ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ಷಣೆಗೆ ಹೋದವ ಶವವಾದ

Last Updated 11 ಜೂನ್ 2011, 7:30 IST
ಅಕ್ಷರ ಗಾತ್ರ

ಕಾರವಾರ: ವಿದ್ಯುತ್ ತಗುಲಿ ಇಬ್ಬರು ಸಾವನ್ನಪ್ಪಿದ ಘಟನೆ ನಂತರ ನಗರದ ಸುಂಕೇರಿ ಗಾಬೀತವಾಡದಲ್ಲಿ ಸ್ಮಶಾನ ಮೌನ ಆವರಿಸಿದೆ. ವಿದ್ಯುತ್ ತಗುಲಿದ ವೃದ್ಧೆ ಲಕ್ಷ್ಮಿ ತುಳಸೇಕರ್ (70) ಹಾಗೂ ಅವರನ್ನು ರಕ್ಷಿಸಲು ಹೋದ ಲಕ್ಷ್ಮಣ ತುಳಸೇಕರ್ (25) ಅವರೊಂದಿಗೆ ವಿಧಿ ಕ್ರೂರವಾಗಿ ವರ್ತಿಸಿದೆ.

ಶುಕ್ರವಾರ ಇವರಿಬ್ಬರ ಪಾಲಿಗೆ ಅಂತಿಮ ದಿನವಾಯಿತು. ಸುರಿವ ಮಳೆ ನಿಂತ ಮೇಲೆ ಅಜ್ಜಿ ಮನೆಯ ಹಿಂದೆ ನಡೆದು ಹೋಗುತ್ತಿರುವಾಗ ಅಲ್ಲೇ ಪಕ್ಕದಲ್ಲಿದ್ದ ತಂತಿಯಲ್ಲಿ ದಿಢೀರ್ ವಿದ್ಯುತ್ ಪ್ರವಹಿಸಿತು. ಕೆತ್ತನೆ ಮಾಡಿದ ಮೂರ್ತಿಯಂತೆ ಅಜ್ಜಿ ನಿಂತು ಬಿಟ್ಟಿದ್ದಳು.

ಇದನ್ನು ನೋಡಿ ಮೊಮ್ಮಗಳು ಬೊಬ್ಬೆಯಿಟ್ಟಿದ್ದಾಳೆ. ಏನಾಯಿತು ಎಂದು ಸುತ್ತಮುತ್ತಲಿದ್ದವರೆಲ್ಲ ಓಡಿ ಬಂದಿದ್ದಾರೆ.

ಹುಡುಗಿ ಬೊಬ್ಬೆಯಿಟ್ಟಿದ್ದನ್ನು ಕೇಳಿ ಕಾಳಿ ನದಿಯ ದಂಡೆಯ ಮೇಲಿರುವ ಮೆನೆಯೆದುರಿಗೆ ರಾಶಿ ಹಾಕಿದ್ದ ಕಲಗ (ಚಿಪ್ಪು ಮೀನು) ಒಡೆದು ಮಾಂಸ ತೆಗೆಯುತ್ತಿದ್ದ ಲಕ್ಷ್ಮಣ ದಡಬಡನೆ ಎದ್ದು ಓಡಿದ್ದಾನೆ. ಅಲ್ಲಿ ಹೋದವನೇ ಅಜ್ಜಿಯನ್ನು ರಕ್ಷಿಸಲು ಮುಂದಾಗಿದ್ದಾನೆ.

ಆದರೆ, ಹಣೆಬರಹ ಸರಿಯಿರಲಿಲ್ಲ. ರಕ್ಷಣೆ ಮಾಡಲು ಹೋದವನೇ ಕೆಲವೇ ಕ್ಷಣದಲ್ಲಿ ಅಜ್ಜಿಯನ್ನು ಹಿಡಿದುಕೊಂಡು ಗಟ್ಟಿಯಾಗಿ ನಿಂತುಬಿಟ್ಟ. ಯಮನ ರೂಪದಲ್ಲಿ ಹರಿದು ಬಂದ ವಿದ್ಯುತ್ ಕ್ಷಣಮಾತ್ರದಲ್ಲೇ ಇಬ್ಬರೂ ಇಹಲೋಕ ತ್ಯಜಿಸುವಂತೆ ಮಾಡಿತು.

ಸರಳ ಸ್ವಭಾವದ, ಎಲ್ಲರೊಂದಿಗೂ ಆತ್ಮೀವಾಗಿದ್ದ ಲಕ್ಷ್ಮಣ ತುಳಸೇಕರ್ ಕಾಳಿ ನದಿ ತಟದಲ್ಲಿ ಕುಳಿತುಕೊಂಡು ಕಲಗ ಬಡಿಯುತ್ತಿದ್ದ. ದಿನಾಲು ಕಲಗ ತರಲು ಕಾಳಿ ನದಿಗೆ ಹೋಗುತ್ತಿದ್ದ ಈತ ಶುಕ್ರವಾರ ಹೋಗಿರಲಿಲ್ಲ.

ತಂದೆ ಹಾಗೂ ಸಹೋದರರು ಹೋಗಿ ತಂದಿದ್ದ ಕಲಗವನ್ನು ಒಡೆದು ಮಾಂಸ ತೆಗೆಯುತ್ತ ಕುಳಿತಿದ್ದ ಲಕ್ಷ್ಮಣ ನೋಡನೋಡುತ್ತಿದ್ದಂತೆ ಮತ್ತೆ ಮರಳಿ ಬಾರದ ಲೋಕಕ್ಕೆ ಹೋಗಿಬಿಟ್ಟಿದ್ದ.

ಲಕ್ಷ್ಮಣ ತುಳಸೇಕರ್ ಅವರ ಅಂತ್ಯಕ್ರಿಯೆ ಸಂಜೆ ನಡೆಯಿತು. ಈತನ ಮೃತದೇಹ ಮನೆಗೆ ತಂದಾಗ ರೋದನ ಮುಗಿಲು ಮುಟ್ಟಿತ್ತು. ಮಗ, ಸಹೋದರನ್ನು ಕಳೆದುಕೊಂಡು ಮನೆಯವರು ಅಳುತ್ತಿರುವುದು ಎಂತಹ ಕಲ್ಲು ಹೃದಯವನ್ನೂ ಕರಗಿಸುವಂತ್ತಿತ್ತು.

ಜಿಲ್ಲಾಧಿಕಾರಿ ಭೇಟಿ: ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಬಿ.ಎನ್.ಕೃಷ್ಣಯ್ಯ ಸಂಜೆ ಭೇಟಿ ನೀಡಿ ಮೃತಪಟ್ಟ ಲಕ್ಷ್ಮಿ ತುಳಸೇಕರ್ ಹಾಗೂ ಲಕ್ಷ್ಮಣ ತುಳಸೇಕರ್ ಕುಟುಂಬಕ್ಕೆ ಪ್ರಕೃತಿ ವಿಕೋಪ ಪರಿಹಾರದಡಿ ತಲಾ ಒಂದು ಲಕ್ಷ ರೂಪಾಯಿ ಹಾಗೂ ಗಾಯಾಳುಗಳಿಗೆ ಐದು ಸಾವಿರ ರೂಪಾಯಿ ಪರಿಹಾರ ನೀಡಲಾಗುವುದೆಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT