ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಕ್ಷಗಾನ ಭಾಷೆ ದಾಖಲೀಕರಣದಿಂದ ಕನ್ನಡ ಶ್ರೀಮಂತ: ಡಾ.ಜಿ.ಎಲ್.ಹೆಗಡೆ

ಕುಮಟಾ ಯಕ್ಷಗಾನ ಸಂಶೋಧನಾ ಕೇಂದ್ರದ ಮುಖ್ಯಸ್ಥ
Last Updated 8 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಶಿರಸಿ: ಯಕ್ಷಗಾನ ರಂಗದಲ್ಲಿನ ಭಾಷಾ ಪ್ರದರ್ಶನ ಹಾಗೂ ದಿಗ್ಗಜ ಕಲಾವಿದರ ಭಾಷೆ ಬಳಕೆಯ ದಾಖಲೀಕರಣವಾದರೆ ಕನ್ನಡ ಭಾಷೆ ಇನ್ನಷ್ಟು ಶ್ರೀಮಂತವಾಗುತ್ತದೆ ಎಂದು ಕುಮಟಾ ಯಕ್ಷಗಾನ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಜಿ.ಎಲ್.ಹೆಗಡೆ ಹೇಳಿದರು.

ತಾಲ್ಲೂಕಿನ ಸ್ವರ್ಣವಲ್ಲಿಯಲ್ಲಿ ಭಾನುವಾರ ಮುಕ್ತಾಯಗೊಂಡ ಮೂರು ದಿನಗಳ ಯಕ್ಷೋತ್ಸವದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಯಕ್ಷಗಾನದ ಭಾಷೆಯಲ್ಲಿ ಪ್ರೌಢಿಮೆಯಿದೆ. ಆದರೆ, ಯಕ್ಷ ದಿಗ್ಗಜರ ಮಾತುಗಳ ದಾಖಲೀಕರಣ ಆಗಿಲ್ಲ. ಹಾಗಾಗಿ ಕನ್ನಡ ಭಾಷೆ ಬಡವಾಗಿದೆ. ಇನ್ನಾದರೂ ಯಕ್ಷಗಾನ ರಂಗದದಲ್ಲಿ ಪ್ರದರ್ಶಿತವಾಗುವ ಭಾಷೆಗಳ ಜೊತೆಗೆ ದಿಗ್ಗಜ ಹಾಗೂ ಪ್ರೌಢ ಕಲಾವಿದರ ಮಾತುಗಳ ದಾಖಲೀಕರಣ ಆಗಬೇಕು ಎಂದರು.

ಸಾಂಸ್ಕೃತಿಕ ರಾಜಕಾರಣ ಯಕ್ಷಗಾನವನ್ನು ಬದಿಗೆ ಸರಿಸಿದೆ. ಇದಕ್ಕೆ ಯಕ್ಷಗಾನ ಅಕಾಡೆಮಿ ಕೂಡ ಹೊರತಾಗಿಲ್ಲ. ಕನ್ನಡ ಭಾಷೆ, ಕನ್ನಡದ ಹೊಸತನವನ್ನು ಸೃಷ್ಟಿಸುವ ಶಕ್ತಿ ಯಕ್ಷಗಾನಕ್ಕಿದೆ. ಹಾಗಾಗಿ ಯಕ್ಷಗಾನ ಇರುವವರೆಗೆ ಕನ್ನಡಕ್ಕೆ ಅಪಾಯವಿಲ್ಲ ಎಂದು ಹೇಳಿದರು.

ಗ್ರಾಮೀಣ ಅಭಿವೃದ್ಧಿ ತಜ್ಞ ಡಾ.ಪ್ರಕಾಶ ಭಟ್ಟ ಮಾತನಾಡಿ, ‘ಯಕ್ಷಗಾನವು ರಂಗದ ಮೇಲೆ ಹೇಳಿರುವುದಕ್ಕಿಂತ ಹೆಚ್ಚಿನದನ್ನು ಪ್ರೇಕ್ಷಕರಿಗೆ ನೀಡುತ್ತದೆ. ಯಕ್ಷಗಾನ ಉಳಿವು ಹಾಗೂ ಬೆಳವಣಿಗೆಯಲ್ಲಿ ಹೆಚ್ಚಿನ ಮಡಿವಂತಿಕೆ ತೋರುವ ಅಗತ್ಯವಿಲ್ಲ’ ಎಂದರು‌.

ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪ್ರೌಢಶಾಲಾ ಶಿಕ್ಷಣದಲ್ಲಿ ಯಕ್ಷಗಾನ ವಿಷಯ ಅಳವಡಿಕೆ ಆಗಬೇಕು. ಕಡ್ಡಾಯ ವಿಷಯವಲ್ಲದಿದ್ದರೂ, ಐಚ್ಛಿಕ ವಿಷಯವನ್ನಾಗಿಯಾದರೂ ಅಳವಡಿಸಬೇಕು. ಸರ್ಕಾರ ಮಟ್ಟದಲ್ಲಿ ಯಕ್ಷಗಾನ ಇಂದಿಗೂ ಜನಪದ ಕಲೆಯಾಗಿಯೇ ಮುಂದುವರಿಯುತ್ತಿದೆ. ಯಕ್ಷಗಾನ ಮೂಲದಿಂದಲೂ ಶಾಸ್ತ್ರದ ಪರಂಪರೆಯಲ್ಲಿಯೇ ಇರುವ ಕಲೆಯಾಗಿದೆ. ಎಲ್ಲ ವಿಭಾಗದಲ್ಲಿಯೂ ಶಾಸ್ತ್ರಗಳ ಲೇಪವಿದೆ. ಶಾಸ್ತ್ರದ ಚೌಕಟ್ಟಿನಲ್ಲಿಯೇ ಇರುವುದರಿಂದ ಶಾಸ್ತ್ರೀಯ ಕಲೆಯೆಂದು ಪರಿಗಣಿಸಬೇಕು ಎಂದು ಹೇಳಿದರು.

ಯಕ್ಷಗಾನದ ಹಿರಿಯ ಕಲಾವಿದರಾದ ಸೀತಾರಾಮ ಹೆಗಡೆ ಹೊಸ್ತೋಟ ಹಾಗೂ ಸುಬ್ರಾಯ ಭಾಗವತ ಕವಾಳೆ ಅವರಿಗೆ ‘ಯಕ್ಷ ಶಾಲ್ಮಲಾ’ ಪ್ರಶಸ್ತಿ ನೀಡಿ ಶ್ರೀಗಳು ಗೌರವಿಸಿದರು. ಶಿಬಿರಾರ್ಥಿಗಳಾದ ಕೀರ್ತಿ ಹೆಗಡೆ ಹಾಗೂ ಸ್ನೇಹಾ ಹೆಗಡೆ ಅನಿಸಿಕೆ ವ್ಯಕ್ತಪಡಿಸಿದರು. ಸಂಘಟನೆ ಪ್ರಮುಖ ಪ್ರೊ. ಎಂ.ಎ.ಹೆಗಡೆ ದಂಟ್ಕಲ್ ವರದಿ ವಾಚಿಸಿದರು. ಆರ್.ಎಸ್.ಹೆಗಡೆ ಭೈರುಂಬೆ ಸ್ವಾಗತಿಸಿದರು. ನಾಗರಾಜ ಜೋಶಿ ಪ್ರಶಸ್ತಿ ಪತ್ರ ವಾಚಿಸಿದರು. ಪದ್ಮನಾಭ ಅರೇಕಟ್ಟಾ ನಿರೂಪಿಸಿದರು. ವಿ.ಎನ್.ಶಾಸ್ತ್ರಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT