ಬಳಕೆ ಪ್ರಮಾಣ ಹೆಚ್ಚುತ್ತಿತ್ತು. ಆದರೆ, ಈ ಬಾರಿ ಘಟ್ಟದ ಮೇಲಿನ ಮಲೆನಾಡು ಭಾಗದಲ್ಲಿಯೂ ಬಿಸಿಲ ಝಳ ಅಧಿಕವಿದ್ದು ಅಲ್ಲಿಯೂ ಬಿಯರ್ ಮಾರಾಟ ಪ್ರಮಾಣ ವಿಪರೀತ ಏರಿಕೆಯಾಗಿದೆ.

ಸೆಕೆಯಿಂದ ಪಾರಾಗಲು ಜನಸಾಮಾನ್ಯರು ಎಳನೀರು, ತಂಪುಪಾನೀಯ, ಹಣ್ಣಿನ ಜ್ಯೂಸ್ ಮೊರೆ ಹೋಗಿದ್ದರು. ಮದ್ಯಪ್ರೀಯರು ಬಿಯರ್ ಸೇವನೆಗೆ ಆದ್ಯತೆ ನೀಡಿದ್ದರು. ಕಾರವಾರ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆಗಳ ಬಾರ್ ಮತ್ತು ರೆಸ್ಟೋರೆಂಟ್‍ಗಳಲ್ಲಿ ಮಾರ್ಚ್, ಏಪ್ರಿಲ್ ಅವಧಿಯಲ್ಲಿ ಬಿಯರ್ ಮಾರಾಟ ಪ್ರಮಾಣ ಹೆಚ್ಚಿದ್ದವು.

‘ಭಾರತೀಯ ತಯಾರಿಕಾ ಮದ್ಯಕ್ಕೆ (ಐ.ಎಂ.ಎಲ್) ಸಾಮಾನ್ಯವಾಗಿ ಬೇಡಿಕೆ ಹೆಚ್ಚು. ಬೇಸಿಗೆ ಅವಧಿಯಲ್ಲಿ ಈ ಬಾರಿ ಐ.ಎಂ.ಎಲ್‍ಗಿಂತ ಬಿಯರ್ ಬೇಡಿಕೆ ಹೆಚ್ಚಿದ್ದವು. ಏಪ್ರಿಲ್‍ನಲ್ಲಿ ಪ್ರವಾಸಿಗರ ಆಗಮನ ಹೆಚ್ಚಿದ್ದರಿಂದ ಬಿಯರ್ ಮಾರಾಟದಲ್ಲಿ ಏರಿಕೆಯಾಗಿದೆ’ ಎನ್ನುತ್ತಾರೆ ಕಾರವಾರದ ವೈನ್‍ಶಾಪ್‍ವೊಂದರ ಮಾಲೀಕರು.

2023ರ ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ಜಿಲ್ಲೆಯ ಏಳು ಅಬಕಾರಿ ವಲಯಗಳ ವ್ಯಾಪ್ತಿಯಲ್ಲಿ 1,56,879 ಬಾಕ್ಸ್ ಬಿಯರ್ ಮಾರಾಟವಾಗಿದ್ದವು. ಪ್ರಸಕ್ತ ವರ್ಷ ಇದೇ ಅವಧಿಯಲ್ಲಿ 1,82,146 ಬಾಕ್ಸ್ ಬಿಯರ್ ಮಾರಾಟವಾಗಿದೆ. ಕಳೆದ ವರ್ಷ ಜನವರಿಯಿಂದ ಏಪ್ರಿಲ್‍ವರೆಗೆ 3,01,164 ಬಾಕ್ಸ್ ಬಿಯರ್ ಮಾರಾಟವಾಗಿದ್ದರೆ, ಪ್ರಸಕ್ತ ವರ್ಷ ಇದೇ ಅವಧಿಯಲ್ಲಿ 3,40,223 ಬಾಕ್ಸ್ ಗೆ ಏರಿಕೆಯಾಗಿದೆ.

ಮದ್ಯದ ದರ ಕಡಿಮೆ ಇರುವ ಗೋವಾ ರಾಜ್ಯದೊಂದಿಗೆ ಗಡಿ ಹಂಚಿಕೊಂಡಿರುವ ಉತ್ತರ ಕನ್ನಡಕ್ಕೆ ಗೋವಾದಿಂದ ಅಕ್ರಮ ಮದ್ಯ ಪೂರೈಕೆ ಆಗುತ್ತಿರುವ ಆರೋಪಗಳಿವೆ. ಕರಾವಳಿ ಭಾಗದ ತಾಲ್ಲೂಕುಗಳಲ್ಲಿ ಗೋವಾ ಮದ್ಯ ಮಾರಾಟದ ಅಡ್ಡೆಗಳಿವೆ ಎಂಬ ದೂರುಗಳಿವೆ.

‘ಗೋವಾದಿಂದ ಅಕ್ರಮವಾಗಿ ಪೂರೈಕೆಯಾಗುತ್ತಿದ್ದ ಮದ್ಯಕ್ಕೆ ಕಡಿವಾಣ ಹಾಕಿದ್ದರಿಂದ ಜಿಲ್ಲೆಯಲ್ಲಿ ಅಧಿಕೃತ ಮದ್ಯ ಮಾರಾಟವೂ ಹೆಚ್ಚಿದೆ. ಅಲ್ಲದೆ ಸೆಕೆಯೂ ಹೆಚ್ಚಿದ್ದರಿಂದ ಮದ್ಯಕ್ಕಿಂತ ಬಿಯರ್ ಮಾರಾಟ ಏರಿಕೆಯಾಗಿದೆ’ ಎಂದು ಅಬಕಾರಿ ಉಪ ಆಯುಕ್ತೆ ಎಂ.ರೂಪಾ ಪ್ರತಿಕ್ರಿಯಿಸಿದರು.

ಎರಡೂವರೆ ತಿಂಗಳಲ್ಲಿ 1,205 ಪ್ರಕರಣ

ಮಾರ್ಚ್ 16ರಿಂದ ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಾದ ಬಳಿಕ ಅಂತರ್ ರಾಜ್ಯ ಗಡಿಭಾಗ, ಜಿಲ್ಲೆಯ ವಿವಿಧೆಡೆಗಳಲ್ಲಿ 1,205 ಅಕ್ರಮ ಮದ್ಯ ಮಾರಾಟದ ಪ್ರಕರಣ ದಾಲಿಸಲಾಗಿದೆ. 1,189 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದು, ₹2.49 ಕೋಟಿ ಮೌಲ್ಯದ 1.12 ಲಕ್ಷ ಲೀಟರ್ ಅಕ್ರಮ ಮದ್ಯ ವಶಕ್ಕೆ ಪಡೆಯಲಾಗಿದೆ. ಈ ಪೈಕಿ 8,264 ಲೀ. ಅಕ್ರಮ ಮದ್ಯ, 1,866 ಲೀ ಗೋವಾ ಮದ್ಯ, 1,01 ಲಕ್ಷ ಲೀ. ಬಿಯರ್, 710 ಲೀ. ಕೊಳೆ ಸೇರಿದೆ. ₹5.24 ಕೋಟಿ ಮೌಲ್ಯದ 32 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ವಿವರಿಸಿದ್ದಾರೆ. 

ಚುನಾವಣೆ ನೀತಿ ಸಂಹಿತೆ ಹಾಗೂ ಅದಕ್ಕಿಂತಲೂ ಮುಂಚಿನಿಂದಲೂ ಅಕ್ರಮ ಮದ್ಯ ಮಾರಾಟಕ್ಕೆ ನಿಗಾ ಇಡಲಾಗುತ್ತಿದೆ. ಇದರಿಂದ ಜಿಲ್ಲೆಯಲ್ಲಿ ಅಧಿಕೃತ ಮದ್ಯ, ಬಿಯರ್ ಮಾರಾಟದಲ್ಲಿಯೂ ಪ್ರಗತಿಯಾಗಿದೆ
-ಎಂ.ರೂಪಾ, ಅಬಕಾರಿ ಉಪ ಆಯುಕ್ತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT