ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ: ಬನವಾಸಿ ‘ಯಾತ್ರಿ’ಗೆ ದೊರಕದ ‘ನಿವಾಸ’

ನಿರ್ವಹಣೆ ಇಲ್ಲದೆ ಪಾಳು ಬಿದ್ದ ಸ್ಥಿತಿಯಲ್ಲಿ ₹ 40 ವೆಚ್ಚದ ಕಟ್ಟಡ
Last Updated 12 ಅಕ್ಟೋಬರ್ 2022, 21:30 IST
ಅಕ್ಷರ ಗಾತ್ರ

ಶಿರಸಿ: ಐತಿಹಾಸಿಕ ಹಿನ್ನೆಲೆಯ, ಪಂಪನಾಡು ಬನವಾಸಿಗೆ ಭೇಟಿ ನೀಡುವ ಪ್ರವಾಸಿಗರ ಅನುಕೂಲಕ್ಕೆ ನಾಲ್ಕು ವರ್ಷದ ಹಿಂದೆ ಪ್ರವಾಸೋದ್ಯಮ ಇಲಾಖೆ ವತಿಯಿಂದ ನಿರ್ಮಿಸಲಾದ ‘ಯಾತ್ರಿ ನಿವಾಸ’ ಕಟ್ಟಡ ಬಳಕೆಗೆ ಸಿಗದೆ ಪಾಳು ಬಿದ್ದಿದೆ.

ಬನವಾಸಿ ಪಟ್ಟಣದ ಹೊರವಲಯದ ಸೊರಬ ರಸ್ತೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ₹40 ಲಕ್ಷ ಅನುದಾನದಲ್ಲಿ ಕೆ.ಆರ್.ಐ.ಡಿ.ಎಲ್. ಸಂಸ್ಥೆ 2018ರಲ್ಲಿ ಯಾತ್ರಿ ನಿವಾಸ ನಿರ್ಮಿಸಿದೆ. 2020ರಲ್ಲಿ ಪ್ರವಾಸೋದ್ಯಮ ಇಲಾಖೆ ಕಟ್ಟಡ ಹಸ್ತಾಂತರಿಸಿಕೊಂಡಿದೆ. ಆದರೆ, ಈವರೆಗೆ ಕಟ್ಟಡ ಯಾತ್ರಿಗಳ ವಾಸಕ್ಕೆ ಬಳಕೆಯಾಗಿಲ್ಲ.

ಗ್ರಾಮದ ಹೊರವಲಯದಲ್ಲಿರುವ ಯಾತ್ರಿ ನಿವಾಸದ ಕಟ್ಟಡ ಬಳಕೆ ಮಾಡದ ಪರಿಣಾಮ, ಅದರ ಸುತ್ತ ಆಳೆತ್ತರದವರೆಗೆ ಗಿಡಗಂಟಿಗಳು ಬೆಳೆದು ನಿಂತಿವೆ. ಇಲ್ಲಿಗೆ ಕಾಲಿಡಲು ಜನರು ಹಿಂದೇಟು ಹಾಕುವ ಸ್ಥಿತಿ ಇದೆ. ಸೂಕ್ತ ನಿರ್ವಹಣೆ ಇಲ್ಲದ್ದರಿಂದ ಕಟ್ಟಡ ಹಾಳಾಗುವ ಆತಂಕ ಎದುರಾಗಿದೆ.

ಕದಂಬರ ರಾಜಧಾನಿ ಎಂಬ ಖ್ಯಾತಿ ಹೊಂದಿರುವ ಬನವಾಸಿಗೆ ಬರುವ ಪ್ರವಾಸಿಗರು, ಸುತ್ತಮುತ್ತಲಿನ ತಾಣಗಳ ವೀಕ್ಷಣೆ ಮಾಡುವ ಉದ್ದೇಶದಿಂದ ಬನವಾಸಿಯಲ್ಲಿ ವಾಸ್ತವ್ಯ ಮಾಡಲು ಜಾಗದ ಕೊರತೆ ಇದೆ. ಯಾತ್ರಿ ನಿವಾಸ ಈ ಕೊರತೆ ನೀಗಿಸುವ ನಿರೀಕ್ಷೆ ಇತ್ತು. ಆದರೆ, ಕಟ್ಟಡ ನಿರ್ಮಾಣಗೊಂಡರೂ ಬಳಕೆಗೆ ಸಿಗುತ್ತಿಲ್ಲ ಎಂಬುದು ಸ್ಥಳೀಯರ ಬೇಸರಕ್ಕೆ ಕಾರಣವಾಗಿದೆ.

‘ಬನವಾಸಿಗೆ ಪ್ರತಿ ವರ್ಷ ನೂರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಪ್ರವಾಸಿ ಮಂದಿರದ ಹೊರತಾಗಿ ಇಲ್ಲಿ ವಾಸಕ್ಕೆ ಸೂಕ್ತ ಸ್ಥಳಾವಕಾಶದ ಕೊರತೆ ಇದೆ. ಪ್ರವಾಸಿಗರ ಅನುಕೂಲಕ್ಕಾಗಿಯೇ ನಿರ್ಮಿಸಿದ ಕಟ್ಟಡ ಬಳಕೆಗೆ ನೀಡದಿರುವುದು ಏಕೆ ಎಂಬುದು ಅರ್ಥವಾಗಿಲ್ಲ’ ಎಂದು ಪ್ರಶ್ನಿಸುತ್ತಾರೆ ಸಾಮಾಜಿಕ ಕಾರ್ಯಕರ್ತ ಬಿ. ಶಿವಾಜಿ.

‘ಮಧುಕೇಶ್ವರ ದೇವಾಲಯ, ಗುಡ್ನಾಪುರ ಮುಂತಾದ ಸ್ಥಳಗಳಿಗೆ ಭೇಟಿ ನೀಡಲು ಬಂದ ಪ್ರವಾಸಿಗರು ಉಳಿದುಕೊಳ್ಳಲು ಬಳಕೆಯಾಗಬೇಕಿದ್ದ ಕಟ್ಟಡ ಮದ್ಯ ವ್ಯಸನಿಗಳು ಅಡ್ಡೆಯಾಗಿದೆ. ಇದಕ್ಕೆ ಪ್ರವಾಸೋದ್ಯಮ ಇಲಾಖೆ ನಿರ್ಲಕ್ಷ್ಯ ಧೋರಣೆಯೇ ಕಾರಣ’ ಎಂಬುದು ಅವರ ಆರೋಪ.

‘ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಲಾದ ಯಾತ್ರಿ ನಿವಾಸ ಸಮರ್ಪಕ ಬಳಕೆಯಾಗದೆ ಹಾಳಾಗುತ್ತಿರುವುದು ಸರಿಯಲ್ಲ. ಪ್ರವಾಸೋದ್ಯಮ ಇಲಾಖೆ ಈ ಬಗ್ಗೆ ಗಮನಹರಿಸಬೇಕು. ಕಟ್ಟಡ ಪಾಳುಬಿದ್ದು ಅನೈತಿಕ ಚಟುವಟಿಕೆಗೆ ಬಳಕೆಯಾಗುವ ತಾಣವಾಗಿ ಮಾರ್ಪಡುವ ಬದಲು, ಪ್ರವಾಸಿಗರ ವಸತಿಗೆ ಅನುಕೂಲ ಕಲ್ಪಿಸಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಕಡಗೋಡ ಗ್ರಾಮದ ಚಂದ್ರಶೇಖರ ಗೌಡ್ರು ಒತ್ತಾಯಿಸಿದರು.

----------------

ಯಾತ್ರಿ ನಿವಾಸ ಕಟ್ಟಡದ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗೆ ನೀಡುವ ಸಂಬಂಧ ಇಲಾಖೆಯ ಪರವಾನಿಗೆ ಪತ್ರ ಬರೆಯಲಾಗಿದೆ. ಒಪ್ಪಿಗೆ ದೊರೆತ ಬಳಿಕ ನಿರ್ವಹಣೆಗೆ ಹಸ್ತಾಂತರಿಸುತ್ತೇವೆ.

ವಿ. ಜಯಂತ್

ಸಹಾಯಕ ನಿರ್ದೇಶಕ, ಪ್ರವಾಸೋದ್ಯಮ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT