ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸಲಧಾರೆಗೆ ಜನಜೀವನ ಸ್ತಬ್ಧ

Last Updated 4 ಜುಲೈ 2013, 9:49 IST
ಅಕ್ಷರ ಗಾತ್ರ

ಶಿರಸಿ: ವರುಣನ ಆರ್ಭಟಕ್ಕೆ ಇಡೀ ತಾಲ್ಲೂಕು ಅಕ್ಷರಶಃ ಸ್ತಬ್ಧಗೊಂಡಿದೆ. ಮಂಗಳವಾರ ಮಧ್ಯಾಹ್ನದಿಂದ ಬುಧವಾರ ಮಧ್ಯಾಹ್ನದ ವರೆಗೆ ಎಡೆಬಿಡದೆ ಸುರಿದ ಮಳೆಗೆ ಜನಜೀವನ ಚೆಲ್ಲಾಪಿಲ್ಲಿಯಾಗಿದೆ. ಬುಧವಾರ ಬೆಳಿಗ್ಗೆ ಕೊನೆಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ 254ಮಿ.ಮೀ ಮಳೆ ಸುರಿದಿದ್ದು, ಪ್ರಸಕ್ತ ಮುಂಗಾರಿನಲ್ಲಿ ಇದು ದಾಖಲೆಯಾಗಿದೆ.

ಸಮರ್ಪಕ ಚರಂಡಿ ಕೊರತೆ, ನೀಲನಕ್ಷೆಯಿಲ್ಲದೆ ವಿಸ್ತರಣೆಯಾದ ತಗ್ಗು ಪ್ರದೇಶದ ಬಡಾವಣೆಗಳು ಜಲಾವೃತವಾಗಿದ್ದವು. ಆದರ್ಶನಗರ, ಲಯನ್ಸ್ ನಗರದ ತಗ್ಗು, ಸಮರ್ಥನಗರ, ದುಂಡಶಿನಗರ, ಬಶೆಟ್ಟಿಕೆರೆ, ಅಶೋಕನಗರಗಳು ದ್ವೀಪದಂತೆ ಗೋಚರಿಸುತ್ತಿದ್ದವು. ರಸ್ತೆ, ಚರಂಡಿಗಳೆಲ್ಲ ಒಂದಾಗಿ ಇಡೀ ಬಡಾವಣೆ ಹೊಳೆಯಾಗಿ ಕಾಣುತ್ತಿದ್ದವು.

ಕೋಟೆಕೆರೆಯಲ್ಲಿ ನೀರು ತುಂಬಿ ಉಕ್ಕಿ ಹರಿದ ಪರಿಣಾಮ ಶಿರಸಿ-ಹುಬ್ಬಳ್ಳಿ ರಾಜ್ಯ ಹೆದ್ದಾರಿಯ ಮೇಲೆ ಒಂದು ಅಡಿ ನೀರು ಹರಿಯಿತು. ಮುಂಜಾನೆ ನೀರಿನಲ್ಲೇ ವಾಹನಗಳು ಚಲಿಸಿದರೆ, ನೀರಿನ ಮಟ್ಟ ಏರುತ್ತಿರುವುದನ್ನು ಕಂಡು ವಾಹನ ಸಂಚಾರ ಸ್ಥಗಿತಗೊಳಿಸಲಾಯಿತು.

ಕೋಟೆಕೆರೆ ಪಕ್ಕದ ಇಂದಿರಾನಗರದ ಅನೇಕ ಮನೆಗಳಲ್ಲಿ ನೀರು ನುಗ್ಗಿ ಅಪಾರ ಹಾನಿಯಾಗಿದೆ. ಯೂನಿಯನ್ ಪ್ರೌಢಶಾಲೆಗೆ ತೆರಳುವ ರಸ್ತೆಯಲ್ಲಿ ಎರಡು ಅಡಿ ನೀರು ನಿಂತಿತ್ತು. `ಬೆಳಗಿನ ಜಾವ 4 ಗಂಟೆಗೆ ಮನೆಯೊಳಗೆ ನೀರು ನುಗ್ಗಿ ಇಡೀ ಮನೆಯನ್ನು ಆವರಿಸಿತು. ಬೆಳಗಿನ ತನಕ ನಿಂತು ಸಮಯ ಕಳೆದೆವು' ಎಂದು ದೇವೇಂದ್ರ ಶೆಟ್ಟಿ ಪತ್ನಿ ಹೇಳಿದರು.

ಗಣೇಶನಗರದಲ್ಲಿ ಅಕೇಶಿಯಾ ಮರವೊಂದು ಮುರಿದುಬಿದ್ದ ಪರಿಣಾಮ ಪದ್ಮಾ ಕುರುಬರ ಹಾಗೂ ಮಾಲತೇಶ ಚೆನ್ನಯ್ಯ ಅವರ ಮನೆಗಳಿಗೆ ಧಕ್ಕೆಯಾಗಿದೆ. ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಗರಸಭೆ ಅಧಿಕಾರಿಗಳು ಮೂರು ತಂಡಗಳಲ್ಲಿ ನಗರದ ವಿವಿಧ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿ ಸಾರ್ವಜನಿಕರಿಗೆ ಸಹಕರಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಹಳ್ಳಕೊಳ್ಳಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ತಾಲ್ಲೂಕಿನ ವರದಾ ಹಾಗೂ ಶಾಲ್ಮಲಾ ನದಿಗಳು ಅಪಾಯ ಮಟ್ಟ ಮೀರಿ ಹರಿದು ನದಿಪಾತ್ರದ ಕೃಷಿಭೂಮಿ, ವಸತಿ ಕಟ್ಟಡಗಳು ಜಲಾವೃತವಾಗಿದೆ. ವರದೆಯ ದಡದಲ್ಲಿರುವ ಬನವಾಸಿ ಮಾದರಕೇರಿಯ 20ಕ್ಕೂ ಅಧಿಕ ಕುಟುಂಬಗಳ ಮನೆ ನೀರಿನಿಂದ ಆವೃತಗೊಂಡಿದೆ.

ಅಜ್ಜರಣಿ ಸೇತುವೆ ನೀರಿನಲ್ಲಿ ಮುಳುಗಿದೆ. ಸಹಸ್ರಾರು ಎಕರೆ ಭತ್ತದ ಗದ್ದೆ ನೀರಿನಲ್ಲಿ ಮುಳುಗಿವೆ. ಕೆಂಗ್ರೆಹೊಳೆ ಉಕ್ಕಿ ಹರಿದು ಸೇತುವೆ ಮೇಲೆ ಹರಿದ ಪರಿಣಾಮ ಹುಲೇಕಲ್ ಭಾಗದ ಜನರಿಗೆ ಶಿರಸಿ ಬರುವ ಸಂಪರ್ಕ ಮಾರ್ಗ ಕಡಿತವಾಗಿತ್ತು. ಸೇತುವೆಯ ಕಂಬದ ತುದಿ ಮಾತ್ರ ಕಾಣುವಷ್ಟರ ಮಟ್ಟಕ್ಕೆ ಕೆಂಗ್ರೆಹೊಳೆಯಲ್ಲಿ ನೀರು ಹರಿಯುತ್ತಿರುವುದನ್ನು ನೂರಾರು ಜನ ಭೇಟಿ ನೀಡಿ ವೀಕ್ಷಿಸಿದರು.

ಗ್ರಾಮೀಣ ಭಾಗದ ಹಳ್ಳ, ಹೊಳೆಗಳು ತುಂಬಿ ಹರಿದ ಪರಿಣಾಮ ದಂಡೆಯಲ್ಲಿರುವ ಅಡಿಕೆ ತೋಟಗಳಿಗೆ ಹಾಕಿದ ಸೊಪ್ಪು, ಗೊಬ್ಬರ ನೀರಿನಲ್ಲಿ ತೇಲಿಕೊಂಡು ಹೋಗಿದೆ. ಕೆಂಗ್ರೆಹೊಳೆ ಸುತ್ತಮುತ್ತ ಇರುವ ಕಳವೆ, ಗುಬ್ಬಿಗದ್ದೆ, ಬಾಳೆಗದ್ದೆ, ಶಿಂಗನಮನೆ, ಬಂದೀಸರ ಹಳ್ಳಿಗಳ ನೂರಾರು ಎಕರೆ ತೋಟಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಹೊಳೆಯ ದಡದಲ್ಲಿರುವ ಬಹುತೇಕ ಎಲ್ಲ ಮನೆಗಳ ಪಂಪ್‌ಸೆಟ್‌ಮನೆ ನೀರಿನಲ್ಲಿ ಮುಳುಗಿ ಹೋಗಿದೆ.

ದೇವನಿಲಯದಲ್ಲಿ ಲೋಕೋಪಯೋಗಿ ಇಲಾಖೆಯ ಅಸಮರ್ಪಕ ಗಟಾರದಿಂದ ನೀರು ಮನೆಗಳಿಗೆ ನುಗ್ಗಿತು. ಗ್ರಾಮೀಣ ಪ್ರದೇಶದ ಅನೇಕ ಕಡೆಗಳಲ್ಲಿ ವಿದ್ಯುತ್ ಸಂಪರ್ಕ, ದೂರವಾಣಿ ಸಂಪರ್ಕಗಳು ಸ್ತಗಿತಗೊಂಡಿವೆ. ಎಡೆಬಿಡದೆ ಸುರಿದ ಮುಸಲಧಾರೆಯಿಂದ ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದ್ದು, ತಾಲ್ಲೂಕು ಆಡಳಿತ ಹಾನಿಯ ಸಮೀಕ್ಷೆ ನಡೆಸಬೇಕಾಗಿದೆ. 

ಸಂಚಾರ, ದೂರವಾಣಿ ಸಂಪರ್ಕ ಕಡಿತ
ಯಲ್ಲಾಪುರ:
ಕಳೆದ ಎರಡು ದಿವಸಗಳಿಂದ ತಾಲ್ಲೂಕಿನಾದ್ಯಂತ ಭಾರಿ ಮಳೆ ಸುರಿಯುತ್ತಿದ್ದು, ಗ್ರಾಮೀಣ ಭಾಗದ ಜನಜೀವನ ಅಸ್ತವ್ಯಸ್ತ ಉಂಟಾಗಿದೆ. ಭಾರಿ ಮಳೆಯಿಂದಾಗಿ ಗ್ರಾಮೀಣ ಭಾಗದಲ್ಲಿ ಹಳ್ಳಕೊಳ್ಳಗಳು ತುಂಬಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ತೋಟಪಟ್ಟಿಗಳಲ್ಲಿ ಮತ್ತು ತಗ್ಗು ಪ್ರದೇಶಗಳಲ್ಲಿ ವ್ಯಾಪಕ ನೀರು ನಿಂತಿದ್ದು, ಕೃಷಿ ಚಟುವಟಿಕೆಗೆ ಅಡಚಣಿ ಉಂಟಾಗಿದೆ.

ಗ್ರಾಮೀಣ ಪ್ರದೇಶದ ರಸ್ತೆಗಳಲ್ಲಿ ಮರಗಳು ಉರುಳಿ ಸಂಚಾರ ಮತ್ತು ವಿದ್ಯುತ್ ವ್ಯತ್ಯಯ ಉಂಟಾಗಿದೆ. ಹಲವು ಭಾಗಗಳಲ್ಲಿ ದೂರವಾಣಿ ಸಂಪರ್ಕ ಕಡಿದಿದೆ. ಬೇಡ್ತಿ ( ಗಂಗಾವಳಿ ) ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು    ತಾಲ್ಲೂಕಿನ ಗಡಿ ಭಾಗವಾದ ಹೆಗ್ಗಾರ, ಶೇವ್ಕಾರ, ಕೋನಾಳ ಗ್ರಾಮಗಳಲ್ಲಿ ವ್ಯಾಪಕ ಪರಿಣಾಮ ಬೀರಿದೆ. ರಸ್ತೆಗಳಲ್ಲಿ ನೀರು ತುಂಬಿದ್ದು ವಾಹನ ಸಂಚಾರಕ್ಕೆ ಅಡಚಣೆ ಉಂಟುಮಾಡಿದ್ದರೆ.  ತೋಟ, ಗದ್ದೆಗಳಲ್ಲಿ ನೀರು ತುಂಬಿ ಹಾನಿಯುಂಟುಮಾಡಿದೆ. ಅರಬೈಲ್ ಘಟ್ಟದಲ್ಲಿ ರಸ್ತೆ ಪಕ್ಕದ ಮರಗಳು ಉರುಳಿ ಬಿದ್ದಿವೆ.

ಪಟ್ಟಣದ ತಳ್ಳಿಕೇರಿಯಲ್ಲಿ ಗದ್ದೆಗೆ ನೀರು ನುಗದಗಿ ಹಾಳುಗೆಡವಿದರೆ ಕಲ್ಲಗದ್ದೆಯಲ್ಲಿ ಕೆರೆ ಒಡ್ಡು ಒಡೆದು ಗದ್ದೆಗೆ ನೀರು ನುಗ್ಗಿ ಹಾನಿಯುಂಟು ಮಾಡಿದೆ. ಪಟ್ಟಣದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸುರಿಯುತ್ತಿರುವ ಬಾರಿ ಮಳೆಯಿಂದಾಗಿ ತೊದರೆಯಾಗಿದ್ದು, ಕೆಲವು ಶಾಲೆಗಳಿಗೆ ರಜೆ ನೀಡಲಾಗಿದೆ.

ಅಂಕೋಲಾ ತಾಲ್ಲೂಕಿನ ಸುಂಕಸಾಳ ಬಳಿಯಲ್ಲಿ ರಸ್ತೆಯ ಮೇಲೆ ನೀರು ಬಂದ ಕಾರಣ ಹಾಗೂ ರಸ್ತೆಯ ಮೇಲೆ ಮರ ಬಿದ್ದ ಪರಿಣಾಮ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾಗಿ ಅಂಕೋಲಾ ಕಡೆಗೆ ಹೋಗುವ ವಾಹನಗಳನ್ನು ಶಿರಸಿ ಮಾರ್ಗವಾಗಿ ಬಿಡಲಾಗಿದೆ.

ತಾಲ್ಲೂಕಿನ ಕಳಚೆಯ ಹೆಬ್ಬಾರಕುಂಬ್ರಿ ಬಳಿ ಮರವೊಂದು ಉರುಳಿ ಬಸ್ ಸಂಚಾರಕ್ಕೆ ತೊಡಕುಂಟಾಗಿದೆ. ಬೇಡ್ತಿ ನದಿಯಲ್ಲಿ ನೀರು ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಹಳವಳ್ಳಿ ಭಾಗದಲ್ಲಿ ರಸ್ತೆಯ ಮೇಲೆ ನೀರು ತುಂಬಿದ್ದು, ಬಸ್ ಸಂಚಾರಕ್ಕೆ ಅಡಚಣಿ ಉಂಟಾಗಿದೆ. ಗ್ರಾಮೀಣ ಭಾಗದಿಂದ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಹಳ್ಳದಲ್ಲಿ ನೀರು ತುಂಬಿ ಓಡಾಟಕ್ಕೆ ತೊಂದರೆ ಉಂಟಾಗಿದೆ.

ಮಂಗಳವಾರ ಬೆಳಿಗ್ಗೆ 8 ಗಂಟೆಯಿಂದ ಬುಧವಾರ ಬೆಳಿಗ್ಗೆ 8 ಗಂಟೆಯವರೆಗೆ 156.6 ಮಿ.ಮೀ ಮಳೆಯಾಗಿದೆ. ಇಲ್ಲಿಯವರೆಗೆ 801.8 ಮಿ.ಮೀ ಮಳೆಯಾಗಿದೆ. ಕಳೆದ ವರ್ಷ ಈ ದಿನಕ್ಕೆ ಒಟ್ಟು 475 ಮಿ.ಮೀ ಮಳೆಯಾಗಿತ್ತು.

ಜಿಲ್ಲೆಯೆಲ್ಲೆಡೆ ಪ್ರವಾಹ; ಅತ್ತ ಸಭೆ: ಕಾಗೇರಿ ಆಕ್ಷೇಪ
ಇಡೀ ತಾಲ್ಲೂಕು ಮಳೆಯಿಂದ ತತ್ತರಿಸಿದರೆ ಹಿರಿಯ ಅಧಿಕಾರ ವರ್ಗ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಕರೆದ ಪ್ರಗತಿಪರಿಶೀಲನಾ ಸಭೆಯಲ್ಲಿ ಭಾಗವಹಿಸಲು ಬುಧವಾರ ಬೆಳಿಗ್ಗೆ ಕಾರವಾರಕ್ಕೆ ದೌಡಾಯಿಸಿತ್ತು. ಈ ಕುರಿತು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

`ಮಂಗಳವಾರ ಮಧ್ಯಾಹ್ನದಿಂದಲೇ ಮಳೆಯ ಅಬ್ಬರ ಜೋರಾಗಿರುವುದರಿಂದ ದೇಶಪಾಂಡೆ ಸಂಪರ್ಕಕ್ಕೆ ಸಿಗದ ಕಾರಣ ಸಭೆ ಮುಂದೂಡುವಂತೆ ಜಿಲ್ಲಾಧಿಕಾರಿಗೆ ಕರೆ ಮಾಡಿ ತಿಳಿಸಲಾಗಿದೆ. ಆದಾಗ್ಯೂ ಸಭೆ ನಡೆದಿದ್ದರಿಂದ ಉಪವಿಭಾಗಾಧಿಕಾರಿ, ಪೌರಾಯುಕ್ತರು, ತಹಶೀಲ್ದಾರರು, ಪ್ರಮುಖ ಅಧಿಕಾರಿಗಳು ಕಾರವಾರಕ್ಕೆ ತೆರಳಿದ್ದರು. ಜನರು ಸಮಸ್ಯೆಗೆ ಸ್ಪಂದಿಸಲು ಜವಾಬ್ದಾರಿ ಸ್ಥಾನದಲ್ಲಿರುವ ಅಧಿಕಾರಿಗಳು ಕೇಂದ್ರ ಸ್ಥಳದಲ್ಲಿ ಲಭ್ಯವಿಲ್ಲ' ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT